ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 23 ಏಪ್ರಿಲ್ 2024, 21:58 IST
Last Updated 23 ಏಪ್ರಿಲ್ 2024, 21:58 IST
ಅಕ್ಷರ ಗಾತ್ರ

ಚುನಾವಣಾ ಹಬ್ಬ: ಸಂಭ್ರಮದಿಂದ ಆಚರಿಸೋಣ

ಜಾತಿ–ಮತ– ಪಂಥವೆನ್ನದೆ, ಲಿಂಗಭೇದವಿಲ್ಲದೆ 18 ವರ್ಷ ಮೇಲ್ಪಟ್ಟ ಯುವಜನರಿಂದ ಹಿಡಿದು ಹಿರಿಯ ನಾಗರಿಕರವರೆಗೂ ಮತ ಚಲಾಯಿಸುವ ಹಕ್ಕನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ. ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮದಾಗಬೇಕಿದೆ. ಆಸೆ, ಆಮಿಷಗಳಿಗೆ ಒಳಗಾಗದೆ ನಿರಂಕುಶಮತಿಗಳಾಗಿ ಮತ ಹಾಕುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಪ್ರತಿ ಮತಕ್ಕೂ ಅದರದೇ ಆದ ಮಹತ್ವ ಇರುತ್ತದೆ. ಅದು, ಯೋಗ್ಯ ಜನಪ್ರತಿನಿಧಿಯ ಆಯ್ಕೆಗೆ ನೆರವಾದರೆ ಅದರ ಮೌಲ್ಯ ಇನ್ನಷ್ಟು ಹೆಚ್ಚುತ್ತದೆ ಮತ್ತು ನಮ್ಮ ಮನಃಸಾಕ್ಷಿಗೂ ಹಿತ. ಸ್ವವಿವೇಚನೆಯಿಂದ ಮತ ಚಲಾಯಿಸೋಣ. ಚುನಾವಣೆಯ ಈ ಹಬ್ಬವನ್ನು ಉತ್ಸಾಹ, ಉಲ್ಲಾಸದಿಂದ ಆಚರಿಸೋಣ. ದೇಶದ ವಿಕಾಸಕ್ಕೆ ಪೂರಕವಾಗುವಂತಹ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡೋಣ. ಈ ಸದವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳೋಣ.

–ಸೋಮನಾಥ ಡಿ., ಹಾವೇರಿ

***

ಆರ್‌ಸಿಬಿ ಸೋತಿಲ್ಲ, ಗೆದ್ದಿದೆ!

ಐಪಿಎಲ್ ಪಂದ್ಯಗಳಲ್ಲಿ ಆರ್‌ಸಿಬಿ ತಂಡದ ಪ್ರದರ್ಶನವು ಅಭಿಮಾನಿಗಳಿಗೆ ನಿರಾಸೆ ತಂದಿದೆ, ನಿಜ. ಆದರೆ ಈ ತಂಡದ ಪ್ರವರ್ತಕರು ನೀರಿನ ಬವಣೆ ಹೆಚ್ಚಾಗಿರುವ ಬೆಂಗಳೂರಿನ ಮೂರು ಕೆರೆಗಳನ್ನು ಮರು ಅಭಿವೃದ್ಧಿಗೊಳಿಸಲು ಮುಂದಾಗಿದ್ದು, ಹಸಿರು ಅಭಿಯಾನ ಯೋಜನೆಯಲ್ಲಿ ತೊಡಗಿಕೊಂಡಿದ್ದು, ಈ ಮೂಲಕ ಇಂದಿನ ಅವಶ್ಯಕತೆಗೆ ನೀಡಿದ ತುರ್ತು ಗಮನ ಶ್ಲಾಘನೀಯ. ಆರ್‌ಸಿಬಿ ಖಂಡಿತವಾಗಿ ಈ ದಿಸೆಯಲ್ಲಿ ಜನಮನ ಗೆದ್ದಿದೆ!

–ನಗರ ಗುರುದೇವ್ ಭಂಡಾರ್ಕರ್, ಹೊಸನಗರ

***

ಕಟ್ಟಬೇಕಿದೆ ಮಹಿಳಾ ಪಕ್ಷ

ಮಹಿಳಾ ಮತದಾರರಿಗೆ ನೀಡಬೇಕಾದ ಪ್ರಾಮುಖ್ಯ ಕುರಿತ ನಟರಾಜ್‌ ಹುಳಿಯಾರ್‌ ಅವರ ಲೇಖನವನ್ನು
(ಪ್ರ.ವಾ., ಏ. 23) ಓದಿದಾಗ, ಬಹುದಿನಗಳಿಂದ ಗಾಢವಾಗಿ ಕಾಡುತ್ತಿದ್ದ ವಿಚಾರಗಳು ಮುನ್ನೆಲೆಗೆ ಬಂದವು.ಪ್ರಸ್ತುತ ಭಾರತದ ಜನಸಂಖ್ಯೆಯ ಅರ್ಧದಷ್ಟು ಮತ್ತು ಮತದಾರರ ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ರಾಜಕಾರಣದಲ್ಲಿ ತೊಡಗಿಕೊಳ್ಳಲು ಹಿಂಜರಿಯುತ್ತಿರುವುದು ಪುರುಷ ರಾಜಕಾರಣಿಗಳ ಸ್ವಾರ್ಥದ ಅಬ್ಬರದಿಂದಾಗಿ, ಮಹಿಳೆಯರಲ್ಲಿ ಬೇರುಬಿಟ್ಟ ಕೀಳರಿಮೆಯಿಂದಾಗಿ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ. ಇಂಥ ಅನೇಕ ಆತಂಕಗಳಿದ್ದರೂ ಅವುಗಳನ್ನು ಕಿತ್ತೊಗೆದು ಮಹಿಳೆ ಧೈರ್ಯದಿಂದ ಮುನ್ನುಗ್ಗುವ ಮನಸ್ಸು ಮಾಡದಿದ್ದರೆ, ಆಕೆಯ ಸಮಸ್ಯೆಗಳಿಗೆ ಪರಿಹಾರಗಳು ಸಿಕ್ಕಲಾರವು ಮತ್ತು ಸಂವಿಧಾನವು ನಮಗೆ ನೀಡಿದ ಪುರುಷ ಮತ್ತು ಮಹಿಳೆಯರ ಸರಿಸಮಾನತೆಯ ಹಕ್ಕು ನಿರರ್ಥಕವಾಗುತ್ತದೆ.

ಇಂದಿನ ರಾಜಕಾರಣವು ನೈತಿಕವಾಗಿ ಅಧಃಪತನಗೊಂಡಿರುವುದಕ್ಕೆ ಇರುವ ಕಾರಣಗಳನ್ನು ಕಂಡುಕೊಂಡು, ಅವುಗಳನ್ನು ತಡೆಯಲು ಮಹಿಳೆಯರು ಹಿಂಜರಿಯದೇ ಪ್ರಯತ್ನಿಸಬೇಕು. ರಾಜಕೀಯದಲ್ಲಿ ಪುರುಷರ ಅನ್ಯಾಯಗಳ ವಿರುದ್ಧ ಹೋರಾಡುವ ಧೈರ್ಯವನ್ನು ತಂದುಕೊಳ್ಳಬೇಕು. ತನ್ನ ಮನೆಯಲ್ಲಿ ಪತಿ ಮತ್ತು ಮಕ್ಕಳ ಅನುಮತಿಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಬೇಕು. ಮಹಿಳೆಯು ದೃಢನಿರ್ಧಾರದೊಂದಿಗೆ ದೇಶದಲ್ಲಿ ಇದೇ ಮೊದಲಿಗೆ ಒಂದು ಸ್ವತಂತ್ರ ಮಹಿಳಾ ಪಕ್ಷವನ್ನು ಕಟ್ಟಬೇಕಾದ ಅನಿವಾರ್ಯ ಎಂದಿಗಿಂತಲೂ ಈಗ ತುಂಬ ಇದೆ. ಇದನ್ನು ಅರಿತು ನಮ್ಮ ಮಹಿಳೆಯರು ದಿಟ್ಟ ಹೆಜ್ಜೆ ಇಡಲು ಮುಂದಾಗಬೇಕಾಗಿದೆ.

–ಮಾಲತಿ ಪಟ್ಟಣಶೆಟ್ಟಿ, ಧಾರವಾಡ

***

ಕುದಿಯುವವರನ್ನು ಮಣಿಸುವವರು...!

‘ಕುದಿಯುವವರು ಕುದಿಯಲಿ ಉರಿಯುವವರು ಉರಿಯಲಿ, ನಿನ್ನ ಪಾಡಿಗೆ ನೀನಿರು. ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ’ ಎಂಬ ಸಿದ್ಧೇಶ್ವರ ಸ್ವಾಮಿಗಳ ಸುಭಾಷಿತ (ಪ್ರ.ಜಾ., ಏ. 23) ಇಂದಿನ ರಾಜಕೀಯ ಹಾಗೂ ಸಾಮಾಜಿಕ ವಾತಾವರಣವನ್ನು ನೋಡಿ ಹೇಳಿದಂತಿದೆ.

ಎಲ್ಲ ಪಕ್ಷಗಳ ರಾಜಕೀಯ ಧುರೀಣರು ಕುದಿಯುತ್ತಾ, ಉರಿದುಕೊಳ್ಳುತ್ತಾ ತಾವೆಲ್ಲ ಅಜರಾಮರರೆಂಬ ಭ್ರಮೆಯಲ್ಲಿ ತೇಲುತ್ತಾ ಬಾಯಿಗೆ ಬಂದಂತೆ ಮಾತನಾಡುತ್ತಾ ತಲೆಬಿಸಿ ಮಾಡಿಕೊಂಡಿದ್ದಾರೆ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುವ ಮತದಾರ ಮಾತ್ರ ಅಭ್ಯರ್ಥಿಗಳನ್ನು ಆವಿ ಮಾಡುವ, ಬೂದಿ ಮಾಡುವ ಶಕ್ತಿ ತನಗಿದೆ ಎಂಬುದು ಗೊತ್ತಿದ್ದರೂ ಎಂದೆಂದಿಗೂ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕೆನ್ನುವ ಸತ್ಯವನ್ನರಿತು ತನ್ನ ಪಾಡಿಗೆ ತಾನಿದ್ದಾನೆ ತಣ್ಣಗೆ.

–ಬಿ.ಎಲ್‌.ಎಸ್‌.ಮೂರ್ತಿ, ಬೆಂಗಳೂರು 

***

ಎದುರಾಳಿಗಳನ್ನು ಹಣಿಯಲು ಇಂಥ ಹೀನ ಕೃತ್ಯವೇ? 

ರಾಜಕೀಯ ಯಾವ ಮಟ್ಟಕ್ಕೆ ಅಧಃಪತನಗೊಂಡಿದೆ ಎಂಬುದಕ್ಕೆ, ಹಾಸನ ಜಿಲ್ಲೆಯಲ್ಲಿ ಪೆನ್‌ಡ್ರೈವ್‌ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಕೆಲವು ಹೆಣ್ಣುಮಕ್ಕಳ ಖಾಸಗಿ ಕ್ಷಣಗಳ ವಿಡಿಯೊಗಳು ಸ್ಪಷ್ಟ ನಿದರ್ಶನ. ಈ ವಿಡಿಯೊಗಳ ಮುಖ್ಯ ಗುರಿ ರಾಜಕೀಯ ಎದುರಾಳಿ ಹೌದು. ಆದರೆ ಆ ಚುನಾವಣಾ ಅಭ್ಯರ್ಥಿಗಿಂತ ಹೆಚ್ಚಾಗಿ ಇಲ್ಲಿ ಹಾನಿಗೆ ಒಳಗಾಗಿರುವವರು ಆ ವಿಡಿಯೊಗಳಲ್ಲಿರುವ ಹೆಣ್ಣುಮಕ್ಕಳು. ಅವರಿಗೆ ಸಂಬಂಧಿಸಿದ ಸರಿ ತಪ್ಪುಗಳ ಲೆಕ್ಕಾಚಾರ ಇಲ್ಲಿ ಅಪ್ರಸ್ತುತ. ತಮ್ಮ ಎದುರಾಳಿಯನ್ನು ಹಣಿಯಲು ಈ ಮಹಿಳೆಯರ ಮರ್ಯಾದೆಯನ್ನು ಏಕೆ ಬೀದಿಗೆ ತರಬೇಕು? ಅವರ ಕುಟುಂಬದವರ ಮರ್ಯಾದೆಯ ಪಾಡೇನು?

ಈ ವಿಡಿಯೊಗಳನ್ನು ಲೀಕ್ ಮಾಡಿರುವುದರ ಹಿಂದೆ ರಾಜಕೀಯ ಮುಖಂಡರ ಕೈವಾಡವನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲಾಗುವುದಿಲ್ಲ. ಎಲ್ಲಾ ಪಕ್ಷಗಳ ನಾಯಕರು ಮಹಿಳೆಯರ ಬಗ್ಗೆ, ಅವರ ಸುರಕ್ಷತೆಯ ಬಗ್ಗೆ, ಸಬಲೀಕರಣದಂತಹ ಸಂಗತಿಗಳ ಬಗ್ಗೆ ಸಕ್ಕರೆಲೇಪಿತ ಮಾತುಗಳನ್ನಾಡಿ, ತಾವೇ ಮಹಿಳೆಯರ ಉದ್ಧಾರಕರು ಎಂಬಂತೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ. ಆದರೆ ಹೀನ ಮಟ್ಟಕ್ಕೆ ಇಳಿಯುವಂತಹವರನ್ನು ತಮ್ಮ ಪಕ್ಷಗಳಿಗೆ ಸೇರಿಸಿಕೊಂಡಿರುತ್ತಾರೆ. ಈ ವಿಡಿಯೊಗಳ ಸೋರಿಕೆಯ ಹೀನ ಕೃತ್ಯದ ಹಿಂದಿರುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು.

–ಎ.ಜೆ.ಜಾವೀದ್, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT