ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 03 ಏಪ್ರಿಲ್ 2024

Published 3 ಏಪ್ರಿಲ್ 2024, 0:15 IST
Last Updated 3 ಏಪ್ರಿಲ್ 2024, 0:15 IST
ಅಕ್ಷರ ಗಾತ್ರ

ಆಹಾರ ಪೋಲು: ಮೂಡಲಿ ಜಾಗೃತಿ

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ‘ಆಹಾರ ಪೋಲು ಸೂಚ್ಯಂಕ’ ವರದಿಯು ಖಂಡಿತವಾಗಿಯೂ ಎಲ್ಲರ ಕಣ್ಣು ತೆರೆಸುವಂಥದ್ದು. ಜಗತ್ತಿನ ಅನೇಕ ದೇಶಗಳಲ್ಲಿ ಹೊಟ್ಟೆಗೆ ಊಟ ಸಿಗದೇ ಸಾಯುತ್ತಿರುವವರ ಸಂಖ್ಯೆಯನ್ನು ಗಮನಿಸಿದರೆ, ಈ ವರದಿಯಲ್ಲಿನ ಸಂಗತಿಯು ಮನುಷ್ಯರಾದ ನಾವೆಲ್ಲರೂ ನಾಚಿಕೆಪಡುವಂತಹದ್ದು. ಇಂತಹ ಪರಿಸ್ಥಿತಿಗೆ ಪ್ರತಿಯೊಂದು ಕುಟುಂಬ ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಕಾರಣ. ಇದರಲ್ಲಿ ಸರ್ಕಾರಗಳ ವೈಫಲ್ಯ ಸಹ ಇದೆ. ಏಕೆಂದರೆ, ಎಷ್ಟೋ ಸಲ ರೈತರು ಬೆಳೆದ ಫಸಲನ್ನು ಸಂಗ್ರಹಿಸಿ ಇಡುವ ವ್ಯವಸ್ಥೆ ಇಲ್ಲದೆ, ಬೆಳೆಗೆ ಸೂಕ್ತ ಬೆಲೆ ಸಿಗದೆ ಫಸಲನ್ನು ರಸ್ತೆಗೆ ಚೆಲ್ಲುವ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ಒಂದೊಮ್ಮೆ ತರಕಾರಿ ಮಂಡಿಗೆ, ಹಣ್ಣಿನ ಮಾರುಕಟ್ಟೆಗೆ ಭೇಟಿ ನೀಡಿದರೆ ನೂರಾರು ಕೆ.ಜಿ.ಗಳಷ್ಟು ಫಸಲನ್ನು ತಿಪ್ಪೆಗೆ ಎಸೆಯುವುದು ಕಂಡುಬರುತ್ತದೆ. ಇತ್ತ ರೈತನಿಗೂ ಇಲ್ಲ, ಅತ್ತ ಗ್ರಾಹಕನಿಗೂ ಇಲ್ಲದಂಥ ಸನ್ನಿವೇಶಗಳು ಸೃಷ್ಟಿಯಾಗಿವೆ. ಅಲ್ಲದೆ ಕೆಲವು ದೇಶಗಳಲ್ಲಿ ಟೊಮೆಟೊ ಹಣ್ಣುಗಳನ್ನು ರಸ್ತೆಗಳಲ್ಲಿ ಚೆಲ್ಲಿ ಆಟವಾಡುವ ವಿಚಿತ್ರದ ಬಗ್ಗೆಯೂ ಕೇಳಿದ್ದೇವೆ.

ಶೀತಲೀಕರಣ ವ್ಯವಸ್ಥೆ, ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ ಬೆಳೆ ಬೆಳೆಯುವುದು, ವೈಜ್ಞಾನಿಕ ಬೆಲೆ ನಿಗದಿಯಂತಹ ಕ್ರಮಗಳು ಆಹಾರ ಪೋಲಾಗುವುದನ್ನು ತಡೆಯಲು ಸಹಕಾರಿ. ಆಹಾರವನ್ನು ಚೆಲ್ಲಿ ವ್ಯರ್ಥ ಮಾಡುವುದರ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಗೆ ಅಗತ್ಯ ಇರುವಷ್ಟು ಮಾತ್ರ ಆಹಾರ ಖರೀದಿಸುವ ಮತ್ತು ಬೇಯಿಸುವ ಪ್ರವೃತ್ತಿಗೆ ಇಂಬು ಕೊಡಬೇಕು. ಮದುವೆ, ಸಭೆ, ಸಮಾರಂಭಗಳಲ್ಲಿ ಅಗತ್ಯವಿರುವಷ್ಟು ಆಹಾರ ಹಾಕಿಸಿಕೊಂಡು ತಿನ್ನುವ ಪ್ರವೃತ್ತಿಗೆ ಉತ್ತೇಜನ ನೀಡಬೇಕು. ಇದಕ್ಕಾಗಿ ಸಾರ್ವಜನಿಕರಿಗೆ, ವಿಶೇಷವಾಗಿ ಶಾಲಾ ಮಕ್ಕಳಿಗೆ ತಿಳಿವಳಿಕೆ ನೀಡುವ ಅಭಿಯಾನ ಕೈಗೊಳ್ಳಲು ಇದು ಸಕಾಲ.

– ಗುರುರಾಜ್ ಕೆ.ಎಚ್., ದಾವಣಗೆರೆ

ಚುನಾವಣಾ ಆಯೋಗದ ಶ್ಲಾಘನೀಯ ಕಾರ್ಯ

ಮುಂಬರುವ ಲೋಕಸಭಾ ಚುನಾವಣೆಯಲ್ಲಿನ ತಮ್ಮ ಗೆಲುವಿಗಾಗಿ ಅಭ್ಯರ್ಥಿಗಳು ನಾನಾ ರಣತಂತ್ರಗಳನ್ನು ರೂಪಿಸುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ, ಕೇಂದ್ರ ಚುನಾವಣಾ ಆಯೋಗವು ಪ್ರಜಾಪ್ರಭುತ್ವದಲ್ಲಿ ಯಾರು ಕೂಡ ಮತದಾನದಿಂದ ದೂರ ಉಳಿಯಬಾರದು ಎಂಬ ದೃಷ್ಟಿಯಿಂದ ಕ್ರಮ ಕೈಗೊಂಡಿರುವುದು ಗಮನಸೆಳೆದಿದೆ. ಅರುಣಾಚಲ ‍ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿರುವ, ಚೀನಾ ಗಡಿಗೆ ಹೊಂದಿಕೊಂಡಿರುವ ಮಾಲೋಗಮ್ ಎಂಬ ಗ್ರಾಮದಲ್ಲಿ ಮಹಿಳೆಯೊಬ್ಬರ ಒಂದೇ ಒಂದು ಮತಕ್ಕಾಗಿ ಮತಗಟ್ಟೆ ನಿರ್ಮಾಣ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ ಚುನಾವಣಾ ಸಿಬ್ಬಂದಿ 40 ಕಿಲೊಟರ್‌ ಕಾಲ್ನಡಿಗೆಯಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಸಾಗಬೇಕಿದೆ. ಇಲ್ಲಿ ಯಾವುದೇ ರೀತಿಯ ಮೂಲಸೌಕರ್ಯ ಇಲ್ಲ.

ದೇಶದ ಬಹುತೇಕರಲ್ಲಿ ‘ನನ್ನ ಒಂದು ಮತದಿಂದ ಅವನು ಗೆದ್ದುಬಿಡುತ್ತಾನೆಯೇ?’ ‘ನನ್ನ ಒಂದು ಮತದಿಂದ ದೇಶ ಬದಲಾಗಿಬಿಡುತ್ತದೆಯೇ?’ ಎಂಬಂತಹ ಆಲಸ್ಯ, ಉಡಾಫೆಯ ಮಾತುಗಳು ಕೇಳಿಬರುತ್ತವೆ. ಅನೇಕ ವಿದ್ಯಾವಂತರು ಸೋಮಾರಿತನದಿಂದ ಮತಗಟ್ಟೆಯ ಕಡೆ ತಿರುಗಿ ನೋಡುವುದೇ ಇಲ್ಲ. ಇನ್ನೊಂದಷ್ಟು ಜನ ಇದೇ ಸದವಕಾಶವೆಂದು ಭಾವಿಸಿ, ಆ ರಜೆಯಂದು ಕುಟುಂಬದೊಂದಿಗೆ ಪ್ರವಾಸ ತೆರಳಿ ಮೋಜು, ಮಸ್ತಿ ಮಾಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದೊಂದು ಮತಕ್ಕೂ ತನ್ನದೇ ಆದ ಮಹತ್ವವಿರುತ್ತದೆ. ಹೀಗಾಗಿ ಪ್ರತಿಯೊಬ್ಬರ ಮತವೂಅತ್ಯಮೂಲ್ಯವಾಗಿರುತ್ತದೆ. ಬರೀ ಒಂದು ಮತದಿಂದ ಸೋತವರಿದ್ದಾರೆ. ಆದ್ದರಿಂದ ಮತದಾನಕ್ಕೆಅರ್ಹರಾದವರೆಲ್ಲರೂ ಅಮೂಲ್ಯವಾದ ಮತವನ್ನು ಚಲಾಯಿಸಿ ತಮ್ಮ ಕರ್ತವ್ಯವನ್ನು ಮೆರೆಯಬೇಕಾಗಿದೆ.

– ಪರಶಿವಮೂರ್ತಿ ಎನ್.ಪಿ., ನಂಜೀಪುರ, ಸರಗೂರು

ಪಕ್ಷಾಂತರದ ಸಮರ್ಥನೆ ಸಲ್ಲ

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಪಕ್ಷಾಂತರ ಅನಿವಾರ್ಯವಾಗಿ ಹೋಗಿದೆ ಎಂಬ ಕೆ.ವಿ.ವಾಸು ಅವರ ಪತ್ರವನ್ನು ನೋಡಿದರೆ (ವಾ.ವಾ., ಏ. 2), ಪಕ್ಷಾಂತರ ಮಾಡುವುದು ತಪ್ಪಲ್ಲ ಎಂದು ಅವರು ಹೇಳುತ್ತಿರುವಂತಿದೆ. ರಾಜಕಾರಣ ನಿಂತ ನೀರಲ್ಲದೇ ಇರಬಹುದು, ಆದರೆ ಪಕ್ಷಾಂತರ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ದೊಡ್ಡ ದ್ರೋಹ.

ಪಕ್ಷಾಂತರವೇ ಒಂದು ರೀತಿಯ ರಾಜಕೀಯ ಪಿಡುಗು. ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು, ಆಸ್ತಿಪಾಸ್ತಿ ಉಳಿಸಿಕೊಳ್ಳಲು, ಐ.ಟಿ., ಇ.ಡಿ. ಕ್ರಮಗಳಿಂದ ಪಾರಾಗಲು ಮತ್ತು ಸದಾ ಅಧಿಕಾರದಲ್ಲಿ ಇರಬೇಕೆಂಬ ದುರಾಸೆಯ ಫಲವಾಗಿ ಪಕ್ಷಾಂತರ ಮಾಡಲಾಗುತ್ತಿದೆ. ವೈಯಕ್ತಿಕ ನೆಲೆಯಲ್ಲಿ ನೈತಿಕತೆ ಅಧೋಗತಿಗೆ ಇಳಿಯುತ್ತಿದೆ. ಸಾರ್ವಜನಿಕ ಜೀವನದಲ್ಲಿ ಮರ್ಯಾದೆ ಹೋದರೂ ಪರವಾಗಿಲ್ಲ ಅಧಿಕಾರ ಮತ್ತು ಹಣ ಮುಖ್ಯ ಎಂಬ ಮನಃಸ್ಥಿತಿ ಇದರ ಹಿಂದೆ ಇರುತ್ತದೆ. ಮತದಾರರು ಪಕ್ಷಾಂತರವನ್ನು ಸಮರ್ಥಿಸಿಕೊಂಡರೆ ಅದು ಪ್ರಜಾಪ್ರಭುತ್ವದ ಅಧಃ‍ಪತನಕ್ಕೆ ಕಾರಣವಾಗಬಹುದು.

– ಬೂಕನಕೆರೆ ವಿಜೇಂದ್ರ, ಮೈಸೂರು

ಚಿಕಿತ್ಸೆಗೆ ನೆರವಾಗಿ

ನನ್ನ ಹೆಸರು ಮನುಜಾ ಡಿ.ಸಿ. (36 ವರ್ಷ). ಎರಡೂ ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿದ್ದೇನೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ವೈದ್ಯರು ಶಿಫಾರಸು ಮಾಡಿದ್ದಾರೆ. ಅಂಗಾಂಗ ದಾನಿಗಳಿಂದ ಮೂತ್ರಪಿಂಡದವ್ಯವಸ್ಥೆಯಾಗಿದೆ.

ಈ ಶಸ್ತ್ರಚಿಕಿತ್ಸೆಗೆ ₹ 9.40 ಲಕ್ಷ ವೆಚ್ಚವಾಗಲಿದೆ. ಅಷ್ಟೊಂದು ಹಣ ಭರಿಸುವ ಸಾಮರ್ಥ್ಯ ನನ್ನ ಕುಟುಂಬಕ್ಕೆ ಇಲ್ಲ. ಹೀಗಾಗಿ, ದಾನಿಗಳು ಧನಸಹಾಯ ಮಾಡಬೇಕೆಂದು ಕೋರುತ್ತೇನೆ.

ಬ್ಯಾಂಕ್‌ ಖಾತೆ ವಿವರ: ಮನುಜಾ ಡಿ.ಸಿ., ಖಾತೆ ಸಂಖ್ಯೆ: 50100713353501, ಎಚ್‌ಡಿಎಫ್‌ಸಿ ಬ್ಯಾಂಕ್‌, ಕೋಣನಕುಂಟೆ ಕ್ರಾಸ್‌ ಶಾಖೆ, ಬೆಂಗಳೂರು, IFSC: HDFC0006431 ಮೊಬೈಲ್‌: 7411539256, 9742892123

– ಮನುಜಾ ಡಿ.ಸಿ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT