ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಅಂತ ಗುರುತಿಸಿ

Last Updated 16 ಅಕ್ಟೋಬರ್ 2018, 16:57 IST
ಅಕ್ಷರ ಗಾತ್ರ

ಗ್ರಾಮೀಣ ಮಹಿಳಾ ದಿನಾಚರಣೆ ಪ್ರಯುಕ್ತ ಬಹಳಷ್ಟು ಸಾಧಕಿಯರನ್ನು ಗುರುತಿಸಿ ಬರಹದ ಮೂಲಕ ಅವರನ್ನು ಗೌರವಿಸಲಾಗಿದೆ (ಪ್ರ.ವಾ., ಅ. 15). ಇದಕ್ಕಾಗಿ ‘ಪ್ರಜಾವಾಣಿ’ಗೆ ಅಭಿನಂದನೆ. ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನವನ್ನು ಭಾರತ ಸರ್ಕಾರವು ಮಹಿಳಾ ಕಿಸಾನ್ ದಿವಸ್ ಅಥವಾ ಮಹಿಳಾ ರೈತ ದಿನ ಎಂದು ಆಚರಿಸಬೇಕೆಂದು ಕಳೆದ ವರ್ಷವೇ ಘೋಷಿಸಿದೆ. ಈ ಕುರಿತಾಗಿ ಇದೇ ಅಕ್ಟೋಬರ್ 3ರಂದು ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವಾಲಯದಿಂದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವೊಂದು ಹೋಗಿದೆ.

ಜಗತ್ತಿನಾದ್ಯಂತ ಕೃಷಿ ಕ್ಷೇತ್ರದ ಶೇ 66ರಷ್ಟು ಕೆಲಸವನ್ನು ಮಹಿಳೆಯರೇ ಪೂರೈಸುತ್ತಾರೆ. ಜಗತ್ತಿನ ಆಹಾರ ಉತ್ಪಾದನೆಯಲ್ಲಿ ಅವರದ್ದು ಶೇ 50ರಷ್ಟು ಪಾಲು. ಭಾರತದಲ್ಲಿ ಶೇ 24ರಷ್ಟು ಗಂಡಸರು ಭೂಮಿಯ ಒಡೆತನ ಹೊಂದಿದ್ದರೆ, ಮಹಿಳೆಯರಲ್ಲಿ ಶೇ 4ರಷ್ಟು ಮಂದಿಗೆ ಮಾತ್ರ ಭೂಮಿ ಒಡೆತನ ಸಿಕ್ಕಿದೆ. ನೇರ ಕೃಷಿ ಕೆಲಸವಲ್ಲದೆ ಕೈತೋಟ ಬೆಳೆಸುವುದು, ಮೇವು– ಇಂಧನ ಸಂಗ್ರಹ, ಸಾಕು ಪ್ರಾಣಿಗಳ ನಿರ್ವಹಣೆ, ಕಾಳು ಹಸನು ಮಾಡುವುದು, ಆಹಾರ ಸಂಸ್ಕರಣೆ ಮುಂತಾದ ಜವಾಬ್ದಾರಿಗಳನ್ನು ಅವರು ನಿಭಾಯಿಸುತ್ತಲೇ ಬಂದಿದ್ದಾರೆ. ಇಷ್ಟೆಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿಯೂ ಮಹಿಳೆಯರನ್ನು ಸಾರ್ವತ್ರಿಕವಾಗಿಯಾಗಲೀ, ನೀತಿಗಳಲ್ಲಾಗಲೀ ರೈತರೆಂದು ಗುರುತಿಸಿಯೇ ಇರಲಿಲ್ಲ. ಕಾನೂನುಗಳಲ್ಲಿ ಇದ್ದರೂ ಆಸ್ತಿ ಹಂಚಿಕೆಯಲ್ಲಿ ಅವರು ಬಿಟ್ಟೇ ಹೋಗುತ್ತಾರೆ. ಗುರುತಿಸುವಿಕೆ ಇಲ್ಲವಾದುದರಿಂದ ತಮ್ಮ ಜಮೀನಿನಲ್ಲಿ ಏನನ್ನು ಬೆಳೆಯಬೇಕು, ಹೇಗೆ ಬೆಳೆಯಬೇಕು ಎಂಬ ನಿರ್ಧಾರಗಳನ್ನು ಆಕೆ ತೆಗೆದುಕೊಳ್ಳುವಂತಿಲ್ಲ. ಆರ್ಥಿಕ ಸ್ವಾತಂತ್ರ್ಯ ಇಲ್ಲದಿರುವುದು ಗ್ರಾಮೀಣ ಭಾಗದ ಲಿಂಗ ಅಸಮಾನತೆಗೆ ಮತ್ತು ಲಿಂಗಾಧಾರಿತ ದೌರ್ಜನ್ಯಗಳಿಗೆ ಕಾರಣವಾಗುತ್ತವೆ.

ಕೇಂದ್ರ ಸರ್ಕಾರದ 2017ರ ಕೃಷಿ ನೀತಿಯಲ್ಲಿ ಪ್ರತಿಪಾದಿಸಿರುವಂತೆ, ಭೂ ಒಡೆತನ ಇರುವ ಕೃಷಿಕರು, ಪಾಲಲ್ಲಿ ಭೂಮಿ ಮಾಡುವವರು, ಗುತ್ತಿಗೆ ಕೃಷಿಕರು, ಕೃಷಿ-ಕೂಲಿಕಾರರು, ದನ-ಕರು ಸಾಕುವವರು, ಕೋಳಿ ಸಾಕುವವರು, ಆಡು-ಕುರಿ ಸಾಕುವವರು, ಜೇನು ಸಾಕುವವರು, ಮೀನು ಸಾಕುವವರು, ಹುಲ್ಲುಗಾವಲು ಮಾಡಿಕೊಂಡವರು, ಅರಣ್ಯ ಉತ್ಪನ್ನ ಸಂಗ್ರಹಿಸುವವರು... ಇವರೆಲ್ಲರೂ ರೈತರು.

ಮಹಿಳೆಯರನ್ನು ರೈತರೆಂದು ಗುರುತಿಸದೇ, ಆಕೆಗೆ ಆ ಸ್ಥಾನಮಾನ, ಸೌಲಭ್ಯವನ್ನು ನೀಡದೆಯೇ ಮಹಿಳಾ ರೈತ ದಿನವನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ಜಮೀನಿನ ಕಾಗದ ಪತ್ರಗಳಲ್ಲಿ ಅವಳ ಹೆಸರೂ ನಮೂದಾಗಿ ಮಹಿಳಾ ಕೃಷಿಕರೆಂದು ‘ಕಿಸಾನ್ ಕಾರ್ಡ್’ ಗುರುತಿನ ಚೀಟಿ ನೀಡಬೇಕು. ಕೃಷಿ-ಸಾಲ, ಬೆಳೆವಿಮೆ, ಮಾರುಕಟ್ಟೆ, ಪ್ರಕೃತಿ ವಿಕೋಪಗಳಿಗೆ ಸಿಗಬೇಕಾದ ಪರಿಹಾರ ಧನದಂಥ ಎಲ್ಲಾ ರೀತಿಯ ಯೋಜನೆಗಳಿಗೂ ಅವಳಿಗೆ ಸಮಾನ ಅವಕಾಶ ಈ ‘ಕಿಸಾನ್ ಕಾರ್ಡ್‌’ನಿಂದ ಸಿಗುವಂತಾಗಬೇಕು.
ಹೀಗೆಂದು ಒತ್ತಾಯಿಸಿ ಇಂದು ದೇಶದ ಹಲವೆಡೆ, ರಾಜ್ಯದ ಹಲವಾರು ಕಡೆ ಜಾಥಾ, ಮಾತುಕತೆ, ಮನವಿಪತ್ರ ಅರ್ಪಣೆ ನಡೆದಿವೆ. ಅದು ಮುಖ್ಯಮಂತ್ರಿಗಳಿಗೆ ತಲುಪಿ ಬರುವ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ರೈತರನ್ನು ರೈತ ಎಂದು ಘೋಷಿಸುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT