ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪರೀಕ್ಷಾ ಕೇಂದ್ರ: ನಡೆಯಲಿ ಮೌಲ್ಯಮಾಪನ

Last Updated 28 ಮಾರ್ಚ್ 2023, 20:43 IST
ಅಕ್ಷರ ಗಾತ್ರ

ರೈಲ್ವೆ ಇಲಾಖೆ: ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲಿ

ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಎರಡು ಗಂಟೆ ಪ್ರಯಾಣ. ಆದರೆ ರೈಲು ಕೆಂಗೇರಿ ನಿಲ್ದಾಣದಿಂದ ಸಿಟಿ ರೈಲು ನಿಲ್ದಾಣ ತಲುಪಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುವ ಅನೇಕ ರೈಲುಗಳು ಇತ್ತೀಚೆಗೆ ನಿರಂತರವಾಗಿ ತಡವಾಗಿ ನಿಲ್ದಾಣವನ್ನು ತಲುಪುತ್ತಿವೆ. ರೈಲುಗಾಡಿಗಳು ಈ ಪರಿ ವಿಳಂಬವಾದರೆ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ತಲುಪಲು ಹೇಗೆ ಸಾಧ್ಯ?

ಜಪಾನಿನಲ್ಲಿ ರೈಲುಗಳು ಇಂತಿಷ್ಟೇ ಸಮಯಕ್ಕೆ ನಿಲ್ದಾಣ ತಲುಪುವಂತೆ ಮಾಡುವಲ್ಲಿ ಅಲ್ಲಿನ ರೈಲ್ವೆ ಇಲಾಖೆ
ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತದೆ. ಜನರು ರೈಲು ನಿಲ್ದಾಣಗಳನ್ನು ಬಳಸಲು ಉತ್ತಮವಾದ ಅನುಕೂಲಗಳು ಇರುವುದರಿಂದ ಅವರು ಹಳಿ ದಾಟುವುದನ್ನು ಕಾಣಲು ಸಾಧ್ಯವಿಲ್ಲ. ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಜಪಾನ್‌ಗೆ ಭೇಟಿ ಕೊಡುತ್ತಾರೆ. ಅಲ್ಲಿನ ಆಡಳಿತವು ಉತ್ತಮವಾದ ರೈಲ್ವೆ ವ್ಯವಸ್ಥೆ ಹೊಂದಿರುವುದನ್ನು ನೋಡಿ ಬಂದಿರುವ ಅನೇಕ ನಾಗರಿಕರೂ ನಮ್ಮಲ್ಲಿ ಇದ್ದಾರೆ. ಆದರೆ, ಅಂತಹ ವ್ಯವಸ್ಥೆ ಭಾರತದಲ್ಲಿ ಸಾಧ್ಯವಿಲ್ಲ ಏಕೆ? ರೈಲುಗಳ ಸಂಚಾರವನ್ನು ನಿರ್ವಹಿಸುವಲ್ಲಿ ಇಲಾಖೆಯು ಅಸಮರ್ಥವಾಗಿದೆಯೇ? ಅಥವಾ ಅಗತ್ಯ ಸೌಕರ್ಯಗಳ ಕೊರತೆಯೇ? ರೈಲ್ವೆ ಇಲಾಖೆಯು ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ತನ್ನ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಮತ್ತು ಅಗತ್ಯ ಸೌಕರ್ಯಗಳನ್ನು ಒದಗಿಸಲು ಸರ್ಕಾರವೂ ಮುಂದಾಗಬೇಕು.

ಡಾ. ಜಿ.ಬೈರೇಗೌಡ, ಕೊಡಿಗೇಹಳ್ಳಿ, ನೆಲಮಂಗಲ

***

ಪರೀಕ್ಷಾ ಕೇಂದ್ರ: ನಡೆಯಲಿ ಮೌಲ್ಯಮಾಪನ

ರಾಜ್ಯದ ಪ್ರಮುಖ ನಗರಗಳಲ್ಲಿ ಯುಪಿಎಸ್‌ಸಿ ಪರೀಕ್ಷೆ ನಡೆಯುವ ಹೆಚ್ಚಿನ ಕೇಂದ್ರಗಳು ಮೂಲ ಸೌಲಭ್ಯ ಇಲ್ಲದ ಶಾಲಾ ಕಾಲೇಜು ಕಟ್ಟಡಗಳಾಗಿರುತ್ತವೆ. ಇಂತಹ ಕೇಂದ್ರಗಳು ಬೆಂಗಳೂರು ನಗರದಾದ್ಯಂತ ಬಹಳಷ್ಟಿವೆ. ಪಾಠ ಪ್ರವಚನ ನಡೆಯುತ್ತದೆ ಎಂಬ ಕಾರಣಕ್ಕೆ ಹಿಂದುಮುಂದು ಯೋಚಿಸದೆ ಇವುಗಳನ್ನು ಪರೀಕ್ಷಾಕೇಂದ್ರಗಳನ್ನಾಗಿ ಆಯ್ಕೆ ಮಾಡಲಾಗುತ್ತದೆ. ಆದರೆ ಪಾಠ ಪ್ರವಚನಗಳೇ ಬೇರೆ, ಜೀವನ ರೂಪಿಸುವ ಪರೀಕ್ಷೆಗಳೇ ಬೇರೆ.

ಕಳೆದ ಮಾರ್ಚ್‌ನಲ್ಲಿ ನನ್ನ ಮಗಳು ಬೆಂಗಳೂರಿನ ಜಯನಗರದ ಇಂಥದ್ದೇ ಒಂದು ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾದಳು. ಅವಳ ಅನುಭವದ ಪ್ರಕಾರ, ಈ ಕೇಂದ್ರದ ಸಮೀಪ ಒಂದೆಡೆ ಬಸ್ ನಿಲ್ದಾಣ, ಇನ್ನೊಂದೆಡೆ ಭಯಂಕರ ಶಬ್ದ ಉಂಟುಮಾಡುವ ವಾಹನ ರಿಪೇರಿ ಅಂಗಡಿ ಇತ್ತು. ಪರೀಕ್ಷಾ ಕೊಠಡಿಯ ಪಕ್ಕದಲ್ಲಿ ಇದ್ದ ಶೌಚಾಲಯದ ದುರ್ನಾತ ಮೂಗಿಗೆ ಬಡಿಯುತ್ತಿತ್ತು. ಇಡೀ ಕೊಠಡಿಗೆ ಇದ್ದುದು ಒಂದೇ ಫ್ಯಾನು. ಅವಳ ಕೊಠಡಿ ನಾಲ್ಕನೇ ಅಂತಸ್ತಿನಲ್ಲಿದ್ದು, ಅಲ್ಲಿಗೆ ಲಿಫ್ಟ್‌ ಕೂಡ ಇರಲಿಲ್ಲ. ಶಾಲಾ ಮುಖ್ಯಸ್ಥರನ್ನು ಈ ಬಗ್ಗೆ ಪ್ರಶ್ನಿಸಿದಾಗ, ‘ನೋಡಿ, ನಿಮ್ಮನ್ನು ನೋಡಿದರೆ ನೀವು ಉತ್ತರ ಕರ್ನಾಟಕದವರು ಎನಿಸುತ್ತದೆ. ಅಲ್ಲಿ ಎಲ್ಲ ರೀತಿಯ ಸೌಲಭ್ಯ ಇರುವ ಶಾಲೆಗಳು ಇವೆಯೇ? ಇಲ್ಲಿ ಪ್ರತೀ ರವಿವಾರ ಒಂದಿಲ್ಲೊಂದು ಪರೀಕ್ಷೆ ನಡೆಸುತ್ತೇವೆ. ಯಾರೂ ದೂರು ನೀಡಿಲ್ಲ, ನಿಮ್ಮದೇನು? ಸುಮ್ಮನೆ ಪರೀಕ್ಷೆ ಬರೆದು ಹೋಗಿ, ಮೊದಲು ಪರೀಕ್ಷೆ ಕಡೆ ಗಮನ ಕೊಡಿ’ ಎಂದು ದಬಾಯಿಸುವ ರೀತಿಯ ಉತ್ತರ ಬಂತು! ಇದರಿಂದ ಅವಳಿಗೆ ಮುಜುಗರವಾಗಿದ್ದಷ್ಟೇ ಅಲ್ಲ ಅಲ್ಲಿದ್ದ ನೂರಾರು ಅಭ್ಯರ್ಥಿಗಳಲ್ಲಿ ಒಬ್ಬರೂ ಅವಳಿಗೆ ಬೆಂಬಲವಾಗಿ ಮಾತನಾಡಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಯಾರಿಗೆ ದೂರು ನೀಡಬೇಕು? ಸ್ಥಳೀಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಉತ್ತಮ ಸೌಲಭ್ಯ ಇರುವ ಕೇಂದ್ರಗಳನ್ನು ಮಾತ್ರ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಬೇಕು. ಪರೀಕ್ಷೆ ಮುಗಿದ ನಂತರ ಪರೀಕ್ಷಾರ್ಥಿಗಳಿಗೆ ಆ ಕೇಂದ್ರದಲ್ಲಿನ ವ್ಯವಸ್ಥೆ ಬಗ್ಗೆ ಅಭಿಪ್ರಾಯ ಸಲ್ಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.

ಎಸ್.ಆರ್.ಬಿರಾದಾರ, ವಿಜಯಪುರ

***

ರಾಹುಲ್ ಅಲ್ಲ ‘ರಾಹು’ ಸವಾಲು!

‘ರಾಹುಲ್ ಗಾಂಧಿ ಒಬ್ಬ ಗೊಂದಲದ ಮನಃಸ್ಥಿತಿಯ ವ್ಯಕ್ತಿ. ಅಂತಹವರು 2024ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಗೆ ಸವಾಲು ಒಡ್ಡಬಲ್ಲರು’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ. ಹೌದು, ಅವರ ಅಭಿಪ್ರಾಯವನ್ನು ಒಪ್ಪಬಹುದು. ರಾಹುಲ್ ಗಾಂಧಿ ಸವಾಲೇ ಅಲ್ಲ. ಆದರೆ ಸಚಿವೆ ಬಹುಶಃ ಮರೆತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮೋದಿಯವರಿಗೆ ಸವಾಲಾಗುವುದಕ್ಕೆ ರಾಹುಲ್ ಗಾಂಧಿ ಅಥವಾ ವಿರೋಧಪಕ್ಷಗಳೇ ಅಲ್ಲದೆ ಅನೇಕ ಪ್ರಮುಖ ಅಂಶಗಳಿವೆ. ಭರಿಸಲಾಗದ ಇಂಧನದ ಬೆಲೆ, ಅತ್ಯಗತ್ಯವಾದ ಅಡುಗೆ ಸಿಲಿಂಡರ್ ಬೆಲೆ, ನಿತ್ಯೋಪಯೋಗಿ ಪದಾರ್ಥಗಳ ಹೆಚ್ಚುತ್ತಿರುವ ಬೆಲೆಯು ಸವಾಲೇ ಸರಿ.

ಇವಿಷ್ಟೇ ಅಲ್ಲದೇ ಶೇಕಡ 40ರಷ್ಟು ಕಮಿಷನ್, ಭ್ರಷ್ಟ ಅಧಿಕಾರಿಗಳು ಪಡೆಯುವ ಲಂಚ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣ, ಸಿ.ಡಿ ಹಗರಣ, ನಾಲಿಗೆ ಹೊರಳಿದಂತೆ ಮಾತನಾಡುವ ನಾಯಕರು, ಕುಲಗೆಟ್ಟ ರಸ್ತೆಗಳು, ಕಳಪೆ ಕಾಮಗಾರಿಗಳು, ಕೆಟ್ಟ ರಸ್ತೆಗೂ ದುಬಾರಿ ಟೋಲು... ಹೀಗೆ ಸವಾಲೆಸೆಯುವ ಪಟ್ಟಿ ಹನುಮಂತನ ಬಾಲವನ್ನೂ ನಾಚಿಸುವಂತೆ ಬೆಳೆಯುತ್ತದೆ. ಸಚಿವೆ ಇದನ್ಯಾಕೆ ಗಮನಿಸಲಿಲ್ಲವೋ... ಮಾನ್ಯ ಪ್ರಧಾನಿಯವರಿಗೆ ರಾಹುಲ್‌ ಸವಾಲಾಗದಿದ್ದರೂ ಇಂತಹ ‘ರಾಹು’ಗಳ ಕಾಟ ಇರುವುದಂತೂ ಖಚಿತ.

ಪತ್ತಂಗಿ ಎಸ್. ಮುರಳಿ, ಬೆಂಗಳೂರು

***

ಬಹುಮಾನದ ಮೊತ್ತ: ಲಿಂಗ ತಾರತಮ್ಯವೇಕೆ?

ಕ್ರೀಡಾಂಗಣವು ವಿಶ್ವಭ್ರಾತೃತ್ವದ ಪ್ರತೀಕವಾಗಿರುತ್ತದೆ. ಇಲ್ಲಿ ಯಾರೂ ತಮ್ಮ ಜಾತಿ, ಲಿಂಗ, ಧರ್ಮದ ಆಧಾರದ ಮೇಲೆ ಸ್ಪರ್ಧೆ ಮಾಡುವುದಿಲ್ಲ. ಕ್ರೀಡೆಯೇ ಅವರ ಧರ್ಮವಾಗಿರುತ್ತದೆ. ಆದರೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಾಸವಾದ ಈ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಭಿಮಾನಿ ಬಳಗವು ಮುಖ್ಯಮಂತ್ರಿಯವರ ಮತಕ್ಷೇತ್ರವಾದ ಸವಣೂರಿನಲ್ಲಿ ರಾಷ್ಟ್ರಮಟ್ಟದ ಸವಣೂರ ಕಬಡ್ಡಿ ಉತ್ಸವವನ್ನು ಮೂರು ದಿನಗಳ ಕಾಲ ಏರ್ಪಡಿಸಿತ್ತು.

ನೋವಿನ ಸಂಗತಿಯೆಂದರೆ, ಬಹುಮಾನದ ಮೊತ್ತದಲ್ಲಿ ಲಿಂಗ ತಾರತಮ್ಯ ಮಾಡಿದ್ದು. ಪುರುಷರ ತಂಡಕ್ಕೆ ಮೊದಲ ಬಹುಮಾನ ₹ 5 ಲಕ್ಷವಾದರೆ, ಮಹಿಳಾ ತಂಡಕ್ಕೆ ₹ 3 ಲಕ್ಷ. ದ್ವಿತೀಯ ಬಹುಮಾನ ಪುರುಷರ ತಂಡಕ್ಕೆ ₹ 3 ಲಕ್ಷವಾದರೆ, ಮಹಿಳಾ ತಂಡಕ್ಕೆ ₹ 2 ಲಕ್ಷ... ಬಹುಮಾನದ ಮೊತ್ತದಲ್ಲಿ ಹೀಗೆ ಲಿಂಗ ತಾರತಮ್ಯ ಮಾಡುವುದು ಎಷ್ಟು ಸರಿ?

ಎ.ಎಸ್.ಮಕಾನದಾರ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT