ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಸ್‌ಎಂಇ’ಗಳಿಗೆ ಝೋಹೊ ನೆರವು

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ಹಣಕಾಸು ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಸಂಸ್ಥೆ ಝೋಹೊ, ಉದ್ದಿಮೆ ಸಂಸ್ಥೆಗಳ ಹಣಕಾಸು ವಹಿವಾಟು ನಿರ್ವಹಣೆ ಸರಳಗೊಳಿಸುವ ವೈವಿಧ್ಯಮಯ ಹಣಕಾಸು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಸಂಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಪಡಿಸಿರುವ ಕ್ಲೌಡ್‌ ಆಧಾರಿತ ವಿಭಿನ್ನ ಹಣಕಾಸು ಉತ್ಪನ್ನಗಳು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಯಲ್ಲಿ ಬರುವ ವರ್ತಕರ ಕೆಲಸ ಹಗುರಗೊಳಿಸಿವೆ. ಆರಂಭದಲ್ಲಿದ್ದ ‘ಸ್ಮಾಲ್‌ ಆಫೀಲ್‌ ಹೋಮ್‌ ಆಫೀಸ್‌' - ಸೋಹೊ ಹೆಸರನ್ನು ಆನಂತರ ಝೋಹೊ ಎಂದು ಬದಲಿಸಲಾಗಿದೆ. ಉದ್ದಿಮೆ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಸುಲಭವಾಗಿ ತಲುಪಲು, ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಪರಿಣಾಮಕಾರಿಯಾಗಿ ದಕ್ಷ ರೀತಿಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ವಹಿವಾಟು ನಿರ್ವಹಿಸಿ ಲಾಭದ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಸಂಸ್ಥೆ ಉತ್ಪನ್ನಗಳು ನೆರವಿಗೆ ಬರುತ್ತಿವೆ.

ವ್ಯಾಪಾರ – ವಹಿವಾಟು ನಡೆಸಲು ಬೇಕಾದ ಸಾಫ್ಟ್‌ವೇರ್‌ಗಳನ್ನು ಕ್ಲೌಡ್‌ ತಂತ್ರಜ್ಞಾನದ ಮೂಲಕ ಒದಗಿಸುವ ಸಂಸ್ಥೆಯು, ವಹಿವಾಟಿನ ಅಪ್ಲಿಕೇಷನ್‌ಗಳಾದ ’ಆಫೀಸ್’, ’ಮೇಲ್’ ಹಾಗೂ ‘ದಾಖಲೆ’ ಮೊದಲಾದವು
ಗಳನ್ನು ಕ್ಲೌಡ್‌ ತಂತ್ರಜ್ಞಾನದ ಮೂಲಕ ನಿರ್ವಹಿಸಲು ಸಹಾಯ ಮಾಡುತ್ತದೆ. ಉದ್ದಿಮೆದಾರರು ಮತ್ತು ವರ್ತಕರ ವಹಿವಾಟಿನ ಎಲ್ಲ ಕಾರ್ಯಗಳನ್ನು ಸಮರ್ಪಕವಾಗಿ ಮತ್ತು ಸರಳವಾಗಿ ನಿರ್ವಹಿಸಲು ಈ ತಂತ್ರಜ್ಞಾನ ನೆರವಾಗುತ್ತಿದೆ.

ಸ್ಮಾರ್ಟ್‌ಫೋನ್‌ಗಳ ಹೆಚ್ಚಿದ ಬಳಕೆ, ಬ್ರಾಂಡ್‌ಬ್ಯಾಂಡ್‌ ಸಂಪರ್ಕದ ವಿಸ್ತರಣೆ ಮತ್ತು ಜಿಎಸ್‌ಟಿ ಜಾರಿಯಿಂದಾಗಿ ವಹಿವಾಟಿನ ಲೆಕ್ಕಚಾರ ಮತ್ತಿತರ ವಿವರಗಳನ್ನು ಆನ್‌ಲೈನ್‌ನಲ್ಲಿಯೇ ಸುಲಭವಾಗಿ ನಿರ್ವಹಿಸಲು ಈ ಸಂಸ್ಥೆಯ ಹಣಕಾಸು ಉತ್ಪನ್ನಗಳು ನೆರವಾಗುತ್ತಿವೆ ಎಂದು ಝೋಹೊ ನಿರ್ದೇಶಕ ಶಿವರಾಮಕೃಷ್ಣನ್ ಈಶ್ವರನ್‌ ಅವರು ಹೇಳುತ್ತಾರೆ.

‘ಝೋಹೊ ಫೈನಾನ್ಸ್ ಪ್ಲಸ್‌’ ಸಾಫ್ಟ್‌ವೇರ್‌, ವರ್ತಕರು ತಮ್ಮ ಪ್ರತಿದಿನದ ವಹಿವಾಟುಗಳನ್ನು ನಿರ್ವಹಿಸಲು ಮತ್ತು ತಮ್ಮ ಜಿಎಸ್‌ಟಿ ರಿಟರ್ನ್ಸ್‌ಗಳನ್ನು ಸಲ್ಲಿಸುವುದನ್ನು ಸುಲಭಗೊಳಿಸುತ್ತದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಸ್‌ಎಂಇ) ಸರಕುಗಳ ದರ ಪಟ್ಟಿ, ತೆರಿಗೆ ಸಲ್ಲಿಸುವಿಕೆ ಮತ್ತು ಇತರ ವಹಿವಾಟುಗಳಿಗಾಗಿ ಜಿಎಸ್‌ಟಿ ಅಳವಡಿಸಿಕೊಂಡಿವೆ. ಇದಕ್ಕೆ ಅಗತ್ಯವಾದ ಹಣಕಾಸು ಕಾರ್ಯನಿರ್ವಹಣಾ ಸೌಲಭ್ಯವನ್ನು ಝೋಹೊ ಫೈನಾನ್ಸ್ ಪ್ಲಸ್ ಒದಗಿಸುತ್ತದೆ.

‘ಝೋಹೊ ಬುಕ್ಸ್‌– ಇದೊಂದು ಸರಳವಾದ ಇನ್‌ವಾಯ್ಸ್ ಸಾಫ್ಟ್‌ವೇರ್‌ ಆಗಿದೆ. ಝೋಹೋ ಎಕ್ಸ್‌ಪೆನ್ಸ್: ಎಲ್ಲ ಬಗೆಯ ವ್ಯವಹಾರಗಳಿಗೆ ಇದು ಹೇಳಿ ಮಾಡಿಸಿದಂತಿದೆ. ಝೋಹೊ ಚಂದಾದಾರಿಕೆ: ಬಿಲ್ಲಿಂಗ್‌‌ಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಝೋಹೊ ಇನ್ವೆಂಟ್ರಿ: ಇದು ಖರೀದಿ ಬೇಡಿಕೆಗಳನ್ನು ಕರಾರುವಾಕ್ಕಾಗಿ ನಿರ್ವಹಣೆ ಮಾಡಲು ಅನುವು ಮಾಡಿಕೊಡಲಿದೆ. ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಸರಕುಗಳ ಪೂರೈಕೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ‘ಝೋಹೊ ಫೈನಾನ್ಸ್‌ ಪ್ಲಸ್’ ನೆರವಿನಿಂದ ತೆರಿಗೆ ವಿವರಗಳನ್ನು ಪ್ರತ್ಯೇಕಿಸಿ ಇಡಲು, ಲೆಕ್ಕಪತ್ರ ಸಲ್ಲಿಸಲು ಮಾಹಿತಿ ಪಡೆಯಲು ವರ್ತಕರಿಗೆ ನೆರವಾಗುತ್ತಿದೆ. ಇದನ್ನು ಬಳಸಿ ರಿಟರ್ನಗಳನ್ನೂ ಸ್ವಯಂಚಾಲಿತವಾಗಿ ಸಲ್ಲಿಸಬಹುದು. ಒಂದು ಸಂಸ್ಥೆಯಲ್ಲಿ 10 ಜನರು ಉದ್ಯೋಗಿಗಳು ಇದ್ದರೆ, ಝೋಹೊ ಬುಕ್ಸ್‌, ಇನ್‌ವಾಯ್ಸ್‌, ಎಕ್ಸ್‌ಪೆನ್ಸ್‌ ಒಳಗೊಂಡ ‘ಝೋಹೊ ಫೈನಾನ್ಸ್‌ ಪ್ಲಸ್‌’ನ ನೆರವು ಪಡೆಯಬಹುದು. ಈ ಮೊದಲು ಝೋಹೊ ಅಪ್ಲಿಕೇಷನ್‌ ಸಾಫ್ಟ್‌ವೇರ್‌ಗಳನ್ನು ಬಳಸುತ್ತಿದ್ದ ವ್ಯಾಪಾರಸ್ಥರು ಈಗ ಎಲ್ಲವನ್ನೂ ಒಂದೇ ಬಾರಿಗೆ ಬಳಸಬಹುದು’ ಎಂದು ಶಿವರಾಮಕೃಷ್ಣನ್ ಹೇಳುತ್ತಾರೆ.

‘ಝೋಹೊ, ಜಿಎಸ್‌ಟಿ ಸುವಿಧಾ ಸಂಸ್ಥೆಯಾಗಿದೆ. ದೊಡ್ಡ ಕಾರ್ಪೊರೇಟ್‌, ಎಸ್‌ಎಂಇ, ತೆರಿಗೆ ವೃತ್ತಿಪರರಿಗೆ ಮತ್ತು ಸಣ್ಣ ವ್ಯಾಪಾರಸ್ಥರಿಗೆ ಹಲವಾರು ಅನುಕೂಲತೆಗಳನ್ನು ಒದಗಿಸಿಕೊಟ್ಟಿದೆ. ಸರಕುಗಳ ಮಾರಾಟ ಹಾಗೂ ಸೇವೆಗಳನ್ನು ನೀಡುವವರು ತೆರಿಗೆ ಪಾವತಿಸುವವರಿಗೆ ಮತ್ತು ಹೂಡಿಕೆದಾರರಿಗೆ ಹೊಸ ತಂತ್ರಜ್ಞಾನದ ಮೂಲಕ ಪರಿಹಾರವನ್ನು ಒದಗಿಸಲು ಸಂಸ್ಥೆ ನೆರವಾಗುತ್ತಿದೆ.

ಬ್ಯಾಂಕ್‌ ಜತೆ ಸಹಭಾಗಿತ್ವ: ಲೆಕ್ಕಪತ್ರ ಹಾಗೂ ಬ್ಯಾಂಕಿಂಗ್‌ ವಹಿವಾಟನ್ನೂ ಈ ಸಂಸ್ಥೆಯು ಸಮನ್ವಯಗೊಳಿಸಿದೆ. ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಗ್ರಾಹಕರಿಗೆ ಈ ಸೌಲಭ್ಯ ಒದಗಿಸಿದೆ.

ಸಂಸ್ಥೆಯ ಕ್ಲೌಡ್ ಅಕೌಂಟಿಂಗ್ ಸಾಫ್ಟ್‌ವೇರ್‌ 'ಝೋಹೊ ಬುಕ್ಸ್' ಬಳಸಿಕೊಂಡು ಗ್ರಾಹಕರಿಗೆ ವ್ಯವಸ್ಥಿತ ಡಿಜಿಟಲ್ ಬ್ಯಾಂಕಿಂಗ್ ಅನುಭವ ನೀಡಲಾಗುತ್ತಿದೆ. ಐಸಿಐಸಿಐ ಬ್ಯಾಂಕ್‌ನ ಚಾಲ್ತಿ ಖಾತೆದಾರರು ತಮ್ಮ ಬ್ಯಾಂಕ್ ಖಾತೆಯನ್ನು ಝೋಹೊ ಬುಕ್ಸ್‌ ಜತೆ ಸುರಕ್ಷಿತವಾಗಿ ಜೋಡಿಸಬಹುದು. ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ ಗ್ರಾಹಕರನ್ನೂ ಶೀಘ್ರದಲ್ಲಿಯೇ ಈ ಸೇವೆ ವ್ಯಾಪ್ತಿಗೆ ತರಲಾಗುತ್ತಿದೆ.


ಶಿವರಾಮಕೃಷ್ಣನ್‌ ಈಶ್ವರನ್‌

‘ಉದ್ದಿಮೆ ಸಂಸ್ಥೆಗಳು ತಮ್ಮ ಅಗತ್ಯಗಳಿಗೆ ತಕ್ಕಂತೆ ಹಣಕಾಸು ಉತ್ಪನ್ನಗಳನ್ನು ಪ್ರತ್ಯೇಕವಾಗಿ ಖರೀದಿಸುವ ಸೌಲಭ್ಯವೂ ಇಲ್ಲಿದೆ. ವಹಿವಾಟು, ಮಾರುಕಟ್ಟೆ ವಿಸ್ತರಣೆಯಾದಂತೆ ಹೆಚ್ಚುವರಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಪ್ರತಿಯೊಂದು ಉತ್ಪನ್ನಕ್ಕೆ ಪ್ರತ್ಯೇಕ ಬೆಲೆ ನಿಗದಿಪಡಿಸಲಾಗಿದೆ. ಆ ಎಲ್ಲ ಉತ್ಪನ್ನಗಳ ಬೆಲೆ ವಿವರವು ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಲಭ್ಯ ಇವೆ. ಕ್ಲೌಡ್‌ ತಂತ್ರಜ್ಞಾನ ಕುರಿತ ಅಪನಂಬಿಕೆ ದೂರ ಮಾಡುವಲ್ಲಿಯೂ ಸಂಸ್ಥೆಯ ಉತ್ಪನ್ನಗಳು ಸಫಲವಾಗಿವೆ. ಕೆಲ ವರ್ಷಗಳ ಹಿಂದಿನವರೆಗೆ ಕ್ಲೌಡ್‌ ತಂತ್ರಜ್ಞಾನದ ಬಗ್ಗೆ ಬಹುತೇಕ ಉದ್ದಿಮೆದಾರರಲ್ಲಿ ವಿಶ್ವಾಸ ಇದ್ದಿರಲಿಲ್ಲ. ಅದರ ಸುರಕ್ಷಿತ ಬಳಕೆ ಬಗ್ಗೆ ಉದ್ದಿಮೆದಾರರಲ್ಲಿ ಆತಂಕ ಮನೆಮಾಡಿತ್ತು. ಅದು ಈಗ ದೂರವಾಗಿದೆ. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ, ಬ್ರಾಡ್‌ಬ್ಯಾಂಡ್‌ ಸೌಲಭ್ಯದಲ್ಲಿ ಗಮನಾರ್ಹ ಸುಧಾರಣೆ, ಮೊಬೈಲ್‌ ತಂತ್ರಜ್ಞಾನದ, ಸ್ಮಾರ್ಟ್‌ಫೋನ್‌ಗಳ ವ್ಯಾಪಕ ಬಳಕೆ, ಡಿಜಿಟಲ್‌ ಭಾರತದ ಪ್ರಚಾರ ಆಂದೋಲನ ಮುಂತಾದವು ಕ್ಲೌಡ್ ತಂತ್ರಜ್ಞಾನದ ಬಳಕೆಯ ಉಪಯುಕ್ತತೆ ಬಗ್ಗೆ ಅರಿವು ಹೆಚ್ಚಿಸಿವೆ’ ಎಂದು ಶಿವರಾಮಕೃಷ್ಣನ್ ಹೇಳುತ್ತಾರೆ.

‘ಜಿಎಸ್‌ಟಿ ಜಾರಿಗೆ ಬಂದ ನಂತರ ಸರಕುಗಳ ಖರೀದಿ – ಮಾರಾಟ, ರಫ್ತು ಮತ್ತಿತರ ಬಗೆಯ ವಹಿವಾಟಿನ ಸ್ವರೂಪದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ. ಸಂಸ್ಥೆಯ ಉತ್ಪನ್ನಗಳು ಉದ್ದಿಮೆ, ವಹಿವಾಟಿನ ಪ್ರತಿಯೊಂದು ಚಟುವಟಿಕೆಗಳನ್ನು ದಕ್ಷ ರೀತಿಯಲ್ಲಿ ನಿರ್ವಹಿಸಲು ನೆರವಾಗುತ್ತಿವೆ. ವಹಿವಾಟಿನ ಆರೋಗ್ಯಕರ ಬೆಳವಣಿಗೆಗೆ, ದಕ್ಷ ನಿರ್ವಹಣೆಗೆ ಈ ಉತ್ಪನ್ನಗಳು ಉದ್ದಿಮೆದಾರರ ನೆರವಿಗೆ ಬರುತ್ತಿವೆ.
ಜಿಎಸ್‌ಟಿ ಜಾರಿಗೆ ಬರುತ್ತಿದ್ದಂತೆ ಸಂಸ್ಥೆಯು ತನ್ನ ಗಮನವನ್ನು ಭಾರತದತ್ತ ಹೆಚ್ಚು ಕೇಂದ್ರೀಕರಿಸಿದೆ. ಕ್ಯಾಲಿಫೋರ್ನಿಯಾದ ಈ ಸಂಸ್ಥೆ ವಿಶ್ವದಾದ್ಯಂತ ಉದ್ದಿಮೆಗಳಿಗೆ ಸೇವೆ ಸಲ್ಲಿಸುತ್ತಿದೆ. ಉದ್ದಿಮೆಗಳು ಸ್ವಂತ ಕ್ಲೌಡ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಲೂ ಸಂಸ್ಥೆ ನೆರವಾಗಲಿದೆ. ನಿರ್ದಿಷ್ಟ ಸಂಸ್ಥೆಯ ಬಳಕೆಗೆ ಮಾತ್ರ ಇದು ಲಭ್ಯ ಇರಲಿದೆ.

ಲೆಕ್ಕಪತ್ರಗಳ ನಿರ್ವಹಣೆಗೆ ನೆರವಾಗುವ ಝೋಹೊ ಬುಕ್ಸ್‌ನ ಬೆಲೆ ₹ 2,600 ಮತ್ತು ಸಮಗ್ರ ಸೇವೆಗಳನ್ನು ಒಳಗೊಂಡಿರುವ ‘ಝೋಹೊ ಫೈನಾನ್ಸ್‌ ಪ್ಲಸ್‌’ನ ಬೆಲೆ ₹ 20 ಸಾವಿರ ಇದೆ. ಇದರಲ್ಲಿ ಹೆಚ್ಚು ಸೌಲಭ್ಯಗಳಿವೆ. ಬರೀ ಲೆಕ್ಕಪತ್ರಗಳಿಗೆ ಝೋಹೊ ಬುಕ್ಸ್‌ ಸಾಕು. ಉದ್ಯಮಿಗಳ ಪ್ರತಿಯೊಂದು ಅಗತ್ಯ ಈಡೇರಿಸುವ ಬಗೆಯಲ್ಲಿ ಈ ಹಣಕಾಸು ಉತ್ಪನ್ನಗಳನ್ನು ಸ್ಥಳೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ' ಎಂದೂ ಅವರು ಹೇಳುತ್ತಾರೆ.
**
3 ಕೋಟಿ
ವಿಶ್ವದಾದ್ಯಂತ ಇರುವ ನೋಂದಾಯಿತ ಗ್ರಾಹಕರು

60 ಲಕ್ಷ
ಭಾರತದಲ್ಲಿನ ಗ್ರಾಹಕರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT