ನವದೆಹಲಿ, ಜೂನ್ 27– ಮುಖ್ಯಮಂತ್ರಿ ಪದವಿ ತ್ಯಜಿಸುವ ತಮ್ಮ ನಿರ್ಧಾರವನ್ನು ಗುಜರಾತ್ ರಾಜ್ಯದ ಮುಖ್ಯಮಂತ್ರಿ ಶ್ರೀ ಘನಶ್ಯಾಮ ಓಜಾ ಅವರು ಈ ರಾತ್ರಿ ಇಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ತಿಳಿಸಿದರು.
ಶ್ರೀ ಓಜಾ ಅವರ ಈ ನಿರ್ಧಾರಕ್ಕೆ ಪ್ರಧಾನಿ ಇಂದಿರಾಗಾಂಧಿ ಅವರು ಸಮ್ಮತಿಸಿದರೆಂದು ಗೊತ್ತಾಗಿದೆ.
ಅಹಮದಾಬಾದ್ ಬಳಿ ನಡೆದ ಗುಜರಾತ್ ಶಾಸಕ ಪಕ್ಷದ ಭಿನ್ನಮತೀಯ ಸಭೆಯಲ್ಲಿ ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯವು ಅಂಗೀಕಾರವಾದ ಕೆಲವು ಗಂಟೆಗಳಲ್ಲೇ ಅವರು ರಾಜೀನಾಮೆ ನಿರ್ಧಾರ ಬಂತು.
ಮುಂಬಯಿ, ಜೂ.27– ಚೀನಾ ಇಂದು ಲಾಪ್‌ನಾರ್ ಪ್ರದೇಶದಲ್ಲಿ ಒಂದರಿಂದ ಎರಡು ಮೆಗಾಟನ್ ಟಿ.ಎನ್.ಟಿ ಸಾಮರ್ಥ್ಯದ ನ್ಯೂಕ್ಲಿಯರ್ ಸಾಧನವೊಂದನ್ನು ಸ್ಫೋಟಿಸಿತೆಂದು ಇಲ್ಲಿನ ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರ ತಿಳಿಸಿದೆ.
ಚೀನಾ 1964ರ ಅಕ್ಟೋಬರ್‌ನಲ್ಲಿ ನ್ಯೂಕ್ಲಿಯರ್ ಸಾಧನಗಳ ಪ್ರಯೋಗ ಆರಂಭಿಸಿತು. ಇಂದಿನ ಪ್ರಯೋಗ ಹದಿನೈದನೆಯದು.
ಇಂದು ಬೆಳಿಗ್ಗೆ ಭಾರತೀಯ ಕಾಲಮಾನ ಒಂಬತ್ತು ಗಂಟೆ ಇಪ್ಪತ್ತೈದು ನಿಮಿಷಕ್ಕೆ ಚೀನಾ ಲಾಪ್‌ನಾರ್ ಪ್ರದೇಶದ ವಾಯುಮಂಡಲದಲ್ಲಿ ನ್ಯೂಕ್ಲಿಯರ್ ಸಾಧನ ಪ್ರಯೋಗಿಸಿತೆಂದು ಅಣುಶಕ್ತಿ ಇಲಾಖೆಯ ಮೈಕ್ರೋ ಬಾರೋಗ್ರಾಫ್ ವ್ಯವಸ್ಥೆ ನೀಡಿರುವ ಸೂಚನೆಗಳಿಂದ ಗೊತ್ತಾಗಿದೆ ಎಂದು ಅಣುಶಕ್ತಿ ಕೇಂದ್ರದ ವಕ್ತಾರರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.