ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆಗಟ್ಟುವ ಕಾನೂನು ಇಲ್ಲವೇ?

Last Updated 18 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಹೋರಾಟ, ಸತ್ಯಾಗ್ರಹ ಹಳೆಯದಾಯಿತು. ಇನ್ನೇನಿದ್ದರೂ ಕೊಲೆಗೆ ಕೊಲೆಯ ಮೂಲಕವೇ ಉತ್ತರ ಕೊಡಲು ಸಿದ್ಧರಾಗಬೇಕು’ ಎಂದು ಆರ್.ಎಸ್.ಎಸ್.ಮುಖಂಡ ರಾಮಚಂದ್ರ ಏಡಕೆ ಅವರ ನುಡಿಗಳನ್ನು ಓದುತ್ತಿದ್ದಂತೆಯೇ (ಪ್ರ.ವಾ., ಡಿ. 18) ಮುಂಬರಲಿರುವ ದಿನಗಳ ಬಗ್ಗೆ ಆತಂಕವುಂಟಾಯಿತು.

ನಿತ್ಯ ಬೆಳಗಾದರೆ ಸಾಕು ಸಮೂಹ ಮಾಧ್ಯಮಗಳಲ್ಲಿ ‘ಅಯೋಗ್ಯ, ನೀಚ, ಬಚ್ಚಾ, ಚೇಲಾ, ಖಬರಗೇಡಿ, ಹರಾಮಖೋರ, ಹುಚ್ಚ, ತಲೆತಿರುಕ’ ಮುಂತಾದ ಬಯ್ಗುಳದ ನುಡಿಗಳನ್ನು ರಾಜಕೀಯ ಹಾಗೂ ಜಾತಿ–ಧರ್ಮಗಳ ನೆಲೆಯಲ್ಲಿ ಸಕ್ರಿಯರಾಗಿ ತೊಡಗಿರುವ ವ್ಯಕ್ತಿಗಳು ಪರಸ್ಪರ ಬಳಸುತ್ತಿರುವುದನ್ನು ಕೇಳುತ್ತಿದ್ದೇವೆ. ಬಯ್ಯುವುದನ್ನಾಗಲೀ  ಬಯ್ಗುಳಗಳನ್ನಾಗಲೀ ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಏಕೆಂದರೆ ಅವು ನಿತ್ಯಜೀವನದ ಮಾತುಕತೆಗಳಲ್ಲಿ ವ್ಯಕ್ತಿಗಳ ಮನದೊಳಗಿನ ಕೋಪ, ತಾಪ, ಹತಾಶೆ, ಆತಂಕ, ಸೇಡಿನ ಭಾವನೆಗಳನ್ನು ಹೊರಚೆಲ್ಲುವ ಸಾಧನಗಳಾಗಿವೆ. ಇದರಿಂದ ಬಯ್ದವನಿಗೆ ಒಂದು ಬಗೆಯ ನಿರಾಳತೆಯುಂಟಾಗುತ್ತದೆ. ಬೈಸಿಕೊಂಡವನು ನೊಂದು ಇಲ್ಲವೇ ಕೆರಳಿ, ತಾನು ಕೇಳಿದ ಬಯ್ಗುಳಕ್ಕಿಂತ ಎರಡು ಪಟ್ಟು ಪ್ರಬಲವಾಗಿರುವ ಬಯ್ಗುಳವನ್ನು ಬಳಸಿ ಸಮಾಧಾನಪಟ್ಟುಕೊಳ್ಳುತ್ತಾನೆ.

ಆದರೆ ‘ತಲೆ ಕತ್ತರಿಸು, ಕೈಕಾಲು ಕತ್ತರಿಸು, ನಾಲಗೆ ಕತ್ತರಿಸು, ಕೊಲೆ ಮಾಡು’ ಎಂಬ ನುಡಿಗಳು ಬಯ್ಗುಳವಲ್ಲ; ಇವು ಭಯೋತ್ಪಾದನೆಯನ್ನು ಉಂಟುಮಾಡಿ, ಸಮಾಜದ ಮತ್ತು ದೇಶದ ಜನಸಮುದಾಯದ ಬದುಕನ್ನು ದುರಂತದತ್ತ ಕೊಂಡೊಯ್ಯುವಂತಹ ಹತಾರಗಳಾಗಿವೆ. ಆದುದರಿಂದ ಇಂತಹ ಮಾತುಗಳನ್ನು ಸಾರ್ವಜನಿಕ ಸಭೆಗಳಲ್ಲಿ ಆಡುವುದನ್ನು ಕಾನೂನಿನ ಮೂಲಕ ತಡೆಗಟ್ಟಲೇಬೇಕು. ಇಲ್ಲದಿದ್ದರೆ ಯಾರೊಬ್ಬರೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಕಾಡಿನಲ್ಲಿ ಒಣಗಿದ ಮೆಳೆಗಳ ನಡುವೆ ಹತ್ತಿಕೊಂಡ ಬೆಂಕಿ ತುಸು ಸಮಯದಲ್ಲೇ ಕಾಳ್ಗಿಚ್ಚಾಗಿ ಹಬ್ಬಿ ಇಡೀ ಕಾಡನ್ನೇ ನಾಶ ಮಾಡುವಂತೆ, ಇಂತಹ ಕಿಡಿನುಡಿಗಳು ಇಡೀ ಸಮಾಜವನ್ನೇ, ದೇಶವನ್ನೇ ನಾಶ ಮಾಡಬಲ್ಲ ಶಕ್ತಿಯನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT