ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅಂಬೇಡ್ಕರ್ ಚಿಂತನೆಗಳ ತಿರುಚುವಿಕೆ ಸಲ್ಲ

Last Updated 9 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

‘ಕಾಳಾರಾಮನಿಂದ ಅಯೋಧ್ಯಾರಾಮನವರೆಗೆ’ ಎಂಬ ಲೇಖನದಲ್ಲಿ (ಪ್ರ.ವಾ., ಆ. 6) ಡಾ. ಅಂಬೇಡ್ಕರ್ ಅವರು ಶಂಕರರಾವ್ ಕಾರತ್‌ರೊಡನೆ ಮಾತನಾಡಿದರೆನ್ನಲಾದ ಹೇಳಿಕೆಯೊಂದನ್ನು ವಾದಿರಾಜ ಅವರು ಉಲ್ಲೇಖಿಸಿದ್ದಾರೆ. ಹಾಗೆಯೇ ಅಂಬೇಡ್ಕರ್ ಬರೆದಿರುವ ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯ ವಿಚಾರವೊಂದನ್ನೂ ಪ್ರಸ್ತಾಪಿಸಿದ್ದಾರೆ. ಲೇಖಕರ ಉದ್ದೇಶ ಸ್ಪಷ್ಟ. ಅಂಬೇಡ್ಕರ್ ಅವರು ರಾಮನ ಪರ ಇದ್ದರು, ಮುಸ್ಲಿಮರ ವಿರೋಧಿಯಾಗಿದ್ದರು ಎಂದು ಬಿಂಬಿಸುವುದು.

ಆದರೆ ವಾಸ್ತವ? ಹಿಂದೂ ಧರ್ಮದ ಕುರಿತು ಅಂಬೇಡ್ಕರ್‌ ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಎಲ್ಲಾ ಕೃತಿಗಳಲ್ಲೂ ಅವರು ಹಿಂದೂ ಧರ್ಮವನ್ನು ಕಟುವಾಗಿ ವಿಮರ್ಶಿಸಿದ್ದಾರೆ. ರಾಮನ ಕುರಿತು ‘ರಾಮ ಮತ್ತು ಕೃಷ್ಣರ ಒಗಟುಗಳು’ ಎಂಬ ಕೃತಿಯನ್ನೂ ಬರೆದಿದ್ದಾರೆ. ಅದರಲ್ಲೂ ರಾಮನ ಕುರಿತ ಕಟು ವಿಮರ್ಶೆ ಇದೆಯೇ ವಿನಾ ಲೇಖಕರು ಪ್ರಸ್ತಾಪಿಸಿರುವ ಹಾಗೆ ‘ರಾಮ ತನ್ನ ನಡವಳಿಕೆಯಿಂದ ದೊಡ್ಡವನಾದನು’ ಎಂಬ ರೀತಿಯಲ್ಲಿ ಅಲ್ಲ.

ಇನ್ನು ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯಲ್ಲಿ ಮುಸ್ಲಿಂ ದಾಳಿಗಳನ್ನು ಅಂಬೇಡ್ಕರ್‌ ನಿಷ್ಪಕ್ಷಪಾತವಾಗಿ ಖಂಡಿಸಿದ್ದಾರೆ ನಿಜ. ಆದರೆ ಅದೇ ಕೃತಿಯಲ್ಲಿ, ಹಿಂದುತ್ವದ ಪ್ರತಿಪಾದಕ ವೀರ ಸಾವರ್ಕರ್ ಅವರನ್ನು ಅಷ್ಟೇ ನಿಷ್ಪಕ್ಷಪಾತವಾಗಿ ಅವರು ಟೀಕಿಸಿದ್ದಾರೆ. ಆಶ್ಚರ್ಯವೆಂದರೆ, ಲೇಖಕರು ಈ ಅಂಶವನ್ನು ಪ್ರಸ್ತಾಪಿಸಲು ಹೋಗುವುದಿಲ್ಲ. ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳ ದೌರ್ಜನ್ಯಗಳನ್ನು, ದಾಳಿಗಳನ್ನು, ದಬ್ಬಾಳಿಕೆಗಳನ್ನು ತಮ್ಮೆಲ್ಲಾ ಬರಹಗಳಲ್ಲಿ ನಿಷ್ಪಕ್ಷಪಾತವಾಗಿ ದಾಖಲಿಸಿರುವ ಅಂಬೇಡ್ಕರರ ಚಿಂತನೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಿಂಬಿಸಿದರೆ, ಅದು ಹಾಡಹಗಲಲ್ಲೇ ಅಂಬೇಡ್ಕರ್ ಚಿಂತನೆಗಳ ತಿರುಚುವಿಕೆಯ ಸ್ಪಷ್ಟ
ಉದಾಹರಣೆಯಾಗುತ್ತದಷ್ಟೆ.

-ರಘೋತ್ತಮ ಹೊ.ಬ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT