ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 22 ಏಪ್ರಿಲ್ 2024, 19:23 IST
Last Updated 22 ಏಪ್ರಿಲ್ 2024, 19:23 IST
ಅಕ್ಷರ ಗಾತ್ರ

ಮತದಾರರು ಪ್ರಜ್ಞಾವಂತರಾಗುವುದು ಯಾವಾಗ?

ಚುನಾವಣಾ ಪ್ರಚಾರಕ್ಕೆಂದು ಬರುವ ರಾಷ್ಟ್ರ ನಾಯಕರು ಹಾಗೂ ಸ್ಟಾರ್ ಪ್ರಚಾರಕರ ರೋಡ್ ಶೋ ಸಮಯದಲ್ಲಿ ಅವರು ಚಲಿಸುವ ಮಾರ್ಗದಲ್ಲಿ ಕೆ.ಜಿ.ಗಟ್ಟಲೆ ಹೂವನ್ನು ಸುರಿಯುವುದು, ಬೃಹತ್‌ ಯಂತ್ರ ಬಳಸಿ ಟನ್‌‌ಗಟ್ಟಲೆ ಹೂವು, ತೆಂಗಿನಕಾಯಿ, ಸೇಬಿನಂತಹವುಗಳ ಹಾರ ಹಾಕುವುದು, ಚಿಕ್ಕ ಮಕ್ಕಳಿಂದ ಆರತಿ ಬೆಳಗಿಸುವುದು, ಬೀದಿಗಳ ತುಂಬೆಲ್ಲಾ ಫ್ಲೆಕ್ಸ್‌ ಹಾಕುವುದು, ದಿನಪೂರ್ತಿ ಧ್ವನಿವರ್ಧಕಗಳ‌ ಮೂಲಕ ಕಿರುಚುತ್ತಾ  ಪ್ರಚಾರ ಮಾಡುವುದನ್ನು ಬಿಡಬೇಕು.

ರೋಡ್ ಶೋ ಮುಗಿದ ಬಳಿಕ ಸಂಗ್ರಹವಾಗುವ ಕಸದ ರಾಶಿಯ ಬಗ್ಗೆ, ಪರಿಸರ ಮಾಲಿನ್ಯದ ಬಗ್ಗೆ ಚಿಂತಿಸುವ ಹೊಣೆ ಯಾರದು? ಇವೆಲ್ಲಾ ಅಸಂಬದ್ಧ ಸೋಗಲಾಡಿತನವನ್ನು ಪ್ರಜ್ಞಾವಂತರಾದ ಜನ ವಿರೋಧಿಸಬೇಕು. ಹೂವು, ಆರತಿಗಿರುವ ಪಾವಿತ್ರ್ಯವನ್ನು ಭಗವಂತನಿಗೆ ಮಾತ್ರ ಮೀಸಲಿಡಬೇಕು. ರಾಜಕಾರಣಿಗಳನ್ನು ಅತಿಮಾನವ ಶಕ್ತಿಯುಳ್ಳ ದೇವರಂತೆ ಬಿಂಬಿಸುವ ಮನಃಸ್ಥಿತಿ ಸರಿಯೇ? ಜಗತ್ತಿನ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆ ಇರುವ ದೇಶದಲ್ಲಿ ಈಗಲೂ ಈ ರೀತಿ ಚುನಾವಣಾ ಪ್ರಚಾರ ನಡೆಯುತ್ತದೆ ಎಂದರೆ ಏನರ್ಥ?

–ಸುರೇಂದ್ರ ಪೈ, ಭಟ್ಕಳ

***

ಬದುಕೋಣ, ಬದುಕಿಸೋಣ...

ವಿಶ್ವದ ಅತ್ಯಂತ ದೈತ್ಯ ಉರಗವಾದ ವಾಸುಕಿ ಇಂಡಿಕಸ್ ನಮ್ಮ ಭಾರತ ಉಪಖಂಡದಲ್ಲಿ ಸುಮಾರು 5 ಕೋಟಿ ವರ್ಷಗಳ ಹಿಂದೆ ಬದುಕಿತ್ತು ಎನ್ನುವುದು (ಆಳ-ಅಗಲ, ಪ್ರ.ವಾ., ಏ. 22) ನಮ್ಮ ಭಾರತೀಯರ ಹೆಮ್ಮೆ. ಆದರೆ ವಿಷಾದದ ಸಂಗತಿಯೆಂದರೆ, ಇಂತಹ ಒಂದು ಪ್ರಾಣಿಯು ಹವಾಮಾನ ವೈಪರೀತ್ಯದಿಂದ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದು. ವಾಸುಕಿ ಇಂಡಿಕಸ್ ಬದುಕಿದ್ದ ಅವಧಿಗಿಂತ ಎಷ್ಟೋ ವರ್ಷಗಳಷ್ಟು ಹಿಂದೆಯೇ ಡೈನೊಸಾರ್‌ಗಳು ಕೂಡ ಹವಾಮಾನ ವೈಪರೀತ್ಯದ ಕಾರಣದಿಂದಲೇ ಅಳಿದುಹೋದವು. ಈಗಲಾದರೂ ಮಾನವ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಇಂತಹ ಅನೇಕ ಪ್ರಾಣಿ ಪಕ್ಷಿಗಳ ಜೊತೆಗೆ ಮಾನವರು ಕೂಡ ಅಳಿದುಹೋಗುವ ಕಾಲ ಬಂದರೆ ಆಶ್ಚರ್ಯವಿಲ್ಲ.

ಭೂಮಿಯ ಮೇಲೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ. ಈ ಧರೆ ಬರೀ ಮನುಷ್ಯನ ಸ್ವಾರ್ಥಕ್ಕಾಗಿ ಅಲ್ಲ. ಬದಲಾಗಿ ಎಲ್ಲ ಜೀವಿಗಳಿಗೂ ಸಮಾನವಾಗಿ ಬದುಕುವ ಅವಕಾಶವನ್ನು ಕೊಟ್ಟಿದೆ. ನಾವೂ ಬದುಕೋಣ, ಎಲ್ಲ ಜೀವಿಗಳಿಗೂ ಬದುಕುವ ವಾತಾವರಣವನ್ನು ಉಳಿಸೋಣ.

–ರಾಜಶೇಖರ್ ಗುಬ್ಬಿ, ಮನಗೂಳಿ, ಬಸವನಬಾಗೇವಾಡಿ

***

ಚಿತ್ರದ ಹಿಂದಿನ ಆಶಯ ಮುಖ್ಯ

‌ಭಾನುವಾರದ (ಏ. 21) ಪ್ರಮುಖ ದಿನಪತ್ರಿಕೆಗಳ ಮುಖಪುಟಗಳಲ್ಲಿ ಕಾಂಗ್ರೆಸ್ ಪಕ್ಷದ ಜಾಹೀರಾತಿನಲ್ಲಿರುವ, ನೋಟು ಕತ್ತರಿಸಿದ ಸ್ಥಿತಿಯಲ್ಲಿರುವ ಚಿತ್ರಕ್ಕೆ ಪತ್ತಂಗಿ ಎಸ್. ಮುರಳಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ (ವಾ.ವಾ., ಏ. 22). ಆದರೆ ಆ ಚಿತ್ರವನ್ನು ವಾಚ್ಯವಾಗಿ ಗ್ರಹಿಸಬಾರದು. ಚಿತ್ರ ಅಥವಾ ಹೇಳಿಕೆಗಳ ಆಶಯವನ್ನಷ್ಟೇ ಗ್ರಹಿಸುವುದು ಒಳಿತು.

ಕೇಂದ್ರ ಸರ್ಕಾರವು ಕರ್ನಾಟಕದ ಜನರಿಗೆ ಚೊಂಬು ಕೊಟ್ಟಿದೆ ಎಂಬ ಕೆಪಿಸಿಸಿಯ ಜಾಹೀರಾತನ್ನು ವಾಚ್ಯವಾಗಿ ಗ್ರಹಿಸಿದರೆ, ಪ್ರತಿಯೊಬ್ಬರಿಗೂ ಒಂದೊಂದು ಚೊಂಬು ಕೊಟ್ಟು ಉಪಕಾರ ಮಾಡಿದೆ ಎಂಬ ಅರ್ಥ ಬರುತ್ತದೆ. ಆದರೆ ಆ ಹೇಳಿಕೆಯ ಅರ್ಥ, ಕೇಂದ್ರ ಸರ್ಕಾರ ಜನರಿಗೆ ಯಾವುದೇ ಅನುಕೂಲವನ್ನು ಕಲ್ಪಿಸಿಲ್ಲ ಎಂದಾಗಿರುತ್ತದೆ. ಹಾಗೆಯೇ ಕತ್ತರಿಸಿದ ನೋಟಿನ ಚಿತ್ರವುಳ್ಳ ಜಾಹೀರಾತನ್ನು ನೋಡಿದವರಿಗೆ, ಕೇಂದ್ರಕ್ಕೆ ರಾಜ್ಯವು ಜಿಎಸ್‌ಟಿ ರೂಪದಲ್ಲಿ ಕೊಡುತ್ತಿರುವ ತೆರಿಗೆ ಎಷ್ಟು, ರಾಜ್ಯಕ್ಕೆ ಕೇಂದ್ರದಿಂದ ಬರುತ್ತಿರುವ ತೆರಿಗೆ ಪಾಲು ಎಷ್ಟು ಎಂಬುದು ಸ್ಪಷ್ಟವಾಗುತ್ತದೆ. ಈ ಅರ್ಥಸ್ಪಷ್ಟತೆಗಾಗಿಯಷ್ಟೇ ನೋಟಿಗೆ ಕತ್ತರಿ ಹಾಕಿರುವ ಚಿತ್ರವನ್ನು ಕೊಡಲಾಗಿದೆ.

–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

***

ಶಿಕ್ಷಣದ ಗುಣಮಟ್ಟ ಕುಸಿತ: ಯಾರು ಹೊಣೆ?

ಪಠ್ಯೇತರ ಓದು ಒತ್ತಟ್ಟಿಗಿರಲಿ, ಸರಿಯಾದ ಕಾಗುಣಿತವೂ ಗೊತ್ತಿಲ್ಲದ ಭಾಷಾ ಪಂಡಿತರು ಪ್ರಾಧ್ಯಾಪಕರಾಗಿರುವುದು ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಕಾರಣ ಎಂಬ ಈರಪ್ಪ ಎಂ. ಕಂಬಳಿ ಅವರ ಅಭಿಪ್ರಾಯವನ್ನು (ವಾ.ವಾ., ಏ. 22) ಒಪ್ಪಲಾಗದು. ಪ್ರಾಧ್ಯಾಪಕ ಅಥವಾ ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಬೇಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕು. ಕಾಗುಣಿತ ಗೊತ್ತಿಲ್ಲದವರು ಆ ಪರೀಕ್ಷೆ ಬರೆದು ಆಯ್ಕೆಯಾಗಲು ಸಾಧ್ಯವೇ? ಸಾಧ್ಯವಾಗುವುದಾದರೆ ಅದು ಆಯ್ಕೆ ಪ್ರಕ್ರಿಯೆಯ ದೋಷ.

ಪಠ್ಯೇತರ ಓದಿಗಾಗಲಿ, ಪಠ್ಯೇತರ ಚಟುವಟಿಕೆಗಳಿಗಾಗಲಿ ಮಹತ್ವ ಕೊಡದ ನಮ್ಮ ಶೈಕ್ಷಣಿಕ ವ್ಯವಸ್ಥೆಯು ಅಂಕಗಳೇ ಮುಖ್ಯ ಎಂದು ವಿದ್ಯಾರ್ಥಿಗಳ ತಲೆಗೆ ತುಂಬಿದೆ. ಅವರು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಲು, ಶಾಲಾ ಕಾಲೇಜಿನ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು, ಅಲ್ಲಿ ಗಿಡಗಳನ್ನು ನೆಟ್ಟು ನೀರುಣಿಸಲು, ಸಾಮಾಜಿಕ ಕಳಕಳಿಯ ವ್ಯಕ್ತಿತ್ವ ಬೆಳೆಸಿಕೊಳ್ಳಲು, ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಪ್ರೇರೇಪಿಸದೇ ಇವುಗಳೆಲ್ಲಾ ವ್ಯರ್ಥವೆಂದು ಬಿಂಬಿಸಲಾಗುತ್ತಿದೆ. ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಈ ವ್ಯವಸ್ಥೆಯನ್ನು ಹಾಗೂ ವಿದ್ಯಾರ್ಥಿಗಳನ್ನು ಅಂಕ ಉತ್ಪಾದಿಸುವ ಕಾರ್ಖಾನೆಗಳನ್ನಾಗಿ ಮಾಡುತ್ತಿರುವ ಕೆಲವು ಶಿಕ್ಷಣ ಸಂಸ್ಥೆಗಳನ್ನು ಕಾರಣವನ್ನಾಗಿಸಬೇಕೇ ವಿನಾ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾಗಿರುವ ಪ್ರಾಧ್ಯಾಪಕರನ್ನಲ್ಲ.

–ರೇವಣ್ಣ ಎಂ.ಜಿ., ಕೃಷ್ಣರಾಜಪೇಟೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT