ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಬಗಿಗೆ ಜೀವ ತುಂಬಿ

Last Updated 29 ಅಕ್ಟೋಬರ್ 2018, 19:39 IST
ಅಕ್ಷರ ಗಾತ್ರ

ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬುದು ಮನಮೋಹಕ ಚಾರಿತ್ರಿಕ ಪರಿಕಲ್ಪನೆ. ನಮ್ಮ ಬಾಲ್ಯಕಾಲದಿಂದಲೂ ಆಕರ್ಷಕವಾಗಿ ಆವರಿಸಿಕೊಂಡಿರುವಂಥದ್ದು. ಸುಮಾರು ನಾಲ್ಕು ದಶಕಗಳ ಹಿಂದೆ ಅವುಗಳನ್ನು ನೋಡಿ ರೋಮಾಂಚಿತನಾಗಿದ್ದೆ. ಇಷ್ಟೂ ವರ್ಷಗಳಲ್ಲಿ ನೆನಪು ಮಾಡಿಕೊಂಡಾಗಲೆಲ್ಲ; ಆ ಧುಮುಕುವ ನೀರಿನ ವೈಭವ ಧ್ವನಿಸುತ್ತಲೇ ಇದೆ. ಅಂಥದ್ದನ್ನು ಮತ್ತೊಮ್ಮೆ ಕಣ್ತುಂಬಿಸಿಕೊಂಡು ಆನಂದಿಸಲು ಕೊಳ್ಳೇಗಾಲದಲ್ಲಿ ಗ್ರಂಥಾಲಯ ಇಲಾಖೆಯ ಗಾಂಧಿ ಜಯಂತಿ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಇತ್ತೀಚೆಗೆ ಹೋಗಿದ್ದೆ.

ಪ್ರವಾಸೋದ್ಯಮ ಇಲಾಖೆಯವರು ನಮ್ಮ ಮನಸ್ಸು ಸೂರೆಗೊಳ್ಳುವ ರೀತಿಯಲ್ಲಿ ಆ ಪರಿಸರವನ್ನು ಚಿತ್ತಾಕರ್ಷಕಗೊಳಿಸಿರುತ್ತಾರೆ ಎಂದು ಭಾವಿಸಿದ್ದೆ. ದುರಂತವೆಂದರೆ, ಅಲ್ಲಿಗೆ ಹೋದಾಕ್ಷಣ ನನ್ನ ಮನಸ್ಸಿಗೆ ಪಿಚ್ಚೆನಿಸಿತು. ಒಟ್ಟು ವಾತಾವರಣವನ್ನು ಎಷ್ಟು ಕೆಟ್ಟದ್ದಾಗಿ ಇಟ್ಟುಕೊಂಡಿದ್ದಾರೆ ಎಂದು. ಇಷ್ಟಾದರೂ ನೂರಾರು ಮಂದಿ ತಮ್ಮ ವಾಹನಗಳಲ್ಲಿ ಬಂದು ಒಲ್ಲದ ಮನಸ್ಸಿನಿಂದ ಆನಂದಿಸಿ ಹೋಗುವರು. ನೀರು ಧುಮುಕುವ ಮತ್ತು ಅದರ ಸುತ್ತಲಿನ ಹಸಿರಿನ ಸೊಬಗನ್ನು ಆನಂದಿಸುವುದಕ್ಕೆ ಬೇಕಾದ ಶುದ್ಧಿ ಅಲ್ಲಿಲ್ಲ. ಎಲ್ಲರೂ ಮುಖ ಸಿಂಡರಿಸಿಕೊಂಡು ಪ್ರತಿಕ್ರಿಯಿಸುತ್ತಿದ್ದವರೇ. ಯಾಕೆಂದರೆ ಅಷ್ಟರಮಟ್ಟಿಗೆ ಕೊಳಚೆ ಪ್ರದೇಶದಂತೆ ಇದೆ ಒಟ್ಟು ಪರಿಸರ.

ಈ ಪರಿಸರವನ್ನು ಎಷ್ಟೊಂದು ರೀತಿಯಲ್ಲಿ ಬೆಳೆಸಬಹುದು. ಕೆಲವು ಕುಟುಂಬಗಳಿಗೆ ಬದುಕುವ ದಾರಿಗೆ ಇಲ್ಲಿ ಅವಕಾಶವನ್ನು ಕಲ್ಪಿಸಿಕೊಡಬಹುದು. ನಾನಾ ವಯೋಮಾನದ ಮಕ್ಕಳಿಗೆ ಏನಾದರೂ ತಿನ್ನಿಸಬೇಕೆಂದರೆ; ಮಕ್ಕಳೇ ಇಷ್ಟಪಡದ ರೀತಿಯಲ್ಲಿ ಅಲ್ಲಿಯ ಪರಿಸರವಿದೆ.

ಒಂದು ದೊಡ್ಡ ಪ್ರವಾಸೋದ್ಯಮ ಇಲಾಖೆ ಇದ್ದರೂ ಇಂಥ ಪ್ರದೇಶಗಳ ಅಭಿವೃದ್ಧಿಗೆ ಯಾಕೆ ಯೋಜನೆಗಳನ್ನು ರೂಪಿಸುತ್ತಿಲ್ಲವೋ ಗೊತ್ತಾಗುತ್ತಿಲ್ಲ.

-ಶೂದ್ರ ಶ್ರೀನಿವಾಸ್, ಬೆಂಗಳೂರು

ಗುಜರಾತ್‌ ಮಾದರಿ...?

‘ಸಿಬಿಐಯ ಇಬ್ಬರು ಉನ್ನತ ಅಧಿಕಾರಿಗಳ ವಿರುದ್ಧ ಸರ್ಕಾರವು ಮಧ್ಯರಾತ್ರಿಯಲ್ಲಿ ಕ್ರಮ ಜರುಗಿಸಿದ್ದೇಕೆ’ ಎಂದು ಕಾಂಗ್ರೆಸ್‌ನ ಮನೀಷ್ ತಿವಾರಿ ಪ್ರಶ್ನಿಸಿದ್ದಾರೆ.

‘ನಮ್ಮ ಪ್ರಧಾನಮಂತ್ರಿ ದಿನಕ್ಕೆ 18 ಗಂಟೆ ಕೆಲಸ ಮಾಡುವವರು ಮತ್ತು ದೇಶದ ಜನತೆಗೋಸ್ಕರ ಹಗಲಿ
ರುಳೂ ಚಿಂತನೆ ಮಾಡುವವರು’ ಎಂಬುದು ಅವರಿಗೆ ಗೊತ್ತಿಲ್ಲವೇ? ಇದೂ ಗುಜರಾತ್ ಮಾಡೆಲ್ ಇರಬಹುದು, ಯಾರಿಗೆ ಗೊತ್ತು! ಅವರು ಮುಖ್ಯಮಂತ್ರಿಯಾಗಿದ್ದಾಗ ನಾವು ಗುಜರಾತ್‌ನಲ್ಲಿ ಇರಲಿಲ್ಲವಲ್ಲ!

-ಮುರಳಿ, ಬೆಂಗಳೂರು

ಪ್ರೋತ್ಸಾಹ ಅಗತ್ಯ

ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಕೃತಿಯನ್ನು ಚಲನಚಿತ್ರವಾಗಿಸುತ್ತಿರುವ ಮತ್ತು ಅದರ ಚಿತ್ರೀಕರಣ ಆರಂಭವಾಗಿರುವ ಸುದ್ದಿ ಓದಿ ಸಂತೋಷವಾಯಿತು.

ಚಲನಚಿತ್ರ ಎಂಬುದು ಪ್ರಭಾವಿ ಮಾಧ್ಯಮ. ಮನರಂಜನೆ ಒದಗಿಸುವುದರ ಜೊತೆಗೆ ಚಲನಚಿತ್ರಗಳಿಗೆ ಸಾಮಾಜಿಕವಾದ ಒಂದು ಬದ್ಧತೆಯೂ ಇದೆ. ಆದರೆ ಇಂದು ಈ ಮಾಧ್ಯಮವು ಹಿಡಿದಿರುವ ಹಾದಿ ಬೇಸರ ತರಿಸುತ್ತದೆ. ಕೀಳು ಅಭಿರುಚಿಯ, ಯುವಜನರನ್ನು ಹಾದಿ ತಪ್ಪಿಸುವ ಸಾಧನವಾಗಿ ಅದು ರೂಪುಗೊಳ್ಳುತ್ತಿರುವುದು ದುರಂತ.

ಪ್ರೇಕ್ಷಕರನ್ನು ಭ್ರಮಾಲೋಕಕ್ಕೆ ಕರೆದೊಯ್ದು, ಗಲ್ಲಾಪೆಟ್ಟಿಗೆ ತುಂಬಿಸುವುದೇ ಚಲನಚಿತ್ರಗಳ ಉದ್ದೇಶವಾಗುತ್ತಿದೆ. ವಾಸ್ತವಕ್ಕೆ ಹತ್ತಿರವಿರುವ, ಹೊಸ ಅಲೆಯ ಚಿತ್ರಗಳು ಪ್ರಶಸ್ತಿ– ಪುರಸ್ಕಾರಗಳಿಗೆ ಭಾಜನವಾಗುತ್ತವೆಯೇವಿನಾ ಪ್ರೇಕ್ಷಕರು ಇಂಥ ಚಿತ್ರಗಳತ್ತ ತಿರುಗಿಯೂ ನೋಡುವುದಿಲ್ಲ.

ಇದನ್ನು ಮನಗಂಡು, ಜನರಲ್ಲಿ– ವಿಶೇಷವಾಗಿ ಯುವ ಜನರಲ್ಲಿ ಸದಭಿರುಚಿಯನ್ನು ಬೆಳೆಸುವ ಚಿತ್ರಗಳನ್ನು ತಯಾರಿಸುವವರಿಗೆ ಸಹಾಯಧನ ನೀಡುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುವುದು ಅಗತ್ಯ.

-ಮುತ್ತು ದೊಡಗೌಡರ, ಹೊನಕುಪ್ಪಿ, ಬೆಳಗಾವಿ

‘ತಾರೆ’ಗಳಿಗೆ ಅವಮಾನ

ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗಳ ಪ್ರಚಾರಕ್ಕಾಗಿ ಬರುವ ಕೆಲವು ಮುಖಂಡರನ್ನು ‘ತಾರಾ ಪ್ರಚಾರಕರು’ ಎಂದು ವರದಿ ಮಾಡಲಾಗುತ್ತಿದೆ. ತಾರಾ ಪ್ರಚಾರಕರೆಂದರೆ ಯಾರು? ಅವರನ್ನು ಕಂಡರೆ ಜನರು ಆಕರ್ಷಣೆಯಿಂದ ಮುತ್ತುತ್ತಾರೆಯೇ? ಏನೂ ಇಲ್ಲವಲ್ಲ. ಬದಲಾಗಿ ಈ ತಾರಾಪ್ರಚಾರಕರೆಂದು ಕರೆಸಿಕೊಳ್ಳುವವರು ಎದುರಾಳಿ ಅಭ್ಯರ್ಥಿಯನ್ನು ಹಣಿಯುವ, ಹೀಯಾಳಿಸುವ ಕೀಳುಮಟ್ಟಕ್ಕೆ ಇಳಿಯುತ್ತಾರೆ. ಅಷ್ಟೇ ಅಲ್ಲ ತಮ್ಮ ಅಭ್ಯರ್ಥಿಯ ಅಥವಾ ತಮ್ಮ ಪಕ್ಷದ ಹುಳುಕುಗಳನ್ನು ತುಂಬ ನಾಜೂಕಾಗಿಯೇ ಮುಚ್ಚಿಡುತ್ತಾರೆ.

ಅಂದಹಾಗೆ ತಾರಾ ಪ್ರಚಾರಕರು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಒಂದು ಪಕ್ಷದ ತಾರೆ ಮತ್ತೊಂದು ಪಕ್ಷಕ್ಕೆ ಧೂಮಕೇತುವಿನಂತೆ ಕಾಣಿಸುತ್ತಾರೆ. ಹೀಗಾಗಿ ಇಂಥವರನ್ನು ‘ತಾರಾ ಪ್ರಚಾರಕ’ ಎಂದು ಕರೆದು ಆಗಸದ ತಾರೆಗೆ ಅವಮಾನ ಮಾಡುವುದು ಸರಿಯಲ್ಲ ಅಲ್ಲವೇ?

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

ಸೌಜನ್ಯ ಮರೆತರೇ?

ಜಮಖಂಡಿ ಬಳಿಯ ಕಲ್ಲಹಳ್ಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸತ್ಯಕಾಮ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಈಚೆಗೆ ಸತ್ಯಕಾಮರ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದೇ ದಿನ ಬೆಳಿಗ್ಗೆ ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ವಿಧಿವಶರಾದರು.

ಸತ್ಯಕಾಮರ ಸ್ಮರಣೆಯ ಕಾರ್ಯಕ್ರಮದಲ್ಲಿ ಮಜರಂಜನೆಗೆ ಬರವಿರಲಿಲ್ಲ. ಹಾಸ್ಯ, ಗಾಯನ... ಹೀಗೆ ರಾತ್ರಿಯವರೆಗೂ ಭರ್ಜರಿಯಾಗಿ ನಡೆಯಿತು.

ನನ್ನ ಪ್ರಶ್ನೆ ಎಂದರೆ, ಕನ್ನಡ ನಾಡು–ನುಡಿಗಾಗಿ, ವಚನ ಸಾಹಿತ್ಯ, ಶರಣ ಸಾಹಿತ್ಯಗಳ ಪ್ರಸಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಸ್ವಾಮೀಜಿ ಅಗಲಿಕೆಯ ನೋವು ಆ ಕಾರ್ಯಕ್ರಮದ ಸಂಘಟಕರಿಗೆ ಇರದೇ ಹೋಯಿತೇ? ಎರಡು ನಿಮಿಷ ಮೌನ ಆಚರಿಸಿ ಸ್ವಾಮೀಜಿಗೆ ಗೌರವವನ್ನಾದರೂ ಸಲ್ಲಿಸಬಾರದಿತ್ತೇ? ಅಂಥ ಸೌಜನ್ಯವೂ ಸಂಘಟಕರಿಗೆ ಇಲ್ಲದಾಯಿತೇ?

-ಆರ್.ಜಿ. ಬ್ಯಾಕೋಡ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT