ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣು ಮಕ್ಕಳ ಶಿಕ್ಷಣ: ಘೋಷಣೆ ಸಾಕೆ?

Last Updated 16 ಜನವರಿ 2022, 15:48 IST
ಅಕ್ಷರ ಗಾತ್ರ

‘ವಿ.ವಿ. ಶಿಕ್ಷಣ ಉಳ್ಳವರ ಸೊತ್ತೇ?’ ಎಂಬ ಪತ್ರದಲ್ಲಿ (ವಾ.ವಾ., ಜ. 14) ಎನ್‌.ಎಂ.ಕುಲಕರ್ಣಿ ಅವರು ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ವಿಶ್ವವಿದ್ಯಾಲಯ ಹಾಗೂ ಸರ್ಕಾರ ಹೇಗೆ ತೊಡಕಾಗುತ್ತಿವೆ ಎನ್ನುವ ಸಂಗತಿಯನ್ನು ವಿವರಿಸಿದ್ದಾರೆ. ಇದು ಒಂದು ಉದಾಹರಣೆ ಮಾತ್ರ. ಶಾಲಾ ಕಾಲೇಜುಗಳು ಜೂನ್ ತಿಂಗಳಲ್ಲಿ ಆರಂಭವಾದರೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳ ಪ್ರವೇಶ ಪ್ರಕ್ರಿಯೆ ಆರಂಭವಾಗುವುದು ಸೆಪ್ಟೆಂಬರ್‌ ನಂತರ. ಆ ಮೂರು ತಿಂಗಳು ಮಕ್ಕಳಿಗೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಎಲ್ಲಿ ಉಳಿದುಕೊಳ್ಳಬೇಕು ಎನ್ನುವ ಸಮಸ್ಯೆ ಕಾಡುತ್ತದೆ. ಪಿ.ಜಿ.ಗಳಲ್ಲಿ ಉಳಿದುಕೊಳ್ಳಲು ಆರ್ಥಿಕ ತೊಂದರೆ ಕಾಡುತ್ತಿರುತ್ತದೆ. ಹೀಗಾಗಿ ಮಕ್ಕಳಿಗೆ ಶಿಕ್ಷಣ ಪಡೆಯಬೇಕೆಂಬ ಹಂಬಲ ಮತ್ತು ಅರ್ಹತೆ ಇದ್ದರೂ ಪಾಲಕರು ಶಿಕ್ಷಣ ಕೊಡಿಸಲು ಮುಂದಾಗುತ್ತಿಲ್ಲ.

ಈ ವರ್ಷ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ, ಧಾರವಾಡ ಜಿಲ್ಲೆಯಲ್ಲಿ ಎಸ್ಎಸ್ಎಲ್‌ಸಿ ಪಾಸಾದ ಹೆಣ್ಣು ಮಕ್ಕಳಲ್ಲಿ (ಕೋವಿಡ್‌ ಕಾರಣದಿಂದ ಶೇ 100 ಉತ್ತೀರ್ಣ) ಪಿಯುಗೆ ಎಷ್ಟು ಮಂದಿ ಪ್ರವೇಶ ಪಡೆದಿದ್ದಾರೆ, ಪ್ರವೇಶ ಪಡೆಯದಿರಲು ಕಾರಣವೇನು ಎಂಬ ಸಮೀಕ್ಷೆ ನಡೆಸಲಾಯಿತು. ಆಗ ಬಹಳ ಮುಖ್ಯವಾಗಿ ಗಮನಕ್ಕೆ ಬಂದ ಕಾರಣ ಎಂದರೆ, ಕಾಲೇಜು ಆರಂಭವಾದಾಗ ವಿದ್ಯಾರ್ಥಿ ನಿಲಯಗಳು ಆರಂಭವಾಗದೇ ಇರುವುದು. ಹಳ್ಳಿಗಳಿಂದ 30-35 ಕಿ.ಮೀ. ದೂರದಲ್ಲಿ ಕಾಲೇಜುಗಳಿವೆ, ನಿತ್ಯ ಪ್ರಯಾಣ ಮಾಡಿ ಹೋಗೋಣ ಎಂದರೆ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ. ಬಸ್ಸಿನ ವ್ಯವಸ್ಥೆ ಇದ್ದರೂ ಸುರಕ್ಷತೆ ದೃಷ್ಟಿಯಿಂದ ಹೆಣ್ಣು ಮಕ್ಕಳನ್ನು ಬಸ್ಸುಗಳಲ್ಲಿ ಕಳುಹಿಸುವುದಕ್ಕೆ ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ವಿದ್ಯಾರ್ಥಿ ನಿಲಯಗಳು ಆರಂಭವಾಗುವುದು ವಿಳಂಬವಾಗುವುದರಿಂದ, ಊರಲ್ಲೇ ಕಾಲೇಜುಗಳಿರುವಲ್ಲಿ ಹೆಣ್ಣು ಮಕ್ಕಳನ್ನ ಕಳುಹಿಸುತ್ತೇವೆ ಎಂದು ಹಲವು ಪಾಲಕರು ಅಭಿಪ್ರಾಯಪಟ್ಟರು. ಸರ್ಕಾರವು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದಾಗಿ ಘೋಷಿಸಿ ಬಜೆಟ್‌ನಲ್ಲಿ ಕೋಟ್ಯಂತರ ರೂಪಾಯಿ ಮೀಸಲಿಟ್ಟರಷ್ಟೇ ಸಾಲದು. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗಿರುವ ಸವಾಲುಗಳನ್ನು ಅರಿತು, ಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಬದ್ಧತೆ ತೋರಬೇಕು.

ಜಯಂತ ಕೆ.ಎಸ್.,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT