ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅಕಾಡೆಮಿಗಳ ಅಧ್ಯಕ್ಷತೆ; ಪ್ರಾದೇಶಿಕ ನ್ಯಾಯ ಎಲ್ಲಿ?

Published 28 ಮಾರ್ಚ್ 2024, 23:09 IST
Last Updated 28 ಮಾರ್ಚ್ 2024, 23:09 IST
ಅಕ್ಷರ ಗಾತ್ರ

ಅಕಾಡೆಮಿಗಳ ಅಧ್ಯಕ್ಷತೆ: ಪ್ರಾದೇಶಿಕ ನ್ಯಾಯ ಎಲ್ಲಿ?

ಲೋಕಸಭಾ ಚುನಾವಣೆಯ ಪೂರ್ವದಲ್ಲಿ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯು ಸಾಮಾಜಿಕ ನ್ಯಾಯ ಅನುಸರಿಸಿ ನಡೆದಿರುವುದು ಸ್ವಾಗತಾರ್ಹ. ಅದೇ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಬೇಕಿತ್ತು. ಅದು ಸಾಧ್ಯವಾಗದಿದ್ದರೆ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ ಕರ್ನಾಟಕಗಳಿಗೆ ಅಕಾಡೆಮಿಗಳ ಅಧ್ಯಕ್ಷತೆಯಲ್ಲಿ ಸಮಪಾಲು ದೊರೆಯಬೇಕಿತ್ತು. ಎರಡು ಅಕಾಡೆಮಿಗಳಲ್ಲಿ ಉತ್ತರ ಕರ್ನಾಟದವರು ಒಬ್ಬರು, ಇನ್ನೊಬ್ಬರು ಹಳೆಯ ಮದ್ರಾಸ್ ಪ್ರಾಂತಕ್ಕೆ ಸೇರಿದವರಿಗೆ ಅಧ್ಯಕ್ಷತೆಯ ಅವಕಾಶ ದೊರಕಿದೆ. ಕಲ್ಯಾಣ ಕರ್ನಾಟಕದ ಯಾರೂ ಅಕಾಡೆಮಿಗಳ ಅಧ್ಯಕ್ಷರಾಗಿಲ್ಲ. ಅವರಲ್ಲಿ ಅರ್ಹರು ಇಲ್ಲವೇ?

ಕರ್ನಾಟಕದ ಕ್ರಾಂತಿಯ ನೆಲೆವೀಡಾಗಿದ್ದ ಬೀದರ್‌ನವರು ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಒಂದು ಅಕಾಡೆಮಿಗೂ ಅಧ್ಯಕ್ಷರಾಗಿಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಕಲ್ಯಾಣ ಕರ್ನಾಟಕಕ್ಕೆ, ಉತ್ತರ ಕರ್ನಾಟಕಕ್ಕೆ ಸಮಾನ ಪ್ರಾತಿನಿಧ್ಯ ದೊರಕುತ್ತಿಲ್ಲ. ಇನ್ನು ಮುಂದಾದರೂ ಸರ್ಕಾರವು ಕಲ್ಯಾಣ ಕರ್ನಾಟಕಕ್ಕೆ ಪ್ರತಿಷ್ಠಾನಗಳು, ರಂಗಾಯಣಗಳು, ಅಧ್ಯಯನ ಕೇಂದ್ರಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸುತ್ತೇವೆ.

–ಬಸವರಾಜ ಸಬರದ, ಮೀನಾಕ್ಷಿ ಬಾಳಿ, ಎಸ್.ಟಿ.ಪೋತೆ, ಕೆ.ನೀಲಾ, ಕಲಬುರಗಿ, ಕಾಶೀನಾಥ ಅಂಬಲಗೆ, ಬೀದರ್‌, ಈರಪ್ಪ ಕಂಬಳಿ, ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ, ಭಗತರಾಜ ನಿಜಾಮಕರ್, ರಾಯಚೂರು

ಹಿರಿಯ ನಾಗರಿಕರಿಗೆ ಬೇಕು ವಿಶೇಷ ಗ್ರಾಮಸಭೆ

ಗದಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಇತ್ತೀಚೆಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಹಿರಿಯ ನಾಗರಿಕರು ವ್ಯಕ್ತಪಡಿಸಿದ ಸಮಸ್ಯೆಗಳು ಚಿಂತನಾರ್ಹವಾಗಿವೆ. ‘ಸಮಾಜ ನಮ್ಮ ಸಮಸ್ಯೆಗಳಿಗೆ ಕಿವುಡಾಗಿದೆ. ನಮ್ಮ ಇಷ್ಟಾನಿಷ್ಟಗಳನ್ನು ಎಲ್ಲಿ, ಹೇಗೆ ಹೇಳಿಕೊಳ್ಳಬೇಕೆಂದು ತಿಳಿಯುತ್ತಿಲ್ಲ. ಈ ದಿಸೆಯಲ್ಲಿ ನಮ್ಮ ದುಃಖ, ದುಮ್ಮಾನಗಳನ್ನು ಹೇಳಿಕೊಳ್ಳುವುದಕ್ಕೆ ಸರ್ಕಾರ ಸೂಕ್ತ ವ್ಯವಸ್ಥೆಯನ್ನು ರೂಪಿಸಬೇಕು’ ಎಂಬ ಹಕ್ಕೊತ್ತಾಯ ಅವರಿಂದ ಕೇಳಿಬಂತು.

ನಿಜ, ತೀವ್ರಗತಿಯಲ್ಲಿ ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಿರಿಯ ನಾಗರಿಕರು, ಅದರಲ್ಲೂ ಹಿರಿಯ ಮಹಿಳೆಯರು ಒಂಟಿಯಾಗುತ್ತಿದ್ದಾರೆ. ತೀವ್ರತರವಾದ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅವರಲ್ಲಿ ಒಂದು ರೀತಿಯ ಅನಾಥ ಭಾವ ಶುರುವಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಹಿರಿಯರು ಇತರರಿಗಿಂತ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ವ್ಯಕ್ತಪಡಿಸುವುದಕ್ಕೆ ಯಾವುದೇ ವೇದಿಕೆಯಿಲ್ಲದೆ ಮೂಕ ರೋದನೆಗೆ ಒಳಗಾಗುತ್ತಿದ್ದಾರೆ. ಅದಕ್ಕಾಗಿ, ಪಂಚಾಯಿತಿ ಮಟ್ಟದಲ್ಲಿ ಮಕ್ಕಳಿಗಾಗಿ ವಿಶೇಷ ಗ್ರಾಮಸಭೆಗಳನ್ನು ಆಯೋಜಿಸಿದಂತೆ, ಹಿರಿಯ ನಾಗರಿಕರಿಗೂ ‘ವಿಶೇಷ ಗ್ರಾಮಸಭೆ’ಗಳನ್ನು ಅರ್ಥಪೂರ್ಣವಾಗಿ ಆಯೋಜಿಸಿದರೆ, ಅವರಿಗೆ ತಮ್ಮ ಸಮಸ್ಯೆ ಳನ್ನು ಹೇಳಿಕೊಳ್ಳಲು, ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ. ಹಾಗೆಯೇ, ಸಭೆಯಲ್ಲಿ ಚರ್ಚಿಸಿದ ಸಮಸ್ಯೆ
ಗಳನ್ನು ತುರ್ತು ಕೆಲಸವೆಂದು ಪರಿಗಣಿಸಿ ಶೀಘ್ರವಾಗಿ ಪರಿಹರಿಸಿದರೆ, ಹಿರಿಯರು ಇರುವಷ್ಟು ದಿನ ನೆಮ್ಮದಿಯಿಂದ ಬದುಕು ದೂಡುವುದಕ್ಕೆ ಸಾಧ್ಯವಾಗುತ್ತದೆ. ಅದು ನಮ್ಮ ನಾಗರಿಕ ಸಮಾಜದ ಕರ್ತವ್ಯ ಕೂಡ.

–ಆನಂದ ಎನ್.ಎಲ್‌., ಅಜ್ಜಂಪುರ

ಆತಂಕ ತಂದ ವಿದ್ಯಮಾನ

ಪತ್ರಿಕೆಯಲ್ಲಿನ ಎರಡು ಸುದ್ದಿಗಳು (ಪ್ರ.ವಾ., ಮಾರ್ಚ್‌ 28) ಗಮನ ಸೆಳೆದವು ಮತ್ತು ಆತಂಕ ಹುಟ್ಟಿಸುವಂತಿದ್ದವು. ಒಂದು: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಘೋಷಿತವಾಗಿರುವ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರನ್ನು ಬದಲಾಯಿಸುವಂತೆ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಮಾಡಿರುವ ಒತ್ತಾಯ. ಅದಕ್ಕೆ ಅವರು ಏನೇ ಕಾರಣ ಕೊಟ್ಟಿದ್ದರೂ ರಾಜಕೀಯದಲ್ಲಿ ಮಠಾಧೀಶರ ಹಸ್ತಕ್ಷೇಪ ಅತಿಯಾಯಿತು ಎನಿಸುತ್ತದೆ. ತೆರೆಯಮರೆಯಲ್ಲಿ ರಾಜಕೀಯ ಮಾಡುತ್ತಿದ್ದ ಮಠಾಧೀಶರು ಈಗ ನೇರವಾಗಿ ರಾಜಕೀಯ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಮಠಾಧೀಶರು ರಾಜಕೀಯದಲ್ಲಿ ಮೂಗು ತೂರಿಸಲು ಅನುವು ಮಾಡಿಕೊಟ್ಟಿದ್ದೇ ರಾಜಕೀಯ ನಾಯಕರು!

ಇನ್ನೊಂದು, ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಬಗೆಗಿನ ಬಿಕ್ಕಟ್ಟು. ಅದರಲ್ಲೂ ದಲಿತರ ಎರಡು ಬಣಗಳೊಳಗಿನ ಈ ಹೋರಾಟ ಬೇಸರ ತರಿಸುವಂತಿದೆ. ಅಂಬೇಡ್ಕರ್ ಯಾವ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಡಬೇಕೆಂದು ಬಯಸಿದ್ದರೋ ಆ ಸಮುದಾಯವು ಸವರ್ಣೀಯರ ವಿರೋಧವನ್ನು ಇನ್ನೂ ಎದುರಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ, ಅವರದೇ ಎರಡು ಬಣಗಳ ನಡುವೆ ಇಂತಹ ಪರಿಸ್ಥಿತಿ ಬರಬಾರದಿತ್ತು. ಒಟ್ಟಿನಲ್ಲಿ ಎರಡೂ ವಿದ್ಯಮಾನಗಳು ಸಾಮಾಜಿಕವಾಗಿ, ರಾಜಕೀಯವಾಗಿ ಆತಂಕಕಾರಿಯಾಗಿಯೇ ಇವೆ.

–ಹೊಸಮನೆ ವೆಂಕಟೇಶ, ಟಿ.ನರಸೀಪುರ 

ಹಕ್ಕು ಚಲಾವಣೆ: ಸನ್ನದ್ಧರಾಗೋಣ

ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಮತದಾನದ ಪ್ರಮಾಣ ಕಡಿಮೆ ಇರುವುದನ್ನು ಅಂಕಿಅಂಶಗಳು ನಮಗೆ ತಿಳಿಸುತ್ತವೆ. ಇದಕ್ಕೆ ವಿದ್ಯಾವಂತರು ಚುನಾವಣೆಯನ್ನು ಲಘುವಾಗಿ ಪರಿಗಣಿಸಿರುವುದೇ ಕಾರಣ. ಶೀಘ್ರದಲ್ಲೇ ಲೋಕಸಭಾ ಚುನಾವಣೆ ನಡೆಯಲಿದೆ. 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 15ರವರೆಗೆ ಅವಕಾಶವಿದೆ. ಇದನ್ನು ಸದುಪಯೋಗಪಡಿಸಿ
ಕೊಳ್ಳಬೇಕು. ಮತದಾನದ ಹಕ್ಕು ಇರುವವರು ಕಡ್ಡಾಯವಾಗಿ ಮತದಾನ ಮಾಡಬೇಕು. ಈ ಬಾರಿ 85 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟವರು, ಅಂಗವಿಕಲರು ಮನೆಯಿಂದಲೇ ಮತದಾನ ಮಾಡಲು ಅರ್ಜಿ ಸಲ್ಲಿಸಬಹುದು. ಕೆಲಸದ ನಿಮಿತ್ತ ದೇಶದ ನಾನಾ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟರೆ ಮತದಾನದ ಪ್ರಮಾಣ ಸ್ವಲ್ಪ ಮಟ್ಟಿಗಾದರೂ ಹೆಚ್ಚಾಗುವ ಸಾಧ್ಯತೆ ಇದೆ. ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಮತದಾನದ ವ್ಯವಸ್ಥೆ ಮಾಡುವುದರ ಬಗ್ಗೆಯೂ ಚುನಾವಣಾ ಆಯೋಗ ಯೋಚಿಸಬೇಕಾಗಿದೆ.

ಅಮೂಲ್ಯವಾದ ಮತವನ್ನು ಸರಿಯಾಗಿ ಬಳಸುವ ಮೂಲಕ ದೇಶ ಮತ್ತು ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ನಾಯಕರನ್ನು ಆಯ್ಕೆ ಮಾಡಬೇಕು. ಚುನಾವಣೆಗೂ ಮುನ್ನವೇ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕು. ತಪ್ಪುಗಳಾಗಿದ್ದರೆ ನಾವು ಆನ್‌ಲೈನ್ ಮೂಲಕವೂ ಆಯೋಗಕ್ಕೆ ದೂರು ಸಲ್ಲಿಸಬಹುದು.      

–ಚನ್ನಕೇಶವ ಜಿ.ಕೆ., ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT