ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೂ ಧರ್ಮಗಳ ಸಮಾನ ಅಂಶ

Last Updated 19 ಜೂನ್ 2013, 19:59 IST
ಅಕ್ಷರ ಗಾತ್ರ

`ಸಂಗತ'ದಲ್ಲಿ (ಜೂ.13) `ಸುಳ್ಳು ಸಾರುವ ಹುನ್ನಾರ ನಿಲ್ಲಲಿ' ಎಂಬ ಶಿರೋನಾಮೆಯಲ್ಲಿ ಬಸವಣ್ಣನವರು ಮಾಂಸಾಹಾರಿಗಳ ವಿರೋಧಿಯಾಗಿದ್ದರು ಎನ್ನಲು ಏನಾದರೂ ಆಧಾರವಿದೆಯೇ ಎಂದು ಲೇಖಕಿ ಪ್ರಶ್ನಿಸಿದ್ದಾರೆ. ಬಸವಣ್ಣನವರ ವಚನ ಹೀಗಿದೆ:

`ಹಿಂದೆ ಭವಿಯಾಗಿದ್ದಾಗ ಭುಂಜಿಸುತ್ತಿದ್ದ ಸುರೆ, ಮಾಂಸ ಬಿಡದಿದ್ದವರು ಆ ಕತ್ತೆ ಬೆಕ್ಕು ಸೂಕರ ಸೊಣಗ ಕೂಳಿಗಿಂತ ತತ್ತ ಕಡೆ ನೋಡಿರೇ', `ಕಿಂ ಮಾಂಸಂ ಕಾ ಶಿವೇ ಭಕ್ತಿಃ, ಕಿಂ ಮದ್ಯಂ ಕಃ ಶಿವಾರ್ಚಕಃ ಮದ್ಯಮಾಂಸರತಾನಾಂ ದೂರೇ ತಿಷ್ಠಾಮಿ ಶಂಕರಿ. ಪಶುಂ ಹತ್ವಾಸುರಾಂ ಪೀತ್ವಾಕೃತ್ವಾವಲಲಭೋಜನಂ ನರಕಂ ತೇನ ಗಮ್ಯತೇ', `ನಡುನೀರಿಗೆ ಹೋಗಿ ಹರಗೋಲು ತಲೆಕೆಳಗಾದಂತೆ ಕಾಣಿ ಕೂಡಲಸಂಗಮದೇವಾ'.

ಹಿಂದೆ ಸೇವಿಸುತ್ತಿದ್ದ ಮದ್ಯ-ಮಾಂಸಗಳನ್ನು ಲಿಂಗದೀಕ್ಷೆಯನ್ನು ಪಡೆದ ನಂತರ ಬಿಡದಿದ್ದರೆ ಅವನು ಶಿವಭಕ್ತನೇ ಅಲ್ಲ. ಮದ್ಯ-ಮಾಂಸಗಳೆಲ್ಲಿ? ಶಿವಭಕ್ತಿಯೆಲ್ಲಿ? ಮದ್ಯ-ಮಾಂಸಗಳನ್ನು ಸ್ವೀಕರಿಸುವವನು ನರಕಕ್ಕೆ ಹೋಗುವವನೆಂದು ಮಾಂಸಾಹಾರವನ್ನು ಕಟುವಾಗಿ ನಿಂದಿಸಿದ್ದಾರೆ.

ಆದುದರಿಂದಲೇ ಲಿಂಗದೀಕ್ಷೆ ಪಡೆಯಬೇಕಾದರೆ ಮದ್ಯ-ಮಾಂಸಗಳನ್ನು ಬಿಡಬೇಕೆನ್ನುವುದು ಲಿಂಗಾಯತ ಧರ್ಮದಲ್ಲಿ ಪ್ರಚಲಿತವಾಗಿದೆ. ಲಿಂಗದೀಕ್ಷೆಯನ್ನು ಪಡೆಯದಿದ್ದವರ ಜೊತೆಗೆ ಸಹಪಂಕ್ತಿ ಭೋಜನವನ್ನು ಲಿಂಗಾಯತ ಧರ್ಮದಲ್ಲಿ ನಿಷೇಧಿಸಲಾಗಿದೆಯೆಂದು ನಿಡುಮಾಮಿಡಿ ಸ್ವಾಮೀಜಿಯವರು ನನ್ನ ಜೊತೆಗಿನ ಟಿ.ವಿ. ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ನಾನು ಸರಿಯಾದ ಆಧಾರವಿಲ್ಲದೆ ಯಾವ ಮಾತನ್ನೂ ಆಡಿಲ್ಲ. ಸುಳ್ಳು ಹೇಳುತ್ತಿದ್ದೇನೆ ಎಂದು ಲೇಖಕಿಯರು ಸರಿಯಾಗಿ ಪರಿಶೀಲಿಸದೇ ನನ್ನ ಮೇಲೆ ಆರೋಪ ಮಾಡಿದ್ದಾರೆ. ಮುಖತಃ ಭೇಟಿಯಾದರೆ ಇನ್ನೂ ಹೆಚ್ಚಿನ ವಚನಗಳನ್ನು ನಾನು ತೋರಿಸುತ್ತೇನೆ.

ಬಸವಣ್ಣನವರನ್ನು ನಾನು ಎಲ್ಲಿಯೂ ನಿಂದಿಸಿಲ್ಲ. ಜೈನಧರ್ಮ ಮತ್ತು ವೈದಿಕಧರ್ಮದಂತೆ ಲಿಂಗಾಯತ ಧರ್ಮವೂ ಮಾಂಸಾಹಾರವನ್ನು ನಿಷೇಧಿಸುತ್ತದೆ ಎಂಬ ಸತ್ಯಸಂಗತಿಯನ್ನು ಹೇಳಿ ಮೂರು ಧರ್ಮಗಳಲ್ಲಿಯೂ ಇರುವ ಸಮಾನ ಅಂಶವನ್ನು ತಿಳಿಸಿದ್ದೇನೆ. ಬಸವಣ್ಣನವರನ್ನು ನಾವು ವಿಶೇಷವಾಗಿ ಗೌರವಿಸುತ್ತೇವೆ. ಅವರ ವಚನಗಳಲ್ಲಿರುವ ಭಕ್ತಿಭಾವ, ನೈತಿಕ ಸಂದೇಶ, ಜನರ ಮೇಲಿನ ಅನುಕಂಪ, ಸಹೃದಯತೆಗಳು ನಮ್ಮನ್ನು ನಿಜವಾಗಿಯೂ ಭಾವುಕರನ್ನಾಗಿಸುತ್ತವೆ.

ಕೃಷ್ಣಮಠದಲ್ಲಿ ನಿತ್ಯವೂ ಸಹಸ್ರಾರು ಜನರು ಶಾಕಾಹಾರಿಗಳು, ಶಾಕಾಹಾರಿಗಳಲ್ಲದವರೂ ಒಟ್ಟಿಗೇ ಸಹಪಂಕ್ತಿಯಲ್ಲಿ ಭೋಜನವನ್ನು ಮಾಡುತ್ತಾರೆ. ಆಹಾರ ನಿಯಮವುಳ್ಳವರಿಗೆ ಸಾಂಪ್ರದಾಯಿಕ ಭೋಜನದ ವ್ಯವಸ್ಥೆಯೂ ಇದೆ. ನಾವು ಮಾಂಸಾಹಾರಿಗಳನ್ನುತಿರಸ್ಕರಿಸುವುದಿಲ್ಲ. ಅವರಿಗೂ ವೈಷ್ಣವದೀಕ್ಷೆಯನ್ನು ಕೊಡಲು ನಾವು ಸಿದ್ಧರಿದ್ದೇವೆ.
-ವಿಶ್ವೇಶತೀರ್ಥ ಶ್ರೀಪಾದರು ,ಉಡುಪಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT