ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆಗೇಕೆ ಬೇಲಿ?

Last Updated 1 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಅಂಬೇಡ್ಕರ್‌ ಅವರು ಸಂದರ್ಶನವೊಂದರಲ್ಲಿ ಕಲಿಕಾ ಮಾಧ್ಯಮವಾಗಿ ಭಾಷೆಯ ಬಗ್ಗೆ ಮಾತನಾಡುತ್ತಾ ‘ಇಂಗ್ಲಿಷನ್ನು ಹೊರತುಪಡಿಸಿ ಶಾಲಾ ಕಾಲೇಜುಗಳಲ್ಲಿ ಮಾಧ್ಯಮವಾಗಿ ಬಳಸುವುದಕ್ಕೆ ಹಿಂದಿಯನ್ನೂ ಒಳಗೊಂಡಂತೆ ಬೇರೆ ಯಾವುದೇ ಭಾರತೀಯ ಭಾಷೆಯ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೂ ಭಾರತೀಯ ಭಾಷೆಗಳ ವಿಷಯಕ್ಕೆ ಬಂದರೆ ಹಿಂದಿಯ ಸ್ಥಾನವನ್ನು ಬೇರೆ ಯಾವುದೇ ಭಾಷೆಯೂ ತುಂಬಲು ಸಾಧ್ಯವಿಲ್ಲ. ಕಾರಣ ಹಿಂದಿಗೆ ವಿಸ್ತರಣೆಗೊಳ್ಳುವಂಥ ಸಾಮರ್ಥ್ಯವಿದೆ. ಹೀಗಿದ್ದರೂ ಹಿಂದಿ ಭಾಷೆ ಸಾಹಿತ್ಯ ಮತ್ತು ಆಳವಾದ ಪರಂಪರೆಯ ಕೊರತೆಯಿಂದ ನರಳುತ್ತಿದೆ’ ಎಂದಿದ್ದರು.

ಈ ಮಾತಿನಂತೆ, ಹಿಂದಿ ಭಾಷೆಗೆ ಇಲ್ಲದ ಆಳವಾದ ಪರಂಪರೆ ಮತ್ತು ಸಾಹಿತ್ಯ ನಮ್ಮ ದ್ರಾವಿಡ ಭಾಷೆಯಾದ ಕನ್ನಡಕ್ಕೆ ಇದೆ. ಅಂದರೆ ಕನ್ನಡಕ್ಕೆ ವಿಸ್ತರಣೆಯಾಗುವ ಅರ್ಹತೆ ಇದೆ. ಆದರೆ ಇಂತಹ ಅರ್ಹತೆಗೆ ಶುದ್ಧ, ಅಶುದ್ಧದ ಬಣ್ಣ ಬಳಿದರೆ? ಶಿಷ್ಟ, ಅನಿಷ್ಟದ ಚೌಕಟ್ಟು ಇಟ್ಟರೆ? ಆ ಸೀಮೆಯದ್ದು ವಿಶಿಷ್ಟ, ಈ ಸೀಮೆಯದ್ದು ಕನಿಷ್ಠ ಎಂಬ ತಾರತಮ್ಯದ ಗೆರೆ ಎಳೆದರೆ? ಉದಾಹರಣೆಗೆ ಧಾರವಾಡ, ಮಂಗಳೂರು,  ಮಂಡ್ಯ ಸೀಮೆಯ ಭಾಷೆ ಚಲನಚಿತ್ರಗಳಲ್ಲಿ ಬಳಕೆಯಾಗುತ್ತದೆ. ಆದರೆ ಚಾಮರಾಜನಗರ ಸೀಮೆ ಭಾಷೆಯನ್ನು ಯಾವ ಚಲನಚಿತ್ರದಲ್ಲಿ ಬಳಸಿದ್ದಾರೆ?

ನಮ್ಮ ನೇಟಿವಿಟಿಯ ಭಾಷೆ ಮಾತನಾಡ ಹೋದರೆ ‘ಹೇ, ಶಿಷ್ಟ ಭಾಷೆ ಬಳಸಿ’ ಎಂಬ ಆಕ್ಷೇಪವೂ ಗೆಳೆಯರಿಂದ ಬರುವುದುಂಟು! ಅದರಲ್ಲೂ ‘ಸ’ ಕಾರ, ‘ಶ’ ಕಾರ ಉಚ್ಚಾರಣೆ ಮಾಡಲು ಬರುವುದಿಲ್ಲ ಎಂಬ ಆಕ್ಷೇಪ.

ಒಟ್ಟಾರೆ ಶುದ್ಧ ಭಾಷೆ ಎಂಬ ಪರಿಕಲ್ಪನೆಯು ಭಾಷೆಯನ್ನು ಪಂಜರದೊಳಗೆ ಕೂಡಿಹಾಕುತ್ತದೆ. ಆಗ ಭಾಷೆ ತನ್ನ ವಿಸ್ತರಣಾ ಯೋಗ್ಯತೆಯನ್ನು ಕಳೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ, ಅಂಬೇಡ್ಕರ್‌ ಹಿಂದಿ ಭಾಷೆ ಕುರಿತು ಹೇಳಿದ ಮಾತುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.  ಸ್ಥಳವನ್ನು ಆಧರಿಸಿದ ಭಾಷಾ ತಾರತಮ್ಯದಿಂದ ಹೊರಬಂದು, ಕನ್ನಡ  ಹೇಗಾದರೂ ಚಿಗುರೊಡೆಯಲಿ ಯಾವ ಸೀಮೆಯದ್ದಾದರೂ ಇರಲಿ ಅದನ್ನು ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಶುದ್ಧತೆಯ ಬೇಲಿಯೊಳಗೆ ಭಾಷೆಯನ್ನು ಬಂಧಿಸುವುದನ್ನು ನಿಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT