ಹೊಣೆಗೇಡಿತನದಿಂದ ಪ್ರತ್ಯೇಕತೆ ಕೂಗು: ಸಾಹಿತಿ ಚಂದ್ರಶೇಖರ ಪಾಟೀಲ

7

ಹೊಣೆಗೇಡಿತನದಿಂದ ಪ್ರತ್ಯೇಕತೆ ಕೂಗು: ಸಾಹಿತಿ ಚಂದ್ರಶೇಖರ ಪಾಟೀಲ

Published:
Updated:
Deccan Herald

ಬೆಂಗಳೂರು: ‘ನಾವು ಆಯ್ಕೆ ಮಾಡಿರುವ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸ ಮಾಡಿದ್ದರೆ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿರಲಿಲ್ಲ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಆಯೋಜಿಸಿದ್ದ ‘ಉತ್ತರ ಕರ್ನಾಟಕ: ಸಮಸ್ಯೆಗಳು ಮತ್ತು ಪರಿಹಾರ’ ಚಿಂತನಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ನಾವು ಎಡವಿದ್ದೇವೆ. ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯವನ್ನು ಒಡೆಯುವುದೇ ಕೆಲವರ ಹುನ್ನಾರ. ಬಿಜೆಪಿ ಸಚಿವರಾದ ಉಮೇಶ್‌ ಕತ್ತಿ ಹಾಗೂ ಶ್ರೀರಾಮುಲು ಉದ್ದೇಶಪೂರ್ವಕವಾಗಿ ರಾಜ್ಯವನ್ನು ಒಡೆಯುವ ಯೋಜನೆಯನ್ನು ತೇಲಿಬಿಟ್ಟಿದ್ದಾರೆ. ಮುಖ್ಯಮಂತ್ರಿಯಾಬೇಕು ಎನ್ನುವ ಸಣ್ಣತನದ ಕನಸನ್ನು ಮೊದಲು ಬಿಡಬೇಕು’ ಎಂದು ಎಚ್ಚರಿಕೆ ನೀಡಿದರು.

‘ಉತ್ತರಪ್ರದೇಶ ದೊಡ್ಡ ರಾಜ್ಯ. ರಾಷ್ಟ್ರ ರಾಜಕಾರಣದ ಮೇಲೆ ಈಗಲೂ ಈ ರಾಜ್ಯ ತನ್ನದೇ ಆದ ಹಿಡಿತ ಹೊಂದಿದೆ. ಜನಸಂಖ್ಯೆ ನಮ್ಮ ಧ್ವನಿಯನ್ನು ಹೆಚ್ಚಿಸುತ್ತದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ಮೊದಲಿನ ವರ್ಚಸ್ಸು ಕಳೆದುಕೊಂಡಿವೆ. ನಮ್ಮ ರಾಜ್ಯ ಕೂಡ ಅದೇ ಹಾದಿಯಲ್ಲಿ ಸಾಗುವುದು ಬೇಡ’ ಎಂದು ಹೇಳಿದರು.

ಹುಬ್ಬಳ್ಳಿಯ ಜನಹಿತ ವೇದಿಕೆಯ ಸಂಚಾಲಕ ವಿಕಾಸ್‌ ಸೊಪ್ಪಿನ್‌, ‘ಉತ್ತರ ಕರ್ನಾಟಕ ಭಾಗದ ಹಿತಕ್ಕಾಗಿ ಅಲ್ಲಿ ಕೃಷಿಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಪ್ರಾರಂಭಿಸಬೇಕು. ನೀರಾವರಿ, ನವೀಕರಿಸಬಹುದಾದ ಇಂಧನ ಇಲಾಖೆಗಳನ್ನು ಆ ಭಾಗಕ್ಕೆ ಸ್ಥಳಾಂತರಿಸಬೇಕು. ಇದರಿಂದ ಬೆಂಗಳೂರಿನ ಮೇಲೆ ಇರುವ ಒತ್ತಡ ಕೂಡ ಕಡಿಮೆಯಾಗುತ್ತದೆ. ನಂಜುಂಡಪ್ಪ ವರದಿ ಅನುಷ್ಠಾನ ಆಗಬೇಕು. ವಿಭಜನೆ ಸಮಸ್ಯೆಗೆ ಪರಿಹಾರ ಅಲ್ಲ. ಉತ್ತರ ಕರ್ನಾಟಕ ಹಿಂದೆ ಉಳಿಯಲು ದಕ್ಷಿಣ ಕರ್ನಾಟಕ ಕಾರಣ ಅಲ್ಲ’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !