ಫೋಟೊಗ್ರಫಿ: ಎಳೆ ಬಿಸಿಲುಕೋಲಿನ ಧಾರೆಯಲಿ...

7

ಫೋಟೊಗ್ರಫಿ: ಎಳೆ ಬಿಸಿಲುಕೋಲಿನ ಧಾರೆಯಲಿ...

Published:
Updated:

ಕಬ್ಬನ್ ಪಾರ್ಕ್‌ನ ಚೊಕ್ಕಟ ನೆಲ, ಜೊತೆಗೆ ಅಲ್ಲಲ್ಲಿ ಹಸಿರು ಹಾಸು, ಎತ್ತರದ ರೆಂಬೆಗಳ ಸಮೃದ್ಧ ವೃಕ್ಷಗಳು, ಮಧ್ಯೆ ಮಧ್ಯೆ ಆಗಸಕ್ಕೆ ಕೈ–ಮೈ ಚಾಚಿ ಒತ್ತೊತ್ತಾಗಿ ಬೆಳೆದು ನಿಂತ ಬಿದಿರು ಮಟ್ಟಿಗಳು, ಮುಂಜಾನೆಯ ನಡಿಗೆಗೆ ಬರುವವರನ್ನು, ಪ್ರವಾಸಿಗರನ್ನು, ಎಲ್ಲ ವಯೋಮಾನದವರನ್ನೂ ಆಕರ್ಷಿಸುತ್ತವೆ. ದೂರದ ಉತ್ತರಕನ್ನಡ ಜಿಲ್ಲೆಯ ಹಳ್ಳಿ ಮುತ್ಮುರ್ಡು ವಾಸಿ, ಕೃಷಿಕ ಮತ್ತು ಕಳೆದೆರಡು ದಶಮಾನದಿಂದ ಪ್ರಕೃತಿ, ಮಕ್ಕಳು, ಕಲಾತ್ಮಕ ವಿಭಾಗಗಳಲ್ಲಿ , ಛಾಯಾಗ್ರಹಣವನ್ನು ಹವ್ಯಾಸವಾಗಿ ಪೋಷಿಸಿಕೊಂಡು ಬಂದಿರುವ ನಾಗೇಂದ್ರ ಮುತ್ಮುರ್ಡು, ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಾಗ ಆಗಸ್ಟ್‌ ತಿಂಗಳ ಒಂದು ಮುಂಜಾನೆ ಕಬ್ಬನ್ ಪಾರ್ಕ್‌ನಲ್ಲಿ ಬಿದಿರುಮೆಳೆಗಳ ಸಂದಿನಿಂದ ಸೂರ್ಯನ ತಿಳಿ ಬಿಸಿಲು ನುಸುಳಿ ಬಂದು ನಡಿಗೆಯಲ್ಲಿ ತೊಡಗಿದ್ದ ಸ್ನೇಹಿತೆಯರಿಬ್ಬರನ್ನೂ ತಟ್ಟಿದ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದದ್ದೇ ಈ ಚಿತ್ರ.

ಅವರು ಬಳಸಿದ ಕ್ಯಾಮೆರಾ, ಸೋನಿ-ಡಿ.ಎಸ್.ಎಲ್.ಆರ್., ಎ-200, ಲೆನ್ಸ್ ಫೋಕಲ್ ಲೆಂಗ್ತ್ 40 ಎಂ.ಎಂ., ಅಪರ್ಚರ್ ಎಫ್ 5.6, ಶಟರ್ ವೇಗ 1 / 50 ಸೆಕೆಂಡ್, ಫ್ಲಾಶ್, ಟ್ರೈಪಾಡ್ ಬಳಸಿಲ್ಲ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:

* ಎದುರು ಬೆಳಕಿಗೆ ಹೊಂದಿಸಿ ವಸ್ತುವನ್ನು 
(ನಡಿಗೆಯಲ್ಲಿ ತೊಡಗಿರುವವರನ್ನು) , ಬಿಸಿಲು ಕೋಲು ಮೈ-ಅಂಚುಗಳನ್ನು ಬೆಳಗಿಸಿದಾಗಿನ ಮ್ಯಾಜಿಕ್ ಕ್ಷಣವನ್ನು ಕ್ಯಾಮೆರಾದಲ್ಲಿ ಸಮರ್ಪಕವಾಗಿ ಸೆರೆಹಿಡಿದಿರುವುದು ಛಾಯಾಗ್ರಾಹಕರ ಪರಿಣತಿಗೆ ಸಾಕ್ಷಿಯಾಗಿದೆ.

* ಆದಾಗ್ಯೂ, ಅಷ್ಟೊಂದು ಅನುಭವವಿಲ್ಲದ ಪ್ರಾರಂಭಿಕ ಹವ್ಯಾಸಿಗಳಿಗೆ ಒಂದು ಕಿವಿಮಾತು: ನಡಿಗೆಯ ಸಣ್ಣ ಪ್ರಮಾಣದ ಅಲುಗುವಿಕೆಯನ್ನು ತಪ್ಪಿಸಲು, ಹೆಚ್ಚಿನ ಶಟರ್ ವೇಗ 1/125 ಸೆಕೆಂಡ್ ಇರಲೇಬೇಕು.

* ಆಗ ಬೆಳಕು ಕಡಿಮೆಯಾಗಿ ಚಿತ್ರ ಅಂಡರ್ ಎಕ್ಸ್ ಪೋಸ್ ಆಗಿಬಿಡುತ್ತದೆಯಷ್ಟೆ. ಅದಕ್ಕೆ ಸರಿ ಹೊಂದಿಸಲು, ಐ.ಎಸ್.ಒ ಸೂಕ್ಶ್ಮತೆಯನ್ನು 400 ಕ್ಕೆ ಹೆಚ್ಚಿಸುವುದು ಸಮಂಜಸ.

* ಕಲಾತ್ಮಕ ತುಲನೆಯಲ್ಲಿ ಈ ಚಿತ್ರಣವು ಉತ್ತಮ ಅಂಕ ಪಡೆಯುತ್ತದೆ. ಚಿತ್ರದ ಪ್ರವೇಶ ಬಿಂದು (ಎಂಟ್ರಿ ಪಾಯಿಂಟ್) ಇಬ್ಬರ ನಡಿಗೆಯ ಭಾಗ. ಅದು ಚೌಕಟ್ಟಿನ ಉದ್ದ- ಅಡ್ಡಕ್ಕೆ ಅನುಗುಣವಾಗಿ ಒಂದು ಮೂರಾಂಶದಲ್ಲಿ ಇರುವುದು ಸರಿಯಷ್ಟೇ. ಬಿಸಿಲುಕೋಲು ನೆಲದ ಮೇಲೆ ಮೂಡಿಸಿರುವ ಬೆಳ್ಳಗಿನ ರೇಖೆಗಳು, ಎಡ –ಕೆಳಗಿನ ಮೂಲೆಯಿಂದ ಇಬ್ಬರ ಚಲಿಸುವ ಕಾಲುಗಳೆಡೆ ಸಾಗುತ್ತಿರುವುದು, ಕಣ್ಣುಗಳನ್ನು ಮುಖ್ಯವಸ್ತುವಿನೆಡೆಗೆ ಒಯ್ಯುವ ಎಳೆಗಳಾಗಿ (ಲೀಡಿಂಗ್ ಲೈನ್ಸ್) ಮೂಡಿವೆ. ಈ ಎರಡೂ ಅಂಶಗಳು ಕಲಾತ್ಮಕ ಚಿತ್ರ ಸಂಯೋಜನೆಯ ಮೌಲ್ಯಗಳು.

* ಕಲಾಭ್ಯಾಸಿಗಳು ಒಪ್ಪುವಂತಹ ಮತ್ತೊಂದು ಅಂಶವೆಂದರೆ, ವೃತ್ತಾಕಾರದ ಸಂಯೋಜನೆ (ಸರ್ಕ್ಯುಲರ್ ಕಾಂಪೋಸಿಷನ್). ನೋಡುಗನ ಕಣ್ಣು ಮತ್ತು ಮನಸ್ಸು, ಇಬ್ಬರ ನಡಿಗೆಯನ್ನು ಸಂಧಿಸಿ, ಬೆಳ್ಳಗಿನ ನೆಲದ ಮೇಲಂಚಿನೊಂದಿಗೆ ಮುಂದೆ ಸಾಗಿ, ಬಿದಿರು ಮೆಳೆಗಳ ಜೊತೆ ಓರೆಯಾಗಿ ಮೇಲೆ ಸಾಗಿ, ಮರವೊಂದರ ಬಾಗಿದ ರೆಂಬೆಗಳ ಜೊತೆಗೂಡಿ, ಎಡಕ್ಕೆ ಇಳಿಯುತ್ತಾ ಲೀಡಿಂಗ್ ಲೈನ್ಸ್ ಸಹಾಯದಿಂದ ವೃತ್ತಾಕಾರವಾಗಿ ಆ ಇಬ್ಬರ ನಡಿಗೆಯ ಭಾಗಕ್ಕೇ ಪುನಃ ನಾಟುವುದು.

* ಬೆಳಗಿದ ಮುನ್ನೆಲೆಯ ಭಾಗಗಳಿಗೆ ಕಾಂತಿ ಭೇದ ವೇರ್ಪಡಿಸಿರುವ (ಕಾಂಟ್ರಾಸ್ಟ್) ಹಿನ್ನೆಲೆಯ ಕಡುದಾದ ಬಿದಿರು ಮೆಳೆಗಳು. ಅವನ್ನೂ ದಾಟಿ ಮಧ್ಯದ ಪುಟ್ಟ ಕಿಂಡಿಯ ಹಚ್ಚ ಹಸಿರಿನ ಪ್ರಕಾಶವಾದ ಜಾಗದೆಡೆಗೆ ಸಾಗಬಹುದಾದ ಸಾಧ್ಯತೆಯನ್ನು ಬೆಳಕು ನೆರಳಿನ ಮೋಡಿಯಿಂದ ತೋರ್ಪಡಿಸುತ್ತಿರುವುದು, ಚಿತ್ರಣಕ್ಕೆ ಮೂರು ಆಯಾಮದ (ತ್ರೀ-ಡಿ) ಮಾಟವನ್ನು ರೂಪಿಸಿದೆ. ಅಲ್ಲಲ್ಲಿ ಚೌಕಟ್ಟಿನ ಮೇಲ್ಬದಿಯಲ್ಲಿ ಎದುರು ಬೆಳಕಿಗೆ ಮೈ ಒಡ್ಡಿರುವ ಬಿದಿರು ಎಲೆಗಳು ತೋರಣ ಕಟ್ಟಿ ಸ್ವಾಗತಕೋರುವಂತೆ ಚಿತ್ರವನ್ನು ಸುಂದರವಾಗಿಸಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !