ಸೂರ್ಯನನ್ನು ಮುಚ್ಚಿಡಲಾಗದು

7

ಸೂರ್ಯನನ್ನು ಮುಚ್ಚಿಡಲಾಗದು

Published:
Updated:

ಸುತ್ತೂರು ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಹೇಳಿದಂತಹ ಮಾತುಗಳನ್ನು ’ವೀರಶೈವ, ಲಿಂಗಾಯತರನ್ನು ಒಗ್ಗೂಡಿಸಿದ ಮಠ’ ಎಂಬ ಶೀರ್ಷಿಕೆಯಡಿ ಪ್ರಕಟಿಸಲಾಗಿದೆ (ಪ್ರ.ವಾ., ಆ. 6). ಅದರಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ’ನಾನು ವೀರಶೈವನೋ, ಲಿಂಗಾಯತನೋ ಗೊತ್ತಿಲ್ಲ. ನಾನೊಬ್ಬ ವ್ಯಾಪಾರಿ. ಆದರೂ ವೀರಶೈವ ಮಹಾಸಭಾದ ಆಧ್ಯಕ್ಷನಾದೆ’ ಎಂದಿದ್ದಾರೆ. ಅವರ ಈ ಹೇಳಿಕೆ ವೀರಶೈವ ಮತ್ತು ಲಿಂಗಾಯತ ಎರಡೂ ಭಿನ್ನ ಧರ್ಮಗಳು ಎಂಬುದನ್ನು ಸ್ಪಷ್ಟಪಡಿಸಿದ್ದು, ‘ಧರ್ಮವನ್ನು ಒಡೆಯುವ ಕೆಲಸ ನಡೆಯುತ್ತಿದೆ’ ಎಂಬ ಅವರ ಹೇಳಿಕೆ ಹಾಸ್ಯಾಸ್ಪದ ಮತ್ತು ಸ್ವಯಂ ವಿರುದ್ಧದ್ದಾಗಿದೆ. ಇನ್ನೂ ವಿಚಿತ್ರವೆಂದರೆ, ವೀರಶೈವ ಮಹಾಸಭಾದ ವೆಬ್ ಪುಟದಲ್ಲಿ ವೀರಶೈವರೆಂದರೆ ಯಾರು ಎನ್ನುವುದು ಇಲ್ಲವೇ ಇಲ್ಲ. ಅಲ್ಲಿರುವುದು ಲಿಂಗಾಯತ ಚರಿತ್ರೆ ಮತ್ತು ಆಚರಣೆಗಳು ಮಾತ್ರ. ವೀರಶೈವರು ಯಾರು ಎಂಬುದು ವೀರಶೈವ ಮಹಾಸಭಾದವರಿಗೇ ತಿಳಿದಿಲ್ಲವೆಂದಮೇಲೆ ಇನ್ನು ಇತರರಿಗೆ ಆ ಬಗ್ಗೆ ಹೇಗೆ ತಿಳಿಸಲು ಸಾಧ್ಯ?

ಇಂತಹ ಸಂದರ್ಭದಲ್ಲಿ, ‘ಧರ್ಮ ವಿಭಜನೆಗೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಮುಂದಾಗಿದ್ದರು’ ಎಂದು ಟೀಕಿಸಿದ್ದಾರೆ. ಲಿಂಗಾಯತ ಮತ್ತು ವೀರಶೈವಗಳನ್ನು ಪ್ರತ್ಯೇಕವಾಗಿ ಅವರೇ ಗುರುತಿಸಿರುವಾಗ ಧರ್ಮವನ್ನು ಒಡೆಯಲು ಯಾರಿಂದ ಸಾಧ್ಯ ಎಂಬ ಅರಿವೂ ಅವರಿಗೆ ಇದ್ದಂತಿಲ್ಲ. ಇಂತಹ ಅಧ್ಯಕ್ಷರಿಗೆ, ಲಿಂಗಾಯತರು ಮತ್ತು ವೀರಶೈವರು ಶತಮಾನಗಳಿಂದ ವಿಭಿನ್ನ ಸಂಪ್ರದಾಯಗಳನ್ನು ಆಚರಿಸುತ್ತಾ ಬಂದಿರುವುದು ಹೇಗೆ ತಿಳಿದೀತು? ವೀರಶೈವ ಮುಖಂಡರು, ತಾವು ಹಿಂದೂಗಳಂತೆಯೇ ವೇದ, ಆಗಮ, ಪುರಾಣಗಳನ್ನು ಒಪ್ಪಿಕೊಂಡು ಪಂಚಾಚಾರ್ಯರಿಂದ ಸ್ಥಾಪಿತ ಧರ್ಮವನ್ನು ಅನುಸರಿಸುವುದಾಗಿ ಹೇಳುತ್ತಾ  ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಲಿಂಗಾಯತರು ಇದಕ್ಕೆ ತದ್ವಿರುದ್ಧ. ಅರ್ಥವಿಲ್ಲದ ಶಾಸ್ತ್ರ, ಸಂಪ್ರದಾಯಗಳ ವಿರುದ್ಧ ಸಮರ ಸಾರಿದ ಬಸವಣ್ಣನೇ ಧರ್ಮ ಸಂಸ್ಥಾಪಕ ಹಾಗೂ ವಚನಗಳೇ ಧರ್ಮಗ್ರಂಥಗಳು ಎಂದು ಒಪ್ಪಿಕೊಂಡು ಏಕದೇವೋಪಾಸಕರಾಗಿದ್ದಾರೆ.

ಬಿ.ಎಸ್. ಯಡಿಯೂರಪ್ಪನವರೂ ’ಕೆಲವರು ಸಮಾಜ ವಿಭಜಿಸುವ ಕೆಲಸಕ್ಕೆ ಕೈಹಾಕಿದ್ದಾರೆ’ ಎಂದಿದ್ದಾರೆ. 2013ರಲ್ಲಿ ಅವರು ಮುಖ್ಯಮಂತ್ರ್ರಿಯಾಗಿದ್ದಾಗ ’ವೀರಶೈವ ಲಿಂಗಾಯತ’ರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂದು ಕೇಂದ್ರದಲ್ಲಿದ್ದ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದಕ್ಕೆ ಬಿಜೆಪಿ ಬೆಂಬಲವೂ ಇತ್ತು. ಲಿಂಗಾಯತ ಧರ್ಮವು ವೀರಶೈವ ಮತ್ತು ಹಿಂದೂ ಧರ್ಮಕ್ಕಿಂತ ಭಿನ್ನ ಎಂಬ ಬಗ್ಗೆ ತಜ್ಞರ ಸಮಿತಿ ವರದಿ ನೀಡಿದಾಗ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನ ನೀಡುವುದು ಸೂಕ್ತ ಎಂದು ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇದನ್ನು ವಿರೋಧಿಸುವುದಕ್ಕೆ ಬಿಜೆಪಿಗೆ ಕಾರಣವೇ ಇಲ್ಲ. ಲಿಂಗಾಯತ ಮತ್ತು ವೀರಶೈವ ಭಿನ್ನ ಎಂಬ ತಿಳಿವಳಿಕೆ ಜನರಿಗೆ ಬಂದಲ್ಲಿ ತಮ್ಮ ಚುನಾವಣಾ ಭವಿಷ್ಯಕ್ಕೆ ಎಲ್ಲಿ ತೊಂದರೆಯಾಗುವುದೋ ಎಂಬ ಉದ್ದೇಶದಿಂದ ಬಿಜೆಪಿ ಮತ್ತು ಅದರ ಅನುಯಾಯಿಗಳು ಯಾವ ತರ್ಕವೂ ಇಲ್ಲದೆ ’ಧರ್ಮ ವಿಭಜನೆ’, ’ಸಮಾಜ ವಿಭಜನೆ’, ’ಸಮಾಜ ಒಡೆಯುವ ಕೆಲಸ’ ಎಂದೆಲ್ಲಾ ಲಿಂಗಾಯತರ ಮೇಲೆ ಅನ್ಯಾಯವಾಗಿ ಆಪಾದನೆ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಭಕ್ತ ಸಮುದಾಯಕ್ಕೆ ಮಾರ್ಗದರ್ಶಕರಾದ ಪ್ರಮುಖ ಲಿಂಗಾಯತ ಮಠಾಧೀಶರು ದ್ವಂದ್ವ ನೀತಿಯನ್ನು ಅನುಸರಿಸಿಯೋ ಅಥವಾ ಇದರ ಬಗ್ಗೆ ಚಕಾರವೆತ್ತದೆಯೋ ತಮ್ಮ ಭಕ್ತರನ್ನು ಅಸ್ಪಷ್ಟ ದಾರಿಯಲ್ಲಿ ಕೊಂಡೊಯ್ಯುತ್ತಿದ್ದಾರೆ. ಸೂರ್ಯನನ್ನು ಹೇಗೆ ಮುಚ್ಚಿಡಲಾಗದೋ ಸತ್ಯವನ್ನೂ ಹಾಗೇ ಹೆಚ್ಚುಕಾಲ ಮುಚ್ಚಿಡಲಾಗದು.
 

ಗೀತ, ಬಸವರಾಜು ಮತ್ತು ಇತರ ಕಾರ್ಯಕರ್ತರು, ಜಾಗತಿಕ ಲಿಂಗಾಯತ ಮಹಾಸಭಾ, ಬೆಂಗಳೂರು

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !