ಶತಾಯುಷಿ ಪುಟ್ಟಪ್ಪಗೆ ಸನ್ಮಾನ

7

ಶತಾಯುಷಿ ಪುಟ್ಟಪ್ಪಗೆ ಸನ್ಮಾನ

Published:
Updated:
Prajavani

ಬೆಂಗಳೂರು: ಜನ್ಮ ಶತಮಾನೋತ್ಸವ ಆಚರಿಸಿಕೊಂಡ ಗಾಂಧಿ ಪಥದ ಚಿಂತಕ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರಿಗೆ ಶುಕ್ರವಾರ ಆತ್ಮೀಯವಾಗಿ ಅಭಿನಂದಿಸಲಾಯಿತು. 

ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಪಾಟೀಲ ಪುಟ್ಟಪ್ಪ ಜನ್ಮಶತಮಾನೋತ್ಸವ ಸಮಿತಿ, ಬಸವ ಬಳಗದ ವತಿಯಿಂದ ಹಮ್ಮಿಕೊಂಡ ಈ ಸಮಾರಂಭದಲ್ಲಿ ಪುಟ್ಟಪ್ಪ ಅವರ ಬದುಕಿನ ವಿವಿಧ ಮಜಲುಗಳನ್ನು ಗಣ್ಯರು ಕೊಂಡಾಡಿದರು. ಬದುಕಿನಲ್ಲಿ ಅಳವಡಿಸಿಕೊಂಡ ಗಾಂಧಿ ಚಿಂತನೆಯನ್ನು ಪ್ರಶಂಸಿಸಿದರು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಟ್ಟಪ್ಪ, ‘1930ರಲ್ಲಿ ಗಾಂಧಿ ಅವರು ಬ್ಯಾಡಗಿಗೆ ಬಂದಿದ್ದರು. ಅವರಿಂದ ಪ್ರಭಾವಿತನಾದೆ. ಅಂದಿನಿಂದಲೇ ನಾನು ಖಾದಿ ಬಟ್ಟೆಯನ್ನೇ ತೊಡಬೇಕು ಎಂದು ತೀರ್ಮಾನಿಸಿದೆ. ಖಾದಿ ಬಟ್ಟೆಗಳನ್ನೇ ತಂದು ಕೊಡಬೇಕು ಎಂದು ನನ್ನ ಹಿರಿಯರಿಗೆ ತಾಕೀತು ಮಾಡಿದೆ. ಹಿರಿಯರು ಖಾದಿ ಬಟ್ಟೆ ತಂದುಕೊಟ್ಟರು. ಇಂದಿನವರೆಗೂ ಅದೇ ನನ್ನ ದಿರಿಸಾಗಿದೆ’ ಎಂದು ಗಾಂಧಿ ಪ್ರಭಾವಿಸಿದ ದಿನಗಳನ್ನು ನೆನಪಿಸಿಕೊಂಡರು. 

‘ಅಮೆರಿಕನ್ನರಿಗೆ ನಮ್ಮ ದೇಶದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆ. ಶಿಕ್ಷಣಕ್ಕಾಗಿ ನಾನು ಅಮೆರಿಕಕ್ಕೆ ಹೋದಾಗ ಅಲ್ಲಿ ಹಲವರು ಭಾರತದ ಬಗ್ಗೆ ಹೇಳಿ ಎಂದು ಪದೇಪದೇ ಕೇಳುತ್ತಿದ್ದರು. ಈ ಅಭಿಮಾನ ನಮ್ಮವರಿಗೂ ನಮ್ಮ ದೇಶದ ಬಗ್ಗೆ ಇರಬೇಕು’ ಎಂದರು.

ಪಾಪು ಮಾತಿನ ಧ್ವನಿ ಕ್ಷೀಣಿಸಿರುವುದನ್ನು ಗುರುತಿಸಿದ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ,‘ ಪುಟ್ಟಪ್ಪ ಅಂದರೆ ಮಾತು, ಧ್ವನಿ. ಅವರ ಜತೆ ಇರುವುದೇ ಅದ್ಭುತ ಅನುಭವ. ವಯೋಸಹಜ ಕಾರಣದಿಂದ ಅವರ ಧ್ವನಿ ಕ್ಷೀಣವಾಗಿರುವುದು ನೋವು ತಂದಿದೆ’ ಎಂದರು.

ಚಿಂತಕ ಎಚ್‌.ಹನುಮಂತಪ್ಪ ಮಾತನಾಡಿ,‘ದಾವಣಗೆರೆ ಎರಡನೇ ರಾಜಧಾನಿ ಆಗಬೇಕು ಎಂದು 1946ರಲ್ಲೇ ಪುಟ್ಟಪ್ಪ ಅವರು ಧ್ವನಿ ಎತ್ತಿದ್ದರು. ನಾಡ ವಿಭಜನೆಯನ್ನು ಅವರೂ ವಿರೋಧಿಸಿದ್ದರು’ ಎಂದು ಸ್ಮರಿಸಿದರು.  

ಚಿತ್ರಕಲಾ ಪರಿಷತ್‌ ಅಧ್ಯಕ್ಷ ಬಿ.ಎಲ್‌.ಶಂಕರ್ ಮಾತನಾಡಿ, ‘ಜಾತಿಗೊಂದು ಸಮುದಾಯ ಭವನ ನಿರ್ಮಿಸುವ ಬದಲು, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಆ ಪ್ರದೇಶಕ್ಕಾಗಿ ಹೋರಾಡಿದವರ ಮಾಹಿತಿ ನೀಡುವ, ಚರಿತ್ರೆ ಕಟ್ಟಿಕೊಡುವ, ಬೆಳೆ, ಜನಸಂಸ್ಕೃತಿ ನಿರೂಪಿಸುವ ಮ್ಯೂಸಿಯಂ ಸ್ಥಾಪಿಸಲು ಸರ್ಕಾರ ಮುಂದಾಗಬೇಕು’ ಎಂದರು.

ಪಶುಸಂಗೋಪನೆ ಹಾಗೂ ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡಗೌಡ ಅವರು ಮುಖ್ಯಮಂತ್ರಿ ಸಂದೇಶ ವಾಚಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !