ನಗರವಾಸಿಗಳ ಮಾಹಿತಿ ಸಂಗ್ರಹಕ್ಕೆ ಡಿಸಿಎಂ ಸೂಚನೆ

7
ಗಲಾಟೆ ನಡೆದರೆ ಡಿಸಿಪಿಗಳನ್ನೇ ಹೊಣೆ ಮಾಡುವ ಎಚ್ಚರಿಕೆ

ನಗರವಾಸಿಗಳ ಮಾಹಿತಿ ಸಂಗ್ರಹಕ್ಕೆ ಡಿಸಿಎಂ ಸೂಚನೆ

Published:
Updated:

 ಬೆಂಗಳೂರು: ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಗಸ್ತು ವ್ಯವಸ್ಥೆಯನ್ನು ಬಲಪಡಿಸುವುದರ ಜತೆಗೆ, ನಗರದ ಪ್ರತಿಯೊಬ್ಬ ನಿವಾಸಿಯ ಮಾಹಿತಿ ಸಂಗ್ರಹಿಸುವಂತೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬುಧವಾರ ‘ಅಪರಾಧ ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆ’ ನಡೆಸಿದ ಅವರು, ‘ನಗರದಲ್ಲಿ ಅಪರಿಚಿತರಿಂದ ನಡೆಯುತ್ತಿರುವ ಅಪರಾಧಗಳು ಹೆಚ್ಚುತ್ತಿದ್ದು, ಪ್ರತಿಯೊಬ್ಬರ ಮೇಲೂ ನಿಗಾ ಇಡುವುದು ಅನಿವಾರ್ಯವಾಗಿದೆ’ ಎಂದರು.

ಗಸ್ತು ಪೊಲೀಸರಿಗೆ ತಮ್ಮ ಸರಹದ್ದಿನ ಎಲ್ಲ ನಿವಾಸಿಗಳ ಪರಿಚಯವೂ ಇರಬೇಕು. ಹೊರಗಿನವರು ಯಾರೇ ಬಂದು ಹೋದರೂ ತಮಗೆ ಗೊತ್ತಾಗುವ ರೀತಿಯಲ್ಲಿ ಸಂಪರ್ಕ ಸಾಧಿಸಿಕೊಳ್ಳಬೇಕು. ರೌಡಿಗಳು ಹಾಗೂ ಹಳೇ ಆರೋಪಿಗಳ ಬಗ್ಗೆ ಮಾಹಿತಿ ಪಟ್ಟಿ ಸಿದ್ಧಪಡಿಸಿ, ಅವರ ದೈನಂದಿನ ಚಟವಟಿಕೆಗಳ ಮೇಲೆ ನಿಗಾ ಇಡಬೇಕು. ಇದರಿಂದ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ’ ಎಂದರು.

‘ಡಿಸಿಪಿಗಳು ತಮ್ಮ ವ್ಯಾಪ್ತಿಯ ಕೆಲ ಠಾಣೆಗಳಿಗೆ ಒಮ್ಮೆ ಕೂಡ ಭೇಟಿ ನೀಡಿಲ್ಲ ಎಂಬ ಮಾಹಿತಿ ಬಂದಿದೆ. ಇನ್ನು ಮುಂದೆ ತಿಂಗಳಿಗೆ ಕನಿಷ್ಠ ಒಂದು ಸಲವಾದರೂ, ಎಲ್ಲ ಠಾಣೆಗಳಿಗೂ ಹೋಗಿ ಸಿಬ್ಬಂದಿಯ ಸಮಸ್ಯೆ ಆಲಿಸಬೇಕು. ಉಳಿದ ದಿನಗಳಲ್ಲಿ ಆ ಕೆಲಸವನ್ನು ಆಯಾ ಉಪವಿಭಾಗದ ಎಸಿಪಿಗಳು ಮಾಡಬೇಕು. ಗಸ್ತು ಕೆಲಸ ಸರಿಯಾಗಿ ಆಗದೆ, ಅಪರಾಧ ಘಟಿಸಿದರೆ ಡಿಸಿಪಿ ಹಾಗೂ ಎಸಿಪಿಗಳೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಗಲಭೆ ಆದರೆ ಕ್ರಮ: ‘ಗಣೇಶ ಹಬ್ಬದ ವೇಳೆ ಕೆಲ ಸಮಾಜಘಾತುಕ ಶಕ್ತಿಗಳು ಬೇಕಂತಲೇ ಕೋಮುಗಲಭೆ ಸೃಷ್ಟಿಸುತ್ತವೆ. ಅಂಥ ಶಕ್ತಿಗಳಿಗೇ ಕೂಡಲೇ ನಿಯಂತ್ರಣಕ್ಕೆ ತೆಗೆದುಕೊಳ್ಳಿ. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ದಿನದಿಂದ ಹಿಡಿದು, ವಿಸರ್ಜಿಸುವವರೆಗೂ ಒಂದೇ ಒಂದು ಅಹಿತಕರ ಘಟನೆಯೂ ನಡೆಯದಂತೆ ನೋಡಿಕೊಳ್ಳಿ. ಒಂದು ವೇಳೆ ಗಲಾಟೆಯಾದರೆ ಆ ವಿಭಾಗದ ಹಿರಿಯ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.

ಗೂಂಡಾ ಪ್ರಯೋಗ: ‘ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವ ಸಲುವಾಗಿ ಪೆಡ್ಲರ್‌ಗಳ ವಿರುದ್ಧ ಗೂಂಡಾ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಮಾದಕ ವಸ್ತು ಮಾರಾಟ ಸಂಬಂಧ ಈ ವರ್ಷ 169 ಪ್ರಕರಣ ದಾಖಲಿಸಿರುವ ಪೊಲೀಸರು, 28 ವಿದೇಶಿಗರೂ ಸೇರಿದಂತೆ 298 ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 591 ಕೆ.ಜಿ ಮಾದಕ ವಸ್ತು ಜಪ್ತಿಯಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಮೊದಲ ಸಲ ಭಾಗಿಯಾದವರನ್ನೂ ಗೂಂಡಾ ಕಾಯ್ದೆ ವ್ಯಾಪ್ತಿಗೆ ತರುತ್ತಿದ್ದೇವೆ’ ಎಂದು ಹೇಳಿದರು. 

‘ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪೈಕಿ 107 ಮಂದಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಅವರನ್ನು ಗಡಿಪಾರು ಮಾಡುವ ಸಂಬಂಧ ವಿದೇಶಾಂಗ ಸಚಿವಾಲಯಕ್ಕೆ ವರದಿ ಕೊಟ್ಟಿದ್ದೇವೆ. ಅಲ್ಲಿಂದ ಒಪ್ಪಿಗೆ ಬರುತ್ತಿದ್ದಂತೆಯೇ ಗಡಿಪಾರು ಮಾಡುತ್ತೇವೆ’ ಎಂದು ಮಾಹಿತಿ ನೀಡಿದರು. 

₹ 55 ಕೋಟಿ ದಂಡ ಸಂಗ್ರಹ: ‘ಸಂಚಾರ ನಿಯಮ ಉಲ್ಲಂಘನೆ ಸಂಬಂಧ 2017ರಲ್ಲಿ ₹ 112 ಕೋಟಿ ದಂಡ ಸಂಗ್ರಹ ಮಾಡಿದ್ದ ಪೊಲೀಸರು, ಈ ವರ್ಷ 54 ಸಾವಿರ ಪ್ರಕರಣಗಳನ್ನು ದಾಖಲಿಸಿ ₹ 55  ಕೋಟಿ ಸಂಗ್ರಹಿಸಿದ್ದಾರೆ.’

‘2006ರಲ್ಲಿ ನಗರದಲ್ಲಿ 28.41 ಲಕ್ಷ ವಾಹನಗಳಿದ್ದವು. ಆದರೆ ಈಗ, 75.66 ಲಕ್ಷಕ್ಕೆ ಏರಿಕೆಯಾಗಿದೆ. ಟ್ರಾಫಿಕ್ ಸಮಸ್ಯೆ ಎಂದು ಟೀಕಿಸುವವರೂ, ವಾಹನಗಳ ಪ್ರಮಾಣದ ಬಗ್ಗೆಯೂ ಅರ್ಥ ಮಾಡಿಕೊಳ್ಳಬೇಕು’ ಎಂದೂ ಪರಮೇಶ್ವರ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !