ಕರ್ನಾಟಕದಲ್ಲಿ ಜನಸಂಖ್ಯೆ ಸ್ಥಿರಗತಿ ಬೆಳವಣಿಗೆಯತ್ತ
ಉತ್ತರಪ್ರದೇಶ ಜಾರಿ ಮಾಡಲು ಹೊರಟಿರುವ ಇಬ್ಬರು ಮಕ್ಕಳ ಕುಟುಂಬ ಪ್ರಣೀತ ಜನಸಂಖ್ಯಾ ನೀತಿಯ ಬಗ್ಗೆ ಚರ್ಚೆಗಳಾಗುತ್ತಿವೆ. ಜನಸಂಖ್ಯೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ನಮ್ಮ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಈ ಮಾದರಿಯ ಕಾನೂನನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸುವ ಬಗ್ಗೆ ಯೋಚಿಸಬೇಕು ಎಂದಿದ್ದಾರೆ (ಪ್ರ.ವಾ., ಜುಲೈ 13). ಜನಸಂಖ್ಯಾಶಾಸ್ತ್ರದ ಮತ್ತು ಕರ್ನಾಟಕದಲ್ಲಿನ ಜನಸಂಖ್ಯಾ ಚಲನಶೀಲತೆಯ ತಿಳಿವಳಿಕೆಯ ಕೊರತೆಯಿಂದ ಇಂತಹ ಹೇಳಿಕೆಗಳು ರಾಜಕಾರಣಿಗಳಿಂದ ಬರುತ್ತಿರುತ್ತವೆ. ನಮ್ಮ ರಾಜ್ಯದಲ್ಲಿ ಜನಸಂಖ್ಯೆಯ ಬೆಳವಣಿಗೆಯು ಸ್ಥಿರಗತಿ ಬೆಳವಣಿಗೆಯನ್ನು ತಲಪುತ್ತಿದೆ. ಇದರ ಬೆಳವಣಿಗೆ ಗತಿಯು ಮುಂದಿನ ಜನಗಣತಿಯಲ್ಲಿ ಕಡಿಮೆಯಾಗುವ ಸಾಧ್ಯತೆಯಿದೆ. ಉದಾ: 2001ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಜನಸಂಖ್ಯೆ 11,39,104ರಷ್ಟಿದ್ದುದು 2011ರಲ್ಲಿ 11,37,961ಕ್ಕಿಳಿದಿದೆ (ಇಳಿಕೆ: 1143).
ಜನಸಂಖ್ಯೆ ಬೆಳವಣಿಗೆಯ ಸರಿಯಾದ ಮಾಪನವೆಂದರೆ ಒಟ್ಟು ಸಂತಾನೋತ್ಪತ್ತಿ ದರ (ಟೋಟಲ್ ಫರ್ಟಿಲಿಟಿ ರೇಟ್). ಇದು ರಾಜ್ಯದಲ್ಲಿ 2016ರಲ್ಲಿ 1.8. ಉತ್ತರ ಪ್ರದೇಶದಲ್ಲಿ ಇದು 3.1 (ನೀತಿ ಆಯೋಗದ ವರದಿ). ಆದ್ದರಿಂದ ಉತ್ತರಪ್ರದೇಶದಲ್ಲಿ ಯಾವ ಜನಸಂಖ್ಯಾ ನೀತಿ ಅಗತ್ಯವೋ ಅದೇ ರೀತಿಯ ಜನಸಂಖ್ಯಾ ನೀತಿ ಕರ್ನಾಟಕದಲ್ಲಿ ಅಗತ್ಯವಿಲ್ಲ. ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿಯೂ ಜನಸಂಖ್ಯೆಯ ಬೆಳವಣಿಗೆಯು ಸ್ಥಿರಗತಿ ತಲಪುತ್ತಿರುವುದರಿಂದ ಶಾಸನಾತ್ಮಕ ಜನಸಂಖ್ಯಾ ನಿಯಂತ್ರಣ ನೀತಿ ಈ ರಾಜ್ಯಗಳಲ್ಲಿ ಅಗತ್ಯವಿಲ್ಲ.
– ಟಿ.ಆರ್.ಚಂದ್ರಶೇಖರ, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.