ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಶಾಸ್ತ್ರಿ ಸ್ಮರಣೆ ಮರೆತಿದ್ದೇಕೆ?

Published 2 ಅಕ್ಟೋಬರ್ 2023, 23:30 IST
Last Updated 2 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಗಾಂಧಿ ತಾತನಲ್ಲಿ...

ನೋಟುಗಳಲ್ಲಿ ನಗುವ
ನಿಮ್ಮ ಚಿತ್ರ
ಅಂಚೆಚೀಟಿಯಲ್ಲಿನ

ನಿಮ್ಮ ನೋಟ
ಸರ್ಕಾರಿ ಕಚೇರಿಗಳ
ಗೋಡೆಗಳ ಮೇಲಿನ

ಚೌಕಟ್ಟಿನ ಮುಗುಳ್ನಗೆ
ಎಂದಿಗೂ ಮಾಸದಿರಲಿ,
ನಿಮ್ಮೊಳಗಿನ ತತ್ವ

ಕಿಂಚಿತ್ತಾದರೂ

ನಮ್ಮೆದೆಗೆ ಬರಲಿ
ನಮ್ಮ ಮಕ್ಕಳ ಮನಕೂ
ದೇಶಭಕ್ತಿ ತಾಕಲಿ.

–ಸಂತೆಬೆನ್ನೂರು ಫೈಜ್ನಟ್ರಾಜ್
ಸಂತೆಬೆನ್ನೂರು

ಆದರ್ಶದ ನಡೆ ಒಂದು ದಿನಕ್ಕಲ್ಲ

ಗಾಂಧಿ ಜಯಂತಿ ಬಂತೆಂದರೆ ಸಾಕು ಗಾಂಧಿ ತತ್ವಗಳನ್ನು ಸ್ಮರಿಸಲು ನಮ್ಮಲ್ಲಿ ಪೈಪೋಟಿ ಉಂಟಾಗುತ್ತದೆ. ಆ ದಿನ ಮದ್ಯ ಮಾರಾಟ ಬಂದ್ ಮಾಡಿಸಿ ನಶಾಮುಕ್ತ ಆಂದೋಲನ ನಡೆಸಲಾಗುತ್ತದೆ ಮತ್ತು ಅದನ್ನು ಆ ದಿನಕ್ಕಷ್ಟೇ ಸೀಮಿತ ಮಾಡಲಾಗುತ್ತದೆ. ಇನ್ನು ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಅದರ ಫೋಟೊ ತೆಗೆದುಕೊಂಡು ಜಾಲತಾಣಗಳಲ್ಲಿ ಹರಿಯಬಿಡುವುದು ಸಾಮಾನ್ಯವಾಗಿದೆ. ಆದರೆ ಇಂತಹ ಕಾರ್ಯಗಳಿಂದ ಗಾಂಧೀಜಿ ಕಂಡ ಕನಸು ನನಸಾಗುವುದೇ? ಮಹಾನ್‌ ವ್ಯಕ್ತಿಗಳ ಜಯಂತಿಯಂದು ಮಾತ್ರ ಅವರ ಗುಣಗಾನ ಮಾಡಿ, ಶ್ರಮದಾನ, ಸ್ವಚ್ಛತೆ, ಮದ್ಯದ ಅಂಗಡಿ ಬಂದ್ ಮಾಡುವುದು, ಮರುದಿನವೇ ಎಲ್ಲಾ ಯಥಾಪ್ರಕಾರ ಪ್ರಾರಂಭವಾಗುವುದು ಇವೆಲ್ಲ ಆ ಮಹಾತ್ಮರಿಗೆ ಮಾಡುವ ಅವಮಾನವೇ ಸರಿ.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವು ಸ್ವಚ್ಛವಾಗಿ ಇಟ್ಟುಕೊಂಡರೆ, ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡರೆ, ಗಾಂಧೀಜಿ ಕಂಡ ಕನಸು ನನಸಾಗುವುದಕ್ಕೆ ಒಂದಿಷ್ಟಾದರೂ ಹತ್ತಿರವಾಗಬಹುದೇನೊ.

–ಭೀಮಾಶಂಕರ ಎಸ್. ಝಳಕಿ, ಕಲಬುರಗಿ

ಗೂಗಲ್‌ ಮ್ಯಾಪ್‌: ಇರಲಿ ವಿವೇಚನೆ

ಕೇರಳದಲ್ಲಿ ಕಾರು ನದಿಗೆ ಉರುಳಿ ಇಬ್ಬರು ಯುವ ವೈದ್ಯರು ಸಾವಿಗೀಡಾಗಿರುವ ಸುದ್ದಿ (ಪ್ರ.ವಾ., ಅ. 2) ತಿಳಿದು ದುಃಖವಾಯಿತು. ಆದರೆ ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ತಿರುವು ತೆಗೆದುಕೊಂಡ ಕಾರಣ ಕಾರು ನದಿಗೆ ಉರುಳಿತು ಎಂದು ಕಾರಿನಲ್ಲಿದ್ದವರು ತಿಳಿಸಿರುವುದು ಅತಿಶಯವೇ ಸರಿ. ಗೂಗಲ್ ಮ್ಯಾಪ್ ದೇಶದ ಅತಿದೊಡ್ಡ ದಾರಿದೀಪವಾಗಿದೆ. ಅದು ಎಂಥವರಿಗೂ ರಸ್ತೆ ತೋರಿಸುವ ಒಂದು ಉತ್ತಮ ಸಾಧನ. ಯಾವುದೇ ಊರಿಗೆ ಹೋದರೂ ರಸ್ತೆಯ ಪರಿಚಯವಿಲ್ಲದಿದ್ದರೂ ಆ ಊರಿನ ನಿಖರವಾದ ಜಾಗಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಆದರೆ ಅದು ತೋರುವ ದಾರಿಯಲ್ಲಿ ನೋಡಿಕೊಂಡು ಸರಿಯಾಗಿ ಚಾಲನೆ ಮಾಡಿದಲ್ಲಿ ನಮ್ಮ ಗುರಿಯನ್ನು ಮುಟ್ಟುವುದು ಸಹಜ.

ರಸ್ತೆಬದಿಯಲ್ಲಿ ಹೊಳೆ, ಗುಂಡಿ, ಕೊರಕಲು ಇದ್ದಲ್ಲಿ ಅದನ್ನು ಸರಿಯಾಗಿ ನೋಡಿಕೊಂಡು ನಿಧಾನವಾಗಿ ಕಾರು ಚಲಾಯಿಸಿದ್ದರೆ ಆ ಯುವ ವೈದ್ಯರು ಬದುಕುತ್ತಿದ್ದರೇನೊ. ಇಷ್ಟಕ್ಕೂ ಗೂಗಲ್ ಮನುಷ್ಯರು ಮಾಡಿದ ಒಂದು ಸಾಧನವಲ್ಲವೇ? ಅಕಸ್ಮಾತ್‌ ತಪ್ಪು ನಡೆದಿರಬಹುದು. ಆದರೂ ಕಾರು ಚಲಾಯಿಸುವಾಗ ರಸ್ತೆಯ ಇಕ್ಕೆಲಗಳನ್ನೂ ಪರಿಶೀಲಿಸಿ ಓಡಿಸುವುದು ಚಾಲಕನ ಕರ್ತವ್ಯವಲ್ಲವೇ?

–ಬಾಲಕೃಷ್ಣ ಎಂ.ಆರ್., ಬೆಂಗಳೂರು

ಹೆಸರು ಬದಲಾವಣೆ ತರವಲ್ಲ

ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆಯ ಅಂತಿಮ ಪಟ್ಟಿ ಹಾಗೂ ಅಧಿಸೂಚನೆಯಂತೆ 225 ವಾರ್ಡ್‌ಗಳ ನಕ್ಷೆಯನ್ನು ಬಿಡುಗಡೆ ಮಾಡಲಾಗಿದ್ದು, 40 ವಿಭಾಗಗಳ ಹೆಸರನ್ನು ಬದಲಾಯಿಸಲಾಗಿದೆ. ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ರಸ್ತೆ ಅಥವಾ ಬಡಾವಣೆಯ ಹೆಸರನ್ನು ಬದಲಾಯಿಸುವುದು ಒಂದು ಪ್ರತಿಷ್ಠೆಯ ವಿಚಾರವಾಗಿದೆ. ಆದರೆ ದಶಕಗಳಿಂದ ಜನಮಾನಸದಲ್ಲಿ ಉಳಿದು, ಬೆಳೆದುಬಂದಿರುವ ಹೆಸರುಗಳನ್ನು ಬದಲಾಯಿಸುವುದು ಸರ್ವಥಾ ಸಲ್ಲದು. ಉದಾಹರಣೆಗೆ, ಬೆಂಗಳೂರಿನ ಬಸವನಗುಡಿ ಕ್ಷೇತ್ರದಲ್ಲಿ ಬಸವನಗುಡಿ ವಾರ್ಡನ್ನು ದೊಡ್ಡ ಗಣಪತಿಯೆಂದೂ, ಹನುಮಂತನಗರ ವಾರ್ಡನ್ನು ಗವಿ ಗಂಗಾಧರೇಶ್ವರ, ಗಿರಿನಗರ ವಾರ್ಡನ್ನು ಸ್ವಾಮಿ ವಿವೇಕಾನಂದ ವಾರ್ಡ್‌ ಎಂಬುದಾಗಿಯೂ ಬದಲಾಯಿಸಲಾಗಿದೆ. ಇದರ ಔಚಿತ್ಯವಾದರೂ ಏನು ಎಂಬುದು ಅರ್ಥವಾಗುವುದಿಲ್ಲ.

ಪ್ರತಿಯೊಂದು ಹೆಸರಿಗೂ ತನ್ನದೇ ಆದ ಇತಿಹಾಸವಿರುತ್ತದೆ ಎಂಬುದನ್ನು ಆಯಾ ಕಾಲಕ್ಕೆ ಅಧಿಕಾರಕ್ಕೆ ಬರುವ ಪಕ್ಷಗಳು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಉತ್ತರಪ್ರದೇಶ ಸರ್ಕಾರವು ಬಿ.ಆರ್.ಅಂಬೇಡ್ಕರ್ ಅವರ ಹೆಸರಿಗೆ ಇತ್ತೀಚೆಗೆ ಸರ್ಕಾರಿ ದಾಖಲೆಗಳಲ್ಲಿ ‘ರಾಮ್‌ಜಿ’ ಎಂದು ಸೇರಿಸುವ ಮೂಲಕ ವಿವಾದದ ಬಿರುಗಾಳಿ ಎಬ್ಬಿಸಿತ್ತು. ಅದಕ್ಕೆ ಸರ್ಕಾರ ನೀಡಿದ ಕಾರಣ, ಬಿ.ಆರ್.ಅಂಬೇಡ್ಕರ್ ಅವರ ಹೆಸರು ‘ಭೀಮರಾವ್ ರಾಮ್‌ಜಿ ಅಂಬೇಡ್ಕರ್’ ಎಂದಾಗಿರುವುದರಿಂದ ನಾವು ಅದನ್ನೇ ಸೇರಿಸಿದ್ದೇವೆ ಎಂದಾಗಿತ್ತು. ಇದೀಗ ರಾಜ್ಯ ಸರ್ಕಾರವೂ ಇದೇ ಹಾದಿ ತುಳಿಯದೆ, ಐತಿಹಾಸಿಕ ಹೆಸರುಗಳನ್ನು ಹಾಗೆಯೇ ಉಳಿಸುವ ಮೂಲಕ ಅವುಗಳ ಘನತೆಗೆ ಗೌರವ ನೀಡಬೇಕಾಗಿದೆ.

–ಚಿ.ಉಮಾಶಂಕರ್, ಬೆಂಗಳೂರು

ಶಾಸ್ತ್ರಿ ಸ್ಮರಣೆ ಮರೆತಿದ್ದೇಕೆ?

ಅಹಿಂಸೆಯನ್ನೇ ಪ್ರತಿಪಾದಿಸಿ ನಮಗೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ ಮಹಾತ್ಮ ಗಾಂಧಿ ಅವರ ಜನ್ಮದಿನವನ್ನು ಹಾಗೂ ಪ್ರಾಮಾಣಿಕತೆಯನ್ನೇ ಆದರ್ಶವಾಗಿ ಇಟ್ಟುಕೊಂಡು ಮಹತ್ವದ ಘಟ್ಟದಲ್ಲಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ, ಜೈ ಜವಾನ್ ಜೈ ಕಿಸಾನ್ ಕೀರ್ತಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 120ನೇ ಜನ್ಮದಿನವನ್ನು ಆಚರಿಸಿದ್ದೇವೆ. ಆದರೆ ಗಾಂಧಿಯವರ ಜನ್ಮದಿನಾಚರಣೆಗೆ ಕೊಟ್ಟಷ್ಟು ಮಹತ್ವವನ್ನು ಶಾಸ್ತ್ರಿಯವರ ಜನ್ಮದಿನಾಚರಣೆಗೆ ನೀಡದಿರುವುದು ವಿಷಾದನೀಯ.

ಕೇಂದ್ರ ಸರ್ಕಾರ ಕೆಲವು ಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಾದರೂ ಕನಿಷ್ಠಪಕ್ಷ ಶಾಸ್ತ್ರಿಯವರನ್ನು ಕಾಣಿಸಿದೆ. ಆದರೆ ರಾಜ್ಯ ಸರ್ಕಾರ ನೀಡಿರುವ ಪುಟಗಟ್ಟಲೆ ಜಾಹೀರಾತಿನಲ್ಲಿ ಗಾಂಧಿ ಸ್ಮರಣೆಗಿಂತ ತಮ್ಮ ಐದು ಗ್ಯಾರಂಟಿಗಳ ಪ್ರಚಾರಕ್ಕೇ ಹೆಚ್ಚು ಮಹತ್ವ ನೀಡಲಾಗಿದೆ. ಪ್ರಾಮಾಣಿಕತೆಗೆ ಮಾದರಿಯಾದ ಶಾಸ್ತ್ರಿಯವರನ್ನು ನೆನೆಯದೆ ಸರ್ಕಾರ ಮರೆಯಿತೇಕೆ?

–ಮುಳ್ಳೂರು ಪ್ರಕಾಶ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT