ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರವಣಿಗೆಯ ಸರಿ ರೂಪ

Last Updated 23 ಜೂನ್ 2016, 19:30 IST
ಅಕ್ಷರ ಗಾತ್ರ

ಕನ್ನಡ ಬರವಣಿಗೆ ಅವನತಿಯ ಆತಂಕದ ಮೇಲೆ ಡಾ. ಬಿ.ಆರ್‌.ಸತ್ಯನಾರಾಯಣ ಅವರು ಆರಂಭಿಸಿದ ಚರ್ಚೆಯನ್ನು ಸಿ.ಪಿ.ನಾಗರಾಜ ಬೇರೊಂದೆಡೆಗೆ ತಿರುಗಿಸಿದ್ದಾರೆ.ಅವರ ಪ್ರತಿಕ್ರಿಯೆ ಮೊದಲರ್ಧ ಮೂಲಚರ್ಚೆಗೆ ಪೂರಕವಾಗಿದ್ದರೂ, ದ್ವಿತೀಯಾರ್ಧದಲ್ಲಿ ವ್ಯಕ್ತವಾಗಿರುವ ಅನಿಸಿಕೆಗೆ ಈ ಪ್ರತಿಕ್ರಿಯೆ. ಮೊದಲನೆಯದಾಗಿ, ‘ನಾ ಅಟ್ಟೀಗೆ ಹೊಂಟೆ/ ಹೊಯ್ತಿನಿ/ ಹೋಗ್ತಿನಿ’ ಮುಂತಾದ ಆಡುನುಡಿಯನ್ನು ಪ್ರತಿನಿತ್ಯ ಬಳಸುವ ಗ್ರಾಮೀಣ ಕನ್ನಡ ಮಕ್ಕಳ ಬರವಣಿಗೆ ಇನ್ನೂ ಚೆನ್ನಾಗಿಯೇ ಇದೆ!

ಈ ಬರವಣಿಗೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿರುವುದು ನಗರ ಪ್ರದೇಶದ ಮಕ್ಕಳಲ್ಲಿ. ಪಿಯುಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅನುತ್ತೀರ್ಣರಾಗುವವರಲ್ಲಿ ನಗರ ಪ್ರದೇಶದವರೇ ಹೆಚ್ಚು ಎಂಬುದನ್ನು ಗಮನಿಸಬೇಕು. ಹತ್ತು ವರ್ಷ ಕನ್ನಡ ಭಾಷೆಯಲ್ಲಿ ಓದಿ ಬರೆದ ಮಕ್ಕಳ ಬರವಣಿಗೆಯನ್ನು ಕಾಲೇಜು ಶಿಕ್ಷಣದಲ್ಲಿ ತಿದ್ದುವುದು ದುಸ್ಸಾಧ್ಯವಾಗಿರುವುದೇ ಇದಕ್ಕೆ ಕಾರಣ.

ಎರಡನೆಯದಾಗಿ, ಶಾಲಾ ಶಿಕ್ಷಣದಲ್ಲೇ ಮಕ್ಕಳಿಗೆ ಭಾಷೆಯ ಪ್ರಾದೇಶಿಕ ಭಿನ್ನತೆಯ ಬಗ್ಗೆ ತಿಳಿಸಿ, ಅದರ ಸರಿತಪ್ಪುಗಳನ್ನು ಮನವರಿಕೆ ಮಾಡಿಸಿ, ಬರವಣಿಗೆಯ ಸರಿಯಾದ ರೂಪವನ್ನು ತಿಳಿಸಬೇಕೆನ್ನುವುದು. ಭಾಷೆಗಳ ಪ್ರಾದೇಶಿಕ ಭಿನ್ನತೆ ಬಗೆಗಿನ ಭಾಷಾ ವಿಜ್ಞಾನವು ಸ್ನಾತಕ ಹಾಗೂ ಸ್ನಾತಕೋತ್ತರ ಕನ್ನಡ ಐಚ್ಛಿಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವಂತಹ ಗಂಭೀರ ವಿಷಯ. ಶಾಲಾ ಮಕ್ಕಳಿಗೆ ಇಷ್ಟೊಂದು ಗಂಭೀರವಾದ ವಿಷಯವನ್ನು ಕಲಿಸಲಾಗುತ್ತದೆಯೇ ಎಂಬುದು ಇಲ್ಲಿನ ಪ್ರಶ್ನೆ.

ಶಾಲಾ ಮಕ್ಕಳಿಗೆ ಸರಿಯಾದ ಕಾಗುಣಿತವನ್ನೂ ಕಲಿಸಲಾಗದ, ಕನ್ನಡವನ್ನು ದ್ವಿತೀಯ-ತೃತೀಯ ಭಾಷೆಯ ಮಟ್ಟಕ್ಕಿಳಿಸಿರುವ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಸಾಧ್ಯವೇ?
ಹಿಂದೆ, ಒಂದನೆಯ ತರಗತಿಯಿಂದಲೇ ಅಕ್ಷರ, ಕಾಗುಣಿತ, ಕಾಪಿ ಬರಹ ನಿತ್ಯದ ಕೆಲಸವಾಗಿತ್ತು.

ಮಾಧ್ಯಮಿಕ ಶಾಲೆಗೆ ಬರುವಷ್ಟರಲ್ಲಿ ಮಕ್ಕಳು ತಪ್ಪಿಲ್ಲದ ಬರವಣಿಗೆಗೆ ಒಗ್ಗಿಕೊಳ್ಳುತ್ತಿದ್ದರು. ಪ್ರಾಥಮಿಕ ಶಿಕ್ಷಣದ ಅಡಿಪಾಯ ಗಟ್ಟಿಯಾಗಿದ್ದರೆ ಬರವಣಿಗೆಯದ್ದು ಸಮಸ್ಯೆಯೇ ಅಲ್ಲ ಎಂಬುದಂತೂ ಸ್ಪಷ್ಟ. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಸೆಮಿಸ್ಟರ್- ಟ್ರೈಮಿಸ್ಟರ್ ಪದ್ಧತಿಯಲ್ಲಿ, ಮಕ್ಕಳಿಗೆ ಕಲಿಸಿ, ಪರೀಕ್ಷೆ ನಡೆಸಿ, ಮೌಲ್ಯಮಾಪನ ಮಾಡಿ, ಪಾಸು ಮಾಡುವ ‘ತಳ್ಳು’ ಸಂಸ್ಕೃತಿಯ ವಿಷವರ್ತುಲದಲ್ಲಿ ಶಿಕ್ಷಕ ಸಮುದಾಯ ಸಿಕ್ಕಿಬಿದ್ದಿದೆ. ಇದು ಕನ್ನಡದ ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT