ಗುರುವಾರ , ನವೆಂಬರ್ 14, 2019
18 °C
ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶ ಜಿ.ಬಸವರಾಜ ಪ್ರತಿಪಾದನೆ

ಪೊಲೀಸ್‌ ಇಲಾಖೆಯಲ್ಲಿ ಮೂಲಸೌಕರ್ಯ ಕೊರತೆ

Published:
Updated:
Prajavani

ಚಾಮರಾಜನಗರ: ಪೊಲೀಸ್‌ ಇಲಾಖೆಯಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರು ಸೋಮವಾರ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ಕವಾಯಿತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಮೂಲಸೌಕರ್ಯಗಳಿದ್ದರೆ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಅನುಕೂಲವಾಗುತ್ತದೆ. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು ಬಳಿ ಇದ್ದರೆ, ಸಿಬ್ಬಂದಿ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಬಹುದು. ಕೆಲವು ಬಾರಿ ದುಷ್ಕರ್ಮಿಗಳು ಹೊಂದಿರುವಂತಹ ಶಸ್ತ್ರಾಸ್ತ್ರಗಳು ಕೂಡ ಪೊಲೀಸರ ಬಳಿ ಇರುವುದಿಲ್ಲ’ ಎಂದು ಹೇಳಿದರು. 

‘ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪೊಲೀಸರು ಹಗಲು–ರಾತ್ರಿ, ಹಬ್ಬ–ಹರಿದಿನಗಳೆನ್ನದೆ ಕೆಲಸ ಮಾಡುತ್ತಿರುತ್ತಾರೆ. ಕರ್ತವ್ಯನಿರತ ಪ್ರತಿಯೊಬ್ಬ ಪೊಲೀಸ್‌ ಸಿಬ್ಬಂದಿಗೆ ಸೂಕ್ತ ರಕ್ಷಣೆ ಮತ್ತು ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ರಾಜ್ಯ ಸರ್ಕಾರ ಇತ್ತೀಚೆಗೆ ಔರಾದ್ಕರ್‌ ವರದಿ ಜಾರಿಗೆ ಮುಂದಾಗಿದೆ. ಈ ಮೂಲಕ ಪೊಲೀಸರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿರುವುದು ಸ್ವಾಗತಾರ್ಹ’ ಎಂದು ಶ್ಲಾಘಿಸಿದರು. 

ಆಂಬುಲೆನ್ಸ್‌ ಬೇಕು: ‘ಪ್ರತಿ ತಾಲ್ಲೂಕಿನಲ್ಲಿ ಪೊಲೀಸರಿಗೆ ಎರಡು ಅಥವಾ ಮೂರು ಆಂಬುಲೆನ್ಸ್‌ಗಳನ್ನು ನೀಡಬೇಕು’ ಎಂಬ ಸಲಹೆಯನ್ನೂ ಬಸವರಾಜ ಅವರು ನೀಡಿದರು.  

‘ಆರೋಗ್ಯ ಸೇವೆಗಳಿಗಾಗಿ ‘108’ ಸಹಾಯವಾಣಿ ಇದೆ. ಆದರೂ ಊರಿನಲ್ಲಿ ಏನಾದರೂ ಗಲಾಟೆಯಾದರೆ ಅಥವಾ ಇನ್ಯಾವುದೇ ತುರ್ತು ಸಂದರ್ಭದಲ್ಲೂ ಜನರು ಪೊಲೀಸರಿಗೇ ಮೊದಲು ಕರೆ ಮಾಡುತ್ತಾರೆ. ಅವರ ಸುಪರ್ದಿನಲ್ಲೇ ಆಂಬುಲೆನ್ಸ್‌ ಇದ್ದರೆ ತಕ್ಷಣ ಕಳುಹಿಸಲು ಅನುಕೂಲವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು. 

‘ಸಾರ್ವಜನಿಕವಾಗಿ ಯಾವುದೇ ಘಟನೆ ನಡೆದರೂ ಜನರು ಪೊಲೀಸ್‌ ಇಲಾಖೆಯ ಮೇಲೆ ಆರೋಪ ಹೊರಿಸುವುದು ಸಾಮಾನ್ಯವಾಗಿದೆ. ಎಂತಹುದೇ ಸಂದರ್ಭದಲ್ಲೂ ಎದೆಗುಂದದೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಹುತಾತ್ಮರಾದವನ್ನು ನೆನೆಯಬೇಕಾದುದು ನಮ್ಮ ಕರ್ತವ್ಯ’ ಎಂದು ನ್ಯಾಯಾಧೀಶರು ಹೇಳಿದರು. 

ಶ್ರದ್ಧಾಂಜಲಿ ಅರ್ಪಣೆ: ಇದಕ್ಕೂ ಮೊದಲು, ಅವರು ಪುಷ್ಪಗುಚ್ಛ ಇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌, ಡಿವೈಎಸ್‌ಪಿ ಜೆ.ಮೋಹನ್‌, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಸೇರಿದಂತೆ ಹಲವು ಗಣ್ಯರು ಸ್ಮಾರಕಕ್ಕೆ ಪುಷ್ಪ ಗುಚ್ಚ ಇಟ್ಟು ನಮನ ಸಲ್ಲಿಸಿದರು. 

ಹುತಾತ್ಮರ ಗೌರವಾರ್ಥ ಆಗಸದಲ್ಲಿ 21 ಪೊಲೀಸ್‌ ಸಿಬ್ಬಂದಿ ಮೂರು ಸುತ್ತು ಗುಂಡು ಹಾರಿಸಿದರು. ಎರಡು ನಿಮಿಷಗಳ ಮೌನಾಚರಣೆಯನ್ನೂ ಮಾಡಲಾಯಿತು.  

ತಾತ್ಕಾಲಿಕ ಸ್ಮಾರಕ ಸೃಷ್ಟಿ

ಪೊಲೀಸ್‌ ಕವಾಯತು ಮೈದಾನದಲ್ಲಿ ತುದಿಯಲ್ಲಿ ಶಾಶ್ವತವಾದ ಹುತಾತ್ಮರ ಸ್ಮಾರಕ ಇದೆ. ಆದರೆ, ಮಳೆಯಿಂದಾಗಿ ಸ್ಮಾರಕದ ಸುತ್ತಮುತ್ತ ಕೆಸರು ಇದ್ದುದರಿಂದ ಮೈದಾನದಲ್ಲಿ ತಾತ್ಕಾಲಿಕವಾಗಿ ಸ್ಮಾರಕವನ್ನು ನಿರ್ಮಿಸಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು.

ಪ್ರತಿಕ್ರಿಯಿಸಿ (+)