ಶನಿವಾರ, ಜನವರಿ 23, 2021
27 °C

ವಾಚಕರ ವಾಣಿ: ಅರಿಯಬೇಕಿದೆ ಹಿರಿಜೀವಗಳ ಮನಸ್ಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐವರು ಮಕ್ಕಳನ್ನು ಹೊಂದಿರುವ ಹಿರಿಯ ವ್ಯಕ್ತಿಯೊಬ್ಬರು ತಮ್ಮ ಆಸ್ತಿಯ ಸಮಪಾಲನ್ನು ಹೆಂಡತಿ ಮತ್ತು ಸಾಕು ನಾಯಿಗೆ ಮಾತ್ರ ಸಮನಾಗಿ‌ ಉಯಿಲು ಬರೆದಿರುವ ಸ್ವಾರಸ್ಯಕರ ಘಟನೆ ವರದಿಯಾಗಿದೆ. ಅವರ ಈ ನಿರ್ಧಾರದ ಹಿಂದಿರುವ ಸ್ಪಷ್ಟ ಕಾರಣವೇನೆಂದು ತಿಳಿಯದೇ ಇದ್ದರೂ ಬಹುಶಃ ಮಕ್ಕಳೊಂದಿಗಿನ ಹೊಂದಾಣಿಕೆ ಸಮಸ್ಯೆ ಇದಕ್ಕೆ ಪ್ರೇರಣೆಯಾಗಿರಬಹುದು. ಮುಪ್ಪಿನ ಕಾಲದಲ್ಲಿ ವೃದ್ಧರು ಅನುಭವಿಸುವ ತಳಮಳಗಳ ಹಿನ್ನೆಲೆಯಲ್ಲಿ ಯುವಮನಸ್ಸುಗಳು ಇದನ್ನು ಅರ್ಥೈಸಿಕೊಳ್ಳುವ ಅವಶ್ಯಕತೆಯಿದೆ. ವಯಸ್ಸಾದ ಕಾಲದಲ್ಲಿ ಅವರ ದೇಹ ವಯೋಸಹಜ ಅನಾರೋಗ್ಯ ಮತ್ತು ಬಳಲಿಕೆಗೆ ಒಳಗಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದಿಂದ ಅವರು ಬಯಸುವುದು ತುಸು ಕಾಳಜಿ ಮತ್ತು ಪ್ರೀತಿ ತುಂಬಿದ ಸಂವಹನ. ಇವು ಸಿಗಲಾರದಾದಾಗ ಜರ್ಜರಿತಗೊಳ್ಳುವ ಮನಸ್ಸು, ಸಾಕುಪ್ರಾಣಿಗಳ ನಿಷ್ಕಲ್ಮಶ ಪ್ರೀತಿಗೆ ಮಾರುಹೋಗಿರಬಹುದು.

ಬದಲಾದ ಕೌಟುಂಬಿಕ ಜೀವನಶೈಲಿಯಿಂದ ಇಂದು ಕುಟುಂಬಗಳು ಒಡೆದು ಛಿದ್ರವಾಗುತ್ತಿವೆ. ಯಶಸ್ಸು ಎಂದರೆ ಕೇವಲ ಐಶ್ವರ್ಯ, ಅಧಿಕಾರ, ಆಡಂಬರದ ಜೀವನಶೈಲಿಯನ್ನು ಪಡೆಯುವುದೆಂದು ಯುವಜನರು ತಿಳಿದಂತಿದೆ ಅಥವಾ ಹೀಗೆ ತಿಳಿಯುವಂತೆ ಸಿನಿಮಾ, ಟಿ.ವಿ., ಮೊಬೈಲ್‌ಗಳು ಮಾಡುತ್ತಿವೆ. ಹೀಗೆ ಹುಸಿ ಆರಾಮದಾಯಕ ಜೀವನದ ಬಿಸಿಲುಗುದುರೆಯ ಬೆನ್ನುಹತ್ತುವ ನಾವು ತುಸು ನಿಂತು ಯೋಚಿಸಬೇಕಿದೆ. ಹುಚ್ಚು ಭ್ರಮೆಗಳ ಕುದುರೆಗೆ ವಿವೇಕದ ಲಗಾಮು ಹಾಕಿ ಆದಷ್ಟು ಸರಳಜೀವನಕ್ಕೆ ಬದಲಾಗಬೇಕಿದೆ. ಇಲ್ಲದಿದ್ದರೆ ಮನುಷ್ಯನ ಜೀವನವೇ ಯಾಂತ್ರೀಕೃತವಾಗಿ ಮನುಷ್ಯ ಸಂಬಂಧಗಳು ನಶಿಸಿಹೋಗುವುದರಲ್ಲಿ ಅನುಮಾನವಿಲ್ಲ.

–ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.