ಹಣಕಾಸು ಮುಗ್ಗಟ್ಟು: ಚೀನಾದ ಜತೆಗಿನ ಇಂಧನ ಯೋಜನೆ ಕೈಬಿಡಲಿರುವ ಪಾಕ್

7
ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ

ಹಣಕಾಸು ಮುಗ್ಗಟ್ಟು: ಚೀನಾದ ಜತೆಗಿನ ಇಂಧನ ಯೋಜನೆ ಕೈಬಿಡಲಿರುವ ಪಾಕ್

Published:
Updated:

ಇಸ್ಲಾಮಾಬಾದ್: ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರವು ಚೀನಾ ಜೊತೆಗಿನ ಮಹತ್ವದ ಕಲ್ಲಿದ್ದಲು ಆಧರಿತ ಇಂಧನ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಉಭಯ ದೇಶಗಳ ನಡುವಿನ ಆರ್ಥಿಕ ಕಾರಿಡಾರ್‌ನ (ಸಿಪಿಇಸಿ) ಭಾಗವಾಗಿ ಈ ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾವ ಇತ್ತು.

ಈ ಹಿಂದಿನ ನವಾಜ್ ಷರೀಫ್ ನೇತೃತ್ವದ ಸರ್ಕಾರವು ಚೀನಾ ನೆರವಿನಿಂದ 1,320 ಮೆಗಾವಾಟ್ ಸಾಮರ್ಥ್ಯದ ರಹೀಮ್ ಯಾರ್ ಖಾನ್ ವಿದ್ಯುತ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿತ್ತು. 

ಯೋಜನೆಯಲ್ಲಿ ಪಾಕಿಸ್ತಾನ ಆಸಕ್ತಿ ಹೊಂದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಅವರ ನೇತೃತ್ವದ ಸರ್ಕಾರವು ಚೀನಾ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಮುಂದಿನ ವರ್ಷಗಳಲ್ಲಿ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನಾ ಯೋಜನೆಗಳು ಕಾರ್ಯಗತವಾಗುತ್ತಿದ್ದು, ಈ ಯೋಜನೆ ಆರಂಭಿಸುವುದು ಬೇಡ ಎಂದು ತಿಳಿಸಿದೆ. 

ಡಿಸೆಂಬರ್ 20ರಂದು ನಡೆದ ಜಂಟಿ ಸಹಕಾರ ಸಮಿತಿ ಸಭೆಯಲ್ಲಿ (ಜೆಸಿಸಿ) ಯೋಜನಾ ಸಚಿವ ಮಖ್ದೂಮ್ ಖುಸ್ರೊ ಅವರು ಚೀನಾ ಅಧಿಕಾರಿಳಿಗೆ ಈ ಮಾಹಿತಿ ನೀಡಿದ್ದಾರೆ. 

ಲಭ್ಯ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಅತ್ಯುತ್ತಮ ಯೋಜನೆ ಅನುಷ್ಠಾನಕ್ಕಾಗಿ ಶೀಘ್ರದಲ್ಲೇ ಜಂಟಿ ಅಧ್ಯಯನ ನಡೆಸುವ ಸಲಹೆಯನ್ನು ಚೀನಾ ಮುಂದಿಟ್ಟಿತ್ತು. 

ಬಲೂಚಿಸ್ತಾನದ ಗ್ವಾದರ್ ಬಂದರು ಹಾಗೂ ಚೀನಾದ ಕ್ಸಿಂಜಿಯಾಂಗ್ ಪ್ರಾಂತ್ಯಗಳನ್ನು ಸಿಪಿಇಸಿ ಸಂಪರ್ಕಿಸುತ್ತದೆ. ಇದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷಿ ಒನ್‌ ಬೆಲ್ಟ್, ಒನ್ ರೋಡ್ ಕಾರ್ಯಕ್ರಮದ ಭಾಗ.

₹56,000 ಕೋಟಿ ನೆರವು ಕೇಳಿದ ಇಮ್ರಾನ್

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದ ಸರ್ಕಾರದ ಬೊಕ್ಕಸವನ್ನು ಸರಿದೂಗಿಸಲು ಸುಮಾರು ₹56,000 ಕೋಟಿ ನೆರವು ನೀಡುವಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜೊತೆ ಇಮ್ರಾನ್ ಖಾನ್ ಮಾತುಕತೆ ನಡೆಸುತ್ತಿದ್ದಾರೆ. 

ಆರ್ಥಿಕ ಸಹಕಾರ ನೀಡುವಂತೆ ಆಪ್ತ ರಾ‌ಷ್ಟ್ರಗಳಾದ ಚೀನಾ, ಸೌದಿ ಅರೇಬಿಯಾ ಹಾಗೂ ಯುಎಇಗೂ ಸರ್ಕಾರ ಮನವಿ ಮಾಡಿದೆ.

ನವಾಜ್ ಅವರ ಸಹೋದರ, ಪಂಜಾಬ್ ಪ್ರಾಂತ್ಯ ಸರ್ಕಾರದ ಮುಖ್ಯಸ್ಥರಾಗಿದ್ದ ಶಹಬಾಜ್ ಷರೀಫ್ ಅವರು ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನಾ ಯೋಜನೆಯ ಪ್ರಸ್ತಾವವಿಟ್ಟಿದ್ದರು. ಇದನ್ನು ಅವರೇ ಪ್ರಾಯೋಜಿಸಲು ನಿರ್ಧರಿಸಿದ್ದರು. ರಾಜಕೀಯ ಪ್ರಭಾವಿತ 400 ಯೋಜನೆಗಳನ್ನು ಕೈಬಿಡಲು ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !