ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 3 ಜುಲೈ 2024, 20:50 IST
Last Updated 3 ಜುಲೈ 2024, 20:50 IST
ಅಕ್ಷರ ಗಾತ್ರ

ಹಾಥರಸ್: ಈ ಸಾವು ನ್ಯಾಯವೇ?

ಉತ್ತರಪ್ರದೇಶದ ಹಾಥರಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಭೋಲೆಬಾಬಾ ಎನ್ನುವವರ ಭಾಷಣ ಕೇಳುವುದಕ್ಕೆಂದು ಸೇರಿದ್ದ ಜನರಲ್ಲಿ ಹಲವರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು, ಪುಟ್ಟ ಮಕ್ಕಳು. ಇದು ನಾಗರಿಕ ಸಮಾಜ ತಲೆ ತಗ್ಗಿಸಬೇಕಾದಂತಹ ಘಟನೆ. ಕಾಲ್ತುಳಿತಕ್ಕೆ ನೂರಾರು ಮಂದಿ ಬಲಿಯಾಗಿದ್ದಾರೆ ಎನ್ನುವುದಾದರೆ ಇದು ಯಾವ ಬಗೆಯ ಸತ್ಸಂಗ? ಈ ದುರ್ಘಟನೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ನೈತಿಕ ಜವಾಬ್ದಾರಿ ಹೊರಬೇಕು. ತಮ್ಮ ಜೀವ ಉಳಿದರೆ ಸಾಕೆಂದು ಹಲವರು ಮೃಗಗಳಂತೆ, ಕೆಳಕ್ಕೆ ಬಿದ್ದವರ ಮೇಲೆ ಕಾಲಿಟ್ಟು ಹೊರಬಂದರು ಎಂಬುದನ್ನು ತಿಳಿದು ಮನಸ್ಸಿಗೆ ಬಹಳ ನೋವಾಯಿತು. 

–ಈರಪ್ಪ ಎಂ. ಕಂಬಳಿ, ಬೆಂಗಳೂರು

***

ಜುಗಾರಿ ಕ್ರಾಸ್ ನೆನಪಾಯಿತು

‘ಜನಾದೇಶದ ಸಂದೇಶ ಮರೆತ ಕಾಂಗ್ರೆಸ್’ ಎನ್ನುವ ನಾರಾಯಣ ಎ. ಅವರ ಲೇಖನ (ಪ್ರ.ವಾ., ಜುಲೈ 3) ಓದಿದಾಗ ಪೂರ್ಣಚಂದ್ರ ತೇಜಸ್ವಿಯವರು ‘ಜುಗಾರಿ ಕ್ರಾಸ್’ ಕಾದಂಬರಿಯಲ್ಲಿ ಬರೆದ ಕೆಲವು ಸಾಲುಗಳು ಇಂದಿಗೂ ಪ್ರಸ್ತುತ ಅನ್ನಿಸಿತು. ಆ ಸಾಲುಗಳು ಹೀಗಿವೆ: ‘ದುಷ್ಟರು ಕಷ್ಟಕ್ಕೆ ಸಿಕ್ಕಿಕೊಂಡಾಗ, ಕಳ್ಳರಿಗೆ ಶಿಕ್ಷೆಯಾದಾಗ ಕೊನೆಗೂ ಸತ್ಯಕ್ಕೆ ಜಯವಾಗಿದೆ ಎಂದು ಜನ ನಂಬುತ್ತಾರೆ. ಆದರೆ ವಾಸ್ತವವನ್ನು ಗಮನಿಸಿದಾಗ ದುಷ್ಟರಿಗೆ ಶಿಕ್ಷೆ ಆಗಿರುವುದು ನ್ಯಾಯ, ಧರ್ಮದಿಂದ ಅಲ್ಲ, ಅದಕ್ಕೆ ಇನ್ನೊಬ್ಬ ದೊಡ್ಡ ದುಷ್ಟನೇ ಕಾರಣ ಎಂಬುದು ಕ್ರಮೇಣ ಅರಿವಾಗುತ್ತದೆ. ದುಷ್ಟರನ್ನು ದೊಡ್ಡ ದುಷ್ಟರು, ಕೇಡಿಗಳನ್ನು ದೊಡ್ಡ ಕೇಡಿಗಳೂ, ಪಾತಕಿಗಳನ್ನು ದೊಡ್ಡ ಪಾತಕಿಗಳು ಬಲಿ ಹಾಕುವುದನ್ನು ಧರ್ಮ ಪ್ರತಿಷ್ಠಾಪನೆ ಎಂದು ಜನ ತಾತ್ಕಾಲಿಕವಾಗಿ ನಂಬುತ್ತಾರೆ. ಆಮೇಲೆ ಅವರಿಗೆ ಭ್ರಮನಿರಸನವಾಗುತ್ತದೆ. ಆಗ ಕಳೆದುಹೋದ ಕಾಲವೇ ಎಷ್ಟೋ ವಾಸಿ ಇತ್ತೆಂದು ಜನ ಯೋಚಿಸಲು ಪ್ರಾರಂಭಿಸುತ್ತಾರೆ’.

–ಟಿ. ಜಯರಾಂ, ಕೋಲಾರ

***

ಕೇಂದ್ರೀಕೃತ ಪರೀಕ್ಷೆ ಬೇಕೇ?

ವೈದ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಆಯೋಜಿಸಿದ್ದ ನೀಟ್ ಪರೀಕ್ಷೆಯನ್ನು ಕೊನೆ ಕ್ಷಣದಲ್ಲಿ ಮುಂದೂಡಿದ್ದರಿಂದ ವಿದ್ಯಾರ್ಥಿಗಳು, ಪೋಷಕರು ಅನುಭವಿಸಿದ ದುಗುಡ, ಆತಂಕ, ಮಾನಸಿಕ ಯಾತನೆಗಳನ್ನು ಡಾ. ವಿನಯ ಶ್ರೀನಿವಾಸ್ ಅವರು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ (ಪ್ರ.ವಾ., ಜೂನ್ 29). ಒಂದು ದೇಶ, ಒಂದು ತೆರಿಗೆ ಎನ್ನುವ ವ್ಯವಸ್ಥೆಯೇನೋ ಸರಿ ಇರಬಹುದು. ಆದರೆ ಒಂದು ದೇಶ, ಒಂದು ಪರೀಕ್ಷೆ ವ್ಯವಸ್ಥೆಯು ಸರಿಯೇ ಎಂಬ ವಿಚಾರ ಹೆಚ್ಚು ಚರ್ಚೆಗೆ ಒಳಗಾಗಬೇಕಿದೆ. ನಾವು ವೈದ್ಯಕೀಯ ಪದವಿ ಪಡೆದ ಸಂದರ್ಭದಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯಲು ರಾಜ್ಯದ ಸಾಮಾನ್ಯ ಪ್ರವೇಶ ಪರೀಕ್ಷೆ, ಅಖಿಲ ಭಾರತ ಪ್ರವೇಶ ಪರೀಕ್ಷೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಡೆಸುವ ಪರೀಕ್ಷೆ ಸೇರಿದಂತೆ ಬೇರೆ ಬೇರೆ ಪರೀಕ್ಷೆಗಳು ಇರುತ್ತಿದ್ದವು.

ಯಾವುದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಒಂದು ಪರೀಕ್ಷೆ ಸರಿಯಾಗದೆ ಇದ್ದಾಗ ಇನ್ನೊಂದು ಅವಕಾಶ ಇರುತ್ತಿತ್ತು. ಆದರೆ ಈಗ ಒಂದು ಪರೀಕ್ಷೆ ಸರಿಯಾಗದೆ ಇದ್ದರೆ ಮತ್ತೆ ಅವಕಾಶ ಸಿಗಬೇಕು ಎಂದಾದರೆ ಮತ್ತೊಂದು ವರ್ಷ ಕಾಯಬೇಕಾಗುತ್ತದೆ. ಇದು ಅರ್ಹ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕಡಿಮೆ ಮಾಡುವುದಲ್ಲದೆ ಅವರ ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತದೆ. ಜನಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರ ಈ ವಿಷಯಯವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಮರುವಿಚಾರ ಮಾಡಬೇಕಿದೆ.

–ಡಾ. ರಾಜಶೇಖರ ವಿ. ಪಾಟೀಲ್, ಹುಬ್ಬಳ್ಳಿ

***

ನೂತನ ಕ್ರಿಮಿನಲ್ ಕಾನೂನು: ಜನಜಾಗೃತಿ ಅಗತ್ಯ

ದೇಶದಲ್ಲಿ ಜುಲೈ 1ರಿಂದ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದಂತೆ ಮೂರು ಹೊಸ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ಕಾನೂನುಗಳಲ್ಲಿ ಸ್ವದೇಶಿ ಪರಿಕಲ್ಪನೆಯನ್ನು ಅಳವಡಿಸಿಕೊಂಡಿರುವುದು, ‘ದಂಡ’ದ ಬದಲು ‘ನ್ಯಾಯ’ಕ್ಕೆ ಒತ್ತು ನೀಡಿರುವುದು ಸ್ವಾಗತಾರ್ಹ. ಆದರೆ, ನಮ್ಮಲ್ಲಿರುವ ಎಲ್ಲ ಪೋಲಿಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಈ ಕಾನೂನುಗಳಲ್ಲಿ ಇರುವ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆಯೇ ಎಂಬುದು ಮುಖ್ಯ. ಕಾನೂನುಗಳ ಅನುಷ್ಠಾನಕ್ಕೆ ಮೊದಲು ಅಗತ್ಯ ತರಬೇತಿಯನ್ನು ಬೆರಳೆಣಿಕೆಯಷ್ಟು ಅಧಿಕಾರಿಗಳಿಗೆ ‌ಮಾತ್ರ ನೀಡಿರಬಹುದು. ಆದರೆ ಜನಸಾಮಾನ್ಯರಿಗೆ ಯಾವುದು ಸರಿ, ಯಾವುದು ತಪ್ಪು, ಯಾವ ನಿಯಮ ಬದಲಾವಣೆಯಾಗಿದೆ ಎಂಬುದರ ಬಗ್ಗೆ ತಿಳಿವಳಿಕೆ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಕಾನೂನು ಪಾಲಿಸಬೇಕಿರುವ ಜನರಿಗೂ ಆ ಕಾನೂನು ಅನುಷ್ಠಾನಕ್ಕೆ ತರುವ ಹೊಣೆ ಇರುವ ಪೋಲಿಸ್ ಸಿಬ್ಬಂದಿಗೂ ಕಾನೂನಿನ ಬಗ್ಗೆ ಸ್ಪಷ್ಟ ಮಾಹಿತಿ ಇದ್ದಾಗ ಮಾತ್ರ ವ್ಯವಸ್ಥೆ ಸರಿಯಾಗಿ ನಡೆಯಲು ಸಾಧ್ಯ. ಹೊಸ ಕಾನೂನಿನ ಪ್ರತಿಗಳನ್ನು ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟಿಸಿ, ಆ ಪ್ರತಿಗಳು ಎಲ್ಲರ ಕೈಗೂ ಸಿಗುವಂತೆ ಮಾಡಿ ಜನಜಾಗೃತಿ ಮೂಡಿಸುವುದು ಸೂಕ್ತ‌.

ಸುರೇಂದ್ರ ಪೈ, ಭಟ್ಕಳ

***

ವರದಿ ಬಂದ ನಂತರ ಎಚ್ಚರವಾಗುವ ಪ್ರಜ್ಞೆ!

ಬೀದರ್ ಮತ್ತು ಹುಮನಾಬಾದ್ ತಾಲ್ಲೂಕುಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಕೋಟ್ಯಂತರ ರೂಪಾಯಿ ನಷ್ಟ ಹಾಗೂ ಪರಿಸರ ನಾಶದ ಕುರಿತ ವರದಿ ಗಾಬರಿ ಮೂಡಿಸಿತು (ಪ್ರ.ವಾ., ಜುಲೈ 3).

ಅಕ್ರಮ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದರೂ ಮುರಂ ಖನಿಜವು ಅಕ್ರಮವಾಗಿ ಸಾಗಾಟವಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳಿಗೆ ಅದರ ಸುಳಿವೇ ಗೋಚರಿಸದಿರುವುದು ಆಶ್ಚರ್ಯಕರ. ಮಾಧ್ಯಮಗಳಲ್ಲಿ ಸುದ್ದಿ ಬಂದ ನಂತರವೇ ಎಚ್ಚೆತ್ತುಕೊಳ್ಳುವ ಅವರ ಕರ್ತವ್ಯ ಪ್ರಜ್ಞೆ ಹಾಗೂ ದಕ್ಷತೆ ಪ್ರಶ್ನಾರ್ಹ. ಗಣಿಗಾರಿಕೆ ನಡೆಸುವವರ ಹಿಂದೆ ಕೆಲವು ಪ್ರಭಾವಿಗಳು ನಿಂತಿರುವುದರಿಂದ, ಅಧಿಕಾರಿಗಳು ಅಸಹಾಯಕರಾಗಿದ್ದಾರೆಂಬ ಸ್ಥಳೀಯರ ದೂರಿನಲ್ಲಿ ಹುರುಳಿಲ್ಲದಿಲ್ಲ. ಅಕ್ರಮ ಗಣಿಗಾರಿಕೆಗೆ ತಕ್ಷಣ ಕಡಿವಾಣ ಹಾಕದಿದ್ದರೆ, ಬೀದರ್ ಜೊತೆಗೆ ಮತ್ತಷ್ಟು ಜಿಲ್ಲೆಗಳೂ ಬಳ್ಳಾರಿ ಆಗುವ ದಿನಗಳು ಬಹಳ ದೂರವಿಲ್ಲ.

–ತಿಪ್ಪೂರು ಪುಟ್ಟೇಗೌಡ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT