ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 25 ಏಪ್ರಿಲ್ 2024, 20:17 IST
Last Updated 25 ಏಪ್ರಿಲ್ 2024, 20:17 IST
ಅಕ್ಷರ ಗಾತ್ರ

ಕನ್ನಡಿಗರಿಗೆ ಹುದ್ದೆ: ಸ್ವಾಗತಾರ್ಹ ಸಲಹೆ

ಕೆಲವು ಕಂಪನಿಗಳು ಕನ್ನಡದ ನೆಲದಲ್ಲಿ ಸ್ಥಾಪಿಸುವ ಉದ್ದಿಮೆಗಳಲ್ಲಿ ಅಧಿಕಾರಿಗಳ ಹುದ್ದೆಗಳಿಗೆ ಕನ್ನಡಿಗರನ್ನು
ಪರಿಗಣಿಸದಿರುವ ಕ್ರಮವನ್ನು ಹೈಕೋರ್ಟ್‌ ಟೀಕಿಸಿರುವುದು ಸರಿಯಾಗಿದೆ. ‘ಕನ್ನಡಿಗರಿಗೆ ಕನ್ನಡಿಗರಿಂದ ಆದಷ್ಟು ಅನ್ಯಾಯ ಬೇರೆಯವರಿಂದ ಆಗಿಲ್ಲ’ ಎಂಬ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರ ಮಾತನ್ನು ಉಲ್ಲೇಖಿಸುತ್ತಾ ‘ಇಂತಹ ಅನ್ಯಾಯ ಬೇರೆಲ್ಲೂ ಆಗಿಲ್ಲ’ ಎಂದು ಐಡಿಬಿಐ ಬ್ಯಾಂಕ್ ಪ್ರಕರಣದ ವಿಚಾರಣೆಯ ಕಾಲಕ್ಕೆ ಕೋರ್ಟ್‌ ಹೇಳಿರುವ ದಿಟ್ಟ ಮಾತುಗಳು ಶ್ಲಾಘನೀಯ. ಜವಾನ– ಜಾಡಮಾಲಿಯಂತಹ ಹುದ್ದೆಗಳಿಗೆ ಮಾತ್ರವಲ್ಲದೆ ಎಲ್ಲ ಹಂತದ ಹುದ್ದೆಗಳಲ್ಲೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ಸೂಚಿಸಿರುವುದು ಪ್ರಶಂಸನೀಯ.

ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ನೆಲೆಯೂರಿರುವ ಹಲವಾರು ಸ್ಥಳೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಸ್ಥಳೀಯರಿಗೆ ಕೆಳಹಂತದ ಹುದ್ದೆಗಳನ್ನಷ್ಟೇ ನೀಡುತ್ತ, ಮೇಲ್ಮಟ್ಟದ ಹುದ್ದೆಗಳನ್ನು ಹೊರರಾಜ್ಯದವರಿಗೇ  ಹೆಚ್ಚಾಗಿ ನೀಡುತ್ತಾ ಬಂದಿವೆ. ಕನ್ನಡಿಗರ ಸತತ ಅಳಲು ಅವುಗಳ ಕಿವಿಗೆ ಬಿದ್ದಿಲ್ಲ. ಈ ಕುರಿತು ಸರ್ಕಾರ ಕೂಡ ದೃಢ ನಿಲುವು ತಳೆಯದೇ ಇರುವಾಗ ಹೈಕೋರ್ಟ್‌ ನೀಡಿರುವ ಈ ಸೂಚನೆಯನ್ನು ಎಲ್ಲ ಬಹುರಾಷ್ಟ್ರೀಯ ಕಂಪನಿಗಳೂ ಅನುಸರಿಸಬೇಕು.

–ವೆಂಕಟೇಶ ಮಾಚಕನೂರ, ಧಾರವಾಡ

*****

ಕೊಬ್ಬಿದ ಬೆಕ್ಕಿಗೆ ಗಂಟೆ ಕಟ್ಟುವವರಾರು?

ಭ್ರಷ್ಟಾಚಾರದ ಬೇರು ಇರುವುದೇ ಚುನಾವಣೆಯ ಸ್ವರೂಪದಲ್ಲಿ ಎನ್ನುವ ಮಾತನ್ನು ಸತೀಶ್ ಜಿ.ಕೆ. ತೀರ್ಥಹಳ್ಳಿ ತಮ್ಮ ಲೇಖನದಲ್ಲಿ ಎಳೆಎಳೆಯಾಗಿ ವಿಶ್ಲೇಷಿಸಿದ್ದಾರೆ (ಸಂಗತ, ಏ. 25). ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೆ ಆಯ್ಕೆಯಾದ ಬಹುಪಾಲು ಜನಪ್ರತಿನಿಧಿಗಳು ಹಣದಿಂದ, ಹಣಕ್ಕಾಗಿ, ಹಣಕ್ಕೋಸ್ಕರವೇ ಜೀವನವೆಂಬ ತತ್ವವನ್ನು ಅಳವಡಿಸಿಕೊಂಡಿದ್ದಾರೆ. ಹೀಗಿರುವಾಗ, ಭ್ರಷ್ಟಾಚಾರವೆಂಬ ಬೆಕ್ಕಿಗೆ ಗಂಟೆ ಕಟ್ಟುವವರಾರು? ಈ ಮರಿ ಸಣ್ಣದಿದ್ದಾಗ ಅದರೊಡನೆ ಸರಸ ಸಲ್ಲಾಪ ಆಡುತ್ತಿದ್ದ ಇಲಿಮರಿಗಳು, ಇಂದು ಕೊಬ್ಬಿದ ಬೆಕ್ಕನ್ನು ನೋಡಿ
ಬೆಚ್ಚಿಬೀಳುವಂತಾಗಿದೆ.

ಚುನಾವಣಾ ನೀತಿ ಸಂಹಿತೆಯ ಕಡ್ಡಾಯ ಅಳವಡಿಕೆ, ಚುನಾವಣಾ ಲೋಪದೋಷಗಳ ಸುಧಾರಣೆಗೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ಜನಪ್ರತಿನಿಧಿಗಳ ಕಿವಿ ಹಿಂಡಿ ಚುನಾವಣಾ ವ್ಯವಸ್ಥೆಯನ್ನು ಸರಿಪಡಿಸುವಂತೆ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರುವ ಹೊಣೆಗಾರಿಕೆ ಪ್ರಜ್ಞಾವಂತ ನಾಗರಿಕರದ್ದಾಗಿದೆ ಎಂಬ ಅಭಿಪ್ರಾಯವು ಚರ್ಚೆಗೆ ಗ್ರಾಸವಾಗಬೇಕಿದೆ. ಇಲ್ಲವಾದಲ್ಲಿ, ಕೊಬ್ಬಿ ನಿಂತಿರುವ ಭ್ರಷ್ಟಾಚಾರವೆಂಬ ಬೆಕ್ಕು
ಪ್ರಜಾಪ್ರಭುತ್ವವನ್ನೇ ನುಂಗಿ ನೀರು ಕುಡಿಯಲು ಮುಂದಾಗಬಹುದು.

–ಪ್ರಭು ಇಸುವನಹಳ್ಳಿ, ಬೆಂಗಳೂರು

*****

ಸೌಲಭ್ಯಕ್ಕೆ ಆಗ್ರಹಿಸಬೇಕಾದರೆ...

ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದಾಗ ಮಹಾನಗರಗಳಲ್ಲಿ ಕಡಿಮೆ ಮತದಾನ ಆಗುವುದನ್ನು ಹಿಂದಿನ ಅನೇಕ ಚುನಾವಣೆಗಳ ಸಂದರ್ಭದಲ್ಲಿ ಕಂಡಿದ್ದೇವೆ. ನಗರವಾಸಿಗಳಲ್ಲಿ ಶೇಕಡಾವಾರು ಶಿಕ್ಷಿತರ ಪ್ರಮಾಣ ಅಧಿಕ. ಎಂತಹ ಸರ್ಕಾರ ಬೇಕು, ಯಾರು ಮುಖ್ಯಮಂತ್ರಿ, ಪ್ರಧಾನಿ ಆಗಬೇಕು, ನಾಗರಿಕರಿಗೆ ಎಂತಹ ಸೌಲಭ್ಯಗಳು ಬೇಕು ಎಂದು ಹೆಚ್ಚು ಚರ್ಚೆ ಮಾಡುವವರು ನಗರವಾಸಿಗಳೇ. ಲೋಕಜ್ಞಾನದಲ್ಲೂ ಅವರೇ ಮುಂದೆ. ನಾಗರಿಕ ಸೌಕರ್ಯಗಳನ್ನು ಅನುಭವಿಸುವವರಲ್ಲಿ ಅವರಿಗೆ ಅಗ್ರಸ್ಥಾನ. ಆದರೂ ಮತದಾನದ ದಿನ ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡದಿರುವುದು ನೈತಿಕವಾಗಿ ಹಾಗೂ ಸಾಂವಿಧಾನಿಕವಾಗಿ ಸಾಧುವಲ್ಲ. ಹಾಗಾಗಿ, ವಿದ್ಯಾವಂತ ನಗರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಅಧಿಕ ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ಸಂವಿಧಾನದ ಘನತೆಯನ್ನು ಎತ್ತಿ ಹಿಡಿದು ಚುನಾವಣಾ ಹಬ್ಬವನ್ನು ಆಚರಿಸಬೇಕಿದೆ. 

ಈ ಬಾರಿ ರಾಜ್ಯದಲ್ಲಿ ತೀವ್ರ ಬರ ಕಾಡುತ್ತಿರುವ ಸಂದರ್ಭದಲ್ಲಿ ಚುನಾವಣೆ ಬಂದಿದ್ದು, ಲಕ್ಷಾಂತರ ಮಂದಿ ಜೀವನ ನಿರ್ವಹಣೆಗೆ ಪರ ಊರುಗಳಿಗೆ ವಲಸೆ ಹೋಗಿದ್ದಾರೆ. ಈ ಪ್ರಯುಕ್ತ ಗ್ರಾಮೀಣ ಭಾಗದಲ್ಲೂ ಮತದಾನದ ಪ್ರಮಾಣದಲ್ಲಿ ಇಳಿಕೆ ಆಗುವ ಸಂಭವವಿದೆ. ಸಮಸ್ಯೆ ಏನೇ ಇರಲಿ, ಎಲ್ಲಾ ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಅಮೂಲ್ಯ ಮತ ಚಲಾಯಿಸುವ ಮೂಲಕ ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಆಗಮಾತ್ರ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಆಗ್ರಹಪೂರ್ವಕವಾಗಿ ಕೇಳಲು ಪ್ರತಿ ಮತದಾರನಿಗೆ ನೈತಿಕ ಹಾಗೂ ಸಂವಿಧಾನಬದ್ಧ ಹಕ್ಕು ಇರಲು ಸಾಧ್ಯ. 

–ಎಂ.ಜಿ.ರಂಗಸ್ವಾಮಿ, ಹಿರಿಯೂರು 

*****

ನೌಕರ ವರ್ಗದಲ್ಲಿ ಆಗಬೇಕಿದೆ ಸುಧಾರಣೆ

ನ್ಯಾಯಾಲಯಗಳ ಆದೇಶ ಪಾಲನೆಯಲ್ಲಿ ಸರ್ಕಾರಿ ಅಧಿಕಾರಿಗಳು ತೋರುವ ನಿರಾಸಕ್ತಿಯ ಬಗ್ಗೆ ಹೈಕೋರ್ಟ್‌ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವುದು ಸ್ವಾಗತಾರ್ಹ. ಇದು, ನ್ಯಾಯಾಲಯದ ಆದೇಶಗಳ ಬಗೆಗಿನ ನೌಕರರ ಮನೋಧೋರಣೆಯನ್ನು ಸೂಚಿಸುತ್ತದೆ. ಇತ್ತೀಚೆಗೆ ಕೆಲ ಸರ್ಕಾರಿ ನೌಕರರು ಆಕ್ಷೇಪಗಳನ್ನು ಮಾಡುವುದೇ ತಮ್ಮ ಸೇವೆ ಎನ್ನುವಂತಹ ಮನಃಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ.

ಸಾರ್ವಜನಿಕ ಸೇವೆ ಸಲ್ಲಿಸಲು ನಿಯಮಗಳು ಇರುವುದನ್ನು ಇವರು ಒಪ್ಪಿಕೊಳ್ಳುವುದಿಲ್ಲ. ಹೆಚ್ಚು ಹೆಚ್ಚು ಆಕ್ಷೇಪಗಳನ್ನು ಎತ್ತುವ ನೌಕರ ಬಹು ತಿಳಿದವ ಎನ್ನುವ ಮಾತು ಕೆಲ ಇಲಾಖೆಗಳಲ್ಲಿ ಪ್ರಚಲಿತದಲ್ಲಿದೆ. ಸುಗಮ ಆಡಳಿತಕ್ಕೆ ನಿಯಮಗಳಿರುವುದು ಅನಿವಾರ್ಯ. ಆದರೆ ಇದನ್ನೇ ನೆಪ ಮಾಡಿಕೊಂಡು ಸಾರ್ವಜನಿಕರಿಗೆ, ಇತರ ನೌಕರರಿಗೆ ಮಾನಸಿಕ ಕಿರಿಕಿರಿ ಉಂಟುಮಾಡುವುದು ಅಕ್ಷಮ್ಯ.

ನ್ಯಾಯಾಲಯಗಳ ಆದೇಶಗಳಲ್ಲಿಯೂ ಅರೆಕೊರೆ ಹುಡುಕಿ ಆದೇಶಗಳ ಪಾಲನೆಯಲ್ಲಿ ಕಾಲಹರಣ, ತಾತ್ಸಾರ ಮನೋಭಾವ, ಕುಟಿಲ ಬುದ್ಧಿವಂತಿಕೆ ಪ್ರದರ್ಶಿಸುವ ನೌಕರ ವರ್ಗದ ಮನೋಭಾವದಲ್ಲಿ ಅತ್ಯಗತ್ಯವಾಗಿ ಸುಧಾರಣೆ ಆಗಬೇಕಾಗಿದೆ. ರಾಜ್ಯದಲ್ಲಿ ಇತ್ತೀಚೆಗೆ ಪಹಣಿಯೊಂದರಲ್ಲಿನ ಸಣ್ಣ ದೋಷ ಸರಿಪಡಿಸಲು ಸಹ ಹೈಕೋರ್ಟ್‌ನಿಂದ ಆದೇಶ ಮಾಡಿಸಿಕೊಂಡ ಬಗ್ಗೆ ವರದಿಯಾಗಿದೆ. ಇಲ್ಲಿ ಕೆಳ ಹಂತದ ನೌಕರರ ತಾತ್ಸಾರ ಮತ್ತು ಸಂಕುಚಿತ ಮನೋಭಾವದ ಜೊತೆಗೆ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಇರುವುದನ್ನೂ ವ್ಯವಸ್ಥೆ ಅರಿಯಬೇಕಿದೆ.

–ತಿಮ್ಮೇಶ ಮುಸ್ಟೂರು, ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT