ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: 05 ಡಿಸೆಂಬರ್ 2023

Published 4 ಡಿಸೆಂಬರ್ 2023, 23:37 IST
Last Updated 4 ಡಿಸೆಂಬರ್ 2023, 23:37 IST
ಅಕ್ಷರ ಗಾತ್ರ

ಗೆದ್ದವರಲ್ಲಿ ಮಹಿಳೆಯರೆಷ್ಟು?

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವು ಭಾನುವಾರ ಹೊರಬಿದ್ದಿದೆ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಎಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಕೊಟ್ಟಿದ್ದವು, ಎಷ್ಟು ಮಂದಿ ಶಾಸಕಿಯರನ್ನು ಗೆಲ್ಲಿಸಿವೆ ಎಂಬ ಪ್ರಶ್ನೆ ಮೂಡುತ್ತದೆ. ಪಕ್ಷಗಳು ತಮಗೆ ತಾವೇ ಈ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರ ಕಂಡುಕೊಳ್ಳಲಿ. ಚುನಾವಣೆ ಎದುರಿಸಿದ ಪ್ರತಿ ರಾಜ್ಯದಲ್ಲೂ ಎಲ್ಲ ಮತಕ್ಷೇತ್ರಗಳಲ್ಲೂ ಅರ್ಧದಷ್ಟು ಮಹಿಳಾ ಮತದಾರರಿದ್ದಾರೆ. ಆದರೆ ಅಲ್ಲಿ ಶಾಸಕಿಯರಾಗಿ ಗೆದ್ದಿರುವವರ ಸಂಖ್ಯೆ ಬಹಳ ಕಡಿಮೆ. ಏಕೆಂದರೆ, ಮಹಿಳೆಯರಿಗೆ ಹೇಳಿಕೊಳ್ಳುವಷ್ಟು ಟಿಕೆಟ್‌ಗಳನ್ನು ಯಾವ ಪಕ್ಷವೂ ಕೊಟ್ಟಿರಲಿಲ್ಲ. ಇತ್ತೀಚೆಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ, ದೊಡ್ಡ ಕಾರ್ಯಕ್ಕೆ ಕೈ ಹಾಕಿದ್ದಾಗಿ ಹೇಳುವ ಬಿಜೆಪಿಯು ಈ ರಾಜ್ಯಗಳಲ್ಲಿ ಎಷ್ಟು ಮಹಿಳೆಯರಿಗೆ ಟಿಕೆಟ್ ನೀಡಿತ್ತು ಎಂಬ ಪ್ರಶ್ನೆಗೆ ನೀರಸವಾದ ಉತ್ತರವೇ ದೊರೆಯುತ್ತದೆ. ಸರ್ಕಾರಗಳು ಮಹಿಳಾಪರ ಎಂದು ನಾಮಮಾತ್ರಕ್ಕೆ ಹೇಳಿಕೊಳ್ಳುತ್ತವೆ, ವಾಸ್ತವದಲ್ಲಿ ಮಹಿಳೆಯರಿಗೆ ಕೊಡಬೇಕಾದ ಸೂಕ್ತ ಸ್ಥಾನಮಾನಗಳನ್ನು ಕೊಡುತ್ತಿಲ್ಲ ಎಂಬುದಕ್ಕೆ ಇದೇ ನಿದರ್ಶನ.

– ಹನಮಂತರೆಡ್ಡಿ ಕೆ. ಸೊರಂಗಾವಿ, ಜಮಖಂಡಿ

ಭ್ರಮೆ ಬೇಡ, ವಾಸ್ತವಾಂಶ ಗ್ರಹಿಸಿ

‘ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ವಿಫಲವಾದದ್ದೇ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ’ ಎಂದಿದ್ದಾರೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (ಕಿಡಿನುಡಿ, ಡಿ. 4). ಈ ಚುನಾವಣಾ ಫಲಿತಾಂಶವು ಅವರ ಮಾತಿನಲ್ಲಿನ ಸತ್ಯಾಂಶವನ್ನು ಕಾಂಗ್ರೆಸ್‌ಗೆ ಮನವರಿಕೆ ಮಾಡಿಕೊಡುವಂತಿದೆ. ಬಿಜೆಪಿ, ನಮ್ಮ ರಾಜ್ಯದಲ್ಲಿ ಸೋತು ಸುಣ್ಣವಾದ ಜೆಡಿಎಸ್ ಪಕ್ಷವನ್ನು ಸಹ ಕಡೆಗಣಿಸದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಅವಕಾಶಕ್ಕಾಗಿ ಅದರೊಂದಿಗೆ ಮೈತ್ರಿ ಮಾಡಿಕೊಂಡಿದೆ. ಅಂದರೆ ಅಷ್ಟರಮಟ್ಟಿಗೆ ಬಿಜೆಪಿ ವಾಸ್ತವಾಂಶವನ್ನು ಗ್ರಹಿಸಿ, ಅಹಂಕಾರ ಪ್ರದರ್ಶಿಸದೆ ಹೆಜ್ಜೆ ಇಟ್ಟಿದೆ. ಆದರೆ ಕಾಂಗ್ರೆಸ್ ಈ ವಿಷಯದಲ್ಲಿ ಇನ್ನೂ ಪಾಠ ಕಲಿತಿಲ್ಲ ಎನಿಸುತ್ತಿದೆ.

‘ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಡಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ’ ಎಂದಿರುವ ಪಿಣರಾಯಿ ಅವರ ಮಾತು ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದಲಾದರೂ ಕಾಂಗ್ರೆಸ್‌ಗೆ ಒಂದು ಮುನ್ನೆಚ್ಚರಿಕೆಯ ಪಾಠದಂತಿದೆ. ಕಾಂಗ್ರೆಸ್ ತನ್ನ ಭ್ರಮೆಯಿಂದ ಹೊರಬಂದರೆ ಮಾತ್ರ ಅದಕ್ಕೆ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧ್ಯ.

– ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಸರ್ಕಾರದ ಚಳಿ ಬಿಡಿಸಲಿ

ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಇಲ್ಲದೆ ಈ ಹಿಂದೆ ವಿಧಾನಮಂಡಲದ ಅಧಿವೇಶನ ನಡೆದಿದೆ. ಇದೀಗ ನಡೆಯುತ್ತಿರುವ ಚಳಿಗಾಲದ ಅಧಿವೇಶನವು ಬಿಜೆಪಿ, ಜೆಡಿಎಸ್ ಮೈತ್ರಿಯ ನಂತರ ನಡೆಯುತ್ತಿರುವ ಮೊದಲಅಧಿವೇಶನವಾಗಿದೆ. ಜನಪ್ರತಿನಿಧಿಗಳು ವೈಯಕ್ತಿಕ ಆರೋಪ, ಪ್ರತ್ಯಾರೋಪ, ಕೆಸರೆರಚಾಟವನ್ನು ಬದಿಗೊತ್ತಿ, ರಾಜ್ಯದ ಜನ ಸದ್ಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಚಿಂತನ ಮಂಥನ ನಡೆಸಲಿ. ಪ್ರತಿಪಕ್ಷಗಳು ಒಗ್ಗೂಡಿ, ಆಡಳಿತ ವೈಫಲ್ಯದ ವಿರುದ್ಧ ಧ್ವನಿ ಎತ್ತಲಿ, ಸರ್ಕಾರದ ಚಳಿ ಬಿಡಿಸುವ ಕೆಲಸ ಮಾಡಲಿ.

– ಜಯವೀರ ಎ.ಕೆ., ಖೇಮಲಾಪುರ, ರಾಯಬಾಗ

ಅದ್ದೂರಿಯಲ್ಲಿ ಅದ್ದೂರಿ ದಸರಾ!

ರಾಜ್ಯದಲ್ಲಿ ಈ ವರ್ಷ ಬರಗಾಲ ಕಾಣಿಸಿಕೊಂಡಿದ್ದರಿಂದ, ಸಾರ್ವಜನಿಕರ ಒತ್ತಾಯದ ಮೇರೆಗೆ ಈ ಬಾರಿಯ ದಸರಾ ಉತ್ಸವವನ್ನು ಸರಳವಾಗಿ ಮತ್ತು ಸಾಂಪ್ರದಾಯಿಕ ವಾಗಿ ಆಚರಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ದಸರಾ ಮಹೋತ್ಸವದ ವಿಶೇಷಾಧಿಕಾರಿಯಾಗಿದ್ದ, ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರು ಇತ್ತೀಚೆಗೆ ಬಿಡುಗಡೆ ಮಾಡಿರುವ ದಸರಾ ಖರ್ಚು ವೆಚ್ಚದ ಮಾಹಿತಿಯನ್ನು ನೋಡಿದರೆ, ಇದೇನು ಸರಳ ದಸರಾವೋ ಅದ್ದೂರಿಯಲ್ಲಿ ಅದ್ದೂರಿ ದಸರಾವೋ ಎಂಬ ಸಂದೇಹ ಮೂಡುತ್ತದೆ. ದಸರಾ ಮೇಲ್ವಿಚಾರಣೆಗೆ ನಿಯೋಜನೆಗೊಂಡಿದ್ದ ಅಧಿಕಾರಿಯೊಬ್ಬರು ಹೇಳುವಂತೆ, ಈ ವರ್ಷದ ದಸರಾಕ್ಕೆ ಖರ್ಚು ಮಾಡಿರುವ ಒಟ್ಟು ಹಣ ₹ 50 ಕೋಟಿಯನ್ನು ಮೀರಿರಬಹುದು.

ಹಿಂದಿನ 25 ವರ್ಷಗಳ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಖರ್ಚು ಮಾಡಿದ ಉದಾಹರಣೆ ಇಲ್ಲ. ಕೆಲವು ಕಾರ್ಯಕ್ರಮಗಳಿಗೆ ಖರ್ಚು ತೋರಿಸಿರುವುದನ್ನು ನೋಡಿದರೆ ಸಾರ್ವಜನಿಕರಿಗೆ ದಿಗ್ಭ್ರಮೆಯಾಗುತ್ತದೆ. ಉದಾಹರಣೆಗೆ, ಬರೀ ಮೂರು ದಿನ ನಡೆದ ಯುವ ದಸರಾಕ್ಕೆ ₹ 5.88 ಕೋಟಿ ಖರ್ಚು ತೋರಿಸಲಾಗಿದೆ. ಇದನ್ನು ನೋಡಿದರೆ, ಇದರಲ್ಲಿ ರಾಮನ ಲೆಕ್ಕ ಎಷ್ಟು, ಕೃಷ್ಣನ ಲೆಕ್ಕ ಎಷ್ಟು ಎಂದು ಕೇಳುವಂತಾಗಿದೆ.

– ಬೂಕನಕೆರೆ ವಿಜೇಂದ್ರ, ಮೈಸೂರು

ಚೆಸ್‌: ಮಹಿಳೆಯರಿಗೆ ಸಿಗಲಿ ಪ್ರೋತ್ಸಾಹ

ತಮಿಳುನಾಡಿನ ಆರ್‌.ವೈಶಾಲಿ ಅವರು ದೇಶದ ಮೂರನೇ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರ

ಹೊಮ್ಮಿದ್ದಾರೆ. ಇವರ ಸಹೋದರ ಆರ್‌.ಪ್ರಜ್ಞಾನಂದ ಕೂಡ ಗ್ರ್ಯಾಂಡ್‌ಮಾಸ್ಟರ್‌ ಆಗಿದ್ದು, ಸೋದರ- ಸೋದರಿ ಗ್ರ್ಯಾಂಡ್‌ಮಾಸ್ಟರ್‌ಗಳಾಗಿರುವುದು ವಿಶೇಷ. ವೈಶಾಲಿಯವರ ಈ ಸಾಧನೆ ಹಲವು ಆಯಾಮಗಳಿಂದ ಮುಖ್ಯವಾದುದು. ಒಂದು, ಭಾರತದ 84 ಗ್ರ್ಯಾಂಡ್‌ಮಾಸ್ಟರ್‌ಗಳ ಪೈಕಿ ಮಹಿಳೆಯರ ಸಂಖ್ಯೆ ಅತ್ಯಂತ ಕಡಿಮೆ. ಈ ದಿಸೆಯಲ್ಲಿ ಚೆಸ್‌ನಲ್ಲಿ ಮಹಿಳಾ ಪ್ರಾತಿನಿಧ್ಯ ಮತ್ತು ಸಾಧನೆ ಹೆಚ್ಚಾಗಬೇಕು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚೆಸ್‌ನಲ್ಲಿ ಮಹಿಳೆಯರು ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹಿಸಬೇಕು. ಪೋಷಕರು ಕೂಡ ಹೆಣ್ಣುಮಕ್ಕಳು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಲು ಬೆಂಬಲ ನೀಡಬೇಕು. ವೈಶಾಲಿಯವರ ಈ ಸಾಧನೆ ಇನ್ನಷ್ಟು ಮಹಿಳಾ ಚೆಸ್‌ ಪಟುಗಳು ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗಲಿ.

– ಪ್ರಸಾದ್‌ ಜಿ.ಎಂ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT