ಶುಕ್ರವಾರ, ಸೆಪ್ಟೆಂಬರ್ 30, 2022
25 °C

ವಾಚಕರ ವಾಣಿ| ಅಹಿಂಸೆಯ ಮಾರ್ಗದಿಂದ ಹಿನ್ನಡೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಭಾಷ್ ಚಂದ್ರ ಬೋಸ್‌ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಬೋಸ್ ಅವರು ತೋರಿದ್ದ ಹಾದಿಯಲ್ಲಿ ಭಾರತವು ಮುನ್ನಡೆದಿದ್ದರೆ ದೇಶ ಹೊಸ ಎತ್ತರಕ್ಕೆ ಏರುತ್ತಿತ್ತು’ ಎಂದಿದ್ದಾರೆ (ಪ್ರ.ವಾ., ಸೆ. 9). ಅಂದರೆ ಸೇನಾತ್ಮಕವಾದ ಹಿಂಸಾ ಮಾರ್ಗವನ್ನು ಅನುಸರಿಸದೆ ಗಾಂಧಿಯವರು ತೋರಿದ ಸತ್ಯ, ಅಹಿಂಸೆಯ ಮಾರ್ಗವನ್ನು ಹಾಗೂ ಸಮಾನತೆ, ಸ್ವಾತಂತ್ರ್ಯ, ಜಾತ್ಯತೀತ, ಪ್ರಜಾಪ್ರಭುತ್ವ ಮೌಲ್ಯಗಳ ಸಂವಿಧಾನವನ್ನು ಅನುಸರಿಸುತ್ತಿರುವುದರಿಂದ ಹಿನ್ನಡೆಯಾಗಿದೆ ಎಂದು ಭಾವಿಸಬೇಕೆ?

ಬೋಸ್ ಅವರು 1943ರ ಡಿಸೆಂಬರ್ 30ರಂದು ಅಂಡಮಾನ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ, ‘ಇಂದು ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದು ಪ್ರಥಮವಾಗಿ ಭಾರತದ ಭೂಪ್ರದೇಶದ ಮೇಲೆ ಧ್ವಜವನ್ನು ಹಾರಿಸುತ್ತಿದ್ದೇವೆ’ಎಂದು ಘೋಷಿಸಿದರು. ಅದು ಅಖಂಡ ಭಾರತದ ಮುಕ್ತಿ ಅಲ್ಲ, ಭಾರತದ ಒಂದು ಖಂಡದ್ದು. ಆದ್ದರಿಂದ ಪ್ರಧಾನಿಯವರು, ‘ಬೋಸರು ಅಖಂಡ ಭಾರತದ ಮೊದಲ ಪ್ರಧಾನಿ’ ಎಂದದ್ದು ಹೇಗೆ ಸರಿಯಾದೀತು? ‘ರಾಜಪಥ ಎಂಬುದು ಗುಲಾಮಗಿರಿಯ ಸಂಕೇತ. ಅದನ್ನು ಕರ್ತವ್ಯಪಥ ಎಂದು ಬದಲಾಯಿಸಿದ್ದು ದೇಶಕ್ಕೆ ಹೊಸ ಚೈತನ್ಯ ಮತ್ತು ಸ್ಫೂರ್ತಿ ನೀಡಿದೆ’ ಎಂದು ತಿಳಿಸಿದ್ದಾರೆ. ಹೆಸರಿನ ಬದಲಾವಣೆಯಿಂದಷ್ಟೇ ಇದು ಸಾಧ್ಯವೆ? ಎಸ್.ವಿ. ಪರಮೇಶ್ವರ ಭಟ್ಟರು ತಮ್ಮ ಒಂದು ಮುಕ್ತಕದಲ್ಲಿ, ‘ಹೆಸರಿನೊಳೇನಿದೆ? ಮಲ್ಲಿಗೆ ಹೂವನು ಮೊಲ್ಲೆಯ ಹೂವೆನೆ ಕಂಪೇನು ಕಡಿಮೆಯಾಗುವುದೆ?’ ಎಂದಿರುವುದನ್ನು ಈ ಸಂದರ್ಭಕ್ಕೆ ಅನ್ವಯಿಸಿಕೊಳ್ಳಬಹುದಾಗಿದೆ.

ವಿಶಾಲವಾದ ಪ್ರಜಾಸತ್ತಾತ್ಮಕ ಭಾರತದ ಪ್ರಧಾನಿಯವರು, ದೇಶದ ಸ್ವಾತಂತ್ರ್ಯ ಸಂಗ್ರಾಮದ ಪ್ರಧಾನ ಪ್ರವಾಹವನ್ನು, ಸ್ವಾತಂತ್ರ್ಯೋತ್ತರದ ತಕ್ಷಣದ ಬೆಳವಣಿಗೆಗಳನ್ನು ಪರಿಗಣಿಸದೆ ಒಂದು ನಿರ್ದಿಷ್ಟ ಮತದ ಸೈದ್ಧಾಂತಿಕ ವಕ್ತಾರರ ಹಾಗೆ ತಮ್ಮ ಭಾವನೆಗಳನ್ನು ಹರಿಯಬಿಟ್ಟಿರುವುದು ನೋವನ್ನು ಉಂಟು ಮಾಡುವಂತಹುದಾಗಿದೆ.

- ಪು.ಸೂ.ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.