ಗುರುವಾರ , ಮೇ 13, 2021
16 °C

ಹಬ್ಬದ ಮಹತ್ವ ಅರಿಯಿರಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಯುಗಾದಿ ಸಂದರ್ಭದಲ್ಲಿ ರತ್ನ ಪಕ್ಷಿ ಅಥವಾ ಸಾಂಬಾರ್ ಕಾಗೆಯನ್ನು ನೋಡಲು ಜನ ತಂಡೋಪತಂಡವಾಗಿ ಹೊಲಗದ್ದೆಗಳಿಗೆ ಹೋಗುವುದನ್ನು ಕಾಣುತ್ತೇವೆ. ಅದೇ ರೀತಿ ಬೇವಿನ ಹೂಗಳು, ಎಲೆಗಳು ಬೇಕೇಬೇಕಾಗಿರುವುದರಿಂದ ಆ ದಿನ ಬೇವಿನ ಮರಕ್ಕೆ ಮುಗಿಬೀಳುವವರ ಸಂಖ್ಯೆಯೂ ಕಡಿಮೆ ಇಲ್ಲ. ಆಚರಣೆಗಳು ತಪ್ಪಲ್ಲ, ಆದರೆ ಮೂಲ ಉದ್ದೇಶವನ್ನೇ ಮರೆತರೆ? ರತ್ನ ಪಕ್ಷಿಯು ಇತರ ಪಕ್ಷಿಗಳಿಗಿಂತ ತುಸು ದುರ್ಬಲ. ಹೀಗಾಗಿ ಅದು ಅತಿ ಸುಲಭವಾಗಿ ಬೇಟೆಗಾರರಿಗೆ ಬಲಿಯಾಗುತ್ತದೆ. ಬಹುಶಃ ಇದರ ಅರಿವಿದ್ದ ನಮ್ಮ ಪೂರ್ವಜರು ಇದರ ಸಂರಕ್ಷಣೆಗಾಗಿ ಇಂತಹದ್ದೊಂದು ಆಚರಣೆ ತಂದಿದ್ದಿರಬಹುದೇನೋ. ಆದರೆ ಈ ಪಕ್ಷಿ ನಿಜಕ್ಕೂ ಈಗ ಅಪಾಯದ ಅಂಚಿನಲ್ಲಿದೆ.‌ ಇದರ ಗೂಡನ್ನು ಹುಡುಕಿ, ಮೊಟ್ಟೆ, ಮರಿಗಳ ಗೋಣು ಮುರಿದು ಬಿಸಾಡುವ ವಿಕೃತ ಮೂಢನಂಬಿಕೆ ಜೀವಂತವಾಗಿದೆ. ಜೊತೆಗೆ ಇದರ ದೇಹದಲ್ಲಿ ಔಷಧೀಯ ಗುಣಗಳಿವೆ ಎಂದೋ ಅಥವಾ ಇನ್ನಾವುದೋ ಮೌಢ್ಯಕ್ಕೆ ಒಳಗಾಗಿ ಈ ನಿರುಪದ್ರವಿಯನ್ನು ಬೇಟೆಯಾಡಲಾಗುತ್ತಿದೆ.

ಅಳಿವಿನ ಅಂಚಿನಲ್ಲಿರುವ ರತ್ನ ಪಕ್ಷಿಯ ಬೇಟೆಯನ್ನು ಸಾರ್ವಜನಿಕರು ಪ್ರತಿರೋಧಿಸಬಹುದಲ್ಲವೇ? ಆ ಮೂಲಕ ಅವುಗಳ ಸಂತತಿ ಉಳಿದರೆ ನಿತ್ಯ ಯುಗಾದಿಯೇ ಅಲ್ಲವೇ? ಜೊತೆಗೆ ಬೇವಿನ ಮರದ ವಿಶೇಷ ಗೊತ್ತಿರುವುದೇ. ಅದೊಂದು ಗಟ್ಟಿ ಮರಮುಟ್ಟು ಜೊತೆಗೆ ಬೇಸಿಗೆಯಲ್ಲಿ ಅದರ ಹಣ್ಣು, ಬೀಜಗಳಿಂದ ಹಲವು ಉಪಯೋಗಗಳಿವೆ. ಔಷಧೀಯ ಗುಣಗಳಿರುವ ಬೇವಿನಮರಗಳನ್ನು ಉಳಿಸಿಕೊಳ್ಳುವ ಸಲುವಾಗಿ ಇದೊಂದು ಆಚರಣೆ ಬಂದಿರಲೂಬಹುದು. ಆದರೆ ನಾವು ವರ್ಷಪೂರ್ತಿ ಇಂತಹ ಅನೇಕ ಹೆಮ್ಮರಗಳನ್ನು ಕಡಿದು, ಹಬ್ಬ ಬಂದಾಗ ಮಾತ್ರ ಭಕ್ತಿ ತೋರಿಸುವುದು ಯಾವ ನ್ಯಾಯ? ಮುಂದಿನ ಯುಗಾದಿಗೆ ಇಂದೇ ಒಂದು ಬೇವಿನ ಸಸಿ ನೆಟ್ಟು ಬೆಳೆಸಿದರೆ ಅದರ ಸಂತತಿಯೂ ಉಳಿದಂತೆ, ನಮ್ಮ ಆಚರಣೆಯೂ ಈಡೇರಿದಂತೆ ಅಲ್ಲವೇ?

- ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.