ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬಾರದಿರುವ ಮಳೆಯನ್ನು ಶಪಿಸುವ ಮುನ್ನ...

Published 5 ಮೇ 2024, 23:41 IST
Last Updated 5 ಮೇ 2024, 23:41 IST
ಅಕ್ಷರ ಗಾತ್ರ

ಒಂದೇ ಬಗೆಯದಾಗಿರಲಿ ಒಳ–ಹೊರಗು

‘ಸಾರ್ವಜನಿಕವಾಗಿಯಾಗಲೀ ವೈಯಕ್ತಿಕವಾಗಿಯಾಗಲೀ ಒಂದೇ ರೀತಿಯ ವ್ಯಕ್ತಿತ್ವವನ್ನು ಕಾಪಾಡಿಕೊಂಡು ಒಂದೇ ತೆರನಾದ ವ್ಯಕ್ತಿಯಾಗಿರಿ’ ಎಂದು ಗೌತಮ ಬುದ್ಧ ಎಂದೋ ಹೇಳಿರುವ ಮಾತು (ಪ್ರ.ವಾ., ಸುಭಾಷಿತ, ಮೇ 2) ಇಂದಿಗೂ ಎಷ್ಟು ಅರ್ಥಪೂರ್ಣವಾಗಿದೆ ಅನಿಸುತ್ತದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಇದು ಪ್ರತಿ ವ್ಯಕ್ತಿಯೂ ತಪ್ಪದೇ ಪರಿಪಾಲಿಸಬೇಕಾದ ಸಂದೇಶವೇ ಸರಿ. ವಿಶೇಷವಾಗಿ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಹೊರಗೂ ಒಳಗೂ ಒಂದೇ ತೆರನಾದ ವ್ಯಕ್ತಿತ್ವವನ್ನು ರೂಢಿಸಿಕೊಳ್ಳದೆ ಇರುವುದರಿಂದಲೇ ಸಮಾಜ ಅವರ ಬಗ್ಗೆ ಅಪನಂಬಿಕೆ ಹೊಂದಿದೆ; ಗೌರವ, ಮಾನ್ಯತೆಯನ್ನು ಕೊಡಲು ಹಿಂದೇಟು ಹಾಕುತ್ತಿದೆ.

ರಾಜಕೀಯ ಮೇಲಾಟ, ಹಿಂಸೆ, ದೌರ್ಜನ್ಯ, ಭ್ರಷ್ಟಾಚಾರವನ್ನೇ ತಮ್ಮ ವ್ಯಕ್ತಿತ್ವವೆಂದು ಪರಿಭಾವಿಸುವವರು ಬೇಗ ತೆರೆಮರೆಗೆ ಸರಿಯುತ್ತಾರೆ ಎಂಬುದು ಸರ್ವವೇದ್ಯ. ಇದು ಪ್ರತಿ ಕುಟುಂಬಕ್ಕೂ ಅನ್ವಯಿಸುತ್ತದೆ. ಒಂದೇ ರೀತಿಯ ವ್ಯಕ್ತಿತ್ವವನ್ನು ರೂಢಿಸಿಕೊಂಡ ಎಷ್ಟೋ ಮಹನೀಯರನ್ನು ಇಂದಿಗೂ ನಾವು ಸ್ಮರಿಸುತ್ತಿದ್ದೇವೆ, ಮುಂದೆಯೂ ಈ ಸಮಾಜ ಸ್ಮರಿಸುತ್ತದೆ. ಈ ಅರಿವು ಎಲ್ಲರಲ್ಲೂ ಮೂಡಿದರೆ ಬುದ್ಧನ ಬೋಧನೆ ಸಾರ್ಥಕವಾದಂತೆ.

-ಪ್ರಭು ಇಸುವನಹಳ್ಳಿ, ಬೆಂಗಳೂರು

****

ಸ್ಥೂಲಕಾಯ: ಸಿಗಲಿ ಪರಿಹಾರ

ರಾಜ್ಯದ ಪೊಲೀಸ್ ಅಕಾಡೆಮಿ, ತರಬೇತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬೊಜ್ಜು ಕರಗಿಸದ ಕಾರಣಕ್ಕೆ ಎತ್ತಂಗಡಿ ಮಾಡಿರುವುದಾಗಿ ವರದಿಯಾಗಿದೆ (ಪ್ರ.ವಾ., ಮೇ 4). ಈಚಿನ ದಿನಗಳಲ್ಲಿ ಜನರ ನಡುವೆ ಹೆಚ್ಚಾಗಿ ಕೇಳಿಬರುತ್ತಿರುವ ಪದ ಬಿಎಂಐ (ಬಾಡಿ ಮಾಸ್‌ ಇಂಡೆಕ್ಸ್‌). ಬಿಎಂಐ ಎಂಬುದು ಒಬ್ಬ ವ್ಯಕ್ತಿಯ ತೂಕ ಮತ್ತು ಎತ್ತರವನ್ನು ಹೋಲಿಕೆ ಮಾಡುವ ಒಂದು ಸಂಖ್ಯಾಶಾಸ್ತ್ರೀಯ ಅಳತೆ. ಬದಲಾದ ಈ ಕಾಲಘಟ್ಟದಲ್ಲಿ ಬಿಎಂಐ ಎಲ್ಲರಿಗೂ ಇರಬೇಕಾದಂತಹ ಸಾಮಾನ್ಯ ಆರೋಗ್ಯ ಸ್ಥಿತಿ. ಅದರಲ್ಲೂ ಪೊಲೀಸ್ ಎಂಬ ಶಿಸ್ತಿನ, ಗತ್ತಿನ ವ್ಯಕ್ತಿತ್ವಕ್ಕೆ ಅತಿ ಅವಶ್ಯ. ಆದರೆ ಪೊಲೀಸರಲ್ಲಿ ಸ್ಥೂಲಕಾಯದ ಸಮಸ್ಯೆ ಹೊಸದೇನಲ್ಲ. ವೃತ್ತಿ ಬದುಕಿನಲ್ಲಿ ಅವರು ಎದುರಿಸುವ ಒತ್ತಡ, ದೈಹಿಕ ಚಟುವಟಿಕೆರಹಿತ ಜೀವನ, ಸತ್ವಹೀನ ಆಹಾರ ಪದ್ಧತಿ, ಅಸಮರ್ಪಕ ನಿದ್ರೆ ಎಲ್ಲವೂ ಸೇರಿ ಬೊಜ್ಜಿಗೆ ಕಾರಣವಾಗುತ್ತವೆ. ಜೀವನಶೈಲಿಯಲ್ಲಿ ಹಠಾತ್ ಬದಲಾವಣೆಗಳು ಅನೇಕರಲ್ಲಿ ಅನಾರೋಗ್ಯಕ್ಕೆ ಕಾರಣವಾಗಬಹುದು.

ಕ್ಲಿಷ್ಟಕರವಾದ ರಚನೆಯಿಂದ ಕೂಡಿರುವ ಮಾನವ ದೇಹವನ್ನು ಆರೋಗ್ಯಕರ ರೀತಿಯಿಂದ ನಿರ್ವಹಿಸಬೇಕು. ಇದಕ್ಕೆ ಸಮಯ ನೀಡಬೇಕು ಹಾಗೂ ಮುಂದೆ ಬರುವಂತಹ ಪೊಲೀಸ್ ಸಿಬ್ಬಂದಿಯು ಉತ್ತಮ ಅಭ್ಯಾಸಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ನಮ್ಮ ರಾಜ್ಯದ ಪೊಲೀಸ್ ದೇಶ-ವಿದೇಶದಲ್ಲಿ ಹೆಸರುವಾಸಿ. ಇಂತಹ ಶ್ರೇಷ್ಠ ಇಲಾಖೆಯಲ್ಲಿ ಸ್ಥೂಲಕಾಯ ಎಂಬ ಪೆಡಂಭೂತ ಬಹಳ ವರ್ಷಗಳಿಂದ ಬೆಳೆದುಬಂದಿದೆ. ಇಲಾಖೆ ಇನ್ನಾದರೂ ಕೆಲವು ಮಾರ್ಪಾಡುಗಳನ್ನು ಸಮಯೋಚಿತವಾಗಿ, ಆರೋಗ್ಯಕರ ರೀತಿಯಲ್ಲಿ ಮಾಡುವುದು ಒಳ್ಳೆಯದು.

-ಮೇಘಶ್ಯಾಮ ಕೆ. ಕಮ್ಮಾರ, ಕುಷ್ಟಗಿ

****

ಭಾಷೆಯ ಬಗ್ಗೆ ನಿರ್ಲಕ್ಷ್ಯ ಸಲ್ಲ

ಚುನಾವಣಾ ಆಯೋಗದಿಂದ ಚುನಾವಣಾ ಜಾಗೃತಿ ಕುರಿತು ಮೊಬೈಲ್‌ಗೆ ಕನ್ನಡದಲ್ಲಿ ಒಂದು ಕಿರು ಸಂದೇಶ ಬಂದಿದೆ. ಅದರಲ್ಲಿ ‘ಮತವನ್ನು’ ಬದಲಿಗೆ ‘ಮನಿವನ್ನು’ ಎಂದೂ ‘ಭೇಟಿ ನೀಡಿ’ ಬದಲಿಗೆ ‘ಭೀಟಿ ನೀಡಿ’ ಎಂದೂ ಟೈಪಿಸಲಾಗಿದೆ. ಇವು ಯಾವ ಭಾಷೆಯ ಪದಗಳು? ಗಾಂಭೀರ್ಯದಿಂದ ಕೂಡಿರಬೇಕಾದ ಒಂದು ಸಂದೇಶವನ್ನು ಹೀಗೆ ನಗೆಪಾಟಲಿಗೆ ಈಡು ಮಾಡುವ ಕೆಲಸವಾಗಿದೆ. ಒಕ್ಕೂಟ ವ್ಯವಸ್ಥೆಯಡಿ ಒಂದು ಸಮರ್ಥ ಭಾಷೆಯೂ ಹೇಗೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ ಎಂಬುದಕ್ಕೆ ಇಂತಹ ಉದಾಹರಣೆಗಳು ಬಹಳಷ್ಟು ಸಿಗುತ್ತವೆ.

ಒಂದು ಸಣ್ಣ ಸಂದೇಶವನ್ನು ಕೋಟಿಗಟ್ಟಲೆ ಜನರಿಗೆ ಕಳುಹಿಸುವ ಮೊದಲು ಸರಿಯಾಗಿ ಪರಿಶೀಲನೆ ಮಾಡದೆ ಒಂದು ಭಾಷೆಗೆ ಈ ರೀತಿ ಅವಮಾನ ಮಾಡುವುದು ಎಷ್ಟು ಸರಿ? ಭಾಷಾಧಾರಿತ ರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವೊಂದರ ಆಡಳಿತ ಭಾಷೆಗೆ ಸೂಕ್ತ ಮನ್ನಣೆ ಇಲ್ಲದಿದ್ದರೆ ಹೇಗೆ? ಇಂತಹ ಸಂದೇಶಗಳಿಗೆ ಭಾಷಾಂತರಕಾರರ ಕೊರತೆಯೇ ಅಥವಾ ಏನು ಮಾಡಿದರೂ ಸರಿ ಎನ್ನುವ ಧೋರಣೆಯೇ? ಇಂತಹ ಪರಿಪಾಟವನ್ನು ಎಲ್ಲ ಕನ್ನಡಿಗರೂ ವಿರೋಧಿಸಬೇಕು. ಚುನಾವಣಾ ಆಯೋಗ ಈ ಸಂದೇಶವನ್ನು ತಿದ್ದುಪಡಿ ಮಾಡಿ ಮತ್ತೊಮ್ಮೆ ಸಾರ್ವಜನಿಕರಿಗೆ ರವಾನಿಸುವ ಮೂಲಕ ಪ್ರಮಾದವನ್ನು ಸರಿಪಡಿಸಬೇಕು. 

-ಸೋಮಲಿಂಗಪ್ಪ ಬೆಣ್ಣಿಗುಳದಳ್ಳಿ, ಕೊಪ್ಪಳ

****

ಬಾರದಿರುವ ಮಳೆಯನ್ನು ಶಪಿಸುವ ಮುನ್ನ...

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಈಗ ‘ನಮ್ಮ ಕಡೆ ಈಗ ಮಳೆ ಬೀಳುತ್ತಿದೆ’ ಎಂಬ ವಾಕ್ಯ ಹಾಕಿದರಂತೂ, ಅದರ ಮರುಕ್ಷಣವೇ ‘ಎಲ್ಲಿ?’, ‘ಯಾವಾಗಿನಿಂದ ಮಳೆ ಸುರಿಯುತ್ತಿದೆ?’ ‘ಮಳೆ ಬೀಳುತ್ತಿರುವ ವಿಡಿಯೊ ಹಾಕಿ ನೋಡೋಣ!’ ಎಂಬಂತಹ ಪ್ರತಿಕ್ರಿಯೆಗಳ ಸುರಿಮಳೆಯೇ ಸುರಿಯುತ್ತದೆ. ನಮಗೆ ಮಳೆಯ ಅವಶ್ಯಕತೆ ಎಷ್ಟಿದೆ ಎಂಬುದು ಇದರಿಂದ ತಿಳಿಯುತ್ತದೆ.

ಪ್ರಕೃತಿಯ ಅಳಿವಿಗೆ ನಾವು ಕಾರಣರಾದರೆ, ನಮ್ಮ ಅಳಿವಿಗೆ ಪ್ರಕೃತಿಯೇ ಕಾರಣವಾಗುವುದು
ವಿಪರ್ಯಾಸ. ಹೆಚ್ಚು ಮಳೆ ನೀರು ಸಂಗ್ರಹ ಇದ್ದಾಗ ಅದರ ಮಿತ ಬಳಕೆ ಹಾಗೂ ಸದುದ್ದೇಶದ ಬಗ್ಗೆ ಯೋಚಿಸದೆ ವಿನಾಕಾರಣ ಪೋಲು ಮಾಡುತ್ತೇವೆ. ಅದೇ ಮಳೆ ಬಾರದಿದ್ದಾಗ ಅವರಿವರನ್ನು ಶಪಿಸುವುದು, ಮಳೆಗಾಗಿ ದೇವರ ಮೊರೆ ಹೋಗುವುದು ಅರ್ಥಹೀನ. ನಮ್ಮ ನೆಮ್ಮದಿಯ ಜೀವನದಲ್ಲಿ ಪ್ರಕೃತಿಯ ಪಾತ್ರ ಹಿರಿದಾದುದು. ಹೀಗಾಗಿ, ಪ್ರಕೃತಿಯನ್ನು ಉಳಿಸಿ ಬೆಳೆಸಿದರಷ್ಟೇ ನಮ್ಮ ಬದುಕು ಬಂಗಾರ ಎಂಬ ಸತ್ಯವನ್ನು ನಾವೆಲ್ಲರೂ ಅರಿಯಬೇಕಿದೆ. 

-ಹರಳಹಳ್ಳಿಪುಟ್ಟರಾಜು, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT