ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಉಲ್ಲೇಖದಲ್ಲಿ ಲೋಪ

Last Updated 23 ಏಪ್ರಿಲ್ 2018, 19:41 IST
ಅಕ್ಷರ ಗಾತ್ರ

ಪ್ರೊ. ಜಿ.ಕೆ. ಗೋವಿಂದರಾವ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಿಂತಕರೊಬ್ಬರು ಅಲ್ಲಮನ ವಚನವನ್ನು: ‘ಪೃಥ್ವಿಗೆ ಹುಟ್ಟಿ ಶಿಲೆಯಾದ, ಅಕ್ಕಸಾಲಿಗನ ಕೈಯಲ್ಲಿ ಮೂರ್ತಿಯಾದ, ಆಚಾರ್ಯನ ಕೈಯಲ್ಲಿ ಲಿಂಗವಾದ ಈ ಮೂವರಿಗೆ ಹುಟ್ಟಿದ ಸೂಳೆಯ ಮಗನ ನಾ ಹೇಗೆ ಪೂಜಿಸಲಯ್ಯ ಗುಹೇಶ್ವರ!’ ಎಂದು ಉದ್ಧರಿಸಿದ್ದರು (ಪ್ರ.ವಾ., ಏ.23). ಆದರೆ ಆ ವಚನದ ಮೂಲಪಾಠದಲ್ಲಿ ‘ಸೂಳೆ’ ಎಂಬ ಪದವಿಲ್ಲ. (ಮೂಲಪಾಠ: ಪೃಥ್ವಿಗೆ ಹುಟ್ಟಿದ ಶಿಲೆ, ಕಲುಕುಟ್ಟಿಗಂಗೆ ಹುಟ್ಟಿದ ಮೂರುತಿ, ಮಂತ್ರಕ್ಕೆ ಲಿಂಗವಾಯಿತ್ತಲ್ಲಾ! ಈ ಮೂವರಿಗೆ ಹುಟ್ಟಿದ ಮಗನ ಲಿಂಗವೆಂದು ಕೈವಿಡಿವ, ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರಾ– ಅಲ್ಲಮನ ವಚನ ಚಂದ್ರಿಕೆ, ಸಂ: ಎಲ್. ಬಸವರಾಜು, ವಚನ ಸಂ. 209, 2001).

ಇದು, ಭಾಷಣ ಮಾಡುವಾಗ ಸಹಜವಾಗಿಯೇ ಸಂಭವಿಸಬಹುದಾದ ಮತ್ತು ಉದಾರವಾಗಿ ನಿರ್ಲಕ್ಷಿಸಬಹುದಾದ ಒಂದು ಸಣ್ಣ ಲೋಪವಿರಬಹುದು. ಆದರೆ ಆ ವಚನಕ್ಕೆ ‘ಸೂಳೆ’ ಎಂಬ ಇಲ್ಲದ ಪದ ಸೇರಿದಾಗ ಅದರ ಅರ್ಥವ್ಯಾಪ್ತಿ ಕಿರಿದಾಗುತ್ತದೆ, ವಾಚ್ಯವಾಗಿಬಿಡುತ್ತದೆ ಎಂಬುದು ಮುಖ್ಯ (ಆ ಪದ ಅನ್ಯ ಪಾಠಾಂತರಗಳಲ್ಲೂ ಕಾಣಸಿಗುವುದಿಲ್ಲ).

‘ಮೂವರಿಗೆ ಹುಟ್ಟಿದ ಮಗ’ ಎಂಬ ಸಾಲಿನಲ್ಲಿ ದೈವವೆಂಬುದು ಏಕವ್ಯಕ್ತಿಯ ಕಲ್ಪನೆಯಲ್ಲ, ಅದು ಒಂದು ಸಂಸ್ಕೃತಿಯಲ್ಲಿ ಕಾಲಾಂತರದಲ್ಲಿ ಹಲವು ತಲೆಮಾರುಗಳ ಚಿಂತನೆ, ಸಾಧನೆಗಳ ಫಲಶ್ರುತಿಯಾಗಿ ಹುಟ್ಟುವ ಒಂದು ವ್ಯಾಪಕವಾದ ಮತ್ತು ಮಾನವೀಯವಾದ ಕಲ್ಪನೆ ಎಂಬ ವಿಶ್ವಾತ್ಮಕ ಗ್ರಹಿಕೆ ಇದೆ. ಜೊತೆಗೆ ಅಚ್ಚವ್ರತ (ಮಡಿವಂತಿಕೆ) ಎಂಬ ಬಡಿವಾರದ ವಿಡಂಬನೆ ಇದೆ. ‘ಸೂಳೆಯ ಮಗ’ ಎಂದೊಡನೆ ಆ ವಚನದ ತಾತ್ವಿಕ ಆಯಾಮವೇ ಮರೆಯಾಗಿ ಅದಕ್ಕೆ ವಾಚ್ಯಾರ್ಥ, ನೀಚಾರ್ಥಗಳು ಪ್ರಾಪ್ತಿಯಾಗುತ್ತವೆ. ಶರಣರ ಒಂದೋ ಅಥವಾ ಎರಡೋ ಸಾಲನ್ನು ಹಿಡಿದುಕೊಂಡು ಬೇಡದ ವಾಗ್ವಾದ, ರಾಜಕಾರಣಗಳು ಸೃಷ್ಟಿಯಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ವಚನಗಳ ಕಾವ್ಯಗುಣ ಮತ್ತು ಅರ್ಥಬಾಹುಳ್ಯವನ್ನು ಸಮುದಾಯಕ್ಕೆ ನಿರ್ದುಷ್ಟವಾಗಿ ಪರಿಚಯಿಸಬೇಕಾದುದು ಇಂದಿನ ಸಂದರ್ಭಕ್ಕೆ ಅತ್ಯಗತ್ಯವೆನಿಸುತ್ತದೆ. ಆದಕಾರಣ ಈ ಸ್ಪಷ್ಟೀಕರಣ.

ಟಿ.ಎನ್. ವಾಸುದೇವಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT