ಸ್ಥಳೀಯ ಜಲಸಂಪನ್ಮೂಲ ಬಳಕೆಯೇ ಆದ್ಯತೆಯಾಗಲಿ

7

ಸ್ಥಳೀಯ ಜಲಸಂಪನ್ಮೂಲ ಬಳಕೆಯೇ ಆದ್ಯತೆಯಾಗಲಿ

Published:
Updated:
pp

ದೊಡ್ಡ ದೊಡ್ಡ ಯೋಜನೆಗಳ ಅನುಷ್ಠಾನದಲ್ಲಿ ಆಡಳಿತ ವ್ಯವಸ್ಥೆಗೆ ಇರುವಂತಹ ಆಸಕ್ತಿ ಸಣ್ಣ–ಪುಟ್ಟ ಪರಿಹಾರಗಳಲ್ಲಿ ಇರುವುದಿಲ್ಲ ಎನ್ನುವುದು ಲಾಗಾಯ್ತಿನಿಂದಲೂ ಕೇಳಿಬರುತ್ತಿರುವ ಮಾತು. ಬಿ.ಎನ್‌. ತ್ಯಾಗರಾಜ್‌ ಸಮಿತಿಯ ಶಿಫಾರಸಿನಂತೆ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತರುವ ಯೋಜನೆಯನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ಸದ್ಯ ತೋರುತ್ತಿರುವ ಆಸಕ್ತಿ ನೋಡಿದರೆ ಆ ಮಾತಿನಲ್ಲಿ ಸತ್ಯವಿದೆ ಎನಿಸುತ್ತದೆ. ರಾಜಧಾನಿಯಿಂದ ಸುಮಾರು 425 ಕಿ.ಮೀ.ಗಳಷ್ಟು ದೂರದಲ್ಲಿರುವ ಜಲಾಶಯದಿಂದ ನೀರು ತರುವ ಸಂಬಂಧ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಸೂಚಿಸಿರುವುದು ವಿವೇಚನೆಯಿಂದ ಕೂಡಿದ ಕ್ರಮವಲ್ಲ. ಅಷ್ಟೊಂದು ದೂರದವರೆಗೆ ಪೈಪ್‌ ಅಳವಡಿಸುವುದು, ನಿತ್ಯವೂ ಅಷ್ಟೊಂದು ದೂರದಿಂದ ನೀರು ಪಂಪ್‌ ಮಾಡುವುದು ಸುಲಭದ ಕೆಲಸವಲ್ಲ. ಈ ಯೋಜನೆಯ ಅನುಷ್ಠಾನಕ್ಕಾಗಿ ನದಿಯಲ್ಲಿ ನೀರು ಹರಿದಂತೆಯೇ ಹಣದ ಹೊಳೆಯನ್ನೇ ಹರಿಸಬೇಕಾದೀತು. ನಗರದ ದಾಹ ತಣಿಸಲು ಹೀಗೆ ಹೊಸ ಹೊಸ ಜಲಮೂಲಗಳನ್ನು ಹುಡುಕುತ್ತಾ ಹೊರಟರೆ ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ. ಕಾವೇರಿ, ಎತ್ತಿನಹೊಳೆ, ಮೇಕೆದಾಟು, ಲಿಂಗನಮಕ್ಕಿ... ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನೀರಿನ ಬರವನ್ನು ನೀಗಿಸುವ ಇಚ್ಛೆ ನಿಜವಾಗಿಯೂ ಉಪ ಮುಖ್ಯಮಂತ್ರಿಯವರಿಗೆ ಇದ್ದಿದ್ದಾದರೆ ಮೊದಲು ಸ್ಥಳೀಯವಾಗಿ ಲಭ್ಯವಿರುವ ಜಲಸಂಪನ್ಮೂಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವತ್ತ ಗಮನಹರಿಸಬೇಕು.

ಹಾಗೆ ನೋಡಿದರೆ ಜಗತ್ತಿನ ಯಾವ ಮಹಾನಗರದಲ್ಲೂ ಇಲ್ಲದಷ್ಟು ಕೆರೆಗಳು ಬೆಂಗಳೂರಿನಲ್ಲಿದ್ದವು. ಸಾವಿರ ಕೆರೆಗಳ ಬೀಡಾಗಿದ್ದ ಇಲ್ಲಿನ ಪರಿಸರ ಈಗ ಸತ್ತ ಕೆರೆಗಳ ತಾಣವಾಗಿ ಬದಲಾಗಿದೆ. ಭೂದಾಹದಿಂದ ಕೆರೆಗಳನ್ನೇ ನುಂಗಿ ನೀರು ಕುಡಿದ ರಿಯಲ್‌ ಎಸ್ಟೇಟ್‌ ಕುಳಗಳು, ನಗರದ ಭವಿಷ್ಯವನ್ನೇ ಮರೆತು ಅವರಿಗೆ ಸಹಕರಿಸಿದ ಅಧಿಕಾರಿಗಳು–ಜನಪ್ರತಿನಿಧಿಗಳು ಮತ್ತು ಸಿಕ್ಕಸಿಕ್ಕಲ್ಲಿ ಮನೆ ಕಟ್ಟಿಕೊಂಡು ಜಲಮೂಲಗಳ ಕತ್ತು ಹಿಸುಕಿದ ಹೊಣೆಗೇಡಿ ನಾಗರಿಕರು... ಎಲ್ಲರೂ ಈ ದುಃಸ್ಥಿತಿಗೆ ಕಾರಣ. ಒಂದೊಮ್ಮೆ ಉದ್ಯಾನನಗರಿ ಎಂದು ಹೆಮ್ಮೆಯಿಂದ ಬೀಗಿದ್ದ ಊರು ಈಗ ಕೇಪ್‌ಟೌನ್‌ನಂತೆಯೇ ಜಲಕ್ಷಾಮದ ಭೀತಿ ಎದುರಿಸುತ್ತಿದ್ದರೂ ಆಡಳಿತ ವ್ಯವಸ್ಥೆ ನಿರುಮ್ಮಳವಾಗಿ ಕಾಲ ಕಳೆಯುತ್ತಿರುವುದು ಕುಚೋದ್ಯವೇ ಸರಿ. ಕಾವೇರಿಯಿಂದ ಸದ್ಯ ನಗರಕ್ಕೆ ಆಗುತ್ತಿರುವ ಪೂರೈಕೆಯಲ್ಲಿ ಶೇ 30ರಷ್ಟು ನೀರು ಪೋಲಾಗುತ್ತಿದೆ. ವಾರ್ಷಿಕ ಸರಾಸರಿ 800 ಮಿ.ಮೀ.ನಷ್ಟು ಮಳೆ ಸುರಿಯುವ ಈ ನಗರದಲ್ಲಿ ಮಳೆ ನೀರಿನ ಜತೆಗೆ ತ್ಯಾಜ್ಯ ನೀರೂ ಚರಂಡಿಯಲ್ಲಿ ಹರಿದು ಹೋಗುತ್ತಿದೆ. ಈ ಜಲ ಮೂಲವನ್ನು ಬಳಸಿಕೊಳ್ಳಲು ವ್ಯವಸ್ಥೆ ಮಾಡಿದರೆ ವಾರ್ಷಿಕ 31 ಟಿಎಂಸಿ ಅಡಿಯಷ್ಟು ನೀರು ಹೆಚ್ಚುವರಿಯಾಗಿ ಲಭ್ಯವಾಗಲಿದೆ. ಆಗ ಯಾವ ಹೊಸ ಜಲಮೂಲದ ಕಡೆಗೂ ಕಣ್ಣರಳಿಸಿ ನೋಡುವ ಪ್ರಮೇಯವೇ ಬಾರದು. ತುರ್ತಾಗಿ ಆಗಬೇಕಿರುವುದು ನಗರದಲ್ಲಿ 2,400 ಚದರ ಅಡಿ ಹಾಗೂ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದಲ್ಲಿರುವ ಪ್ರತೀ ಕಟ್ಟಡದಲ್ಲೂ ಮಳೆ ನೀರಿನ ಸಂಗ್ರಹದ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಹಾಗೂ ತ್ಯಾಜ್ಯ ನೀರನ್ನು ಸಂಪೂರ್ಣವಾಗಿ ಸಂಸ್ಕರಿಸಿ ಬಳಕೆ ಮಾಡುವುದು. ಇದಕ್ಕೇನು ಸರ್ಕಾರ ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ. ಮಳೆ ನೀರು ಸಂಗ್ರಹಕ್ಕೆ ಜಲಮಂಡಳಿಯ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವುದರ ಜತೆಗೆ ತ್ಯಾಜ್ಯನೀರು ಸಂಸ್ಕರಣೆಯ ಕೆಲವು ಘಟಕಗಳನ್ನು ಸ್ಥಾಪಿಸಿದರೆ ಸಾಕು. ಹಾಗೆಯೇ ವಿಫಲವಾದ ಎಲ್ಲ ಕೊಳವೆ ಬಾವಿಗಳನ್ನೂ ಅಂತರ್ಜಲ ಮರುಪೂರಣಕ್ಕೆ ಬಳಸಿಕೊಳ್ಳುವ ಪರಿಪಾಟ ಬೆಳೆಸಿಕೊಳ್ಳಬೇಕು. ದಾರಿಯೇನೋ ಸುಲಭವಾಗಿಯೇ ಇದೆ. ಆದರೆ, ಸಾವಿರಾರು ಕೋಟಿ ರೂಪಾಯಿಯ ದೊಡ್ಡ ದೊಡ್ಡ ಯೋಜನೆಗಳು ಕಣ್ಣು ಕೊರೈಸುತ್ತಿರುವಾಗ ಈ ಸಣ್ಣ–ಪುಟ್ಟ ಪರಿಹಾರಗಳು ಯಾರಿಗೆ ಕಂಡಾವು?

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !