ಬೆಂಗಳೂರಿನಲ್ಲೇ ಪೈಲಟ್ ನೇಗಿ ಅಂತ್ಯಕ್ರಿಯೆ

7

ಬೆಂಗಳೂರಿನಲ್ಲೇ ಪೈಲಟ್ ನೇಗಿ ಅಂತ್ಯಕ್ರಿಯೆ

Published:
Updated:
Prajavani

ಬೆಂಗಳೂರು: ಎಚ್‌ಎಎಲ್‌ ನಿಲ್ದಾಣದಲ್ಲಿ ವಿಮಾನ ಸ್ಫೋಟಗೊಂಡು ಮೃತಪಟ್ಟ ಸ್ವಾಡ್ರನ್ ಲೀಡರ್ ಸಿದ್ಧಾರ್ಥ್‌ ನೇಗಿ ಅವರ ಅಂತ್ಯಕ್ರಿಯೆ ಇಂದಿರಾನಗರದ ಕಲ್ಪಳ್ಳಿ ಸ್ಮಶಾನದಲ್ಲಿ ಶನಿವಾರ ನಡೆಯಿತು.

ಶುಕ್ರವಾರ ಬೆಳಿಗ್ಗೆ ‘ಮಿರಾಜ್–2000’ ಯುದ್ಧ ವಿಮಾನ ಪತನಗೊಂಡು ಡೆಹ್ರಾಡೂನ್‌ನ ನೇಗಿ ಹಾಗೂ ಗಾಜಿಯಾಬಾದ್‌ನ ಸಮೀರ್ ಅಬ್ರಾಲ್ ಮೃತಪಟ್ಟಿದ್ದರು. ನೇಗಿ ದೇಹ ಸಂಪೂರ್ಣ ಸುಟ್ಟು ಹೋಗಿದ್ದರಿಂದ ಹಾಗೂ ಅವರ ಕುಟುಂಬ ಸದಸ್ಯರು ನಗರಕ್ಕೆ ಬಂದಿದ್ದರಿಂದ ಕಮಾಂಡೋ ಆಸ್ಪತ್ರೆಯಲ್ಲಿ ಶುಕ್ರವಾರ ಸಂಜೆಯೇ ಮರಣೋತ್ತರ ಪರೀಕ್ಷೆ ಮಾಡಲಾಯಿತು.

ಬೆಳಿಗ್ಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಅವರ ದೇಹಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಅಧಿಕಾರಿಗಳು ನೇಗಿ ಕುಟುಂಬಕ್ಕೆ ಒಪ್ಪಿಸಿದರು. ಮರಣೋತ್ತರ ಪರೀಕ್ಷೆಯ ವರದಿಯನ್ನು ಐಎಎಫ್‌ಗೆ ಕಳುಹಿಸಲಾಗಿದೆ.

‘ಅಬ್ರಾಲ್‌ ಕುಟುಂಬ ಸದಸ್ಯರು ಶನಿವಾರ ಬೆಳಿಗ್ಗೆ ನಗರಕ್ಕೆ ಬಂದರು. ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ದೇಹವನ್ನು ಹಸ್ತಾಂತರಿಸಲಾಯಿತು. ಅವರು ಗಾಜಿಯಾಬಾದ್‌ಗೆ ತೆಗೆದುಕೊಂಡು ಹೋದರು’ ಎಂದು ಮೂಲಗಳು ತಿಳಿಸಿವೆ.

‘ಬ್ಲ್ಯಾಕ್ ಬಾಕ್ಸ್‌’ ವಶಕ್ಕೆ

ಪ್ರಕರಣದ ಆಂತರಿಕ ತನಿಖೆ ಪ್ರಾರಂಭಿಸಿರುವ ವಾಯು ಸೇನೆ ಹಾಗೂ ಎಚ್‌ಎಎಲ್ ತಜ್ಞರ ತಂಡಗಳು, ದುರಂತಕ್ಕೀಡಾದ ‘ಮಿರಾಜ್–2000’ ವಿಮಾನದ ಬ್ಲ್ಯಾಕ್ ಬಾಕ್ಸನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿವೆ.

‘ವಿಮಾನ ಎಷ್ಟು ಕಿ.ಮೀ ವೇಗದಲ್ಲಿ ಸಾಗುತ್ತಿತ್ತು, ಎಷ್ಟು ಎತ್ತರಕ್ಕೆ ಹೋದಾಗ ಸ್ಫೋಟಗೊಂಡಿತು ಸೇರಿದಂತೆ ಎಲ್ಲ ದಾಖಲೆಗಳು ಆ ಬ್ಲ್ಯಾಕ್ ಬಾಕ್ಸ್‌ನಲ್ಲಿ ದಾಖಲಾಗಿರುತ್ತವೆ. ತಜ್ಞರ ತಂಡ ಅದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಟೈರ್‌ ಕಳಚಿರಬಹುದು: ವಿಮಾನ ರನ್‌ವೇನಲ್ಲಿ ಬರುವಾಗ ಟೈರ್ ಸ್ಫೋಟಗೊಂಡು ಅಥವಾ ಕಳಚಿಕೊಂಡು ಈ ಅವಘಡ ಸಂಭವಿಸಿರಬಹುದು ಎಂಬ ಅನುಮಾನವೂ ಎಚ್‌ಎಎಲ್ ಅಧಿಕಾರಿಗಳಿಂದ ವ್ಯಕ್ತವಾಗಿದೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 7

  Sad
 • 0

  Frustrated
 • 0

  Angry

Comments:

0 comments

Write the first review for this !