ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಒಂದು ದೇಶ: ಒಂದು ಕೃಷಿ– ಎಷ್ಟು ಸರಿ?

Last Updated 18 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಇಂದು ಒಕ್ಕೂಟ ಸರ್ಕಾರವು ‘ಒಂದು ದೇಶ’ತನವನ್ನು- ಅಖಂಡತೆಯ ಪ್ರಣಾಳಿಕೆಯನ್ನು ಸಮಾಜದ ಎಲ್ಲ ಕ್ಷೇತ್ರಗಳಿಗೂ ಹಬ್ಬಿಸುವ ದಿಸೆಯಲ್ಲಿ ಕಾಯ್ದೆಗಳನ್ನು ರೂಪಿಸುತ್ತಿದೆ. ಇಡೀ ದೇಶದ ಕೃಷಿಯನ್ನು ಒಂದುತನಕ್ಕೆ ಒಗ್ಗಿ/ಬಗ್ಗಿಸುವ ಕೆಲಸವನ್ನು ಮೂರು ಕೃಷಿ ಕಾಯ್ದೆಗಳ ಮೂಲಕ ಮಾಡುತ್ತಿದೆ. ‘ಒಂದು ದೇಶ: ಒಂದು ಕೃಷಿ’ ಎನ್ನುವುದು ಶತಶತಮಾನಗಳಿಂದ ನಮ್ಮ ಸಮಾಜವು ಬೆಳೆಸಿಕೊಂಡು ಬಂದಿರುವ ಬ್ರಹ್ಮಾಂಡ ವೈವಿಧ್ಯದ ಕೃಷಿ ಸಂಸ್ಕೃತಿಯನ್ನು ನಾಶ ಮಾಡಿಬಿಡುತ್ತದೆ. ಇದು ನಮ್ಮ ಆರ್ಥಿಕತೆಗೆ ಸೂಕ್ತವಲ್ಲ. ಉದಾಹರಣೆಗೆ, ಕರ್ನಾಟಕದಲ್ಲಿನ ಕೃಷಿಯನ್ನೇ ತೆಗೆದುಕೊಂಡರೆ, ಇಲ್ಲಿ ಕರಾವಳಿ, ಮಲೆನಾಡು, ಅರೆಮಲೆನಾಡು, ಉತ್ತರ- ದಕ್ಷಿಣ ಬಯಲು ಮುಂತಾದವುಗಳನ್ನು ಹಾಗೂ ಹತ್ತಾರು ಕಸುಬುಗಳಾದ ಕಮ್ಮಾರರು, ಚಮ್ಮಾರರು, ಮೇದಾರರು, ಗಾಣಿಗರು, ಕುಂಬಾರರು ಮುಂತಾದವರನ್ನು ಒಳಗೊಂಡ ಬ್ರಹ್ಮಾಂಡ ಭಿನ್ನತೆಯ ಕೃಷಿಸಂಸ್ಕೃತಿ ನಮ್ಮಲ್ಲಿದೆ. ಕೃಷಿಯು ನಮ್ಮಲ್ಲಿ ಕೇವಲ ಉಳುಮೆ, ಬೀಜ ಬಿತ್ತುವುದು, ಬೆಳೆ ಬೆಳೆಯುವುದು ಇಷ್ಟಕ್ಕೇ ಸೀಮಿತವಾಗಿಲ್ಲ. ಬೆಳೆ ಬೆಳೆಯುವುದರ ಜೊತೆಗೆ, ಇಲ್ಲಿ ಜಾನುವಾರು-ಕುರಿ-ಕೋಳಿ ಸಾಕಾಣಿಕೆಯಿದೆ, ಹೈನುಗಾರಿಕೆಯಿದೆ. ಅರಣ್ಯ ಕೃಷಿಯಿದೆ. ಖುಷ್ಕಿ-ತರಿ-ಬಾಗಾಯತು ಬೆಳೆ ಪದ್ಧತಿಗಳಿವೆ. ಇದಕ್ಕೆ ಜಾನುವಾರು ಗೊಬ್ಬರದ ಆಯಾಮವಿದೆ.

ಕೃಷಿಯ ಕಾರ್ಪೊರೇಟೀಕರಣದಿಂದ ಸಾವಯವ, ಪರಿಸರಸ್ನೇಹಿ, ಜಾನುವಾರು ಅವಲಂಬಿತ ಕೃಷಿ ಸಂಸ್ಕೃತಿಗೆ ಪೆಟ್ಟು ಬೀಳುತ್ತದೆ. ರೈತಾಪಿ ಮಹಿಳೆಯರನ್ನು ಕೃಷಿಯಿಂದ ಇದು ಉಚ್ಚಾಟಿಸಿ ಬಿಡುವ ಅಪಾಯ ಇದೆ. ಭಾರಿ ಪ್ರಮಾಣದ ಯಾಂತ್ರೀಕರಣ, ಬಂಡವಾಳ- ಸಾಂದ್ರ ತಂತ್ರಜ್ಞಾನದಿಂದ ಭೂರಹಿತ ಕೃಷಿ ಕೂಲಿಕಾರರ ಬದುಕು ಮೂರಾಬಟ್ಟೆ ಆಗಲಿದೆ. ಈ ಹಿನ್ನೆಲೆಯಲ್ಲಿ ಮೂರು ಕೃಷಿ ಕಾಯ್ದೆಗಳ ಕಾರ್ಪೊರೇಟೀಕ ರಣದ ಸ್ವರೂಪವನ್ನು ಮತ್ತು ಅದರ ವಿರುದ್ಧ ಭಾರತೀಯ ಕೃಷಿಕರು ನಡೆಸುತ್ತಿರುವ ಆಂದೋಳನವನ್ನು ನೋಡುವ ಅಗತ್ಯವಿದೆ.

-ಟಿ.ಆರ್.ಚಂದ್ರಶೇಖರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT