ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರಕವಿ ನೆಟ್ಟ ಪಾರಿಜಾತ’

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನನ್ನ ಸ್ವಂತ ಊರು ಹಾಸನ ಜಿಲ್ಲೆಯ ಶಾಂತಿಗ್ರಾಮ. ಆದರೆ ಹುಟ್ಟಿದ್ದು ಮೈಸೂರು, ಬೆಳೆದಿದ್ದು ಬೆಂಗಳೂರು. ತಂದೆ ಜಿ.ಎ ನರಸಿಂಹ ಮೂರ್ತಿ ಪತ್ರಿಕೋದ್ಯಮ ಮತ್ತು ಪ್ರವಾಸೋದ್ಯಮದಲ್ಲಿ ಹೆಸರು ಗಳಿಸಿದವರು. ತಾಯಿ ಸಾವಿತ್ರಿ ಗೃಹಿಣಿ. ನನ್ನ ಅಜ್ಜ, ಅಂದರೆ ಅಪ್ಪನ ಅಪ್ಪ ಕೋರ್ಟಿನಲ್ಲಿ ಒಳ್ಳೆಯ ಕೆಲಸದಲ್ಲಿದ್ದರು. ಹಾಗಾಗಿ ಅನುಕೂಲವಾಗಿಯೇ ಇದ್ದೆವು. ಕಷ್ಟದ ದಿನಗಳನ್ನು ಕಂಡಿದ್ದು ಕಡಿಮೆ.

ನಗರದ ವಿಶ್ವೇಶ್ವರಪುರದ ಸರಸ್ವತಿ ವಿದ್ಯಾಮಂದಿರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದೆ. ಪ್ರೌಢಶಿಕ್ಷಣ ನ್ಯಾಷನಲ್‌ ಹೈಸ್ಕೂಲ್‌ನಲ್ಲಿ ಆಯಿತು. ನನಗೆ ಒಳ್ಳೆಯ, ವಿಚಾರವಂತ ಶಿಕ್ಷಕರು ದೊರಕಿದ್ದರು. ಅವರುಗಳಿಂದಲೇ ನನ್ನ ಬದುಕಿಗೆ ಸ್ಪಷ್ಟ ದಾರಿ ದೊರಕಿತು. ದೇಶಪ್ರೇಮ, ಸಾಹಿತ್ಯದ ಅಭಿರುಚಿ ಬೆಳೆಯಿತು.

ಸಾಕಷ್ಟು ಸಾಹಿತಿಗಳ ಒಡನಾಟವೂ ಇತ್ತು. ದ.ರಾ.ಬೇಂದ್ರೆಯವರು ಆಗಾಗ್ಗೆ ನಮ್ಮನೆಗೆ ಬಂದು ಹೋಗುತ್ತಿದ್ದರು. ಅವರು ನೆಟ್ಟಿರುವ ಸಸಿ ಈಗ ಮರವಾಗಿ ಬೆಳೆದಿದೆ. ಅದರಿಂದಲೇ ಚಿಗುರೊಡೆದ ಹಲವು ಸಸಿಗಳನ್ನು ನಾನು ಇತರರಿಗೆ ಕೊಡುಗೆ ಕೊಟ್ಟಿದ್ದೇನೆ. ಎಲ್‌.ಎಸ್‌.ಶೇಷಗಿರಿರಾವ್‌, ಗರುಡನಗಿರಿ ನಾಗರಾಜ್‌, ಮಾಸ್ತಿ ವೆಂಕಟೇಶ ಅಯ್ಯಂಗಾರ್‌... ಹೀಗೆ ಹಲವು ಖ್ಯಾತನಾಮರು ನನ್ನ ತಂದೆಗೆ ಸ್ನೇಹಿತರಾಗಿದ್ದರು.

ಮಾಧ್ಯಮಿಕ ಶಾಲೆಯಲ್ಲಿ ಉತ್ತಮ ಅಂಕ ಪಡೆದ ಕಾರಣಕ್ಕೆ ನನಗೆ ಗುರುಗಳಾದ ಜಯದೇವಯ್ಯ ಅವರು ಫೌಂಟೇನ್‌ ಪೆನ್ನು ನೀಡಿದ್ದರು. ನಾನು ರ್‍ಯಾಂಕ್ ಪಡೆದಾಗ ದೇವಾನಂದ ಅಭಿನಯದ ಹಿಂದಿ ಸಿನಿಮಾಕ್ಕೂ ಕರೆದುಕೊಂಡು ಹೋಗಿದ್ದರು. ಅವರು ಕೊಡುತ್ತಿದ್ದ ಉಡುಗೊರೆ ಆಸೆಗೆ, ಇನ್ನೂ ಹೆಚ್ಚು ಅಂಕ ಗಳಿಸಬೇಕು ಎಂಬ ಹುಮ್ಮಸ್ಸು ಬರುತ್ತಿತ್ತು.

ನ್ಯಾಷನಲ್‌ ಹೈಸ್ಕೂಲಿನಲ್ಲಿ ಬಿ.ಎಸ್‌.ನಾರಾಯಣ ರಾವ್‌ ಎಂಬ ನಾಟಕದ ಶಿಕ್ಷಕರಿದ್ದರು. ಅವರು ಪ್ರತಿ ವರ್ಷ ನಾಟಕ ಮಾಡಿಸುತ್ತಿದ್ದರು. ನನ್ನ ಅಭಿನಯಕ್ಕೆ ಆಗ ಹಲವು ಪ್ರಶಸ್ತಿಗಳು ಬಂದವು. ನಮಗೆ ಶಾಲೆ ಎಂದರೆ ಪುಸ್ತಕವನ್ನು ಓದುವದಷ್ಟೇ ಆಗಿರಲಿಲ್ಲ. ಅದರ ಹೊರತಾಗಿ ಸಾಕಷ್ಟು ಪಠ್ಯೇತರ ಚಟುವಟಿಕೆಗಳು ಇರುತ್ತಿದ್ದವು. ಅವೆಲ್ಲ ವ್ಯಕ್ತಿತ್ವ ರೂಪುಗೊಳ್ಳಲು ನೆರವಾಗುತ್ತಿದ್ದವು. ಈಗಿನಂತೆ ಆಗ ಪೋಷಕರು ಒತ್ತಡ ಹೇರುತ್ತಿರಲಿಲ್ಲ. ಶಾಲೆಯಿಂದ ಬಂದ ತಕ್ಷಣ ಆಟವಾಡಲು ಹೋಗುತ್ತಿದ್ದೆ. ಜೊತೆಗೆ ಒಳ್ಳೆಯ ಅಂಕವೂ ಬರುತ್ತಿತ್ತು.

ಕಾಲೇಜಿನಲ್ಲಿ ನಾನು ಮರೆಯಲು ಸಾಧ್ಯವೇ ಇಲ್ಲ ಎನ್ನುವಂತಹ ಉಪನ್ಯಾಸಕರೆಂದರೆ ಗಾಂಧಿವಾದಿ ಎಚ್‌.ನರಸಿಂಹಯ್ಯ. ವಿದ್ಯಾರ್ಥಿಗಳ ಮಟ್ಟಕ್ಕೆ ಇಳಿದು ಅವರು ನಮ್ಮನ್ನು ತಿದ್ದುತ್ತಿದ್ದರು. ಹಲವು ಬಾರಿ ನಾವಿಬ್ಬರೂ ಲಾಲ್‌ಬಾಗ್‌ನಲ್ಲಿ ವಾಕಿಂಗ್‌ ಮಾಡುತ್ತಿದ್ದೆವು. ಆಯುರ್ವೇದದ ಮಹತ್ವದ ಬಗ್ಗೆ ಸಾಕಷ್ಟು ಚರ್ಚೆಗಳನ್ನು ನಡೆಸುತ್ತಿದ್ದೆವು. ಕಾಲೇಜಿನಲ್ಲಿ ನಟ ವಿಷ್ಣುವರ್ಧನ್‌ ನನ್ನ ಸಹಪಾಠಿಯಾಗಿದ್ದ.

ಜಯನಗರದಲ್ಲಿ ನಮ್ಮ ಮನೆ ಇತ್ತು. ಕಾಲೇಜಿಗೆ ಸೈಕಲ್‌ನಲ್ಲಿಯೇ ಹೋಗುತ್ತಿದ್ದೆ. ಮನೆಗೆ ಕನ್ನಡದ ಪೇಪರ್‌, ನಿಯತಕಾಲಿಕ ತರಿಸುತ್ತಿದ್ದರು. ಅವುಗಳ ಓದಿನಿಂದ ಭಾಷಾ ಸಂಪತ್ತು ಹೆಚ್ಚಿತು.

ಪಿಯುಸಿ ಮುಗಿದ ನಂತರ ಮುಂದೇನು ಎಂಬ ಪ್ರಶ್ನೆ ಎದುರಾಯಿತು. ಆಯುರ್ವೇದಲ್ಲಿ ಹೆಸರು ಗಳಿಸಿದ ಪಾರ್ಥ ನಾರಾಯಣ ಮತ್ತು ಮಳಿಗೆ ಗೋಪಾಲಕೃಷ್ಣ, ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರದವರು. ಅವರಿಂದ ಪ್ರೇರಣೆ ಪಡೆದು ಆಯುರ್ವೇದದಲ್ಲಿ ಪದವಿ ಗಳಿಸುವ ನಿರ್ಧಾರಕ್ಕೆ ಬಂದೆ. 1968ರಲ್ಲಿ ಮೆಜೆಸ್ಟಿಕ್‌ನಲ್ಲಿರುವ ಸರ್ಕಾರಿ ಆಯುರ್ವೇದ ಕಾಲೇಜಿಗೆ ಸೇರಿದೆ. 73ರಲ್ಲಿ ಬಿಎಸ್‌ಎಎಂ ಪದವಿಯಲ್ಲಿ ರ್‍ಯಾಂಕ್‌ ಗಳಿಸಿದೆ.

ಆಗ ಆಯುರ್ವೇದದಲ್ಲಿ ಆಧುನಿಕ ವೈದ್ಯಕೀಯ ವಿಷಯವನ್ನು ಸೇರಿಸಬೇಕು ಎಂಬ ಒತ್ತಾಯ ಮಾಡಿ ಪ್ರತಿವರ್ಷ ಪ್ರತಿಭಟನೆ ನಡೆಯುತ್ತಿತ್ತು. ಆದರೆ ಅದಕ್ಕೆ ನಾನು ಮತ್ತು ನನ್ನ ಕೆಲವು ಗೆಳೆಯರು ವಿರೋಧ ವ್ಯಕ್ತಪಡಿಸಿದೆವು. ‘ಆಯುರ್ವೇದ ಪದ್ಧತಿಯ ಇತಿಹಾಸ ದೊಡ್ಡದಿದೆ. ಅದನ್ನು ಬೆರಕೆ ಮಾಡಬಾರದು’ ಎಂಬುದು ನಮ್ಮ ವಾದವಾಗಿತ್ತು.

ಸರ್ಕಾರ ಅಲೋಪಥಿಕ್‌ ಕೋರ್ಸ್‌ಗೆ ಅವಕಾಶ ಸಿಕ್ಕಾಗಲೂ ನಾವು ಅದಕ್ಕೆ ಹೋಗಲಿಲ್ಲ. ಪದವಿ ಮುಗಿದ ಬಳಿಕ ಎಂ.ಡಿ. ಮಾಡಿದೆ. ನಂತರ ತಂದೆಯ ಆಸೆಯಂತೆ ಕ್ಲಿನಿಕ್‌ ತೆರೆದೆ. ಸಾಮಾನ್ಯ ವ್ಯಕ್ತಿಗಳಿಂದ ಹಲವು ದೊಡ್ಡ ವ್ಯಕ್ತಿಗಳು ನನ್ನ ಬಳಿ ಚಿಕಿತ್ಸೆಗೆ ಬರುತ್ತಾರೆ. ಹೊರ ರಾಜ್ಯ ಮತ್ತು ದೇಶಗಳಿಂದಲೂ ಚಿಕಿತ್ಸೆ ಪಡೆಯಲು ಬರುತ್ತಾರೆ. ನಾನೂ ಕೂಡ ಆಯುರ್ವೇದದ ಮಹತ್ವ ತಿಳಿಸುವ ಸಲುವಾಗಿ ಪ್ರಪಂಚದ ಹಲವು ದೇಶಗಳನ್ನು ಸುತ್ತುತ್ತಲೇ ಇರುತ್ತೇನೆ.

ವೈದ್ಯ ವೃತ್ತಿ ಆರಂಭಿಸಿದಾಗ ನನಗಿನ್ನೂ 23 ವರ್ಷ. ನೋಡಲು ತುಂಬಾ ಸಣ್ಣಗಿದ್ದ ಕಾರಣಕ್ಕೆ ಜನರು ನನ್ನನ್ನು ವೈದ್ಯನೆಂದು ಗುರುತಿಸುತ್ತಲೇ ಇರಲಿಲ್ಲ. ಕ್ಲಿನಿಕ್‌ಗೆ ಬಂದವರು, ‘ನಿನ್ನ ಅಪ್ಪನನ್ನು ಕರೆ’ ಎನ್ನುತ್ತಿದ್ದರು. ಜೊತೆಗೆ ವೃತ್ತಿಗೆ ಹೊಸಬನಾದ ಕಾರಣಕ್ಕೆ ಹೆಚ್ಚು ರೋಗಿಗಳು ಬರುತ್ತಿರಲಿಲ್ಲ. ಹಾಗಾಗಿ ಜನರಿಗೆ ನಾನು ಹತ್ತಿರವಾಗಬೇಕು ಎಂಬ ಕಾರಣಕ್ಕೆ ಬರವಣಿಗೆಯಲ್ಲಿ ಆಸಕ್ತಿ ಬೆಳೆಸಿಕೊಂಡೆ. ಇದರ ಜೊತೆಗೆ ‘ತೊನ್ನು ಕಾಯಿಲೆ, ವೈದ್ಯ ಯೋಗ ರತ್ನಾವಳಿ, ದಂತ ಚಿಕಿತ್ಸೆ, ಹಾಸ್ಯ ಲೇಖನಗಳು, ಕವನ ಸಂಕಲನ, ಕ್ಯೂರ್‌ ಎಟ್‌ ಹೋಮ್‌’ ಸೇರಿ ಎಂಟು ಪುಸ್ತಕಗಳನ್ನು ಬರೆದಿದ್ದೇನೆ. ಸುಮಾರು 70 ಪುಸ್ತಕಗಳನ್ನು ವಿಮರ್ಶೆ ಮಾಡಿದ್ದೇನೆ. ಎಲ್ಲವೂ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿವೆ.

ಶಸ್ತ್ರಚಿಕಿತ್ಸೆ ಮಾಡಬೇಕು ಎನ್ನಿಸುವಂತಹ ಪ್ರಕರಣ ಬಿಟ್ಟು ಎಲ್ಲಾ ಬಗೆಯ ಕಾಯಿಲೆಗಳಿಗೂ ಚಿಕಿತ್ಸೆ ಮಾಡುತ್ತೇನೆ. ಪ್ರಾಥಮಿಕ ಹಂತದ ಕ್ಯಾನ್ಸರ್‌ ಇರುವವರು ನನ್ನ ಬಳಿ ಚಿಕಿತ್ಸೆ ಪಡೆದು ಅನುಕೂಲ ಕಂಡಿದ್ದಾರೆ. ರೋಗಿಯ ಬೆಳಿಗ್ಗೆಯಿಂದ ರಾತ್ರಿವರೆಗಿನ ಜೀವನ ಶೈಲಿ ತಿಳಿದುಕೊಂಡು, ಅದರಲ್ಲಿ ತಪ್ಪಿದ್ದರೆ ಅದನ್ನು ತಿದ್ದುತ್ತೇನೆ. ರೋಗಿಗೆ ಅನುಕೂಲವಾಗುವ ಹಾಗೆ ದಿನಚರಿ ಮಾರ್ಪಾಡು ಮಾಡುತ್ತೇನೆ. ರೋಗಿಗೆ ಕೈಗೆಟುವ ಆರ್ಥಿಕ ಹೊರೆ ಬೀಳದಂತೆ ಚಿಕಿತ್ಸೆ ನೀಡುವ ಧ್ಯೇಯ ಇಟ್ಟುಕೊಂಡಿದ್ದೇನೆ.

ಆಯುರ್ವೇದ ನಿಧಾನ ಪ್ರಕ್ರಿಯೆ ಎಂಬ ತಪ್ಪು ಕಲ್ಪನೆಯಿದೆ. ಸುಮಾರು 25 ವರ್ಷದ ಹಿಂದೆ ಯುವಕನೊಬ್ಬನಿಗೆ ಗಂಭೀರ ಸುಟ್ಟ ಗಾಯಗಳಾಗಿತ್ತು. ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಿದ್ದರು. ಎರಡು, ಮೂರು ದಿನದ ನಂತರ ಆ ಯುವಕನ ದೇಹದ ಚರ್ಮ ತೆಗೆದು ಶಸ್ತ್ರ ಚಿಕಿತ್ಸೆ ಮಾಡಿದರು. ಆದರೆ ಅದು ಯಶಸ್ವಿಯಾಗಲಿಲ್ಲ. ಒಂದು ವಾರ ಚಿಕಿತ್ಸೆ ನೀಡಿದರೂ ರೋಗಿ ಗುಣವಾಗಲಿಲ್ಲ. ಆಗ ನನ್ನ ಬಳಿ ಬಂದರು. ಬಾಳೆ ಎಲೆಯಲ್ಲಿ ಅವನನ್ನು ಹೊದಿಸಿ ಚಿಕಿತ್ಸೆ ನೀಡಿದೆ. ಮೂರು ದಿನಕ್ಕೆ ಜ್ವರ ಕಡಿಮೆಯಾಯಿತು. ಒಂದು ತಿಂಗಳ ಚಿಕಿತ್ಸೆಯ ನಂತರ ಅವನು ಕೆಲಸಕ್ಕೂ ಹೋಗಲು ಪ್ರಾರಂಭಿಸಿದ್ದಾನೆ.

ನನ್ನ ಜೀವನ ಇಷ್ಟೊಂದು ಸುಂದರವಾಗಿದೆ ಎಂದರೆ ಅದಕ್ಕೆ ನನ್ನ ಪತ್ನಿ ಕಾರಣ. ಜೀವನದ ಪ್ರತಿ ಕ್ಷಣಗಳಲ್ಲಿಯೂ ಆಕೆ ನನ್ನ ಜೊತೆಗಿದ್ದಳು. ಮೊದಲೆಲ್ಲ ಅವಳಿಗಾಗಿ ಹೆಚ್ಚು ಸಮಯ ಕೊಡಲು ಆಗುತ್ತಿರಲಿಲ್ಲ. ಎಲ್ಲೋ ಹೊರಗೆ ಹೋಗಬೇಕಾದಾಗ ರೋಗಿಗಳು ಬಂದ ಕಾರಣಕ್ಕೆ ಅದನ್ನು ತಪ್ಪಿಸಿಕೊಂಡಿದ್ದು ಇದೆ. ಆಗೆಲ್ಲ ಪತ್ನಿ ಅದನ್ನು ಮನ್ನಿಸಿದ್ದಾಳೆ. ‌‌‌ಈಗ ನನಗೆ 62 ವರ್ಷ. ಹಾಗಾಗಿ ಬೆಳಿಗ್ಗೆಯಷ್ಟೇ ಕ್ಲಿನಿಕ್‌ ತೆರೆಯುತ್ತೇನೆ. ಮಧ್ಯಾಹ್ನದ ಅವಧಿ ಕುಟುಂಬಕ್ಕಾಗಿ ಮೀಸಲು. ‌ಪ್ರವಾಸ ಮಾಡುವುದು ನನಗೆ ಇಷ್ಟ. ದೇಶದಲ್ಲಿ ಎಲ್ಲಾ ಸ್ಥಳವನ್ನು ಸುತ್ತಿದ್ದೇನೆ. ಹಲವು ದೇಶಗಳಿಗೆ ಹೋಗಿದ್ದೇನೆ. ವರ್ಷಕ್ಕೊಮ್ಮೆ ಹದಿನೈದು ದಿನ ಊರು ಸುತ್ತುತ್ತೇನೆ. ಇಬ್ಬರು ಮಕ್ಕಳಿದ್ದಾರೆ. ಮಗ ಕಾರ್ತಿಕ್‌ ಡಾಕ್ಟರ್‌, ಮಗಳು ರಂಜಿತಾ ಎಂಜಿನಿಯರ್‌ ಓದಿದ್ದಾಳೆ. ಮೂವರು ಮೊಮ್ಮಕ್ಕಳಿದ್ದಾರೆ.

ಜೀವನವನ್ನು ನಾವು ಹೇಗೆ ಸ್ವೀಕರಿಸುತ್ತೇವೆಯೋ ಅದರ ಮೇಲೆ ನಮ್ಮ ಖುಷಿ, ದುಃಖದ ಕ್ಷಣಗಳು ಅವಲಂಬಿಸಿರುತ್ತವೆ. ಅತಿ ಆಸೆ, ನಿರೀಕ್ಷೆಗಳಿದ್ದಾಗ ನಿರಾಸೆ ಉಂಟಾಗುತ್ತದೆ. ಇರುವುದರಲ್ಲಿಯೇ ತೃಪ್ತಿ ಕಂಡಾಗ ಜೀವನ ಸುಂದರವಾಗಿರುತ್ತದೆ ಎಂದು ನಂಬಿದವನು ನಾನು. ಹಾಗಾಗಿ ತುಂಬಾ ಆಸ್ತಿ ಮಾಡಿಲ್ಲ. ಸರಳವಾಗಿಯೇ ಜೀವನ ನಡೆಸುತ್ತಿದ್ದೇನೆ. ಸಾಕಷ್ಟು ಜನ ಸ್ನೇಹಿತರು, ರೋಗಿಗಳಿದ್ದಾರೆ ಅವರೇ ನನ್ನ ಆಸ್ತಿ.

**

ಪರಿಚಯ

* ಜನನ: ಅಕ್ಟೋಬರ್‌ 10, 1950

* ಊರು: ಶಾಂತಿಗ್ರಾಮ, ಹಾಸನ ಜಿಲ್ಲೆ

* ತಂದೆ: ಜಿ.ಎ ನರಸಿಂಹ ಮೂರ್ತಿ

* ತಾಯಿ: ಸಾವಿತ್ರಿ

* ಪತ್ನಿ: ಶೈಲಾ

* ಮಕ್ಕಳು: ಕಾರ್ತಿಕ್‌, ರಂಜಿತಾ

* ಮನೆ: ಬುಲ್‌ ಟೆಂಪಲ್‌ ರಸ್ತೆ, ಬಸವನಗುಡಿ

ಇಮೇಲ್: idm.medical@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT