‘ಪರಪ್ಪನ ಅಗ್ರಹಾರದಲ್ಲೇ ಚಿಕಿತ್ಸೆಗೆ ಸೌಲಭ್ಯವಿದೆ’

7
ರುದ್ರೇಶ್‌ ಹತ್ಯೆ ಪ್ರಕರಣದ ಆರೋಪಿಗೆ ಎನ್‌ಐಎ ಆದೇಶ

‘ಪರಪ್ಪನ ಅಗ್ರಹಾರದಲ್ಲೇ ಚಿಕಿತ್ಸೆಗೆ ಸೌಲಭ್ಯವಿದೆ’

Published:
Updated:

ಬೆಂಗಳೂರು: ‘ಪರಪ್ಪನ ಅಗ್ರಹಾರ ಜೈಲಿನಲ್ಲೇ ಎಲ್ಲ ವೈದ್ಯಕೀಯ ಸೌಲಭ್ಯವಿದೆ. ಒಂದು ವೇಳೆ ಅಲ್ಲಿ ಇಲ್ಲ ಎಂದಾದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ. ಇದಕ್ಕಾಗಿ ನೀವು ನಿಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಜಾಮೀನು ನೀಡಬೇಕು ಎಂಬ ಮನವಿಯನ್ನು ಕೋರ್ಟ್‌ ಪುರಸ್ಕರಿಸುವುದಿಲ್ಲ...’

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿ ವಸೀಂ ಅಹಮದ್‌ ತಮ್ಮ ಎಡಗಾಲಿನ ಎಸಿಎಲ್‌ (ಆ್ಯಂಟೀರಿಯರ್ ಕ್ರೂಷಿಯೇಟ್‌ ಲಿಗಮೆಂಟ್‌) ಶಸ್ತ್ರಚಿಕಿತ್ಸೆಗಾಗಿ ತಾತ್ಕಾಲಿಕ ಜಾಮೀನು ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಎನ್‌ಐಎ ವಿಶೇಷ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿರುವ ಅಂಶವಿದು.

‘ನಾನು ಈಗಾಗಲೇ 2009ರಲ್ಲಿ ಬಲಗಾಲಿನ ಎಸಿಎಲ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಈಗ ಎಡಗಾಲಿನ ಮೊಣಕಾಲಿಗೂ ಶಸ್ತ್ರಚಿಕಿತ್ಸೆ ಅಗತ್ಯವೆಂದು ವೈದ್ಯರು ಹೇಳಿದ್ದಾರೆ. ಅದಕ್ಕಾಗಿ 3 ತಿಂಗಳ ತಾತ್ಕಾಲಿಕ ಜಾಮೀನು ನೀಡಬೇಕು’ ಎಂದು ಕೋರಿ ವಸೀಂ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

‘ಈಗೀಗ ನನ್ನ ನೈಸರ್ಗಿಕ ಬಾಧೆಯನ್ನು ತೀರಿಸಿಕೊಳ್ಳಲಿಕ್ಕೂ ಕಷ್ಟವಾಗುತ್ತಿದೆ. ನನ್ನ ಎಡಗಾಲಿಗೆ ನಡೆಸಬೇಕಾದ ಶಸ್ತ್ರಚಿಕಿತ್ಸೆಯ ಪರಿಕರಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಲ್ಲ. ಆದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯಲು ತಯಾರಿದ್ದೇನೆ’ ಎಂದು ಅರ್ಜಿಯಲ್ಲಿ ವಿವರಿಸಿದ್ದರು.

ಈ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಧೀಶ ಸಿದ್ದಲಿಂಗ ಪ್ರಭು, ‘ಆರೋಪಿ ಎದುರಿಸುತ್ತಿರುವ ಪ್ರಕರಣ ಗಂಭೀರ ಮತ್ತು ಸೂಕ್ಷ್ಮ ಸ್ವರೂಪದಿಂದ ಕೂಡಿದೆ. ಅಷ್ಟಕ್ಕೂ, ವಸೀಂ ಅಹಮದ್‌ ಅರ್ಜಿಯಲ್ಲಿ ತಿಳಿಸಿರುವಂತೆ ಅವರ ಎಡಗಾಲಿನ ಸಮಸ್ಯೆ ಜೀವಭಯ ಉಂಟು ಮಾಡುವಂಥದ್ದೇನೂ ಅಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಪರಪ್ಪನ ಅಗ್ರಹಾರದಲ್ಲಿರುವ ಜೈಲು ಆಸ್ಪತ್ರೆ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿದ್ದಾರೆ. ಆದ್ದರಿಂದ ಕೈದಿಗೆ ಪರಪ್ಪನ ಅಗ್ರಹಾರದ ಜೈಲಿನಲ್ಲೇ ಚಿಕಿತ್ಸೆ ನೀಡಿ. ಇಲ್ಲವಾದರೆ ವಿಕ್ಟೋರಿಯಾ ಆಸ್ಪತ್ರೆ ಅಥವಾ ಬೇರಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ’ ಎಂದು ಜೈಲಿನ ಸೂಪರಿಂಟೆಂಡೆಂಟ್‌ ಅವರಿಗೆ ನಿರ್ದೇಶಿಸಿದೆ.

ಪ್ರಕರಣವೇನು? :ಶಿವಾಜಿ ನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ನಿಂತಿದ್ದ ರುದ್ರೇಶ್‌ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಸಾಮಿಗಳು ಕೊಲೆ ಮಾಡಿದ್ದರು. ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಿಗ್ಗೆ 9 ಗಂಟೆ ಸುಮಾರು ನಡೆದಿತ್ತು.

ಈ ಪ್ರಕರಣದಲ್ಲಿ, ಅಸೀಮ್‌ ಶರೀಫ್, ಇರ್ಫಾನ್ ಪಾಷಾ, ವಸೀಂ ಅಹಮದ್, ಮಹಮ್ಮದ್‌ ಸಾದಿಕ್‌ ಅಲಿಯಾಸ್ ಮಜಹರ್ ಮತ್ತು ಮಹಮ್ಮದ್ ಮುಬೀಬುಲ್ಲಾ ಅಲಿಯಾಸ್ ಮೌಲಾ ಆರೋಪಿಗಳಾಗಿದ್ದಾರೆ. ಎನ್‌ಐಎ ವಿಶೇಷ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಎನ್‌ಐಎ ಪರ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !