‘ಸಾವಿರಾರು ಹಿರಿಯ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಮೂರು ಸಾವಿರ ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಅವುಗಳನ್ನು ಬೇರೆ ಶಾಲೆಗಳಿಗೆ ಜೋಡಿಸಬೇಕಿದೆ’ ಎಂಬುದಾಗಿ ಸಚಿವರೇ ಮಾಹಿತಿ ಕೊಟ್ಟಿದ್ದಾರೆ.ನಿಜವಾಗಿ ಹೇಳಬೇಕೆಂದರೆ, ಏಳನೇ ತರಗತಿಗೆ ಬೇಕಾಗಿರುವುದು ಪಬ್ಲಿಕ್ ಪರೀಕ್ಷೆ ಅಲ್ಲ, ಶಾಲೆಗಳ ಸಬಲೀಕರಣ. ಬಹುತೇಕ ಸರ್ಕಾರಿ ಶಾಲೆಗಳ ಕಟ್ಟಡಗಳು ದುಃಸ್ಥಿತಿಯಲ್ಲಿವೆ. ಕನಿಷ್ಠ ಮೂಲ ಸೌಕರ್ಯಗಳೂ ಬಹುತೇಕ ಶಾಲೆಗಳಲ್ಲಿ ಇಲ್ಲ. ‘ಡಿಜಿಟಲ್ ಇಂಡಿಯಾ’ದ ಭಾಗವಾಗಿ ಶಾಲೆಗಳಿಗೆ ಆಧುನಿಕ ಸ್ಪರ್ಶ ಬೇಕಾಗಿದೆ. ‘ಫಿಟ್ ಇಂಡಿಯಾ’ದ ಭಾಗವಾಗಿ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆಗಳಿಗೂ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಬೇಕಿದೆ.