ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕಲ್ಪಿಸಲೂ ಸಾಧ್ಯವಿಲ್ಲ'

Last Updated 20 ಜನವರಿ 2013, 19:59 IST
ಅಕ್ಷರ ಗಾತ್ರ

ಚಿತ್ರದುರ್ಗದ ಮುರುಘರಾಜೇಂದ್ರ ಶರಣರು ಒಂದು ಹಳೆಯ ವಿಷಯದ ಬಗ್ಗೆ `ಪ್ರಜಾವಾಣಿ'ಯ `ಸಂಗತ'ದಲ್ಲಿ ಬರೆದಿದ್ದಾರೆ. ಬೃಹನ್ಮಠದ ಮಲ್ಲಿಕಾರ್ಜುನ ಶ್ರೀಗಳವರು ಮಾತುಕತೆಯ ಸಂದರ್ಭದಲ್ಲಿ ಕೈಹಿಡಿದಾಗ ನಾನು ಕೊಸರಿಕೊಂಡೆನು. ಆಗ ಮಲ್ಲಿ ಕಾರ್ಜುನ ಸ್ವಾಮಿಗಳು `ಕೈ ನೋವಾಯಿತೇ? ಚುಚ್ಚಿತೇ?' ಎಂದು ವಿನೋದವಾಗಿ ಪ್ರಶ್ನಿಸಿದ್ದರು.

ಆಗ ನಾನು ಲಿಂಗಾಯತ ಸ್ವಾಮಿಗಳ ಜೊತೆ ಅಸ್ಪೃಶ್ಯತೆಯಿಂದ ವ್ಯವಹರಿಸಿದ್ದೆನೆಂದೂ ಈಗ ಬಹಳ ಬದಲಾಗಿದ್ದೇನೆಂದೂ ಬರೆದಿದ್ದಾರೆ. ಆದರೆ ಇಂತಹ ಘಟನೆ ಆ ಕಾಲದಲ್ಲಿ ಖಂಡಿತವಾಗಿಯೂ ನಡೆದೇ ಇಲ್ಲ. ಲಿಂಗಾಯತ ಸ್ವಾಮಿಗಳ ಜೊತೆಗಾಗಲೀ ಬೇರೆಯವರ ಜೊತೆಗಾಗಲೀ ನಾನು ಅಸ್ಪೃಶ್ಯತೆಯ ವ್ಯವಹಾರವನ್ನು ಮಾಡಿಯೇ ಇಲ್ಲ.

1954 ರಿಂದಲೂ ಎಲ್ಲಾ ಲಿಂಗಾಯತ ಸ್ವಾಮಿಗಳ ಜೊತೆಗೂ ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿದ್ದೇನೆ. ಬ್ರಾಹ್ಮಣ ಮಠಾಧಿಪತಿಗಳಿಗೂ ವೀರಶೈವ ಮಠಾಧಿಪತಿಗಳಿಗೂ ಸ್ನೇಹ ಸಮಾವೇಶವನ್ನು ನಾನೇ ಆರಂಭಿಸಿದ್ದಾಗಿದೆ.

ಮಠಗಳ ಎಂಡೋಮೆಂಟ್ ವಿವಾದದ ಬಗ್ಗೆ ಮಠಾಧಿಪತಿಗಳ ಸಮಾವೇಶವನ್ನು ದಿವಂಗತ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 1978 ರ ಸುಮಾರಿಗೆ ನಡೆದಿದೆ. ಅದಕ್ಕಿಂತಲೂ ಮೊದಲೇ ನಾನು ದಲಿತರ ಕೇರಿಗಳಿಗೆ ಹೋಗಿ ಅಸ್ಪೃಶ್ಯತಾ ನಿವಾರಣೆಯ ಪ್ರಯತ್ನವನ್ನು ಪ್ರಾರಂಭಿಸಿದ್ದೆ.

ದಲಿತರನ್ನೇ ಅಸ್ಪೃಶ್ಯರಲ್ಲವೆಂದು ಪರಿಗಣಿಸಿ ಅವರ ಕೇರಿ,ಮನೆಗಳಿಗೆ ಹೋಗಿ ಅವರನ್ನು ಸ್ಪರ್ಶಿಸಿದ ನಾನು ಪ್ರತಿಷ್ಠಿತ ಲಿಂಗಾಯತ ಮಠಾಧೀಶರ ಜೊತೆಗೆ ಅಸ್ಪೃಶ್ಯತೆಯಿಂದ ವ್ಯವಹರಿಸಿದ್ದೇನೆಂದು ಕಲ್ಪಿಸಲೂ ಸಾಧ್ಯವಿಲ್ಲ. ವೀರಶೈವ ಮಠಾಧೀಶರನ್ನಾಗಲಿ ಇತರ ಮಠಾಧೀಶರನ್ನಾಗಲಿ ಅಗೌರವಿಸಿಲ್ಲ. ಎಲ್ಲರ ಬಗ್ಗೆಯೂ ನನಗೆ ವಿಶೇಷ ಅಭಿಮಾನವಿದೆ.

ಏನಾದರೂ ತಪ್ಪು ತಿಳಿವಳಿಕೆಯಾಗಿದ್ದಲ್ಲಿ ಅದನ್ನು ಈ ಮೂಲಕ ಸ್ಪಷ್ಟೀಕರಿಸಿ ಸರಿಪಡಿಸುತ್ತಿದ್ದೇನೆ. ಮುರುಘರಾಜೇಂದ್ರ ಶರಣರು ತಮ್ಮ ಲೇಖನದಲ್ಲಿ ನನ್ನ ಬಗ್ಗೆ ತೋರಿದ ಸಹೃದಯತೆ ಮತ್ತು ಅಭಿಮಾನದ ಬಗ್ಗೆ ನನಗೆಸಂತೋಷವಾಗಿದೆ.

ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT