ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 16–6–1967

Last Updated 15 ಜೂನ್ 2017, 19:30 IST
ಅಕ್ಷರ ಗಾತ್ರ

ಲೋಕಸಭೆಯಲ್ಲಿ ಕನ್ನಡದಲ್ಲಿ ಪ್ರಶ್ನೆ; ಕೋಲಾಹಲ
ನವದೆಹಲಿ, ಜೂನ್‌ 15–
ಭಾಷಾ ವಿವಾದದ ಪ್ರಶ್ನೆಯು ಇಂದು ಲೋಕಸಭೆಯಲ್ಲಿ ತೀವ್ರವಾಗಿ ಕೇಳಿ, ಹದಿನೈದು ನಿಮಿಷಗಳ ಕಾಲ ಸಭೆಯ ಕಲಾಪಗಳನ್ನು ಸ್ಥಗಿತಗೊಳಿಸಿತು. ಸಭೆಯಲ್ಲಿ ಶಿಸ್ತನ್ನು ತರಲು ಸ್ಪೀಕರ್‌ ಶ್ರೀ ಸಂಜೀವ ರೆಡ್ಡಿಯವರು ದೃಢ ಮನೋಭಾವದಿಂದಲೂ ವಿನೋದಪರತೆಯಿಂದಲೂ ವರ್ತಿಸಿದರು.

ರಾಜಧಾನಿಯಲ್ಲಿನ ಸರ್ಕಾರಿ ಒಡೆತನದ ಅಶೋಕ ಹೋಟಲಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಉಪಾಹಾರ ಗೃಹವಿರುವ ಸುತ್ತು ಗೋಪುರದ ಪ್ರಯೋಜನದ ಬಗ್ಗೆ ಮೈಸೂರಿನ ಎಸ್‌.ಎಸ್‌.ಪಿ. ಸದಸ್ಯ ಶ್ರೀ ಜೆ.ಎಚ್‌. ಪಟೇಲ್‌ ಅವರು ಕನ್ನಡದಲ್ಲಿ ಪ್ರಶ್ನೆ ಹಾಕಲು ಪ್ರಯತ್ನಿಸಿದಾಗ ಈ ವಿವಾದ ಪ್ರಾರಂಭವಾಯಿತು.

ತಮ್ಮ ಭಾಷೆಯಲ್ಲಿ ಪ್ರಶ್ನೆ ಹಾಕಲು ಅವರಿಗೆ ಅವಕಾಶವೀಯಲಾಗಿತ್ತು. ಆದರೆ ಉತ್ತರವೀಯಲು ಸಚಿವರಿಗೆ ಸಾಧ್ಯವಾಗದಿದ್ದಾಗ, ಸದಸ್ಯರು ಉತ್ತರಕ್ಕಾಗಿ ಒತ್ತಾಯಪಡಿಸಿದರು. ಆಗ ಗಲಾಟೆ ಪ್ರಾರಂಭವಾಯಿತು.

ಮೈಸೂರಿನ ಮತ್ತೊಬ್ಬ ಸದಸ್ಯ ಶ್ರೀ ಲಕ್ಕಪ್ಪನವರು ಆ ಪ್ರಶ್ನೆಯನ್ನು ಸಭೆಯ ಸದಸ್ಯರ ಅನುಕೂಲಕ್ಕಾಗಿ ಭಾಷಾಂತರಿಸಲು ಮುಂದೆ ಬಂದರು. ಆದರೆ ಹಾಗೆ ಮಾಡಲು ಅವರಿಗೆ ಅನುಮತಿ ದೊರೆಯಲಿಲ್ಲ.

ಭಾಷಾ ಪ್ರಶ್ನೆಯ ಬಗ್ಗೆ ತೀವ್ರವಾದ ಅಭಿಪ್ರಾಯಗಳನ್ನು ಹೊಂದಿರುವ ಡಿ.ಎಂ.ಕೆ. ಸದಸ್ಯ ಶ್ರೀ ಕೃಷ್ಣಮೂರ್ತಿ ಮತ್ತು ಇತರೆ ಅನೇಕ ಸದಸ್ಯರು ಉತ್ತರಕ್ಕಾಗಿ ಒತ್ತಾಯಪಡಿಸಿದರಲ್ಲದೆ, ತನ್ಮೂಲಕ ಸಭೆಯಲ್ಲಿ ಎಲ್ಲ ಭಾಷೆಗಳಿಗೂ ಏಕಕಾಲದಲ್ಲಿ ತರ್ಜುಮೆ ವ್ಯವಸ್ಥೆಯು ಇಲ್ಲದಿರುವುದರಿಂದ ಉಂಟಾಗುವ ತೊಂದರೆಗಳನ್ನು ಎತ್ತಿ ತೋರಿಸಲು ಪ್ರಯತ್ನಿಸಿದರು.

ಶಿಸ್ತು ಪಾಲಿಸಲು ಒಮ್ಮೆ ಕರೆ ಕೊಡುವಾಗ ಸ್ಪೀಕರರು ‘ಒಮ್ಮೆ ಅದು ಸುತ್ತು ತಿರುಗುವ ಗೋಪುರವಾಗಿರುವುದೇ ಈಗಿನ ತೊಂದರೆ. ನಾವು ಎಚ್ಚರಿಕೆಯಿಂದ ಇರಬೇಕು’ ಎಂದು ನುಡಿದರು.

ಮಹಾಜನ್‌ರಿಂದ ಜುಲೈನಲ್ಲಿ ವರದಿ?
ಉದಕಮಂಡಲ, ಜೂ. 15–
ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಪರಿಶೀಲನೆಗಾಗಿ ನೇಮಿಸಿದ್ದ ಮಹಾಜನ್‌ ಆಯೋಗ ತನ್ನ ಸಾಕ್ಷ್ಯ ಸಂಗ್ರಹ ಕಾರ್ಯವನ್ನು ಇಂದು ಇಲ್ಲಿ ಮುಕ್ತಾಯಗೊಳಿಸಿತು.

ಮುಂದಿನ ತಿಂಗಳ ಮಧ್ಯಭಾಗದಲ್ಲಿ ಆಯೋಗವು ತನ್ನ ವರದಿಯನ್ನು ಕೇಂದ್ರ ಸರಕಾರಕ್ಕೆ ಒಪ್ಪಿಸುವ ನಿರೀಕ್ಷೆ ಇದೆ.

ಮೈಸೂರು ಸರಕಾರದ ಪರವಾಗಿ ಸುಪ್ರಿಂಕೋರ್ಟ್‌ನ ನ್ಯಾಯವಾದಿ ಶ್ರೀ ಎಂ.ಕೆ. ನಂಬಿಯಾರ್‌ ಮತ್ತು ಮಹಾರಾಷ್ಟ್ರ ಸರಕಾರದ ಪರವಾಗಿ ಮುಂಬೈನ ನ್ಯಾಯವಾದಿ ಶ್ರೀ ಸಿಂಘ್ವಿ ಹಾಗೂ ಅವರ ನೆರವುಗಾರರಾದ ರಾಜಸ್ತಾನದ ಅಡ್ವೊಕೇಟ್‌ ಜನರಲ್‌ ಶ್ರೀ ಮಿಶ್ರ ಅವರ ಅಂತಿಮ ವಾದಗಳನ್ನು ಇಂದು ಆಯೋಗವು ಕೇಳಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT