ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಪಠ್ಯಪುಸ್ತಕ ಮಾತ್ರವೇ ಇತಿಹಾಸವಲ್ಲ

ಎನ್‌ಸಿಇಆರ್‌ಟಿ ತನ್ನ ಪಠ್ಯಕ್ರಮದಲ್ಲಿ ಇತಿಹಾಸದ ಕೆಲವು ವಿಷಯ ಗಳನ್ನು ಕೈಬಿಡಲು ಮುಂದಾಗಿರುವುದಾಗಿ ವರದಿಯಾಗಿದೆ. ನಿಜ ಹೇಳಬೇಕೆಂದರೆ, ಪಠ್ಯಪುಸ್ತಕಗಳಲ್ಲಷ್ಟೇ ಇತಿಹಾಸ ಇರುವುದಿಲ್ಲ. ಹೀಗಾಗಿ, ಒತ್ತಾಯಪೂರ್ವಕವಾಗಿ ಯಾವ ಸಿದ್ಧಾಂತವನ್ನೂ ಯಾರ ಮೇಲೂ ಹೇರಲಾಗದು. ‘ಪಂಥೀಯ’ ಧೋರಣೆಯ ‘ಬದಲಾವಣೆ’ ಅಂಕ ಗಳಿಕೆಗಷ್ಟೇ ಅನಿವಾರ್ಯವಾಗಬಹುದೇ ವಿನಾ ಸತ್ಯ ಪ್ರತಿಪಾದನೆ ಆಗಲಾರದು.

ದೇಶ ವಿಭಜನೆ, ಸಾವರ್ಕರ್‌, ಬಾಬರಿ ಮಸೀದಿ ಧ್ವಂಸ ಪ್ರಕರಣ, ಗೋಧ್ರಾ ಹತ್ಯಾಕಾಂಡ, ಮಹಾತ್ಮ ಗಾಂಧಿ ಹತ್ಯೆಯಂತಹ ವಿಷಯಗಳ ಕುರಿತಂತೆ ವಿಭಿನ್ನ ಅಭಿಪ್ರಾಯದ ಹಲವಾರು ಪುಸ್ತಕಗಳು ಎಲ್ಲ ಭಾಷೆಗಳಲ್ಲಿ ಲಭ್ಯ ಇವೆ. ಯಾರಿಗೆ ಯಾವ ಪುಸ್ತಕಗಳು ಸತ್ಯವೆಂದು ಕಾಣಿಸುತ್ತವೆಯೋ ಅಥವಾ ಇಷ್ಟವಾಗುತ್ತವೆಯೋ ಅವುಗಳನ್ನು ಓದುತ್ತಾರೆ ಮತ್ತು ಆ ದಿಸೆಯಲ್ಲಿ ಇತಿಹಾಸವನ್ನು ಅರಿತುಕೊಳ್ಳುತ್ತಾರೆ. ‘ಇದಮಿತ್ಥಂ’ ಎನ್ನುವುದು ಇತಿಹಾಸಕ್ಕೆ ಸಂಬಂಧಿಸಿದಂತೆ ಸತ್ಯವಲ್ಲ. ಇತಿಹಾಸವು ‘ಗಣಿತ’ವಲ್ಲ! ಸಿಲೆಬಸ್‌ನಿಂದ ಮಾತ್ರ ಜನರ ಮನಃಸ್ಥಿತಿ ಬದಲಾಯಿಸುತ್ತೇವೆ ಎನ್ನುವುದು ಹುಚ್ಚುತನವಾದೀತು.

-ಶಿವಕುಮಾರ ಬಂಡೋಳಿ, ಹುಣಸಗಿ

**

ಕೊಳವೆಬಾವಿ ಅವಘಡ: ಕ್ರಮ ಜರುಗಲಿ

ನೀತಿ– ನಿಯಮ ಪಾಲನೆ ಎನ್ನುವುದೇ ಕೆಲವೊಮ್ಮೆ ನಮ್ಮ ಭ್ರಷ್ಟತೆಗೆ ಮೂಲವಾಗುತ್ತದೆ ಎನ್ನುವುದಕ್ಕೆ, ವಿಜಯಪುರದ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಕೊಳವೆಬಾವಿ ಅವಘಡ ನಿದರ್ಶನ. ಕೊಳವೆಬಾವಿ ಕೊರೆಯಲು ಅನುಮತಿ ಇದೆಯೇ ಎಂಬುದನ್ನು ಪರಿಶೀಲಿಸದೆ ಏಜೆನ್ಸಿಯು ಅದನ್ನು ಕೊರೆಯಲು ಹೇಗೆ ಮುಂದಾಯಿತು? ಹೋಗಲಿ, ಪ್ರತಿದಿನವೂ ಅಂದಿನ ಕೆಲಸ ಮುಗಿದ ನಂತರ ಸುರಕ್ಷಾ ಕ್ರಮವಾಗಿ ಕೊಳವೆಬಾವಿಯ ಬಾಯಿ ಮುಚ್ಚಬೇಕು ಎನ್ನುವ ಜವಾಬ್ದಾರಿ ಏಜೆನ್ಸಿಗೆ ಇರಲಿಲ್ಲವೇ? ಇಂತಹ ನಿಯಮಬಾಹಿರ ಕಾರ್ಯ ನಡೆದಿದ್ದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಏನು ಮಾಡುತ್ತಿದ್ದರು?

ಇಲ್ಲಿ ಮುಖ್ಯ ಆರೋಪಿಗಳು ಪಿಡಿಒ ಮತ್ತು ಏಜೆನ್ಸಿ. ಅಂಗೈ ಹುಣ್ಣಿಗೆ ಕನ್ನಡಿ ಬೇಡ ಎಂಬಂತೆ, ಈ ಇಬ್ಬರ ಕಾರಣದಿಂದ ಈ ಪ್ರಕರಣ ನಡೆದು, ಮಗುವನ್ನು ರಕ್ಷಿಸಲು ಸರ್ಕಾರದ ಲಕ್ಷಾಂತರ ರೂಪಾಯಿ ಕೊಚ್ಚಿಹೋಗಿದೆ. ಇದನ್ನು ಏಜೆನ್ಸಿಯ ಮಾಲೀಕ ಮತ್ತು ಪಿಡಿಒ ಅವರಿಂದ ವಸೂಲಿ ಮಾಡಿ, ನಂತರ ನಿಯಮಾನುಸಾರ ಅವರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು.

-ಸತ್ಯಬೋಧ, ಬೆಂಗಳೂರು

**

ಪದೇಪದೇ ದಾಖಲೆ ಕೇಳುವುದೇಕೆ?

ತುರ್ತಾಗಿ ಹಣದ ಅಗತ್ಯ ಇದ್ದುದರಿಂದ, ನನ್ನ ಖಾತೆಯಿಂದ ಹಣ ಪಡೆದುಕೊಳ್ಳಲು ರಾಷ್ಟ್ರೀಕೃತ ಬ್ಯಾಂಕಿಗೆ ತೆರಳಿದ್ದೆ. ಅಲ್ಲಿ ‘ಕೆವೈಸಿ ಕೊಡಿ, ಆಮೇಲಷ್ಟೇ ಹಣ ಬಟವಾಡೆ’ ಎಂಬ ಉತ್ತರ ಬಂತು. ನಾನು ಕೂಡ ನಿವೃತ್ತ ಬ್ಯಾಂಕ್ ನೌಕರನೇ ಆಗಿದ್ದು, ಈ ಎರಡು ವರ್ಷಗಳ ಅವಧಿಯಲ್ಲಿ ಇದು ಮೂರನೆಯ ಬಾರಿ ಕೆವೈಸಿ ನೀಡುತ್ತಿರುವುದು! ಹೀಗೆ ಪದೇಪದೇ ದಾಖಲೆ ಕೇಳುವ ಉದ್ದೇಶವಾದರೂ ಏನು? ಬ್ಯಾಂಕುಗಳ ವ್ಯವಹಾರ ಡಿಜಿಟಲೀಕರಣ ಆದಮೇಲಂತೂ, ಕೆವೈಸಿ ಬೇಡಿಕೆಯ ಕಾಟ, ಅಡಚಣೆ ಇನ್ನೂ ಹೆಚ್ಚಾಗಿದೆ. ಬರೀ ಆರೇಳು ತಿಂಗಳ ಹಿಂದಷ್ಟೇ ನೀಡಿರುವ ದಾಖಲೆಗಳು ನಮೂದಾಗಿರುವುದಿಲ್ಲವೇ? ವ್ಯವಹಾರ ಇಲ್ಲದ, ನಿಷ್ಕ್ರಿಯ ಎಸ್‌ಬಿ ಖಾತೆಗಳಿಗೆ (ಡಾರ್ಮೆಂಟ್ ಅಕೌಂಟ್) ಕೆವೈಸಿ ಕೇಳಲಿ. ಸಕ್ರಿಯವಾಗಿರುವ ಖಾತೆಗಳಿಗೆ ಈ ಥರದ ಅಸಹಕಾರ ಸಾಧುವೇ?

ಕೆವೈಸಿ ನಮೂದೀಕರಣ ಪ್ರಕ್ರಿಯೆಯಲ್ಲಿ ಏನೋ ದೋಷ ಇದ್ದಂತಿದೆ. ಇದನ್ನು ಸರಿಪಡಿಸುವ ಅಗತ್ಯ ಇದೆ. ಇತ್ತೀಚೆಗೆ ಬ್ಯಾಂಕುಗಳಿಂದ ಗ್ರಾಹಕರಿಗೆ ಸಿಗುವ ಸೇವೆಗಿಂತ, ಈ ಬಗೆಯ ಕಿರಿಕಿರಿಗಳೇ ಹೆಚ್ಚಾಗುತ್ತಿವೆ.
ಸಂಬಂಧಪಟ್ಟವರು ಗಮನಿಸಬೇಕಾಗಿದೆ.

-ರಾಮಚಂದ್ರ ಎಸ್. ಕುಲಕರ್ಣಿ, ಧಾರವಾಡ 

**

ರಥದ ಎತ್ತರ: ನಿಯಮ ರೂಪಿಸಬೇಕಿದೆ

ಪ್ರತಿವರ್ಷವೂ ಮಾರ್ಚ್, ಏಪ್ರಿಲ್ ಬಂದರೆ ನಾಡಿನ ನೂರಾರು ಊರುಗಳಲ್ಲಿ ಜಾತ್ರೆ ಮತ್ತು ರಥೋತ್ಸವ ನಡೆಯುವುದು ವಾಡಿಕೆ. ಅಂತೆಯೇ ಆನೇಕಲ್ ತಾಲ್ಲೂಕಿನ ಹುಸ್ಕೂರಿನಲ್ಲಿ ಇತ್ತೀಚೆಗೆ ಜಾತ್ರೆ ಮತ್ತು ರಥೋತ್ಸವ ಆಯೋಜಿಸ ಲಾಗಿತ್ತು. ಸದರಿ ರಥದ ಎತ್ತರ ಸುಮಾರು 120 ಅಡಿಗಳಷ್ಟು ಇತ್ತು. ಅಂದರೆ ಸುಮಾರು 12 ಅಂತಸ್ತಿನ ಕಟ್ಟಡದಷ್ಟು ಎತ್ತರ. ರಥ ಎಳೆಯುವ ಸಂದರ್ಭದಲ್ಲಿ ಸಮತೋಲನ ತಪ್ಪಿ ಪ್ರಮಾದ ಜರುಗಿ, ಇಡೀ ರಥ ಧರಾಶಾಹಿಯಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಲಿಲ್ಲ.

ಇಂತಹ ರಥೋತ್ಸವದಲ್ಲಿ ಬೇರೆಯವರಿಗಿಂತ ತಮ್ಮದು ಚೆನ್ನಾಗಿರಬೇಕು, ಭವ್ಯವಾಗಿರಬೇಕು ಎಂಬ ಸದುದ್ದೇಶದ ಪೈಪೋಟಿ ಇರುತ್ತದೆ. ಹಾಗಾಗಿ, ಹೆಚ್ಚಿನ ಅಲಂಕಾರದೊಂದಿಗೆ ರಥದ ಎತ್ತರವೂ ಹೆಚ್ಚಾಗುತ್ತದೆ. ಇದು ಸಹಜ ಕೂಡ. ಎಷ್ಟೋ ಕಡೆ ಕಾಲ್ತುಳಿತ, ಕೆಂಡ ಹಾಯುವಿಕೆಯಲ್ಲಿ ಭಾರಿ ಗಾಯ, ಪ್ರಾಣಹಾನಿ ಆಗಿರುವುದು ಗಮನಾರ್ಹ. ಹಾಗಾಗಿ, ಸಂಬಂಧಪಟ್ಟ ಇಲಾಖೆಯು ಗ್ರಾಮದ ರಸ್ತೆಗಳ ಅಗಲಕ್ಕೆ ತಕ್ಕಂತೆ ರಥದ ಎತ್ತರಕ್ಕೆ ಗರಿಷ್ಠ ಮಿತಿಯನ್ನು ನಿಗದಿಪಡಿಸಲಿ. ಆಗ ಇಂತಹ ಅನಾಹುತಗಳು ಕಡಿಮೆಯಾಗುತ್ತವೆ. ಅನಾಹುತ ಆದ ನಂತರ ಪಶ್ಚಾತ್ತಾಪ ಪಡುವುದಕ್ಕಿಂತ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

**

ಯು-ಗಾದಿ

ರಂಗೇರಿದ ರಾಜಕೀಯದ
ವೇಳೆಯಲಿ ಬಂದಿದೆ 
ಬೇವು ಬೆಲ್ಲದ ಯುಗಾದಿ
ಕಾದು ನೋಡಬೇಕು ಯಾರಿಗಿದೆ
ಕಹಿಯಾದ ಬೇವಿನ ಹಾದಿ
ಬೆಲ್ಲದಂಥ ಅಧಿಕಾರದ ಗಾದಿ?!

-ಮಹಾಂತೇಶ ಮಾಗನೂರ, ಬೆಂಗಳೂರು

**

ಬೆಳಗಲಿ ಸಮರಸ

ವಸಂತ ಚೈತ್ರದ ಮುಂಬೆಳಕು
 ತಾರದಿರಲಿ ' ಕ್ರೋದಿ ' ತನ
 ಬೆಳಗಲಿ ಸಮರಸ ಸಹಬಾಳ್ವೆ
 ನವ ಸಂವತ್ಸರದಲ್ಲಿ ಆಗಮಿಸಿಹ 
ಮತದಾರರ ಹಬ್ಬ ಆಗದಿರಲಿ

ಎಂದೂ ಉಂಡಿದ್ದೇ ಉಗಾದಿ 
ಎಂಬ ಮಾತಿನಂತೆ !!"


.–ಬಲ್ಲೇನಹಳ್ಳಿ ಮಂಜುನಾಥ್, ಕೆ.ಆರ್.ಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT