7

ಹೆಣಗಳು ಕೇಳದೊಂದು ಬಾಕಿ ಉಳಿದೈತಿ..!

Published:
Updated:

ವಿಜಯಪುರ: ‘ವಿಜಯಪುರ ಮಹಾನಗರ ಪಾಲಿಕೆಯ ಆಡಳಿತ ವೈಖರಿಯನ್ನು ಟೀಕಿಸದವರಿಲ್ಲ. ಅಧಿಕಾರಿಗಳಿಗೆ, ಕಾರ್ಪೊರೇಟರ್‌ಗಳಿಗೆ ಬೈಯದವರಿಲ್ಲ. ಹೆಣಗಳು ಕೇಳೋದೊಂದು ಬಾಕಿ ಉಳಿದೈತಿ..!’

ಪಾಲಿಕೆಯ ಹಿರಿಯ ಸದಸ್ಯ ವಿಜಯಕುಮಾರ ಮಂಗಳವೇಡೆ ಈಚೆಗೆ ನಡೆದ ತುರ್ತು ಸಭೆಯಲ್ಲಿ ಅಧಿಕಾರಿಗಳು, ಮೇಯರ್‌– ಉಪ ಮೇಯರ್‌ ವಿರುದ್ಧ ವ್ಯಂಗ್ಯಭರಿತವಾಗಿ ಹರಿಹಾಯ್ದ ಪರಿಯಿದು.

‘ಗುತ್ತಿಗೆದಾರನೊಬ್ಬನಿಗೆ ಅನುಕೂಲ ಮಾಡಿಕೊಡಲು ಈ ಸಭೆ ಕರೆದಿದ್ದೀರಲ್ಲವೇ? ಪಾಲಿಕೆಯಲ್ಲಿ ವ್ಯವಹಾರದ ಲೆಕ್ಕಾಚಾರ ಬಿಟ್ರೇ ಇನ್ನೇನೂ ನಡೀತಿಲ್ಲ ಅಂತ ಜನ ಬೈತಾರೆ. ಬಿಲ್ಡಿಂಗ್‌ ಕಟ್ಟೋಕೆ ಅನುಮತಿ ನೀಡಲು ₹ 4 ಲಕ್ಷ ಕೇಳ್ತೀರಂತಲ್ಲಾ?...’ ಎಂದೆಲ್ಲಾ ಮಂಗಳವೇಡೆ ತರಾಟೆಗೆ ತೆಗೆದುಕೊಂಡರು.

ಮೇಯರ್‌ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪ್ರತಿಕ್ರಿಯೆಯನ್ನೇ ನೀಡದಿರುವುದರಿಂದ ಮತ್ತಷ್ಟು ಗರಂ ಆದ ಕಾರ್ಪೊರೇಟರ್‌, ‘ಕೊನೇ ಪಕ್ಷ ನಾಲ್ಕ್ ಕೇಳಲ್ಲಾ..., ಎರಡಷ್ಟೇ ತಗೋತೀವಿ ಅಂತಾದ್ರೂ ಹೇಳ್ರೀ’ ಎಂದು ಕಿಚಾಯಿಸುತ್ತಿದ್ದಂತೆ ಸಭಾಂಗಣದಲ್ಲಿ ನಗೆಬುಗ್ಗೆಯುಕ್ಕಿತು.

‘ನನ್ ವಾರ್ಡ್‌ ವ್ಯಾಪ್ತಿಯ ಸುಡುಗಾಡ್ನಲ್ಲಿ ಹೈಮಾಸ್ಟ್‌ ದೀಪ ಅಳವಡಿಸಲು ಟೆಂಡರ್‌ ಕರೆದು ವರ್ಷವಾಯ್ತು. ಬಜೆಟ್‌ ಖಡಕ್‌ ಮಾಡ್ಕೊಂಡ ಕಮಿಷನರ್‌ ನಾಪತ್ತೆ. ನಾ ಯಾರನ್ ಕೇಳ್ಳಿ? ಹೆಣಗಳು ನನ್ನ ಕೇಳೋಕೆ ಮುಂಚೆನಾದ್ರೂ ಹೈಮಾಸ್ಟ್‌ ಹಾಕ್ರೀ’ ಎನ್ನುತ್ತಿದ್ದಂತೆ ಮತ್ತೊಮ್ಮೆ ನಗೆಯುಕ್ಕಿತು.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !