ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದ ಬಾಟಲಿ: ಮರುಬಳಕೆಗೆ ಪೂರಕವಾಗಿರಲಿ

Last Updated 31 ಮಾರ್ಚ್ 2021, 21:34 IST
ಅಕ್ಷರ ಗಾತ್ರ

ಈಚೆಗೆ ಅನಾರೋಗ್ಯದ ನಿಮಿತ್ತ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಬ್ಬರು ತಮ್ಮ ಅಂಗಾಲುಗಳಿಗೆ ಅಗಲವಾದ ಪಟ್ಟಿ ಕಟ್ಟಿಸಿಕೊಂಡು ಕೂತಿದ್ದರು. ಬಿಳಿಯ ಪಟ್ಟಿಯ ಮೇಲೆ ಕೆಂಪು ರಕ್ತದ ಕಲೆ‌ ಢಾಳಾಗಿ ಕಾಣುತ್ತಿತ್ತು. ಮಕ್ಕಳ ಗಾಯದ ಕುರಿತು ಆತಂಕಗೊಂಡು ಶುಶ್ರೂಷಕರನ್ನು ವಿಚಾರಿಸಿದಾಗ, ಆ ಮಕ್ಕಳು ಸ್ಥಳೀಯ ಶಾಲೆಯ ಬಯಲಿನಲ್ಲಿ ಆಡುವಾಗ, ಒಡೆದ ಮದ್ಯದ ಶೀಷೆಯ ಚೂರುಗಳು ನೆಟ್ಟು ಗಾಯಗೊಂಡಿದ್ದಾರೆ ಎಂಬುದು ಗೊತ್ತಾಯಿತು. ಅಲ್ಲದೆ ಈ ರೀತಿಯ ಅಪಘಾತಗಳು ವಾರದಲ್ಲಿ ಕನಿಷ್ಠ ಎರಡಾದರೂ ಸಂಭವಿಸುತ್ತಲೇ ಇರುತ್ತವೆ ಎಂಬುದು ತಿಳಿದು ಖೇದವಾಯಿತು. ಪ್ರಸ್ತುತ ಶಾಲೆ, ರಸ್ತೆಗಳು, ಹೊಲಗಳು, ನೀರಿನ ಆಕರಗಳು, ದೇವಸ್ಥಾನದ ಅಂಗಳ ಸೇರಿದಂತೆ ಬಯಲು ಗದ್ದೆಗಳಲ್ಲಿ ಎಲ್ಲಿ ನೋಡಿದರಲ್ಲಿ ಮದ್ಯದ ಶೀಷೆಗಳು ರಾಶಿ ರಾಶಿಯಾಗಿ ಬಿದ್ದಿರುತ್ತವೆ.

ಅವುಗಳನ್ನು ಕೆಲವು ಕಿಡಿಗೇಡಿಗಳು ಒಡೆದು ಹೋಗುತ್ತಾರೆ. ಈ ಗಾಜಿನ ತುಂಡುಗಳು ಹರಿತವಾಗಿದ್ದು ಕೆಲದಿನ
ಗಳಲ್ಲಿಯೇ ಮಣ್ಣಿನಲ್ಲಿ ಹೂತುಹೋಗಿ ಬೇಟೆಗಾಗಿ ಹೊಂಚುಹಾಕಿ ಕೂರುತ್ತವೆ. ಕಾಲಿಗೆ ಚಪ್ಪಲಿ ಧರಿಸಲೂ ಶಕ್ತರಲ್ಲದ ಅನೇಕ ಜನ ವೃದ್ಧರು, ಮಕ್ಕಳು ಇವುಗಳನ್ನು ಅಚಾನಕ್ಕಾಗಿ ತುಳಿದು ತತ್ತರಿಸಿಹೋಗುತ್ತಾರೆ. ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗಲೂ ಈ ಗಾಜಿನ ಚೂರುಗಳನ್ನು ತುಳಿದು ಗಾಯಗೊಂಡ ಉದಾಹರಣೆಗಳಿದ್ದು, ಎಷ್ಟೋ ಬಾರಿ ಜಾನುವಾರುಗಳು ಸಹ ಗಾಯಗೊಂಡು ಮೂಕರೋದನೆ ಅನುಭವಿಸುತ್ತವೆ‌.

ಹೀಗೆ ಗಾಯಗೊಂಡ ಬಹುತೇಕರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಸುದೀರ್ಘವಾಗಿ ನರಳುವಂತಾಗುತ್ತದೆ. ಕೆಲವು ಗಂಭೀರ ಪ್ರಕರಣಗಳಲ್ಲಿ ಸಣ್ಣ ಶಸ್ತ್ರಚಿಕಿತ್ಸೆ ಮತ್ತು ದೀರ್ಘ ಕಾಲದ ವಿಶ್ರಾಂತಿಯೂ ಬೇಕಾಗುತ್ತದೆ. ಅದರಲ್ಲೂ ಗಾಯಗೊಂಡವರು ಮಧುಮೇಹಿಗಳಾಗಿದ್ದರಂತೂ ಅವರ ಗೋಳು ದೇವರಿಗೇ ಪ್ರೀತಿ. ಆದ್ದರಿಂದ ಅಬಕಾರಿ ಸಚಿವರು ಈ ಬಗ್ಗೆ ಗಂಭೀರವಾಗಿ ಯೋಚಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕಿದೆ. ಖಾಲಿ ಶೀಷೆಗಳನ್ನು ಮದ್ಯ ಮಳಿಗೆಗಳಿಂದಲೇ ಮರುಖರೀದಿಸುವ ಇಲ್ಲವೇ ಮರುಬಳಕೆಗೆ ಬರುವಂತಹ ವಸ್ತುಗಳಿಂದ ಇಲ್ಲವೇ ಮಣ್ಣಿನ ಅಥವಾ ಪ್ಲಾಸ್ಟಿಕ್‌ನಿಂದ ಶೀಷೆಗಳನ್ನು ತಯಾರಿಸುವ ದಿಸೆಯಲ್ಲಿ ಇಲಾಖೆ ಕಾರ್ಯೋನ್ಮುಖವಾಗಬೇಕಿದೆ.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT