ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಬಿಡಿ, ಗುಣಮಟ್ಟ ಸುಧಾರಿಸಿ!

Last Updated 25 ಡಿಸೆಂಬರ್ 2018, 19:57 IST
ಅಕ್ಷರ ಗಾತ್ರ

ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸಬೇಕೆನ್ನುವ ಸರ್ಕಾರದ ನಿರ್ಣಯವು ‘ಎಲ್ಲ ಬಿಟ್ಟ ಭಂಗಿ ನೆಟ್ಟ’ ಎಂಬ ನಾಣ್ಣುಡಿಗೆ ಪೂರಕವಾಗಿದೆ. ಕನ್ನಡಮಾಧ್ಯಮದಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ, ಭಾಷೆಯ ಉಳಿವಿನ ಕುರಿತು ಚಿಂತಿಸುವುದನ್ನು ಬಿಟ್ಟು ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿರುವುದು ವಿಪರ್ಯಾಸ.

‘ದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಶೇ 53ರಷ್ಟು ಮಂದಿ ಯಾವ ಕ್ಷೇತ್ರದಲ್ಲೂ ಕೆಲಸ ಮಾಡಲು ಯೋಗ್ಯರಾಗಿಲ್ಲ’ ಎಂಬ ನೀತಿ ಆಯೋಗದ ವರದಿ ಹಾಗೂ ನಮ್ಮ ಎಂಜಿನಿಯರಿಂಗ್‌ ಪದವೀಧರರ ಹೀನಾಯ ಕೌಶಲ ಸ್ಥಿತಿ ಕುರಿತ ವರದಿಗಳೂ ಇತ್ತೀಚೆಗೆ ಬಹಿರಂಗಗೊಂಡಿವೆ. ಇಂಗ್ಲಿಷ್‌ ಮಾಧ್ಯಮದಲ್ಲಿಯೇ ಉನ್ನತ ಶಿಕ್ಷಣ, ಎಂಜಿನಿಯರಿಂಗ್‌ ಶಿಕ್ಷಣ ಪಡೆದರೂ ಈ ಸ್ಥಿತಿ ಹೇಗೆ ಉಂಟಾಯಿತು ಎಂಬುದು ಚಿಂತನಾರ್ಹ ವಿಷಯವಾಗಿದೆ.

ಹಿಂದಿನ ತಲೆಮಾರಿನವರು ಹತ್ತನೆಯ ತರಗತಿವರೆಗೆ ತಮ್ಮ ಪ್ರದೇಶದ ಭಾಷೆಯ ಮಾಧ್ಯಮದಲ್ಲಿಯೇ ಓದಿ, ಐದನೆಯ ತರಗತಿಯಿಂದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿತು, ಹತ್ತನೆಯ ತರಗತಿ ನಂತರ ಇಂಗ್ಲಿಷ್‌ ಮಾಧ್ಯಮಕ್ಕೆ ಹೊರಳಿಕೊಂಡು ಉನ್ನತ ಶಿಕ್ಷಣದ ಎಲ್ಲ ಶಿಸ್ತುಗಳಲ್ಲಿ ಒಳ್ಳೆಯ ಸಾಧನೆ ಮಾಡಿರುವುದು ನಮ್ಮ ಕಣ್ಣ ಮುಂದಿದೆ. ನಿಜ, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ನಮಗೆ ಇಂಗ್ಲಿಷ್‌ ಕಲಿಕೆಯ ಅಗತ್ಯ ಇದೆ. ಆದರೆ ನಮ್ಮ ಭಾಷೆಯನ್ನು ಬಲಿಕೊಟ್ಟು ನಾವು ಇಂಗ್ಲಿಷನ್ನು ಅಳವಡಿಸಿಕೊಳ್ಳಲು ಮುಂದಾಗುವುದು ಆತ್ಮಹತ್ಯಾತ್ಮಕ ನಡವಳಿಕೆಯಾದೀತು.

ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೇಗೆ ಹೇಳಿಕೊಡಬಹುದು ಎಂಬುದು ನಮ್ಮ ಕಾಳಜಿ ಆಗಬೇಕು. ಇಂಗ್ಲಿಷ್‌ ನಮಗೆ ಬೆಳಕಾಗುತ್ತಲೇ ಬೆಂಕಿ ಆಗಬಾರದೆನ್ನುವ ಎಚ್ಚರವೂ ಇರಬೇಕು. ಅಗತ್ಯ ಶೈಕ್ಷಣಿಕ ಅರ್ಹತೆ ಇಲ್ಲದ ಶಿಕ್ಷಕರ ಪಡೆಯೇ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದನ್ನು ನಿಯಂತ್ರಿಸಬೇಕಾದ ಸರ್ಕಾರವೂ ಅದೇ ಕೆಲಸಕ್ಕೆ ಮುಂದಾಗುತ್ತಿರುವುದು ಸರಿಯಲ್ಲ.

ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲೂ ಕನ್ನಡ ಬೋಧನೆಯನ್ನು ಬಲಪಡಿಸುವ ದಿಸೆಯಲ್ಲಿ, ಕನ್ನಡವನ್ನು ಪ್ರಥಮ ಭಾಷೆಯಾಗಿ ಬೋಧಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕು. ಅರ್‌ಟಿಇ ಹೆಸರಲ್ಲಿ ಖಾಸಗಿ ಶಾಲೆಗಳನ್ನು ಆರ್ಥಿಕವಾಗಿ ಬಲಪಡಿಸುವ ಕ್ರಮಗಳನ್ನು ನಿಲ್ಲಿಸಿ, ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಕಡೆಗೆ ಗಮನ ಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT