ಬೇಜವಾಬ್ದಾರಿ ಹೇಳಿಕೆ

7

ಬೇಜವಾಬ್ದಾರಿ ಹೇಳಿಕೆ

Published:
Updated:

‘ಸ್ವಾಗತಾರ್ಹ ಸಲಹೆ’ (ವಾ.ವಾ., ಸೆ. 8) ಪತ್ರದಲ್ಲಿ ಕೆ.ವಿ. ಆಚಾರ್ಯ, ಪುರುಷರಿಗೆ ಮದುವೆಯ ಕನಿಷ್ಠ ವಯೋಮಿತಿಯನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸುವಂತೆ ರಾಷ್ಟ್ರೀಯ ಕಾನೂನು ಆಯೋಗವು ಮಾಡಿರುವ ಶಿಫಾರಸನ್ನು ಸ್ವಾಗತಿಸಿದ್ದಾರೆ.

ತಾರತಮ್ಯ ನಿವಾರಣೆಯ ನಿಟ್ಟಿನಲ್ಲಿ ಇದು ಅಗತ್ಯ ಎಂದದ್ದಲ್ಲದೆ, ಸ್ತ್ರೀಯರ ಕನಿಷ್ಠ ವಿವಾಹ ವಯೋಮಿತಿಯನ್ನು 15 ವರ್ಷಕ್ಕೆ ಇಳಿಸಬೇಕೆಂದೂ ಅವರು ಸಲಹೆ ನೀಡಿದ್ದಾರೆ. ಇದು ಅತ್ಯಂತ ಅಪಾಯಕಾರಿ ಚಿಂತನೆ. ಗಂಡು– ಹೆಣ್ಣುಗಳಲ್ಲಿರುವ ಭೇದವನ್ನು ಭಗವಂತ ಸೃಷ್ಟಿಸಿದ್ದಾನೆ ಎಂದು ದೇವರ ಮೇಲೆ ಆರೋಪ ಹೊರಿಸಿ, ‘ಇದನ್ನು ಜಗತ್ತೇ ಒಪ್ಪತಕ್ಕದ್ದು’ ಎಂಬ ಅಪ್ಪಣೆಯನ್ನೂ ಅವರು ಕೊಡಿಸಿದ್ದಾರೆ.

ಪ್ರಕೃತಿದತ್ತ ಕಾಮನೆಗಳಿಗೆ ವಯಸ್ಸಿನ ಕಡಿವಾಣ ಹಾಕುವುದು ಸಮಂಜಸವಲ್ಲ. ಮದುವೆಯ ಕನಿಷ್ಠ ವಯಸ್ಸನ್ನು ಇಳಿಸಿದರೆ ಅನಾಚಾರ, ಅತ್ಯಾಚಾರಗಳಿಗೂ ಕಡಿವಾಣ ಬೀಳಬಹುದೆಂಬ ಅವರ ಅಭಿಪ್ರಾಯವನ್ನು ನೋಡಿದರೆ, ಅವರಿಗೆ ವಾಸ್ತವದ ಮತ್ತು ವೈಜ್ಞಾನಿಕ ಅರಿವು ಇಲ್ಲ ಎನಿಸುತ್ತದೆ.

15 ವರ್ಷಕ್ಕೆ ಮದುವೆಯಾಗಿ, ಬಸಿರಾಗುವ ಹೆಣ್ಣಿನ ದೈಹಿಕ ಯಾತನೆಯ ಅರಿವು ಅವರಿಗಿದ್ದಂತಿಲ್ಲ. ಬೇಗ ತಾಯಂದಿರಾಗುವವರ ಮಕ್ಕಳಲ್ಲಿ ಮರಣ ಪ್ರಮಾಣ ಹೆಚ್ಚಿರುವುದನ್ನು ಆಚಾರ್ಯರು ಗಮನಿಸಬೇಕು.

ಅತ್ಯಾಚಾರ, ಅನಾಚಾರಗಳಿಗೆ ಪುರುಷರ ವಿಕೃತ ಮನೋಭಾವ ಕಾರಣವೇ ಹೊರತು ವಯಸ್ಸಲ್ಲ. ಪುರುಷರಲ್ಲಿ ನೈತಿಕ ಮನೋಭಾವ ಬೆಳೆಸಲು ಬೇರೆ ಮಾರ್ಗೋಪಾಯ ಹುಡುಕುವುದನ್ನು ಬಿಟ್ಟು ಮಹಿಳೆಯರ ವಿವಾಹ ವಯೋಮಿತಿಯನ್ನು ಇಳಿಸುವುದು ಪುರುಷ ಪರಮಾಧಿಕಾರವನ್ನು ಮತ್ತೆ ಪ್ರತಿಷ್ಠಾಪಿಸಿದಂತೆ.

ಕೊಪ್ಪಳ

***

ಇದೆಂಥ ವಿಕೃತಿ!

ಸ್ತ್ರೀಯರಿಗೆ ವಿವಾಹದ ಕನಿಷ್ಠ ವಯಸ್ಸನ್ನು ಹದಿನೈದು ವರ್ಷಗಳಿಗೆ ಇಳಿಸಬೇಕೆಂದು ಕೆ.ವಿ. ಆಚಾರ್ಯ ಸಲಹೆ ನೀಡಿದ್ದಾರೆ. ಇದೆಂಥ ವಿಕೃತಿ? ಹೆಣ್ಣುಮಕ್ಕಳಿಗೆ ಕನಿಷ್ಠ ವಿದ್ಯಾಭ್ಯಾಸ ಕೂಡ ಬೇಡವೇ?

ಹೆಣ್ಣುಮಕ್ಕಳನ್ನು ಋತುಮತಿಯಾದ ತಕ್ಷಣ ಹೆತ್ತು ಸಂಸಾರದ ನೊಗ ಹೊರುವ ಕೆಲಸಕ್ಕೆ ದೂಡಲು ಇದು ದಾರಿ ಮಾಡಿಕೊಡುತ್ತದೆ ಎಂದೇ ಅಲ್ಲವೇ ತಿಳಿದವರು ಬಾಲ್ಯವಿವಾಹವನ್ನು ಕೊನೆಗೊಳಿಸಿದ್ದು? ನಾಗರಿಕತೆಯ ಚಕ್ರ ಹಿಮ್ಮೊಗ ಚಲಿಸಬೇಕೆನ್ನುವುದೇ ಕೆಲವರ ಅಪೇಕ್ಷೆಯೋ ಹೇಗೆ?

ಶ್ರೀಧರ ಬಿ.ಎಲ್., ಬೆಂಗಳೂರು
 

 

Tags: 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !