ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 1 ಜುಲೈ 2024, 19:16 IST
Last Updated 1 ಜುಲೈ 2024, 19:16 IST
ಅಕ್ಷರ ಗಾತ್ರ

ಭಕ್ತಿ ಭಂಡಾರಕ್ಕಿಂತ, ಬಟ್ಟೆ ಭಂಡಾರವೇ ಜಾಸ್ತಿ

ದೀಪಾ ಫಡ್ಕೆ ಅವರು ಬರೆದ ‘ನಿಜ ಭಕ್ತಿಯಲ್ಲ, ಕಣ್ಕಟ್ಟಿನ ಆಚರಣೆ’ ಎಂಬ ಲೇಖನವನ್ನು (ಸಂಗತ, ಜೂನ್ 27) ಓದಿದ ನಂತರ ಮನಸ್ಸು ಆಲೋಚನೆಗೆ ತೊಡಗಿತು. ಬಟ್ಟೆ ಭಂಡಾರವನ್ನು ದೇವಸ್ಥಾನಗಳಲ್ಲಿ, ಹರಿಯುವ ನದಿ ತೊರೆಗಳ ಬದಿಗಳಲ್ಲಿ ನೋಡಿ, ಇದೇನು ಭಕ್ತಿಯೋ ಅಥವಾ ಪರಿಸರಕ್ಕೆ ಕುತ್ತೋ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತು.

ಇಂತಹ ಬೇಜವಾಬ್ದಾರಿಯ ನಡೆಗೆ ಉತ್ತರ ಕರ್ನಾಟಕದ ಪ್ರಸಿದ್ಧ ಕ್ಷೇತ್ರವಾದ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಹತ್ತಿರದ ಎಣಗೊಂಡ ಸಾಕ್ಷಿ. ಇಲ್ಲಿ ಇಂತಹ ಬಟ್ಟೆಗಳ ರಾಶಿಯೇ ಬಿದ್ದಿರುತ್ತದೆ. ಅದನ್ನು ವಿಲೇವಾರಿ ಮಾಡಲು ಸಿಬ್ಬಂದಿ ಹರಸಾಹಸಪಡುತ್ತಾರೆ. ವಿದ್ಯಾವಂತ, ಬುದ್ಧಿವಂತ ಮಹಾಜನರೇ ಹೀಗೆ ಮಾಡಿದರೆ ಹೇಗೆ? ನಮ್ಮ ಸುತ್ತಲಿನ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳುವುದನ್ನು ಬಿಟ್ಟು, ಇರುವ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅಲ್ಲವೇ?

–ಶಕುಂತಲಾ ಲಕ್ಷ್ಮಣ, ಬೆಂಗಳೂರು

****

ಮದುವೆ ಖರ್ಚು: ಮಿತಿ ಅರಿಯೋಣ

ಭಾರತದಲ್ಲಿ ಮದುವೆಗೆ ಮಾಡುವ ವೆಚ್ಚವು ಶಿಕ್ಷಣಕ್ಕೆ ಮಾಡುವ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚಿದೆ ಎಂದು ವರದಿಯೊಂದು ಹೇಳಿದೆ (ಪ್ರ.ವಾ., ಜುಲೈ 1). ನನ್ನ ಸ್ನೇಹಿತನೊಬ್ಬ ತನ್ನ ಮಗಳ ಮದುವೆಯನ್ನು ಇತ್ತೀಚಿಗೆ ಸುಮಾರು ₹20 ಲಕ್ಷ  ಖರ್ಚು ಮಾಡಿ ಅದ್ದೂರಿಯಾಗಿ ಮಾಡಿದ. ಮದುವೆಯೆಂದರೆ ಸುಮಾರು ಒಂದು ವಾರದ ಕಾರ್ಯಕ್ರಮ. ಮದುವೆಯ ಹಿಂದಿನ ದಿನ ಸತ್ಯನಾರಾಯಣ ವ್ರತ, ಮದುವೆ, ಹುಡುಗನ ಮನೆಯ ನೆಂಟರ ಊಟ, ಹುಡುಗಿ ಮನೆಯ ನೆಂಟರ ಊಟ, ಬೀಗರ ಶಾಸ್ತ್ರ ಹೀಗೆ ಹತ್ತಿರದ ಸಂಬಂಧಿಕರಿಗೆ ಅದು ಒಂದು ವಾರದ ಕಾರ್ಯಕ್ರಮ. ಬಂಗಾರ, ಬಟ್ಟೆ ಮುಂತಾದವುಗಳಿಗೆ ಭರ್ಜರಿಯಾಗಿಯೇ ಹಣ ಖರ್ಚು ಮಾಡಿದ್ದ. ಮದುವೆಗೆ ಮೊದಲು ಸುಮಾರು ₹1 ಕೋಟಿ ವೆಚ್ಚ ಮಾಡಿ ಹೊಸ ಮನೆ ಕಟ್ಟಿದ್ದ. ಮನೆಗಾಗಿ ಕೂಡಿಟ್ಟಿದ್ದ ಹಣ ಖರ್ಚಾಗಿ ಆತನಿಗೆ ಸಾಲವೂ ಆಗಿತ್ತು. ಇವನ್ನೆಲ್ಲಾ ನಿಭಾಯಿಸುವಷ್ಟು ಆತ ಶ್ರೀಮಂತನೇನಲ್ಲ. ಆತನಿಗೆ ಅಡಿಕೆಯಿಂದ ಹೆಚ್ಚೆಂದರೆ ವರ್ಷಕ್ಕೆ ₹8 ಲಕ್ಷ ಆದಾಯ ಇರಬಹುದು. ಆತನಿಗೆ ಒಬ್ಬ ಮಗ, ಒಬ್ಬಳು ಮಗಳು.

ಅಡಿಕೆ ಹೊರತುಪಡಿಸಿ ಬೇರೆ ಆದಾಯ ಇಲ್ಲ. ಇಂತಹ ಮಧ್ಯಮ ವರ್ಗದವನೊಬ್ಬ ಒಂದೇ ಬಾರಿಗೆ ದೊಡ್ಡ ಮನೆ ಕಟ್ಟಿ, ಭರ್ಜರಿಯಾಗಿ ಮದುವೆ ಮಾಡುವುದು ಹುಡುಗಾಟವೇ?! ಇದು ನನ್ನಲ್ಲಿ ಕುತೂಹಲ ಮೂಡಿಸಿದ ಪ್ರಶ್ನೆ. ‘ಅಲ್ಲಾ ಮಾರಾಯ, ನೀನು ಇಷ್ಟೆಲ್ಲಾ ಕಾರುಬಾರು ಹೇಗೆ ಮಾಡಿದೆ’ ಎಂದು ನಾನು ಒಂದು ದಿನ ಆತನನ್ನು ಕೇಳಿದೆ. ‘ನಾಲ್ಕೈದು ಅಡಿಕೆ ಮಂಡಿಗಳಲ್ಲಿ ಅಡಿಕೆ ಕೊಡ್ತೀನಿ ಅಂತ ಮದುವೆಗೆ ಒಂದಿಪ್ಪತ್ತು ಲಕ್ಷ ಸಾಲ ಮಾಡಿದ್ದೇನೆ’ ಎಂದ. ‘ಹೇಗೆ ಆ ಸಾಲ ತೀರಿಸ್ತೀಯ’ ಎಂದು ಕೇಳಿದಾಗ, ‘ದೇವರಿಗೇ ಗೊತ್ತು’ ಎಂದು ಕೈ ಮುಗಿದ. ಮದುವೆ ಸಮಾರಂಭಗಳಿಗೆ ಅನಗತ್ಯವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊನೆಗೆ ಸಾಲ ತೀರಿಸಲಾಗದೇ ಪರದಾಡುವವರು ಇದ್ದಾರೆ. ಆರ್ಥಿಕ ಮಿತಿಗಳನ್ನು ಅರಿತು ಬದುಕಿದರೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದಲ್ಲವೇ?!

–ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮುತ್ತೂರು, ಕೊಪ್ಪ

****

ಭತ್ಯೆ ಬೇಕು, ಬದ್ಧತೆಯೂ ಬೇಕು

ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕಾಲಕಾಲಕ್ಕೆ ನಡೆಯುತ್ತದೆ. ಹಾಗೆಯೇ ಬೆಲೆ ಸೂಚ್ಯಂಕ ಆಧರಿಸಿ ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ದೊರೆಯುತ್ತದೆ. ವೇತನ ಪರಿಷ್ಕರಣೆಗಾಗಿ ಒಂದು ಆಯೋಗ ರಚಿಸಿ, ಸೂತ್ರಗಳನ್ನು ರೂಪಿಸಲಾಗುತ್ತದೆ. ನೌಕರರ ಸಂಘಟನೆಗಳು ಆಗಾಗ್ಗೆ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಡುತ್ತವೆ. ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯಗಳಲ್ಲಿನ ವೇತನದ ಪ್ರಮಾಣ ಗಮನಿಸಿ ಸಮಾನ ವೇತನ ಮತ್ತು ಸೌಲಭ್ಯಗಳಿಗೆ ಹಕ್ಕೊತ್ತಾಯ ಮಾಡುತ್ತವೆ.

ವೇತನ ಏರಿಕೆ ಮಾಡುವಾಗ, ನೌಕರರ ಕಾರ್ಯಕ್ಷಮತೆಯು ಹೆಚ್ಚಳ ಆಗಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಾಮರ್ಶಿಸಿ, ಅದರ ಬಗ್ಗೆ ಅಗತ್ಯ ಶಿಫಾರಸುಗಳನ್ನು ಮಾಡಲು ಆಗದೇ? ಬೇಡಿಕೆ ಈಡೇರಿಕೆಗೆ ಚಳವಳಿ ಮಾಡುವ ಸಂಘಟನೆಗಳು ಆತ್ಮವಿಮರ್ಶೆ ಮಾಡಿಕೊಳ್ಳುವುದು ಬೇಡವೇ? ವೇತನ ಮತ್ತು ಭತ್ಯೆಗಳನ್ನು ಬದ್ಧತೆ ಮತ್ತು ಹೊಣೆಗಾರಿಕೆಗಳ ಜೊತೆ ಜೋಡಿಸುವ ಅಗತ್ಯ ಇದೆ.

–ಟಿ.ವಿ ನಾಗರಾಜ, ಬೆಂಗಳೂರು

****

ಕನ್ನಡ ಬೋಧನೆ: ತಡವಾದರೂ ಸ್ವಾಗತಾರ್ಹ

ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ಅನುಸರಿಸುವ ಎಲ್ಲ ಖಾಸಗಿ ಶಾಲೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಕಲಿಕೆಯನ್ನು 2015ರ ನಿಯಮಗಳ ಅನ್ವಯ ಕಡ್ಡಾಯಗೊಳಿಸಿ ಸರ್ಕಾರ ಕೈಗೊಂಡಿರುವ ಕ್ರಮ ತಡವಾಗಿದೆಯಾದರೂ ಸ್ವಾಗತಾರ್ಹ. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ಕಡ್ಡಾಯ ಕಲಿಕೆ ವಿಷಯವು 2014ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಹಿನ್ನಡೆ ಅನುಭವಿಸುವಂತಾಯಿತು.

ಈಗ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆಗಿಂತಲೂ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ದೇಸಿ ಭಾಷೆಗಳನ್ನು ಬಲಪಡಿಸಲು ಕೇಂದ್ರ ಸರ್ಕಾರವು ಅಗತ್ಯ ಸಾಂವಿಧಾನಿಕ ಬದಲಾವಣೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು.

ಆದರೆ ಅದರ ಒಲವು ಸಂಸ್ಕೃತ ಹಾಗೂ ಹಿಂದಿ ಭಾಷೆಗಳ ಕಡೆ ಮಾತ್ರ ಇದೆ ಎಂಬಂತೆ ಕಾಣುತ್ತಿದೆ. ದೇಸಿ ಭಾಷೆಗಳಲ್ಲಿ ಕಲಿಕೆಯು ಹಿನ್ನೆಲೆಗೆ ಸರಿದರೆ ಭಾರತದ ಬಹುತ್ವಕ್ಕೆ ಮತ್ತು ಸೃಜನಶೀಲತೆಗೆ ಧಕ್ಕೆ ಉಂಟಾಗಬಹುದೆಂಬ ಕನಿಷ್ಠ ಕಾಳಜಿಯೂ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಇಲ್ಲವಾಯಿತು.

ಈ ದೃಷ್ಟಿಯಿಂದ, ಈಗ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮವು ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಕೈಗೊಳ್ಳಬಹುದಾದ ಒಂದು ಕನಿಷ್ಠ ಕ್ರಮವಾಗಿದೆ. ಸರ್ಕಾರದ ಈ ಕ್ರಮಕ್ಕೆ ಕಾನೂನಿನ ಮೂಲಕ ಅಡೆತಡೆ ಸೃಷ್ಟಿಸುವ ಸಾಧ್ಯತೆ ಇದ್ದೇ ಇದೆ. ಆದರೆ ಸರ್ಕಾರವು ನೀತಿ ನಿರೂಪಣೆಯ ಈ ವಿಷಯದಲ್ಲಿ ದೃಢ ಮತ್ತು ಜವಾಬ್ದಾರಿಯುತ ನಿಲುವು ತಾಳಿ ನಿಯಮಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರುವುದು ಅತಿ ಅವಶ್ಯಕ.

–ವೆಂಕಟೇಶ ಮಾಚಕನೂರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT