ರೈಲ್ವೆ ಇಲಾಖೆ ಇತ್ತೀಚೆಗೆ ಪ್ಲಾಟ್ ಫಾರಂ ಟಿಕೆಟ್ ದರವನ್ನು ₨ 5ರಿಂದ ₨ 10ಕ್ಕೆ ಏರಿಸಿದೆ. ಈ ಏರಿಕೆ ಅವೈಜ್ಞಾನಿಕ. ಏಕೆಂದರೆ ಪ್ಯಾಸೆಂಜರ್ ರೈಲು ಪ್ರಯಾಣಕ್ಕೆ 5 ರೂಪಾಯಿ ದರದ ಟಿಕೆಟ್ ಇದೆ. ಅದನ್ನೇ ತೆಗೆದುಕೊಂಡು ರೈಲ್ವೆ ನಿಲ್ದಾಣ ಪ್ರವೇಶಿಸಲು ಯಾರದ್ದೂ ಅಡ್ಡಿ ಇಲ್ಲ ತಾನೆ? ಆ ಟಿಕೆಟ್ಗೂ 2 ತಾಸಿನ ಮಾನ್ಯತೆ ಇದೆ. ಯಾವ ದಡ್ಡ ₨ 10 ಕೊಟ್ಟು ಪ್ಲಾಟ್ಫಾರಂ ಟಿಕೆಟ್ ಕೊಳ್ಳುತ್ತಾನೆ?
ನಾನು 10 ವರ್ಷಗಳಿಂದ ಬೆಂಗಳೂರು– ಮೈಸೂರು ಪ್ಯಾಸೆಂಜರ್ ರೈಲಿನಲ್ಲಿ ನಿಯಮಿತವಾಗಿ ಪ್ರಯಾಣಿಸುತ್ತಿದ್ದೇನೆ. ಆದರೆ ಒಂದೇ ಒಂದು ಸಲವೂ ಟಿಕೆಟ್ ತಪಾಸಣೆಗೆ ಯಾರೂ ಬಂದಿಲ್ಲ. ನೂರಾರು ಜನರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಾರೆ. ಇದಕ್ಕೆ ನನ್ನದೊಂದು ಸಲಹೆ: ಟಿಕೆಟ್ ತಪಾಸಣೆ ಕಾರ್ಯವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬೇಕು. ದಂಡ ಸಂಗ್ರಹದಲ್ಲಿ ಅವರಿಗೆ ಒಂದಷ್ಟು ಕಮಿಷನ್ ನೀಡಿದರೆ ರೈಲ್ವೆಗೂ ಸಾಕಷ್ಟು ಆದಾಯ ಬರುತ್ತದೆ.