ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: 12 ಜೂನ್ 2024

Published 12 ಜೂನ್ 2024, 0:03 IST
Last Updated 12 ಜೂನ್ 2024, 0:03 IST
ಅಕ್ಷರ ಗಾತ್ರ

ಪೊಲೀಸರಿಗೆ ಸಿಗಲಿ ವರ್ಗಾವಣೆ ಭಾಗ್ಯ

ಅಂತರ್‌ಜಿಲ್ಲಾ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿ ಒಂದೂವರೆ ವರ್ಷ ಕಳೆದಿದ್ದರೂ ಪೊಲೀಸ್‌ ಕಾನ್‌ಸ್ಟೆಬಲ್‌
ಗಳಿಗೆ ವರ್ಗಾವಣೆ ಭಾಗ್ಯ ದೊರೆತಿಲ್ಲ ಎಂಬ ಸುದ್ದಿಯನ್ನು (ಪ್ರ.ವಾ., ಜೂನ್ 9) ಓದಿ ಮನ ಮಿಡಿಯಿತು. ಪೊಲೀಸ್ ಸಿಬ್ಬಂದಿಯು ಆರೋಗ್ಯ ಸಮಸ್ಯೆ, ಕೌಟುಂಬಿಕ ಸಂಕಷ್ಟ, ವಯಸ್ಸಾದ ತಂದೆ– ತಾಯಿಯ ಆರೈಕೆಯಂತಹ ಕಾರಣಗಳಿಗೆ ವರ್ಗಾವಣೆ ಬಯಸಿರುತ್ತಾರೆ. ಪತಿ– ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿದೆಯಾದರೂ ಸಾಮಾನ್ಯ ಕಾನ್‌ಸ್ಟೆಬಲ್‌ಗಳ ವರ್ಗಾವಣೆ ವಿಷಯದಲ್ಲಿ ಇಲಾಖೆಯು ಮಲತಾಯಿ ಧೋರಣೆ ತೋರುತ್ತಿರುವುದು ಸರಿಯಾದ ನಡೆಯಲ್ಲ. ವರ್ಗಾವಣೆ ವಿಷಯದಲ್ಲಿ ಬಸವಳಿದಿರುವ ಪೊಲೀಸ್ ಸಿಬ್ಬಂದಿಯ ಬೇಡಿಕೆಗೆ ಇಲಾಖೆ ಕೂಡಲೇ ಸ್ಪಂದಿಸಲಿ.    

ಮಲ್ಲಿಕಾರ್ಜುನ್ ತೇಲಿ, ಜಮಖಂಡಿ

ವಿದ್ಯುತ್ ಅವಘಡ: ಇರಲಿ ಎಚ್ಚರ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಗ್ರಾಮವೊಂದರಲ್ಲಿ
ಕಟ್ಟಡಕ್ಕೆ ನೀರು ಹಾಕಲು ಸ್ವಿಚ್ ಆನ್ ಮಾಡಲು ಹೋಗಿ, ಮುಟ್ಟಿದ ಕೂಡಲೇ ಸ್ವಿಚ್ ಬೋರ್ಡ್‌ನಲ್ಲಿ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವುದನ್ನು ತಿಳಿದು ದುಃಖವಾಯಿತು. ಮಳೆಗಾಲದಲ್ಲಿ ಈ ರೀತಿಯ ಅವಘಡಗಳ ಸಂಖ್ಯೆ ಹೆಚ್ಚು. ಮಳೆ ಆರಂಭವಾಗುವ ಸೂಚನೆ ತಿಳಿದ ಕೂಡಲೇ ಮನೆಯಲ್ಲಿರುವ ಎ‌ಲ್ಲಾ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಅನ್‌ಪ್ಲಗ್‌ ಮಾಡುವುದು ಒಳ್ಳೆಯದು. 

ಮಳೆಗಾಲದಲ್ಲಿ ತೇವಾಂಶ ಇರುವುದು ಸಹಜ. ಸ್ವಿಚ್‌ಬೋರ್ಡ್‌ಗೆ ನೀರು ತಾಕುತ್ತಿದೆಯೇ ಎಂದು ನೋಡಿಕೊಳ್ಳಬೇಕು. ಒಂದುವೇಳೆ ನೀರು ತಾಕುತ್ತಿದ್ದರೆ, ಅದನ್ನು ಸರಿಪಡಿಸಬೇಕು. ಮಳೆ, ಗುಡುಗು ಬರುವಾಗ ತೇವಾಂಶ ಇರುವ ಸ್ವಿಚ್‌ ಬೋರ್ಡ್‌ಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು. ಮಳೆಗಾಲದಲ್ಲಿ ಬೇಡವೆಂದರೂ ಕೈ ಒದ್ದೆಯಾಗುತ್ತಿರುತ್ತದೆ. ಹಾಗೆಂದು ಗಡಿಬಿಡಿಯಲ್ಲಿ ಒದ್ದೆಯಲ್ಲಿ ಸ್ವಿಚ್‌ ಬೋರ್ಡ್‌ ಮುಟ್ಟುವ ಸಾಹಸಕ್ಕೆ ಕೈ ಹಾಕಬಾರದು. ಮಳೆಗಾಲದಲ್ಲಿ ಸ್ವಿಚ್‌ ಬೋರ್ಡ್‌ ಬಳಸುವ ಮುನ್ನ ಎಚ್ಚರ ವಹಿಸಬೇಕು. ಒದ್ದೆ ಕೈಯಿಂದ ಮುಟ್ಟಿದಾಗ ಶಾಕ್‌ ಹೊಡೆಯುವ ಅಪಾಯ ಹೆಚ್ಚಾಗಿರುತ್ತದೆ.

– ಭೂಮಿಕಾ ರಂಗಪ್ಪ ದಾಸರಡ್ಡಿ, ಬಿದರಿ

ನಮ್ಮ ರಾಜಕಾರಣಿಗಳು ಓದುವುದಿಲ್ಲವೇ?

ಲೋಕಸಭೆ ಚುನಾವಣೆಯಲ್ಲಿ ಸೋತಿರುವ ರಾಜ್ಯದ ಕೆಲವು ಅಭ್ಯರ್ಥಿಗಳು ಏನೋ ಅನಾಹುತ ಆಗಿರುವ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವವರು ನಮ್ಮಲ್ಲಿ ಕಡಿಮೆ. ರಾಜಕಾರಣಿಗಳ ಇಂತಹ ನಡೆಯನ್ನು ನೋಡಿದರೆ ಅವರಿಗೆ ಓದಿನ ಅಭಿರುಚಿಯೇ ಇಲ್ಲವೇನೊ ಎಂಬ ಅನುಮಾನ ಮೂಡುತ್ತದೆ. ಅಮೆರಿಕದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ತಮ್ಮ ಊರಿನಲ್ಲಿ ಗ್ರಂಥಾಲಯಕ್ಕೆ ತೆರಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತು. ಹೀಗೆ ವಿವಿಧ ಬಗೆಯ ಅಭಿರುಚಿಗಳನ್ನು ಬೆಳೆಸಿಕೊಂಡು ಅವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವವರು ನಮ್ಮಲ್ಲಿ ಎಷ್ಟು ಜನ ಇದ್ದಾರೆ?

ಗುರು ಜಗಳೂರು, ಹರಿಹರ

ಎಚ್‌ಎಸ್‌ಆರ್‌ಪಿ ಅಳವಡಿಕೆ: ಗಡುವು ವಿಸ್ತರಿಸಿ

ಕಾರು ಮತ್ತು ದ್ವಿಚಕ್ರ ವಾಹನಗಳಿಗೆ, ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು (ಎಚ್‌ಎಸ್‌ಆರ್‌ಪಿ)
ಅಳವಡಿಸಿಕೊಳ್ಳಲು ಇದೇ 12 ಕಡೆಯ ದಿನವೆಂದು ಸರ್ಕಾರ ನಿಗದಿಪಡಿಸಿದೆ. ಆದರೆ ‌ಹಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಬಹಳಷ್ಟು ಜನರಿಗೆ ಇನ್ನೂ ಎಚ್ಎಸ್ಆರ್ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಸಂಬಂಧ ನನಗಾದ ವೈಯಕ್ತಿಕ ಅನುಭವವೊಂದು ಹೀಗಿದೆ: 1993ರಲ್ಲಿ ನಾನು ‘ಹೀರೊ ಹೋಂಡ’  ಕಂಪನಿಯ ಮೋಟರ್ ಬೈಕನ್ನು ತೆಗೆದುಕೊಂಡಿದ್ದೆ. ಈ ಕಂಪನಿಯು 20 ವರ್ಷಗಳ ಹಿಂದೆಯೇ ಹೀರೊ ಮತ್ತು  ಹೋಂಡ ಎಂಬುದಾಗಿ ಎರಡು ಕಂಪನಿಗಳಾಗಿ ಇಬ್ಭಾಗವಾಗಿದೆ. ಈಗ ನಾನು ನನ್ನ ವಾಹನಕ್ಕೆ ಎಚ್ಎಸ್ಆರ್ ಪ್ಲೇಟ್‌ನ ನೋಂದಣಿಗಾಗಿ ಸೈಬರ್ ಸೆಂಟರ್‌ಗೆ ಹೋದರೆ, ಹೀರೊ ಹೋಂಡ ಹೆಸರಿನ ಕಂಪನಿಯೇ ಇಲ್ಲ ಎಂದು ಒಮ್ಮೆ, ತಾಂತ್ರಿಕ ದೋಷವಿದೆ ಎಂದು ಮತ್ತೊಮ್ಮೆ ಅಲ್ಲಿನ ಕಂಪ್ಯೂಟರ್‌ ತೋರಿಸುತ್ತದೆ. ಸ್ಪ್ಲೆಂಡರ್‌ ಕಂಪನಿ ವಾಹನಗಳಿಗೂ ಇದೇ ರೀತಿಯ ಸಮಸ್ಯೆಯಾಗಿದೆ ಎಂದು ಕೆಲವರು ಹೇಳುವುದನ್ನು ಕೇಳಿದ್ದೇನೆ.

ಇಂತಹ ತಾಂತ್ರಿಕ ಸಮಸ್ಯೆಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಮೊದಲು ಬಗೆಹರಿಸಬೇಕು ಮತ್ತು ಎಚ್‌ಎಸ್‌ಆರ್ ಪ್ಲೇಟ್‌ಗಳ ಅಳವಡಿಕೆಗೆ ಇರುವ ಗಡುವನ್ನು ಇನ್ನೊಂದು ತಿಂಗಳ ಮಟ್ಟಿಗಾದರೂ ಮುಂದೂಡಬೇಕು.

– ಬೂಕನಕೆರೆ ವಿಜೇಂದ್ರ, ಮೈಸೂರು

ತ್ಯಾಜ್ಯ ಸೇವಾ ಶುಲ್ಕ: ಅತಿರೇಕದ ಚಿಂತನೆ

ಬೆಂಗಳೂರಿನಲ್ಲಿ ಪ್ರತಿ ಮನೆಯಿಂದ ತ್ಯಾಜ್ಯ ಸೇವಾ ಶುಲ್ಕವಾಗಿ ₹ 100 ಸಂಗ್ರಹಿಸಲು ಸರ್ಕಾರ ಮುಂದಾಗಿರುವುದು (ಪ್ರ.ವಾ., ಜೂನ್‌ 11) ಅಚ್ಚರಿದಾಯಕ. ಸಾರ್ವಜನಿಕರು ಸರ್ಕಾರದ ಯಾವುದೇ ಶುಲ್ಕಕ್ಕೂ ಬೇಸರಿಸದೆ ಹಣವನ್ನು ವ್ಯಯಿಸುತ್ತಾರೆ. ಆದರೆ ತ್ಯಾಜ್ಯ ಸೇವಾ ಶುಲ್ಕ ನೀಡುವುದನ್ನು ಅವರು ವಿರೋಧಿಸುತ್ತಾರೆ. ಏಕೆಂದರೆ, ತ್ಯಾಜ್ಯವು ಪ್ರತಿದಿನವೂ ಮನೆಯಿಂದ ವಿಲೇವಾರಿಯಾಗುವುದೇ ಕಷ್ಟವಾಗಿರುವಾಗ ಸರ್ಕಾರ ವಿಧಿಸಲು ಮುಂದಾಗಿರುವ ತ್ಯಾಜ್ಯ ಶುಲ್ಕ ಅತಿರೇಕದ ಪ್ರಸ್ತಾವವೇ ಸರಿ.

ತಮಗೆ ಅನುಕೂಲವಾದರೆ ಅಲ್ಲವೇ ಶುಲ್ಕವನ್ನು ಜನ ಕೊಡುವುದು. ಎಷ್ಟೋ ಮನೆಗಳಲ್ಲಿನ ತ್ಯಾಜ್ಯವು ವಾರದಲ್ಲಿ ಎರಡು ಅಥವಾ ಮೂರು ಬಾರಿ ಮಾತ್ರ ವಿಲೇವಾರಿಯಾಗುತ್ತಿದೆ. ತ್ಯಾಜ್ಯ ಸೇವಾ ಶುಲ್ಕ ಪಡೆಯಲೇಬೇಕಿದ್ದಲ್ಲಿ, ದಿನವೂ ಪ್ರತಿ ಮನೆಯಿಂದಲೂ ತ್ಯಾಜ್ಯ ಕೊಂಡೊಯ್ಯಬೇಕಲ್ಲವೇ? ಆಗಷ್ಟೇ ತ್ಯಾಜ್ಯ ಸೇವಾ ಶುಲ್ಕ ಪಡೆಯುವುದಕ್ಕೆ ಬೆಲೆ.

–ಬಾಲಕೃಷ್ಣ ಎಂ.ಆರ್., ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT