ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ಮಹಿಮೆ ಅಪಾರ!

Last Updated 25 ಜನವರಿ 2019, 20:00 IST
ಅಕ್ಷರ ಗಾತ್ರ

ನಾಲ್ಕೈದು ದಿನಗಳಿಂದ ‘ಚಡ್ಡಿ’ ದೋಸ್ತ್‌ ಪ್ರಭ್ಯಾ ನಾಪತ್ತೆಯಾಗಿದ್ದು ನೋಡಿ ಭಾಳ್‌ ಚಿಂತೆಯಾಗಿತ್ತು. ಎಲ್ಲಿ ಹ್ವಾದಾ ಇಂವಾ. ಮನ್ಯಾಗೂ ಗೊತ್ತಿಲ್ಲಂತ ಹೇಳ್ತಾರ್‌. ಫೋನ್‌ ಮಾಡಿದ್ರ ವ್ಯಾಪ್ತಿ ಪ್ರದೇಶದಾಗ್‌ ಇಲ್ಲಂತ ಬಡ್ಕೊತೈತಿ. ಯಾರನ್ನ ಕೇಳಿದ್ರೂ ನಂಗ್‌ ಗೊತ್ತಿಲ್ಲ, ಯಾಂವ ಬಲ್ಲ ಅಂತನ ಹೇಳ್ತಾರ್‌. ಏನ್, ನಾಟ್ಕಾ ಮಾಡ್ತಾರೊ ಇಲ್ಲಾ ಖರೇನ್‌ ಅವ್ರಿಗೆ ಗೊತ್ತಿಲ್ಲೊ ಒಂದೂ ತಿಳ್ಯಾಕತ್ತಿದ್ದಿಲ್ಲ. ‘ಸಂಕ್ರಾಂತಿಗೆ ಸಿಗ್ತೀನಿ. ಸಿಹಿ ಸುದ್ದಿ ಕೊಡ್ತೀನಿ’ ಅಂತ ಬ್ಯಾರೆ ಹೇಳಿದ್ದ. ಅಷ್ಟೆಲ್ಲ ಭರವಸೆ ಕೊಟ್ಟಾಂವಾ ನಾಪತ್ತೆಯಾಗಿದ್ದು ನೋಡಿ, ಮಾತ್ ಕೊಟ್ಟಾಂವಾ ಈರಭದ್ರ, ಅದ್ನ ನಂಬಿದಂವಾ ಕೋಡಂಗಿ ಅನ್ನೋ ಥರಾ ನನ್ನ ಪರಿಸ್ಥಿತಿ ಆಗಿತ್ತು.

ಶುಕ್ರವಾರ ಬಜಾರ್‌ದಾಗ್‌ ಸಂತಿ ಮಾಡು ಮುಂದ ಧುತ್ತನೆ ಎದುರಾದ. ‘ಏಯ್‌ ಮಳ್ಳ ನನ್ನ ಮಗ್ನ. ಇಷ್ಟ್‌ ದಿನಾ ಎಲ್ಲಿ ಸಾಯಾಕ್‌ ಹೋಗಿದ್ದಿ. ಮೈಮ್ಯಾಲೆ ಸ್ವಲ್ಪನರ ಖಬರ್‌ ಅದ ಏನ್‌ ನಿಂಗ್‌. ಹೆಂಡ್ತಿ, ಮಕ್ಕಳು, ಗೆಳ್ಯಾರು ನೆನಪಾಗಲಿಲ್ಲೇನ್‌ ಖಬರಗೇಡಿ. ಚಾನೆಲ್‌ನವರ್‌ ಕ್ಯಾಮರಾ ಕಣ್ಣಿಗೂ ಬೀಳ್ದಂಗ್‌ ಎಲ್ಲಿಗೆ ಹೋಗಿದ್ದಿ ಬೊಗಳು’ ಎಂದು ಪ್ರೀತಿಯಿಂದಲೇ ಗದರಿದೆ.

ಅಂವಾ ಅದ್ಕ ಬಾಯಿ ಬಿಡದ, ಪಿಳಿ ಪಿಳಿ ಕಣ್ಣು ಬಿಟ್ಟಿದ್ದು ನೋಡಿ ನಾನೇ ಮಾತ್‌ ಮುಂದುವರ್ಸಿದೆ.

‘ಏನ್‌ ಧಾರವಾಡ ಸಾಹಿತ್ಯ ಸಂಭ್ರಮಕ್ಕ ಹೋಗಿ ಗೋಮೂತ್ರ, ಹಂದಿ ಮೂತ್ರದ ಜಗಳದಾಗ್ ಸಿಕ್ಕಾಕ್ಕೊಂಡಿದ್ದೀ ಏನ್‌. ಅಲ್ಲಿಗೂ ಹೋಗಿರಲಿಲ್ಲ ಅಂದ್ರ ಯಾವ ರೆಸಾರ್ಟ್‌ನ್ಯಾಗ್‌ ಉಳ್ಯಾಡಾಕ್‌ ಹೋಗಿದ್ದಿ ಮಗನ. ಯಾರ‍್ದೊ ರೊಕ್ಕದಾಗ್‌ ಯಲ್ಲಮ್ಮನ ಜಾತ್ರೆ ಮಾಡ್ದಂಗ್‌, ಮಜಾ ಮಾಡಿ ಬಂದಿ ಹೌದಲ್ಲ’ ಅಂತ ಜೋರ್‌ ಮಾಡ್ದೆ.

ಛೀ ಗಬ್ಬು ನಾತಾ ಎಂದು ಮೂಗು ಮುಚ್ಚಿಕೊಂಡ ಪ್ರಭ್ಯಾ,‘ಸಂಭ್ರಮದ ಮೂತ್ರದ ಮಾತ್‌ ತೆಗಿಬ್ಯಾಡಲೊ ನನ್ನ ಮುಂದ. ಧಾರ್ವಾಡ್‌ ಸಂಭ್ರಮವನ್ನ ಸಾಹಿತ್ಯಕ್ಕಷ್ಟೇ ಸೀಮಿತಗೊಳಿಸದಿದ್ದರೆ ಸಂಭ್ರಮವೂ ಇರುವುದಿಲ್ಲ, ಸಾಹಿತಿಗಳೂ ಇರುವುದಿಲ್ಲ ಅನ್ನೊ ಬೆದರಿಕೆ ಕೇಳಿ ಧಾರ್ವಾಡ್‌ ಏನ್‌ ಬ್ಯಾರೆ ಊರಾಗಿನ ಸಾಹಿತಿಗಳಿಗೂ ಚಳಿ ಜ್ವರಾ ಬಂದಾವಂತ. ಕಲ್ಬುರ್ಗಿ ಸಾಹೇಬ್ರು ಹೋದ ದಾರ‍್ಯಾಗ್‌ ಹೋಗಬೇಕಾಗ್ತೈತಿ ಅಂತ ಅಂಜಿ, ದಾಂದಲೆ ಮಾಡಿದವ್ರ ವಿರುದ್ಧ ಪೊಲೀಸ್‌ರಿಗೆ ದೂರು ಕೊಡಾಕೂ ಹಿಂದೇಟ್‌ ಹಾಕ್ಯಾರ್‌. ಇಂಥಾ ಹೇತ್ಲಾಂಡಿ ಸಾಹಿತಿಗಳದ್ದು, ಆಪರೇಷನ್‌ ಕಮಲದವ್ರ ಉಸಾಬರೀನ ಬ್ಯಾಡಂತ್‌ ಓಡಿ ಬಂದೀನಿ. ಅಂಥಾದ್ರಾಗ್ ನೀ ಇದ್ರ ಮತ್ತ ಅವರನ್ನ ನೆನಪ್‌ ಮಾಡಾಕತ್ತಿ. ಸ್ವಲ್ಪ ಬಾಯಿ ಮುಚ್ಕೊಂಡಿರು. ಎಲ್ಲಾ ಹೇಳ್ತೀನಿ’ ಅಂದ.

‘ಕೋಟ್ಯಂತರ ಭಕ್ಷಿಸಿ ಸರ್ಕಾರ ಗಿರ್ಕಾರ ಏನರ್ ಬೀಳ್ಸಾಕ್‌ ಬೊಂಬಾಯಿಗೆ ಹೋಗಿದ್ದಿ ಏನ್‌’ ಎಂದು ಕುತೂಹಲ ತಡಿಲಾರ‍್ದ ಮತ್ತೆ ಕೆದಕಿದೆ.

‘ನಾ ಅಂಥಾ ಘನಂದಾರಿ ಮನಸ್ಯಾ ಅಲ್ಲಪಾ. ಅಲ್ಲಿ ಬರಾಕತ್ತಾನ್‌ ನೋಡ್‌, ಭಾಡ್ಕೊ ಗಣಪ್ಯಾ. ಅವ್ನ ಈ ಎಲ್ಲ ರಾದ್ದಾಂತಕ್ಕ ಕಾರಣ. ಇಲ್ಲೆ ಬಂದ್‌ ನೋಡ್‌ ಕೇಳ್‌’ ಎಂದ.

‘ಇದೇನೋ, ಗಣಪ್ಯಾ. ವಿಘ್ನನಿವಾರಕನಾದ ನಿನಗs ಸಂಕ್ರಾಂತಿ ಸಂಕಟ ತಗಲ್ ಹಾಕ್ಕೊಂಡದಲ್ಲೊ. ಏನ್‌ ಖತರ್‌ನಾಕ್‌ ಮನಶ್ಯಾ ಅದಿಯೋ ಮಾರಾಯಾ ನೀನು. ನಿನ್ನ ನಂಬ್ಕೊಂಡವ್ರನ್ನ ಹೀಂಗಾ ನಡು ನೀರಾಗ್‌ ‘ಕೈ’ ಬಿಡೋದು. ನೀ ಅಂತೂ ಕಂಠಮಟ ರೆಸಾರ್ಟ್‌ ನೀರಾಗ್‌ ಮುಳುಗಿ, ನಿನ್ನ ಕೂಡ ಸಂಕ್ರಾಂತಿ ಸಿಹಿ ಕನಸ್‌ ಕಾಣಾವ್ರನ್ನೂ ಮುಳುಗಿಸಿಬಿಟ್ಯ‌ಲ್ಲೋ’ ಎಂದು ಪ್ರಭ್ಯಾ ಅಳು ದನಿಯಲ್ಲೇ ಬಡಬಡಿಸಿದ.

‘ನನ್ನ ಪಾಲಿನ ಮೋದಕಾ ಕಸಗೊಂಡ್ರ ಸಿಟ್ಟು ಬರುದಿಲ್ಲೇನ್‌. ನಾನೂ ಉಪ್ಪು ಖಾರ ತಿಂದಾಂವಾ. ಏನೋ ಸಿಟ್‌ನ್ಯಾಗ್‌ ಕುಸ್ತಿ ಆಡೀನಿ. ಗೆಳ್ಯಾರು ಹೊಡದಾಡುದಿಲ್ಲೇನ್‌. ನಂಗ್‌ ಗೊತ್ತಿರೋ ರಾಜಕೀಯ ಪಟ್ಟು ಅದೊಂದೆ’ ಎಂದು ಗಣಪ್ಯಾ ಠೇಸಿನಿಂದ ಹೇಳ್ದಾ.

‘ಇಷ್ಟ್‌ ಸೊಕ್ಕಿನಿಂದ ಮಾತಾಡಂವಾ, ಮತ್ಯಾಕ್‌ ನಾಪತ್ತೆಯಾಗಿ, ಪೊಲೀಸ್ರ ಕೈಗೂ ಸಿಗಲಾರ್ದಂಗ್‌ ತಪ್ಪಿಸಿಕೊಂಡ್‌ ಓಡಾಡಾಕತ್ತಿ. ವಾಟ್ಸ್‌ಆ್ಯಪ್‌ನಾಗ್‌ ಮೆಸೇಜ್‌ ಹರಿಬಿಡಾಕತ್ತಿ’ ಎಂದೆ.

‘ಉಪ್ಪಾ ತಿಂದಾ ಮ್ಯಾಲೆ ನೀರಾ... ಕುಡಿಯಲೇಬೇಕು. ತಪ್ಪಾ ಮಾಡಿದ ಮ್ಯಾಲೆ ಶಿಕ್ಷೆ ಅನುಭವಿಸಲೇಬೇಕು... ಎಂದು ಪ್ರಭ್ಯಾ ಕಾಲೇಜು ರಂಗ ಚಿತ್ರದ ಹಾಡು ಹೇಳ್ತಾ ಗಣಪ್ಯಾನ ಗಾಯಕ್ಕ ಉಪ್ಪು ಸವರುತ್ತಲೇ, ‘ನೀವ್‌ ಏನರ್‌ ಮಾತಾಡ್ಕೊಳ್ರಿ ಇಲ್ಲಾ ಹೊಡದಾಡಕೊಳ್ರಿ. ನಾನಂತೂ ಕ್ಲರ್ಕ್‌ ಹುದ್ದೆಗೆ ಅರ್ಜಿ ಹಾಕಾಕ್‌ ಹೊಂಟೀನಿ’ ಅಂತ ಹೇಳಿ ಹಗರ್ಕ್‌ ಜಾಗಾ ಖಾಲಿ ಮಾಡಾಕ್‌ ನೋಡ್ದ.

‘ಇಷ್ಟೆಲ್ಲ ಕಲ್ತು, ಐಎಎಸ್‌, ಪಿಎಸ್‌ಐ ಪಾಸಾಗೋದು ಬಿಟ್ಟು ಗುಮಾಸ್ತ್‌ ಆಗಾಕ್‌ ಹೊಂಟಿ ಅಲ್ಲ, ಬುದ್ಧಿ ಎಲ್ಲಿ ಇಟ್ಟಿ’ ಎಂದು ಕುಟುಕಿದೆ.

‘ಗುಮಾಸ್ತನ ಗಮಾರ್‌ ಅಂತ ತಿಳ್ಕೊಬ್ಯಾಡಾ. ಕನ್ನಡ ಕುಲಕೋಟಿಯ ಮುಖ್ಯಮಂತ್ರಿಯನ್ನ ‘ಕೈ’ ಪಾರ್ಟಿಯವ್ರು ಗುಮಾಸ್ತನನ್ನಾಗಿ ಮಾಡ್ಯಾರಂತ ಕುಮಾರಣ್ಣನ ಹೇಳ್ಕೊಂಡಾನ, ‘ನಮೋ’ನೂ ಟೀಕಿಸ್ಯಾನ ಓದಿ ಇಲ್ಲ’ ಎಂದ.

‘ಅರೆ, ಹೌದಲ್ಲ. ನೀ ಈಗ ಕ್ಲರ್ಕ್‌ ಆದ್ರ, ನಿನ್ನ ನಸೀಬ್‌ದಾಗ್‌ ಶೆಟಗೆವ್ವ ಬರದಿದ್ರ, ಮುಂದೊಂದು ದಿನ ‘ಮುಮ’ನೂ ಆಗ್ಬಹುದು’ ಎಂದೆ.

ಪ್ರಭ್ಯಾ ಆ ಕಡೆ ಹೋಗುತ್ತಿದ್ದಂತೆ, ನನ್ನ ಗಮನ ಗಣಪ್ಯಾನ ಕಡೆ ತಿರುಗ್ತು. ‘ಗಣೇಶಾ, ಸಂಕ್ರಾಂತಿಗೆ ಸಿಹಿ ಸುದ್ದಿ ಕೊಡಾಕ್‌ ಮೂಲ ಕಾರಣಾನೂ ನೀನೇ. ಕೆಟ್ಟ ಸುದ್ದಿ ಕೊಟ್ಟಾವನೂ ನೀನೆ. ಖರೇನ ನಿನ್ನ ಮಹಿಮೆ ಅಪಾರ ಬಿಡಪಾ’ ಅಂತ ಹೇಳುದಕ್ಕೂ ರೇಡಿಯೊದಾಗ್‌, ‘ಗಣೇಶ ನಿನ್ನ ಮಹಿಮೆ ಅಪಾರ.. ಗಣೇಶ ನಿನ್ನ ಶಕ್ತಿ ಅಪಾರಾ... ಭಕ್ತವತ್ಸಲಾ.. ಕರುಣಾಸಾಗರ ರಕ್ಷಿಸು, ರಕ್ಷಿಸು..’ ಅನ್ನೋದು ನನ್ನ ಕಿವಿಗೆ... ಕೋಟಿ ಭಕ್ಷಿಸು, ಭಕ್ಷಿಸು ಮೈತ್ರಿ ಸರ್ಕಾರನ್ನ ಉರುಳಿಸು, ಉರುಳಿಸು ಎಂದೇ ಕೇಳಿದಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT