ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಲ್ಲ ಹೆಗ್ಗುರುತು– ಅಸ್ಮಿತೆ!

Last Updated 25 ನವೆಂಬರ್ 2018, 20:00 IST
ಅಕ್ಷರ ಗಾತ್ರ

‘ಸಾಂಸ್ಕೃತಿಕ ಪಲ್ಲಟ ಹೊಂದುವರೇ?’ (ವಾ.ವಾ., ನ. 24) ಎಂಬ, ಶಿವಕುಮಾರ ಬಂಡೋಳಿ ಅವರ ಪತ್ರಕ್ಕೆ ಈ ಪ್ರತಿಕ್ರಿಯೆ. ‘ರೇವಣಸಿದ್ಧರು ಕುರುಬರ ಗುರು, ‘ಶಿವ’ ಇವರ ಆರಾಧ್ಯ ದೈವ ಮತ್ತು ಇವರ ಸಂಸ್ಕೃತಿ ಲಿಂಗಾಯತ ಸಂಸ್ಕೃತಿಯಂತೆ ಇರುತ್ತದೆ’ ಎಂದು ಲೇಖಕರು ಹೇಳಿದ್ದಾರೆ. ಇದು ಭಾಗಶಃ ಸತ್ಯ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇರುವ ಕುರುಬರಲ್ಲಿ ಕೆಲವರು ಮಾತ್ರ ರೇವಣಸಿದ್ಧರನ್ನು ಗುರು ಎಂದು ಪರಿಗಣಿಸುತ್ತಾರೆ. ಮೂಲಭೂತವಾಗಿ ಈ ಗುರು ಪರಂಪರೆ ಲಿಂಗಾಯತ ಧರ್ಮದ ಪ್ರಭಾವವಾಗಿದ್ದು, ಲಿಂಗಾಯತರು ಹೆಚ್ಚು ಇರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ಇದೆ. ಆ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಎಲ್ಲಾ ಸಮುದಾಯದವರದ್ದೂ ಒಂದೇ ರೀತಿ ಸಂಸ್ಕೃತಿ ಇದೆ. ಅದೇ, ಹಳೇ ಮೈಸೂರು ಪ್ರಾಂತ್ಯಕ್ಕೆ ಬಂದರೆ, ಈ ಗುರು ಪರಂಪರೆಯೇ ಇಲ್ಲ. ಅಲ್ಲಿ ಸಾಮಾನ್ಯವಾಗಿ ಒಕ್ಕಲಿಗರ ಸಂಸ್ಕೃತಿಯ ಪ್ರಭಾವ ಎಲ್ಲಾ ಜಾತಿಯವರ ಮೇಲಾಗಿದೆ.

ಇತ್ತೀಚೆಗೆ ಗುರು, ಮಠ ಸಂಸ್ಕೃತಿಯು ದಕ್ಷಿಣದಲ್ಲಿ ಆರಂಭವಾಗಿದ್ದರೂ ಅದು ರಾಜಕೀಯ ಕಾರಣಗಳಿಗಾಗಿ ಬಳಕೆಯಾಗುತ್ತಿದೆಯೇ ಹೊರತು ಜನಸಾಮಾನ್ಯರ ಮನೆ– ಮನಗಳಿಗೆ ಇಳಿದಿಲ್ಲ. ‘ಶಿವ’ನು ಸಾಮಾನ್ಯವಾಗಿ ಕುರುಬರ ದೈವವಾಗಿದ್ದರೂ ಹಳೇ ಮೈಸೂರು ಪ್ರಾಂತ್ಯದ ಕುರುಬರ ಹಲವು ಪಂಗಡಗಳಿಗೆ ವೆಂಕಟೇಶ್ವರನೇ ಕುಲದೈವ. ಅವರನ್ನು ‘ದಾಸ ಒಕ್ಕಲು’ ಎಂದೇ ಕರೆಯುತ್ತಾರೆ.

ಇನ್ನು ಕನಕದಾಸರು ಕುರುಬರ ಗುರುವೇ? ಎಂಬ ಅಭಿಪ್ರಾಯ ಕುರಿತಂತೆ; ಖಂಡಿತವಾಗಿ ಕುರುಬರು ಕನಕದಾಸರನ್ನು ಗುರುವೆಂದು ಹೇಳಿಲ್ಲ. ಆದರೆ ಕುಲದ ಸಾಧಕನೆಂದು ಗುರುತಿಸಿ ತಮ್ಮ ಅಸ್ಮಿತೆಯನ್ನಾಗಿಸಿಕೊಂಡಿದ್ದಾರೆ. ವಾಲ್ಮೀಕಿಯು ನಾಯಕ ಜನಾಂಗದ ಗುರುವೇ? ಕೆಂಪೇಗೌಡರು ಒಕ್ಕಲಿಗರ ಗುರುವೇ? ಅವರೆಲ್ಲಾ ಅವರವರ ಸಮುದಾಯದದಲ್ಲಿ ಗೌರವ ಪಡೆದಿಲ್ಲವೇ? ಇದೆಲ್ಲಾ ಮೂಲಭೂತವಾಗಿ ರಾಜಕೀಯ, ಸಾಮಾಜಿಕ ಕಾರಣಗಳಿಂದಾಗಿ ಆಗಿದ್ದು.
ಎಲ್ಲ ಸಮುದಾಯದವರೂ ಸಾಮಾಜಿಕ ಕಾರಣಗಳಿಗಾಗಿ ತಮ್ಮ ತಮ್ಮ ಸಮುದಾಯದ ಸಾಧಕರನ್ನು ತಮ್ಮ ಹೆಗ್ಗುರುತನ್ನಾಗಿ, ಅಸ್ಮಿತೆಯನ್ನಾಗಿ ಮಾಡಿಕೊಂಡಿರುವ ಈ ಕಾಲದಲ್ಲಿ ಕನಕದಾಸರೂ ಕುರುಬರ ಹೆಗ್ಗುರುತು– ಅಸ್ಮಿತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT